
ಕಲಬುರಗಿ: ‘ಸಕಾಲ’ದಲ್ಲಿ ವಿಲೇವಾರಿಯಾಗದ 568 ಅರ್ಜಿ
ಕಲಬುರಗಿ: ನಿಗದಿತ ಅವಧಿಯೊಳಗೆ ಸರ್ಕಾರಿ ಸೇವೆಗಳನ್ನು ಖಾತರಿಪಡಿಸುವ ‘ಸಕಾಲ’ ಯೋಜನೆಯಡಿ ಜಿಲ್ಲೆಯ ಜನರು ಸಲ್ಲಿಸಿದ 568 ಅರ್ಜಿಗಳ ಅವಧಿ ಮುಗಿದಿದ್ದು, ತಾಂತ್ರಿಕ ಕಾರಣಗಳಿಗಾಗಿ ಅರ್ಜಿಗಳ ವಿಲೇವಾರಿ ಸಾಧ್ಯವಾಗಿಲ್ಲ ಎನ್ನುತ್ತಾರೆ ಅಧಿಕಾರಿಗಳು.
‘ಇಂದು ನಾಳೆ ಇನ್ನಿಲ್ಲ; ಹೇಳಿದ ದಿನ ತಪ್ಪೊಲ್ಲ’ ಎನ್ನುವುದು ಈ ಯೋಜನೆಯ ಧ್ಯೇಯ. ಇದರಡಿ 114 ಇಲಾಖೆ–ಸಂಸ್ಥೆಗಳು ಹಾಗೂ 1,446 ಸೇವೆಗಳು ಬರುತ್ತವೆ.
ಇಲ್ಲಿಯವರೆಗೂ ಸಲ್ಲಿಕೆಯಾದ 30,66,900 ಅರ್ಜಿಗಳ ಪೈಕಿ 30,61,880 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 2,97,596 ಅರ್ಜಿಗಳನ್ನು ತಿರಸ್ಕರಿಸಲಾಗಿದೆ.
ಜಿಲ್ಲೆಯಲ್ಲಿ ಕಲಬುರಗಿ ನಗರ ಹಾಗೂ ತಾಲ್ಲೂಕಿನಲ್ಲಿ ಹೆಚ್ಚು ಅರ್ಜಿ ವಿಲೇವಾರಿ ಮಾಡಲಾಗಿದೆ. ಇದುವರೆಗೂ 12,54,793 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಕಲಬುರಗಿ ತಾಲ್ಲೂಕಿನಲ್ಲಿಯೇ ಹೆಚ್ಚು ಅಂದರೆ 257 ಅರ್ಜಿಗಳ ಅವಧಿ ಮುಗಿದಿದೆ.
ಹೆಚ್ಚು ಅರ್ಜಿ ಬಾಕಿ ಉಳಿಸಿಕೊಂಡ ತಾಲ್ಲೂಕುಗಳಲ್ಲಿ ಚಿಂಚೋಳಿ ಎರಡನೇ ಸ್ಥಾನದಲ್ಲಿದ್ದು, 1,84,542 ಅರ್ಜಿ ವಿಲೇವಾರಿ ಮಾಡಲಾಗಿದ್ದು, 158 ಬಾಕಿ ಇವೆ. ಸೇಡಂ 43, ಚಿತ್ತಾಪುರ 29, ಆಳಂದ 11, ಅಫಜಲಪುರ 20, ಜೇವರ್ಗಿ 14 ಹಾಗೂ ಕಾಳಗಿ ತಾಲ್ಲೂಕುಗಳಲ್ಲಿ 17 ಅರ್ಜಿಗಳು ಬಾಕಿ ಇವೆ.
ಇಲಾಖೆಗಳ ಪೈಕಿ ಮಾಲಿನ್ಯ ನಿಯಂತ್ರಣ ಮಂಡಳಿ ಹೆಚ್ಚು ದಿನಗಳವರೆಗೆ ಅರ್ಜಿ ಬಾಕಿ ಉಳಿಸಿಕೊಂಡಿದೆ. ಕೆಲ ಅರ್ಜಿಗಳ ಅವಧಿ ಮುಗಿದು 488, 417, 230, 197, 69 ದಿನಗಳಾಗಿವೆ. 2ನೇ ಸ್ಥಾನದಲ್ಲಿ ಕಂದಾಯ ಇಲಾಖೆ ಇದೆ. ಕೆಲ ಅರ್ಜಿಗಳ ಅವಧಿ ಮುಗಿದು 163, 107 ದಿನಗಳಾಗಿವೆ.
