
ಪಾರ್ಕಿಂಗ್ ನಿಯಮ ಕುರಿತು ಜನರ ಅಭಿಪ್ರಾಯ ಪಡೆದು ಕಾನೂನು ರೂಪಿಸಿ
ಪಾರ್ಕಿಂಗ್ ಶುಲ್ಕ: ನೀವೇನು ಹೇಳುತ್ತೀರಿ?
ಮನೆ ಮುಂದೆ ಕಾರು ನಿಲ್ಲಿಸಿದರೆ ₹15 ಸಾವಿರದಿಂದ ₹25 ಸಾವಿರದವರೆಗೆ ಶುಲ್ಕ ವಿಧಿಸಲು ಜಿಬಿಎ ನಿರ್ಧರಿಸಿದ್ದು, ಈ ಸಂಬಂಧ ಹೊಸ ಪಾರ್ಕಿಂಗ್ ನಿಯಮಗಳ ಕರಡು ಅಧಿಸೂಚನೆ ಹೊರಡಿಸಿದೆ. ಪಾರ್ಕಿಂಗ್ ಶುಲ್ಕದ ಬಗ್ಗೆ ನಿಮ್ಮ ಅಭಿಪ್ರಾಯವನ್ನು 50 ಪದಗಳಲ್ಲಿ ಬರೆದು, ನಿಮ್ಮ ಭಾವಚಿತ್ರ, ವಿಳಾಸದೊಂದಿಗೆ ‘ಪ್ರಜಾವಾಣಿ’ಯ ವಾಟ್ಸ್ ಆ್ಯಪ್ ಸಂಖ್ಯೆ 96060 38256ಕ್ಕೆ ಕಳುಹಿಸಿಕೊಡಿ. ಆಯ್ದ ಅಭಿಪ್ರಾಯಗಳನ್ನು ಪ್ರಕಟಿಸಲಾಗುವುದು.
‘ಮಧ್ಯಮ ವರ್ಗದ ಮೇಲೆ ಬರೆ’
ಮನೆ ಮುಂದೆ ಕಾರ್ ಪಾರ್ಕ್ ಮಾಡುವವರು ಮಧ್ಯಮ ವರ್ಗದವರು. ಪ್ರತಿ ಬಾರಿಯೂ ಮಧ್ಯಮ ವರ್ಗದ ಮೇಲೆ ಬರೆ ಹಾಕುವಂತೆ ಈ ಬಾರಿಯೂ ಅವರ ಮೇಲೆಯೇ ಹೊರೆ ಅಲ್ಲ, ಬರೆ ಹಾಕಲಾಗುತ್ತಿದೆ. ಮಧ್ಯಮ ವರ್ಗದವರು ಕಷ್ಟ ಪಟ್ಟು ಒಂದು ಚಿಕ್ಕ ಮನೆ ಕಟ್ಟಿಸಿ, ಮನೆ ಮುಂದೆ ಕಾರು ನಿಲ್ಲಿಸಿಕೊಳ್ಳುತ್ತಾರೆ. ಆ ಪುಟ್ಟ ಮನೆಯ ಒಳಗೇ ಕಾರು ನಿಲ್ಲಿಸಿಕೊಳ್ಳಲು ಸಾಧ್ಯವೇ? ಸರ್ಕಾರ ಬಿಟ್ಟಿ ಭಾಗ್ಯಗಳನ್ನು ಕೊಡಲು ಈ ರೀತಿ ಸಲ್ಲದ ಹೇರಿಕೆಯನ್ನು ಜನರ ಮೇಲೆ ಹಾಕುವುದು ತಪ್ಪು. ಜಿಬಿಎ ಮೊದಲು ರಸ್ತೆಗಳನ್ನು ಸರಿ ಮಾಡಲಿ. ಅಸಂಬದ್ಧ ಶುಲ್ಕ ಹೇರುವುದು ನಾಚಿಕೆಗೇಡಿನ ಸಂಗತಿ. ಇದು ಒತ್ತಾಯ ಪೂರ್ವಕವಾಗಿ ಭಿಕ್ಷೆ ಬೇಡಿದಂತೆ.
