ಹೆಗಡೆ ಅವರ ಪ್ರಮುಖ ಸಾಧನೆಗಳು

ಹೆಗಡೆ ಅವರ ಪ್ರಮುಖ ಸಾಧನೆಗಳು

ಹೆಗಡೆ ಅವರ ಪ್ರಮುಖ ಸಾಧನೆಗಳು

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ತಂದವರು ಹೆಗಡೆ. 1963ರಲ್ಲಿ ಅವರು ಪಂಚಾಯತ್ ರಾಜ್ ಸಚಿವರಾಗಿದ್ದಾಗ ಮೂರು ಹಂತದ ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ರೂಪಿಸಿದ್ದರು. ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ (1983) ಅಬ್ದುಲ್ ನಜೀರ್ ಸಾಬ್ ಅವರಂಥ ಕ್ರಿಯಾಶೀಲ ವ್ಯಕ್ತಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯ ಜವಾಬ್ದಾರಿ ವಹಿಸಿದರು. ನಜೀರ್ ಸಾಬ್ ಅವರು ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ‘ನೀರ್ ಸಾಬ್’ ಎಂದೇ ಖ್ಯಾತಿ ಗಳಿಸಿದರು.

ಹೆಗಡೆ ಅವರು ಅಶೋಕ್ ಮೆಹತಾ ಸಮಿತಿಯ ಆಧಾರದ ಮೇಲೆ ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಮಸೂದೆಗಳನ್ನು ರೂಪಿಸಿದರು. ಈ ಕಾಯ್ದೆಯ ಮೂಲಕ ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಶೇ 25ರಷ್ಟು ಮೀಸಲಾತಿ ಕಲ್ಪಿಸಿದರು.

ರಾಜ್ಯದಲ್ಲಿ ಲೋಕಾಯುಕ್ತ ಸ್ಥಾಪನೆಗೆ ಕಾರಣಕರ್ತರು ಹೆಗಡೆ. ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಾಯುಕ್ತ ಮಸೂದೆಯನ್ನು ಮಂಡಿಸಿ, ಮುಖ್ಯಮಂತ್ರಿಯನ್ನೂ ಅದರ ವ್ಯಾಪ್ತಿಗೆ ಸೇರಿಸಿದ್ದರು.

ಹಿಂದುಳಿದ ವರ್ಗಗಳ ಗುರುತಿಸುವಿಕೆಗಾಗಿ ಹಿಂದುಳಿದ ವರ್ಗಗಳ ಎರಡನೆಯ ಆಯೋಗ (ವೆಂಕಟಸ್ವಾಮಿ ಆಯೋಗ) ರಚನೆ ಆಗಿದ್ದು ಹೆಗಡೆ ಅವರ ಅವಧಿಯಲ್ಲಿ. ಆಯೋಗವು 1986ರಲ್ಲಿ ತನ್ನ ವರದಿ ಸಲ್ಲಿಸಿತ್ತು. ಅದು ಭಾರಿ ವಿವಾದಕ್ಕೂ ಕಾರಣವಾಗಿತ್ತು.

ಎಪ್ಪತ್ತರ ದಶಕದವರೆಗೆ ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಗಳ ಆಡಳಿತ ಹೇಗೆ ನಡೆಸಬೇಕು ಎನ್ನುವುದಕ್ಕೆ ಮಾರ್ಗದರ್ಶನ ನೀಡುವ ಯಾವುದೇ ಕಾಯ್ದೆ ಇರಲಿಲ್ಲ. ಈ ದಿಸೆಯಲ್ಲಿ 1976ರಲ್ಲಿ ಸಮಗ್ರ ಶಿಕ್ಷಣ ಮಸೂದೆಯನ್ನು ರೂಪಿಸುವ ಪ್ರಯತ್ನಗಳು ಆರಂಭವಾದವು. ಹೆಗಡೆ ಅವರು ತಮ್ಮ ಅವಧಿಯಲ್ಲಿ ಈ ಬಗ್ಗೆ ವಿಶೇಷ ಆಸಕ್ತಿ ವಹಿಸಿ, ಅದರ ಅಧ್ಯಯನಕ್ಕಾಗಿ 24 ಜನರ ಜಂಟಿ ಸಲಹಾ ಸಮಿತಿ ರಚಿಸಿದರು; ಸಮಗ್ರ ಶಿಕ್ಷಣ ಮಸೂದೆಯು ಉಭಯ ಸದನಗಳಲ್ಲಿ ಅಂಗೀಕಾರವಾಗುವಂತೆ ನೋಡಿಕೊಂಡರು. ನಂತರ ಅದನ್ನು ರಾಷ್ಟ್ರಪತಿಯವರ ಆಂಗೀಕಾರಕ್ಕೆ ಕಳಿಸಲಾಯಿತು. ವಿವಿಧ ಕಾರಣಗಳಿಂದ ಕಾಯ್ದೆ ಮೂಲೆಗೆ ತಳ್ಳಲ್ಪಟ್ಟಿತು. ಕೊನೆಗೆ, ಅದಕ್ಕೆ ರಾಷ್ಟ್ರಪತಿಯವರ ಅಂಕಿತ ಬಿದ್ದು, ಒಂದಷ್ಟು ಬದಲಾವಣೆಗಳೊಂದಿಗೆ ಜಾರಿಗೆ ಬಂದಿದ್ದು ವೀರಪ್ಪ ಮೊಯ್ಲಿ ಅವರ ಅವಧಿಯಲ್ಲಿ.