ಇ–ಸ್ವತ್ತು ಕೋರಿ ಚಿಂಚೋಳಿ ತಾಲ್ಲೂಕಿನ ಹೊಡೆಬೀರನಳ್ಳಿ ಗ್ರಾಮ ಪಂಚಾಯಿತಿಗೆ ಹಲವಾರು ಅರ್ಜಿಗಳು ಸಲ್ಲಿಕೆಯಾಗಿವೆ. ಅವಧಿ ಮುಗಿದು 148 ದಿನ ಮೇಲಾದರೂ ವಿಲೇವಾರಿ ಮಾಡುವ ಗೋಜಿಗೆ ಹೋಗಿಲ್ಲ. ಜಾತಿ ಪ್ರಮಾಣಪತ್ರದಲ್ಲಿ ಹೆಸರು ತಿದ್ದುಪಡಿ ಕೋರಿ ಕಂದಾಯ ಇಲಾಖೆಗೆ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಪೂರಕ ದಾಖಲೆ ಸಲ್ಲಿಸದ ಕಾರಣ ಕೆಲವು ಅರ್ಜಿಗಳನ್ನು ವಿಲೇವಾರಿ ಮಾಡಿಲ್ಲ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.
ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸುವುದು, ಆರ್‌ಟಿಸಿ ತಿದ್ದುಪಡಿ, ನಿರುದ್ಯೋಗ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಬೆಳೆ ಪ್ರಮಾಣಪತ್ರ ಕೋರಿ ಸಲ್ಲಿಸಿದ ಅರ್ಜಿಗಳೂ ಬಾಕಿ ಇವೆ.
ಪ್ರೈಜ್ ಮನಿ ಅರ್ಜಿಗಳು ಬಾಕಿ
ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಕೋರ್ಸ್‌ಗಳಲ್ಲಿ ಶೇ 60ಕ್ಕಿಂತ ಹೆಚ್ಚು ಅಂಕ ಪಡೆದ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಸರ್ಕಾರ ಪ್ರೋತ್ಸಾಹಧನ ನೀಡುತ್ತಿದೆ. ಅದಕ್ಕಾಗಿ ಜೂನ್‌ನಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ಹಲವಾರು ವಿದ್ಯಾರ್ಥಿಗಳು ಸಕಾಲ ಯೋಜನೆ ಅಡಿ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಗಳು ಬಾಕಿ ಇವೆ.
ಗುಲಬರ್ಗಾ ವಿವಿಯಲ್ಲಿ ‘ವಿರಳ’
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ವಲಸೆ ಪ್ರಮಾಣ ಪತ್ರ ವಿತರಣೆ ಸೇರಿದಂತೆ ವಿವಿಧ ಸೇವೆಗಳನ್ನು ಯೋಜನೆಯಡಿ ತರಲಾಗಿದೆ. ಆದರೆ, ವಿದ್ಯಾರ್ಥಿಗಳು ಸೇವೆಗಳನ್ನು ಕೋರಿ ‘ಸಕಾಲ’ದಲ್ಲಿ ಅರ್ಜಿ ಸಲ್ಲಿಸುವುದು ವಿರಳ. ಆದ್ದರಿಂದ ವಿವಿ ಸಿಬ್ಬಂದಿ ಆನ್‌ಲೈನ್‌ನಲ್ಲಿ ಕೋರಿಕೆಗಳನ್ನು ಪರಿಶೀಲಿಸುವುದೂ ‘ವಿರಳ’.
‘ಯೋಜನೆ ಆರಂಭವಾದಾಗ ಹೆಚ್ಚಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದರು. ಈಗ ಯಾರೂ ಸಲ್ಲಿಸುವುದಿಲ್ಲ. ನೇರವಾಗಿ ವಿಶ್ವವಿದ್ಯಾಲಯಕ್ಕೆ ಬಂದು ಅರ್ಜಿ ಸಲ್ಲಿಸುತ್ತಾರೆ’ ಎಂದು ವಿವಿ ಸಿಬ್ಬಂದಿಯೊಬ್ಬರು ತಿಳಿಸಿದರು.
ಯಾವ ಪ್ರಮಾಣಪತ್ರಕ್ಕೆ ಎಷ್ಟು ದಿನ?ಪ್ರಮಾಣಪತ್ರದ ವಿಧ;ಗರಿಷ್ಠ ಸೇವೆಯ ದಿನಗಳು
ಜಾತಿ ಮತ್ತು ಆದಾಯ ಪ್ರಮಾಣಪತ್ರ;21
ನಿರುದ್ಯೋಗ ಪ್ರಮಾಣಪತ್ರ;7
ಇಡಬ್ಲ್ಯೂಎಸ್ ಪ್ರಮಾಣಪತ್ರ;21
ಮೆಟ್ರಿಕ್ ಪೂರ್ವ ಶಿಷ್ಯವೇತನ (ಸಮಾಜ ಕಲ್ಯಾಣ);60
ನೌಕರಿಗೆ ಪೊಲೀಸ್ ಪರಿಶೀಲನಾ ಪ್ರಮಾಣಪತ್ರ;20
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260827-34-47978755