-ಸ್ನೇಹಲತಾ ಜನಾದ್ರಿ, ಬನಶಂಕರಿ 3ನೇ ಹಂತ
‘ನಮ್ಮ ಮೇಲಿನ ದೌರ್ಜನ್ಯವೇ ಸರಿ’
ನಮ್ಮ ಮನೆಯ ಮುಂದೆ ಸ್ವಂತ ವಾಹನಗಳನ್ನು ನಿಲ್ಲಿಸಲು ಸಾಧ್ಯವಾಗದಿದ್ದರೆ ಮತ್ತೇಕೆ ಈ ಮನೆ? ಕೋಟಿಗಟ್ಟಲೆ ಹಣ ಸುರಿದು ಮನೆ ಕಟ್ಟುವಾಗ ಇಲ್ಲದ ಕಾನೂನು ಈಗ ಎಲ್ಲಿಂದ ಬಂತು? ಜನಾಭಿಪ್ರಾಯ ಪಡೆಯದೆ ಮನಸ್ಸಿಗೆ ಬಂದಂತೆ ಹೊಸ ಹೊಸ ಸೂತ್ರಗಳನ್ನು ಸಾರ್ವಜನಿಕರ ಮೇಲೆ ಹೇರುತ್ತಾ ಬಂದರೆ ಅದನ್ನು ತಡೆಯುವ ಶಕ್ತಿ ನಮಗಿರುವುದಿಲ್ಲ. ಮಾನವೀಯತೆ ಮರೆತು, ಯಾವುದೇ ರಾಜ್ಯದಲ್ಲಿಲ್ಲದ ಕಾನೂನು ಜಾರಿ ಮಾಡುವುದು ಸರಿಯಲ್ಲ. ಇದು ನಮ್ಮ ಮೇಲಿನ ದೌರ್ಜನ್ಯವೇ ಸರಿ. ಜನರ ಅಭಿಪ್ರಾಯ ಪಡೆದು ಸರ್ಕಾರ ಕಾನೂನು ರೂಪಿಸಬೇಕೆ ಹೊರತು, ತನ್ನಿಷ್ಟಕ್ಕೆ ಮಾಡುವುದಲ್ಲ.
-ಬಾಲಕೃಷ್ಣ ಎಂ.ಆರ್., ಸೀತಪ್ಪ ಲೇಔಟ್
‘ಭ್ರಷ್ಟಾಚಾರಕ್ಕೆ ಹೊಸ ಹಾದಿ’
ಮನೆ ಕಟ್ಟಿಸುವಾಗ ಸ್ವಂತ ವಾಹನ ನಿಲುಗಡೆಗೆ ಸ್ಥಳ ಗುರುತಿಸುವ ಬಗ್ಗೆ ನಿಯಮ ರೂಪಿಸದೆ, ಈಗ ಬೇಕಾಬಿಟ್ಟಿ ನಿಯಮ ಮಾಡುವುದು ಸರಿಯಲ್ಲ. ವಾಹನ ಮಾಲೀಕರಿಗೆ ಶಿಸ್ತು ಹೇರುವ ನೆಪದಲ್ಲಿ ಜಿಬಿಎ ತನ್ನ ತಪ್ಪನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಗುತ್ತಿಗೆದಾರರಿಂದ ಟೋಯಿಂಗ್ ಮಾಡಿಸುವುದು ಭ್ರಷ್ಟಾಚಾರಕ್ಕೆ ಹೊಸ ಹಾದಿಯಾಗುವ ಸಾಧ್ಯತೆ ಇದೆ. ರಾಜ್ಯ ರಾಜಕಾರಣಕ್ಕೆ ರಿಯಲ್ ಎಸ್ಟೇಟ್ ಉದ್ಯಮಿಗಳು ದಾಂಗುಡಿ ಇಟ್ಟಂತೆ, ಮುಂದಿನ ದಿನಗಳಲ್ಲಿ ಟೋಯಿಂಗ್ ಗುತ್ತಿಗೆದಾರರೂ ದಾಂಗುಡಿ ಇಟ್ಟರೆ ಆಶ್ಚರ್ಯವಿಲ್ಲ.
