
ಕ.ಕ ಭಾಗಕ್ಕೆ ಪ್ರತ್ಯೇಕ ನೆರವಿಲ್ಲ: ಕೇಂದ್ರ
ಬಳ್ಳಾರಿ: ಸಂವಿಧಾನದ ವಿಧಿ 371(ಜೆ)ಯಡಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಪ್ರತ್ಯೇಕ ವಾರ್ಷಿಕ ಕೇಂದ್ರ ಆರ್ಥಿಕ ನೆರವು ಒದಗಿಸುವಂತೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ರಾಜ್ಯಕ್ಕೆ ಬಿಡುಗಡೆಯಾಗುವ ಸಾಮಾನ್ಯ ಕೇಂದ್ರ ಅನುದಾನವನ್ನೇ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಬಳಸಿಕೊಳ್ಳುವಂತೆ ತಿಳಿಸಿದೆ.
ಲೋಕಸಭೆಯಲ್ಲಿ ಬಳ್ಳಾರಿ ಸಂಸದ ಇ. ತುಕಾರಾಮ್ ಅವರು ಕೇಳಿದ ಪ್ರಶ್ನೆಗೆ ಗೃಹ ಸಚಿವಾಲಯದ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಈ ಕುರಿತು ಲಿಖಿತ ಉತ್ತರ ನೀಡಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದಿರುವಿಕೆಯನ್ನು ನಿವಾರಿಸಲು ಮತ್ತು ವಿಶೇಷ ಅಗತ್ಯಗಳನ್ನು ಪೂರೈಸಲು ಸಂವಿಧಾನದ 371(ಜೆ) ವಿಧಿಯ ವಿಶೇಷ ನಿಬಂಧನೆಗಳಡಿ ಪ್ರತಿವರ್ಷ ಪ್ರತ್ಯೇಕ ಕೇಂದ್ರ ಆರ್ಥಿಕ ನೆರವು ನೀಡಲು ಕರ್ನಾಟಕ ಸರ್ಕಾರ ಪ್ರಸ್ತಾಪ ಸಲ್ಲಿಸಿದೆಯೇ?
ಈ ಪ್ರಸ್ತಾಪದ ಮೇಲೆ ಕೇಂದ್ರ ಸರ್ಕಾರ ಕೈಗೊಂಡ ಕ್ರಮವೇನು ಹಾಗೂ ಪ್ರತ್ಯೇಕ ಅನುದಾನ ನೀಡಲು ಕಾಲಮಿತಿ ಇದೆಯೇ ಎಂದು ಸಂಸದರು ಪ್ರಶ್ನಿಸಿದ್ದರು.
ಸಂಸದರ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, ‘ತೆರಿಗೆ ಮತ್ತು ಸುಂಕಗಳ ಹಂಚಿಕೆ’, ‘ಕೇಂದ್ರ ಪ್ರಾಯೋಜಿತ ಯೋಜನೆಗಳ ಅಡಿಯ ಗ್ರಾಂಟ್ಸ್-ಇನ್-ಏಡ್’, ‘ಹಣಕಾಸು ಆಯೋಗ’ದ ಅನುದಾನ ಹಾಗೂ ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ನೀಡುವ ವಿಶೇಷ ನೆರವು (ಎಸ್‌ಎಎಸ್‌ಸಿಐ) ಯೋಜನೆಯಡಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಈಗಾಗಲೇ ಗಣನೀಯ ಪ್ರಮಾಣದ ಆರ್ಥಿಕ ಸಂಪನ್ಮೂಲವನ್ನು ಒದಗಿಸುತ್ತಿದೆ’ ಎಂದು ವಿವರಣೆ ನೀಡಿದ್ದಾರೆ.
ಕೇಂದ್ರ ಸರ್ಕಾರವು ರಾಜ್ಯಕ್ಕೆ ಬಿಡುಗಡೆ ಮಾಡುವ ಈ ಒಟ್ಟಾರೆ ಆರ್ಥಿಕ ಸಂಪನ್ಮೂಲಗಳನ್ನು ಕರ್ನಾಟಕ ಸರ್ಕಾರವು ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿ ಸೇರಿದಂತೆ ತನ್ನ ಆದ್ಯತೆ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಸೂಕ್ತವಾಗಿ ಬಳಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಬಳ್ಳಾರಿ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳು ಕಲ್ಯಾಣ ಕರ್ನಾಟಕ ಭಾಗಕ್ಕೆ ಒಳಪಡುತ್ತವೆ.
‘ಸಚಿವರ ಉತ್ತರ ತೃಪ್ತಿ ನೀಡಿಲ್ಲ ’
ಕೇಂದ್ರದ ಈ ಉತ್ತರ ಸಮಾಧಾನ ತಂದಿಲ್ಲ. ಹೀಗಾಗಿಯೇ ಕಲ್ಯಾಣ ಕರ್ನಾಟಕ ಭಾಗದ ಪ್ರತಿನಿಧಿಗಳು ಸಚಿವರನ್ನು ಭೇಟಿಯಾಗಿ, ರಾಜ್ಯಕ್ಕೆ ಅಗತ್ಯವಿರುವ ಬೇಡಿಕೆ ಪಟ್ಟಿಯನ್ನು ಸಲ್ಲಿಸಿದ್ದೇವೆ. ರಾಜ್ಯದಿಂದ ಸೂಕ್ತ ಪ್ರಸ್ತಾವನೆ ಕಳುಹಿಸಿಕೊಟ್ಟರೆ ಪರಿಶೀಲನೆ ಮಾಡುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದು ಸಂಸದ ಇ. ತುಕಾರಾಂ ಪ್ರಜಾವಾಣಿಗೆ ತಿಳಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260812-25-1559106197