
ಮಳೆ ಕೊರತೆಯಿಂದ ಕಲಬುರಗಿಯಲ್ಲಿ ತರಕಾರಿ ದರ ಏರಿಕೆ
ಕಲಬುರಗಿ: ಪ್ರಸಕ್ತ ವರ್ಷ ಮುಂಗಾರು ಮಳೆ ಆರಂಭದಿಂದಲೂ ಕೊರತೆ ಕಾಡುತ್ತಿದ್ದು, ಇದರಿಂದ ತರಕಾರಿ ದರಗಳು ಏರುಮುಖ ಮಾಡಿವೆ. ಪಸ್ತುತ ಮಳೆ ಬರದಿದ್ದರೆ ತರಕಾರಿ ಬೆಲೆಯಲ್ಲಿ ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದೆ.
ಕಳೆದೆರಡು ವಾರಗಳ ಹಿಂದೆ ಕೆ.ಜಿಗೆ ₹40–₹60 ಇದ್ದ ಸೌತೆಕಾಯಿ ದರ ಈ ವಾರ ಗುಣಮಟ್ಟ ಆಧರಿಸಿ ₹80ರಿಂದ ₹100ಕ್ಕೆ ಮಾರಾಟವಾಗುತ್ತಿದೆ. ಸೌತೆಕಾಯಿ ಬೆಳೆಗೆ ಹೆಚ್ಚಿನ ನೀರು ಬೇಕು. ಆದರೆ, ಮಳೆ ಬಾರದ ಕಾರಣ ಮುಂದಿನ ತಿಂಗಳು ಕೆ.ಜಿಗೆ ₹120ರಂತೆ ಮಾರಾಟವಾದರೂ ಅಚ್ಚರಿ ಇಲ್ಲ ಎನ್ನುತ್ತಾರೆ ತರಕಾರಿ ವ್ಯಾಪಾರಿ ಆನಂದ.
ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಮಾರಾಟವಾಗುತ್ತಿರುವ ತರಕಾರಿ ಎಂದರೆ ಟೊಮೆಟೊ ಮತ್ತು ಆಲೂಗಡ್ಡೆ ಮಾತ್ರ. ಈ ಎರಡೂ ತರಕಾರಿ ದರ ಕೆ.ಜಿ.ಗೆ ₹30 ಇದೆ. ರಾಶಿ ಹಾಕಿದ ಟೊಮೆಟೊ ವ್ಯಾಪಾರಿಗಳು ಎರಡು ಕೆ.ಜಿಗೆ ₹50 ಮತ್ತು ಕೆಲವೆಡೆ ₹20ರಂತೆಯೂ ಮಾರಾಟ ಮಾಡುತ್ತಿದ್ದಾರೆ.
ಬದನೆಕಾಯಿ, ಹೀರೇಕಾಯಿ, ಬೆಂಡೆಕಾಯಿ, ಹಾಗಲಕಾಯಿ, ಅವರೆಕಾಯಿ, ಚವಳೆಕಾಯಿ, ಹಸಿ ಮೆಣಸಿನಕಾಯಿ ಈ ಎಲ್ಲಾ ತರಕಾರಿ ದರ ಒಂದೇಯಾಗಿದ್ದು, ಕೆ.ಜಿಗೆ ₹60ರಂತೆ ಮಾರಾಟವಾಗುತ್ತಿವೆ. ಬೀನ್ಸ್ ದರ ₹80 ಇದ್ದರೆ, ಮಾರುಕಟ್ಟೆಗೆ ಈಗ ಲಗ್ಗೆ ಇಟ್ಟಿರುವ ಗಜ್ಜರಿ ಕೆ.ಜಿಗೆ ₹100ರಂತೆ ಬಿಕರಿಯಾಗುತ್ತಿದೆ. ಡೊಣ್ಣಮೆಣಸಿನಕಾಯಿ ದರ ₹40, ನುಗ್ಗೆಕಾಯಿ–₹50 ಇದೆ.
ಸೊಪ್ಪು: ‘ಪುದೀನಾ ₹20ಕ್ಕೆ ಒಂದು ಕಟ್ಟು, ಮೆಂತೆ ಸೊಪ್ಪು ₹30ಕ್ಕೆ ಎರಡು ಕಟ್ಟು ಮಾರಾಟ ಮಾಡುತ್ತಿದ್ದೇನೆ. ಉಳಿದಂತೆ ಕೊತ್ತಂಬರಿ, ಕರಿಬೇವು, ಪಾಲಕ್, ರಾಜಗೀರಾ, ಕಡಲೆ ಸೊಪ್ಪು, ಸಬ್ಬಸಗಿ, ಪುಂಡಿಪಲ್ಯ ತಲಾ ₹10ಗೆ ಒಂದು ಕಟ್ಟು ಕೊಡುತ್ತಿದ್ದೇನೆ’ ಎನ್ನುತ್ತಾರೆ ಸೊಪ್ಪಿನ ವ್ಯಾಪಾರಿ ರಾಜಶೇಖರ.