-ರಮೇಶ್, ಸಪ್ತಗಿರಿ ಲೇಔಟ್
‘ದುಬಾರಿ ಶುಲ್ಕ ಪಾವತಿ ಕಷ್ಟ’
ಸಚಿವರಾದ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು, ಖಾಲಿ ನಿವೇಶನಗಳಲ್ಲಿನ ಕಸ ತೆರವು ಕಾರ್ಯ ನಿಜಕ್ಕೂ ಸಂತೋಷ ತಂದಿದೆ. ಆದರೆ, ಮನೆ ಮುಂದೆ ವಾಹನ ಪಾರ್ಕಿಂಗ್‌ಗೆ ದುಬಾರಿ ಶುಲ್ಕ ಪಾವತಿಸುವುದು ಮಾಲೀಕರಿಗೆ ಕಷ್ಟ ಸಾಧ್ಯ. ಪಾರ್ಕಿಂಗ್ ಶುಲ್ಕ ವಿಧಿಸಿ ಅಲ್ಲಿ ವಾಹನ ನಿಲುಗಡೆ ಮಾಡಿದಲ್ಲಿ, ಪಾದಚಾರಿಗಳ ಓಡಾಟಕ್ಕೆ ಮತ್ತು ವಾಹನ ಹೋಗಲು ಅವಕಾಶ ಇರುತ್ತದೆಯೇ? ಬೆಂಗಳೂರಿನಲ್ಲಿ ವಾರ್ಷಿಕ ಒಂದು ಲಕ್ಷ ವಾಹನಗಳು ನೋಂದಣಿ ಆಗುತ್ತಿವೆ. ಅವುಗಳಿಗೆ ಪಾರ್ಕಿಂಗ್ ಸ್ಥಳ ಎಲ್ಲಿ? ನಿಗದಿಪಡಿಸಿದಷ್ಟು ಶುಲ್ಕವನ್ನು ವಾಹನ ಮಾಲೀಕರು ಪಾವತಿಸಿದಲ್ಲಿ, ಅವರು ತಮಗೆ ಇಷ್ಟ ಬಂದಂತೆ ಮನೆ ಮುಂದೆ ವಾಹನ ನಿಲುಗಡೆ ಮಾಡುತ್ತಾರೆ. ಆದ್ದರಿಂದ ಶುಲ್ಕ ವಿಧಿಸುವ ಕ್ರಮದ ಬಗ್ಗೆ ಅವಲೋಕನ ಮಾಡಬೇಕು.
-ಎಚ್. ದೊಡ್ಡ ಮಾರಯ್ಯ, ಸಂತೃಪ್ತಿ ನಗರ
‘ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ’
ರಸ್ತೆ ಬದಿ ಹಾಗೂ ಮನೆ ಮುಂಭಾಗ ವಾಹನ ನಿಲ್ಲಿಸುವುದಕ್ಕೆ ಗಂಟೆವಾರು, ಮಾಸಿಕ ಅಥವಾ ವಾರ್ಷಿಕ ಶುಲ್ಕ ವಿಧಿಸುವ ಜಿಬಿಎಯ ಹೊಸ ಪಾರ್ಕಿಂಗ್ ನಿಯಮಗಳು ಸಾರ್ವಜನಿಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಹಾಕಲಿವೆ. ಮನೆ ಮುಂಭಾಗ ವಾಹನ ನಿಲ್ಲಿಸುವುದಕ್ಕೂ ಶುಲ್ಕ ಅಥವಾ ಅನುಮತಿ ಕಡ್ಡಾಯಗೊಳಿಸುವುದು ನಾಗರಿಕರ ಹಕ್ಕು ಮತ್ತು ಖಾಸಗಿ ಸ್ಥಳದ ಬಳಕೆಯ ಮೇಲಿನ ಅನಗತ್ಯ ಹಸ್ತಕ್ಷೇಪವಾಗಿದೆ. ಮೊದಲು ಸಮರ್ಪಕ ಸಾರ್ವಜನಿಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ, ನಂತರ ಶುಲ್ಕ ವಿಧಿಸುವ ಬಗ್ಗೆ ಯೋಚಿಸಬೇಕು. ಈ ನಿಯಮಗಳನ್ನು ಜಾರಿಗೆ ತರುವ ಮೊದಲು ಸಾರ್ವಜನಿಕರ ಅಭಿಪ್ರಾಯ ಪಡೆದು, ಸಾಮಾನ್ಯ ಜನರಿಗೆ ಹೊರೆಯಾಗದ ಪರ್ಯಾಯ ವ್ಯವಸ್ಥೆ ರೂಪಿಸಬೇಕು.