ಕೇಂದ್ರ ಸರ್ಕಾರವು ರಾಜ್ಯಪಾಲರ ಹುದ್ದೆಯನ್ನು ತನಗೆ ಬೇಕಾದಂತೆ ಬಳಸಿಕೊಳ್ಳುತ್ತಿದೆ ಎನ್ನುವುದು ಹೆಗಡೆ ಅವರ ಆಕ್ಷೇಪಣೆಯಾಗಿತ್ತು. ಪ್ರಾಯಶಃ, ಈ ವಿಚಾರದಲ್ಲಿ ದೇಶದಲ್ಲಿಯೇ ಮೊದಲು ಗಮನ ಸೆಳೆದವರು ಹೆಗಡೆ. ಕೇಂದ್ರ–ರಾಜ್ಯಗಳ ಸಂಬಂಧದಲ್ಲಿ ಬದಲಾವಣೆ ಮಾಡಬೇಕೆಂದು ರಾಮಕೃಷ್ಣ ಹೆಗಡೆ ಅವರು ಒತ್ತಾಯಿಸಿದ್ದರು. ಅದರ ಫಲವಾಗಿಯೇ ಸರ್ಕಾರಿಯಾ ಆಯೋಗ ರಚನೆಯಾಗಿತ್ತು.

ರಾಮಕೃಷ್ಣ ಹೆಗಡೆ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅವರ ಮಗ ಭರತ್ ಹೆಗಡೆ ಅವರು ವಿದ್ಯಾರ್ಥಿನಿಯೊಬ್ಬರಿಗೆ ವೈದ್ಯಕೀಯ ಸೀಟು ಕೊಡಿಸಲು ಲಂಚ ಪಡೆದಿದ್ದಾರೆ ಎಂದು ವಿರೋಧ ಪಕ್ಷಗಳ ಮುಖಂಡರು ಆರೋಪಿಸಿದ್ದರು. ಹೆಗಡೆ ಅವರು ಅದನ್ನು ನ್ಯಾಯಾಂಗ ತನಿಖೆಗೆ ವಹಿಸಿದ್ದರು.

ಹೆಗಡೆ ಅವರು ಎನ್‌ಜಿಇಎಫ್‌ ಕಂಪನಿಯ ಷೇರುಗಳನ್ನು ನಿಯಮಬಾಹಿರವಾಗಿ ವರ್ಗಾಯಿಸಿದ್ದಾರೆ ಎಂದು ಕಾಂಗ್ರೆಸ್ (ಐ) ಆರೋಪಿಸಿತ್ತು. ಹೆಗಡೆ ಅವರ ಸರ್ಕಾರವು ಅದರ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸಿತ್ತು. 1988ರಲ್ಲಿ ಅವರು ದೋಷಮುಕ್ತರಾದರು.

ರಾಮಕೃಷ್ಣ ಹೆಗಡೆ ಅವರು ವಿರೋಧ ಪಕ್ಷಗಳ ಮುಖಂಡರ, ಪತ್ರಕರ್ತರ ಫೋನ್‌ ಸಂಭಾಷಣೆಯನ್ನು ಕದ್ದಾಲಿಕೆ ಮಾಡಿದ್ದಾರೆ ಎನ್ನುವ ಆರೋಪ ವ್ಯಕ್ತವಾಗಿ, ಅದು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆಯೇ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ರೇವಜಿತು ಬಿಲ್ಡರ್ಸ್‌ ಮತ್ತು ಡೆವಲಪರ್ಸ್‌ ಬೆಂಗಳೂರಿನಲ್ಲಿ (1987) ವಸತಿ ಉದ್ದೇಶಕ್ಕಾಗಿ ಭೂಮಿ ಖರೀದಿಸಿತ್ತು. ಅದರಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ನಂತರ ಹೈಕೋರ್ಟ್ ಈ ವಿವಾದದ ಸಂಬಂಧ ಹೆಗಡೆ ಅವರನ್ನು ಆರೋಪಮುಕ್ತಗೊಳಿಸಿತ್ತು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನಿವಾಸಿ ಭಾರತೀಯರಿಗೆ 110 ಎಕರೆ ಜಮೀನನ್ನು ನಿಯಮ ಮೀರಿ ವಸತಿ ಉದ್ದೇಶಕ್ಕೆ ಮಂಜೂರು ಮಾಡಿದ್ದು (1988), ಅದರಲ್ಲಿ ಹೆಗಡೆ ಕುಟುಂಬದ ಸದಸ್ಯರ ಪಾತ್ರವಿದೆ ಎನ್ನುವ ಆರೋಪ ವ್ಯಕ್ತವಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260829-51-328691293

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