ಎಲೆಕೋಸು ₹20ಕ್ಕೆ ಒಂದು, ಹೂಕೋಸು ₹30 ಮತ್ತು ದೊಡ್ಡ ಗಾತ್ರದ್ದು ₹40ಕ್ಕೆ ಒಂದು ಮಾರಾಟವಾಗುತ್ತಿದೆ. ಮೂಲಂಗಿ ₹10ಗೆ ಒಂದರಂತೆ ಕೊಡಲಾಗುತ್ತಿದೆ.
‘ಹಸಿಶುಂಠಿಗೆ ಮಾರುಕಟ್ಟೆಯಲ್ಲಿ ಗುಣಮಟ್ಟ ಆಧರಿಸಿ ದರವಿದ್ದು, ಕೆ.ಜಿಗೆ ₹120ರಿಂದ ₹160ರವರೆಗೆ ಮಾರಾಟವಾಗುತ್ತಿದೆ. ಬಳ್ಳೊಳ್ಳಿ ₹160ಕ್ಕೆ ಕೆ.ಜಿ ಇದೆ. ಪಡವಲಕಾಯಿ ಒಂದಕ್ಕೆ ₹50, ಕುಂಬಳಕಾಯಿ ಒಂದಕ್ಕೆ ₹30ರಂತೆ ಕೊಡುತ್ತಿದ್ದೇವೆ’ ಎಂದು ವ್ಯಾಪಾರಿ ಸಾಬೀರ್ ಚೌಧರಿ ಬಾಗಬಾನ್ ಹೇಳುತ್ತಾರೆ.
ಗ್ರಾಹಕರಿಗೆ ಹೊರೆಯಾದ ಈರುಳ್ಳಿ
ಈರುಳ್ಳಿ ದರದಲ್ಲಿ ನಿರಂತರವಾಗಿ ಏರಿಕೆ ಕಂಡುಬರುತ್ತಿದ್ದು, ಇದರಿಂದ ಗ್ರಾಹಕರು ಈರುಳ್ಳಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಆದರೆ, ಯಾವುದೇ ಸಾಂಬಾರು, ಪಲ್ಯ ತಯಾರಿಸಲು ಈರುಳ್ಳಿ ಬೇಕೇಬೇಕು. ಇದರಿಂದಾಗಿ ಈರುಳ್ಳಿ ಗ್ರಾಹಕರಲ್ಲಿ ಕಣ್ಣೀರು ತರಿಸಿದ್ದು, ಸೂಪರ್ ಮಾರ್ಕೆಟ್‌ನಲ್ಲಿ ₹100ಕ್ಕೆ ಎರಡು ಕೆ.ಜಿಯಂತೆ ಬಿಕರಿಯಾಗುತ್ತಿದೆ.
ಸ್ಥಳೀಯ ರೈತರಲ್ಲಿ ಬೇಡಿಕೆಗೆ ಅನುಗುಣವಾಗಿ ಈರುಳ್ಳಿ ಸಗಟು ಸಿಗದ ಕಾರಣ ವ್ಯಾಪಾರಿಗಳು ಪುಣೆ ಮತ್ತು ಮಹಾರಾಷ್ಟ್ರ ವಿವಿಧೆಡೆಯಿಂದ ತಂದು ಮಾರಾಟ ಮಾಡುತ್ತಿದ್ದಾರೆ.
‘ಆಗಸ್ಟ್ ವೇಳೆಗೆ ಹೊಸ ಈರುಳ್ಳಿ ಮಾರುಕಟ್ಟೆಗೆ ಬರಬೇಕಿತ್ತು. ಸೆಪ್ಟೆಂಬರ್ ಸಮೀಪಿಸಿದರೂ ಇನ್ನೂ ಬಂದಿಲ್ಲ. ಮಳೆ ಇಲ್ಲದ ಕಾರಣ ಒಂದೆರಡು ತಿಂಗಳಿನಿಂದ ಕೆ.ಜಿ.ಗೆ ₹50ರಿಂದ ₹60ಗೆ ಮಾರಾಟವಾಗುತ್ತಿದೆ. ಗಾತ್ರ ಆಧರಿಸಿ ದರವಿದೆ. 50–56 ಕೆ.ಜಿ ಈರುಳ್ಳಿ ಚೀಲದ ದರ ₹3 ಸಾವಿರ ಇದೆ’ ಎಂದು ವ್ಯಾಪಾರಿ ಮೊಹಮ್ಮದ್ ಹನೀಫ್ ತಿಳಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260829-34-2048382312