ವಕ್ಕಲೇರಿ | ಸ್ವಚ್ಛತೆ ಮರೀಚಿಕೆ: ಶಾಲೆ ಎದುರೇ ಕೊಳೆಯುತ್ತಿರುವ ತ್ಯಾಜ್ಯ

ವಕ್ಕಲೇರಿ | ಸ್ವಚ್ಛತೆ ಮರೀಚಿಕೆ: ಶಾಲೆ ಎದುರೇ ಕೊಳೆಯುತ್ತಿರುವ ತ್ಯಾಜ್ಯ

ವಕ್ಕಲೇರಿ | ಸ್ವಚ್ಛತೆ ಮರೀಚಿಕೆ: ಶಾಲೆ ಎದುರೇ ಕೊಳೆಯುತ್ತಿರುವ ತ್ಯಾಜ್ಯ

ವೇಮಗಲ್: ಹೋಬಳಿಯ ವಕ್ಕಲೇರಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ನಿರ್ವಹಣೆ ಕೊರತೆಯಿಂದ ಸ್ವಚ್ಛತೆಯೇ ಮರೀಚಿಕೆಯಾಗಿದ್ದು, ಪ್ರಮುಖ ರಸ್ತೆಗಳಲ್ಲಿಯೇ ಕಸದ ರಾಶಿ ಬಿದ್ದು ಗಬ್ಬು ವಾಸನೆ ಬೀರುತ್ತಿದೆ.

ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ತ್ಯಾಜ್ಯದ ರಾಶಿ ಬಿದ್ದಿದ್ದು, ಪಶು ತ್ಯಾಜ್ಯವನ್ನು ಬೇಕಾಬಿಟ್ಟಿ ಸುರಿದಿದ್ದಾರೆ. ಪ್ರಸ್ತುತ ಸುರಿಯುತ್ತಿರುವ ಮಳೆಗೆ ಈ ತ್ಯಾಜ್ಯವು ಕೊಳೆತು ನಾರುತ್ತಿದೆ. ಇದರಿಂದ ಆಸ್ಪತ್ರೆಗೆ ರೋಗಿಗಳು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.

ಜೊತೆಗೆ ಮಾರ್ಕಂಡಪುರ ರಸ್ತೆಯಲ್ಲಿರುವ ಅನುದಾನಿತ ಪ್ರೌಢಶಾಲೆಯ ಎದುರು ಹಾಗೂ ಸುತ್ತಮುತ್ತಲಿನ ರಸ್ತೆ ಬದಿ ಕಸ ಬಿಸಾಡಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ರಸ್ತೆ ಬದಿಯಲ್ಲೇ ಹರಡಿಕೊಂಡಿದೆ. ಇದರಿಂದಾಗಿ ಶಾಲೆಗೆ ತೆರಳುವ ವಿದ್ಯಾರ್ಥಿಗಳು ಮತ್ತು ಪೋಷಕರು ದುರ್ವಾಸನೆಯಲ್ಲೇ ಸಂಚಾರ ಮಾಡುವಂತಾಗಿದೆ. ಜೊತೆಗೆ ಚರಂಡಿಗಳಲ್ಲಿ ಕಸ, ಕಡ್ಡಿ ತುಂಬಿ ವಾಸನೆ ಬೀರುತ್ತಿದೆ.

ವಕ್ಕಲೇರಿಯಿಂದ 9 ಕಿ.ಮೀ.ದೂರದಲ್ಲಿ ಐತಿಹಾಸಿಕ ಶಿವನ ದೇವಾಲಯವಿದೆ. ಇಲ್ಲಿಗೆ ರಾಜ್ಯ ಸೇರಿದಂತೆ ವಿವಿಧ ಕಡೆಗಳಿಂದ ಭಕ್ತರು ಆಗಮಿಸುತ್ತಾರೆ. ಅವರು ವಕ್ಕಲೇರಿ ಮಾರ್ಗವಾಗಿಯೇ ಸಂಚರಿಸಬೇಕಾಗಿದ್ದು, ಕಸದ ರಾಶಿಯನ್ನು ದರ್ಶನ ಮಾಡಿಕೊಂಡು ಹೋಗುವಂತಾಗಿದೆ.

ವಕ್ಕಲೇರಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿಯೇ ಕಸದ ರಾಶಿ ರಾರಾಜಿಸುತ್ತಿದ್ದು, ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಆದರೂ, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಂಪೌಂಡ್ ಮುಂದೆ ಪಶು ತ್ಯಾಜ್ಯ ಹಾಕಿರುವವರಿಗೆ ನೋಟಿಸ್ ನೀಡಿ ತೆರುವುಗೊಳಿಸಲು ಸೂಚಿಸಲಾಗಿದೆ. ಗ್ರಾಮದಲ್ಲಿ ಈಗಾಗಲೇ ಸ್ವಚ್ಛತೆ ನಡೆಸಲಾಗಿದ್ದು, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಭಾರತಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ವಕ್ಕಲೇರಿ ಗ್ರಾಮ ಪಂಚಾಯಿತಿ

ಗ್ರಾ.ಪಂ.ಕೇಂದ್ರದಲ್ಲೇ ಸ್ವಚ್ಛತೆ ಇಲ್ಲ

ಮಾರ್ಕಂಡೇಯ ಬೆಟ್ಟದ ಮಹತ್ವ ತಿಳಿದು ದೇವಾಲಯಕ್ಕೆ ಬಂದಿದ್ದೆವು. ಮಾರ್ಗಮಧ್ಯೆ ತಿಂಡಿ ತಿನ್ನಲು ವಕ್ಕಲೇರಿ ಗ್ರಾಮದಲ್ಲಿ ಕಾರು ನಿಲ್ಲಿಸಿದೆವು. ಆದರೆ, ರಸ್ತೆ ಬದಿಯಲ್ಲೇ ಬಿದ್ದಿರುವ ಕಸದ ರಾಶಿ, ಕೊಳೆತು ನಾರುತ್ತಿರುವ ಪಶು ತ್ಯಾಜ್ಯ ಹಾಗೂ ಸೊಳ್ಳೆಗಳ ಕಾಟದಿಂದಾಗಿ ಸ್ವಲ್ಪ ಹೊತ್ತು ಇರಲು ಸಾಧ್ಯವಿಲ್ಲ. ಗ್ರಾಮ ಪಂಚಾಯಿತಿ ಕೇಂದ್ರದಲ್ಲೇ ಸ್ವಚ್ಛತೆ ಇಲ್ಲದಿರುವುದು ಬೇಸರದ ವಿಷಯ.

ರಾಕೇಶ್ ಶರ್ಮಾ, ಪ್ರವಾಸಿ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260812-18-2074012403

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