ಮಂಡ್ಯ | ‘ಕರ್ನಾಟಕ ತತ್ವಪದ ಗಾಯನ ಸಮಾವೇಶ’ದಲ್ಲಿ ತತ್ವಪದಗಳಿಗೆ ಮರುಜೀವ

ಮಂಡ್ಯ | ‘ಕರ್ನಾಟಕ ತತ್ವಪದ ಗಾಯನ ಸಮಾವೇಶ’ದಲ್ಲಿ ತತ್ವಪದಗಳಿಗೆ ಮರುಜೀವ

ಮಂಡ್ಯ | ‘ಕರ್ನಾಟಕ ತತ್ವಪದ ಗಾಯನ ಸಮಾವೇಶ’ದಲ್ಲಿ ತತ್ವಪದಗಳಿಗೆ ಮರುಜೀವ

‘ಮೂಳೆ ಮಾಂಸದ ದೇಹಕೆಚಿನ್ನದ ಲೇಪನ ಯಾತಕೆಮಣ್ಣಲ್ಲಿ ಮಣ್ಣಾಗಿ ಹೋಗೊ ದೇಹಕೆಮಹಡಿಯ ಮನೆ ಮತ್ಯಾತಕೆ...’

ಮಂಡ್ಯದ ಕೊಮ್ಮೇರಹಳ್ಳಿ ವಿಶ್ವಮಾನವ ಕ್ಷೇತ್ರದ ಕುವೆಂಪು ಸಭಾಭವನದಲ್ಲಿ ಈ ಸಾಲುಗಳು ಮೊಳಗುತ್ತಿದ್ದಂತೆ ಸಭಾಂಗಣ ಮೌನವಾಯಿತು. ಆಧುನಿಕ ವಾದ್ಯಗಳ ಅಬ್ಬರವಿಲ್ಲ. ಬೆಳಕು–ಧ್ವನಿಯ ಚಮತ್ಕಾರವೂ ಇಲ್ಲ. ಏಕತಾರಿಯ ಒಂದೇ ತಂತಿ, ದಮ್ಮಡಿಯ ಸದ್ದು, ಚಿಟಿಕೆ ತಾಳದ ಲಯ, ಕಂಚಿನ ಕಂಠದಲ್ಲಿ ಹೊರಹೊಮ್ಮಿದ ತತ್ವಪದ. ಆದರೆ ಆ ಸರಳ ಗಾಯನದೊಳಗೆ ಬದುಕಿನ ದೊಡ್ಡ ಸತ್ಯವೊಂದು ನಿಧಾನವಾಗಿ ತೆರೆದುಕೊಳ್ಳುತ್ತಿತ್ತು.

ದೇಹದ ಮೇಲಿನ ವ್ಯಾಮೋಹ, ಸಂಪತ್ತಿನ ಮೇಲಿನ ಅಹಂಕಾರ, ಬದುಕಿನ ಕ್ಷಣಿಕತೆಯನ್ನು ಪ್ರಶ್ನಿಸುವ ಈ ಪದಗಳು ಇಂದಿನ ಕಾಲದಲ್ಲೂ ಅಷ್ಟೇ ತಾಜಾ ಎನ್ನುವುದನ್ನು ಅಲ್ಲಿದ್ದವರು ಅನುಭವಿಸಿದರು.

ಮರೆಯಾಗುತ್ತಿರುವ ತತ್ವಪದ ಪರಂಪರೆಗೆ ಮತ್ತೆ ವೇದಿಕೆ ಕಲ್ಪಿಸುವ ಮಂಡ್ಯದ ಪ್ರಯತ್ನಕ್ಕೆ ಇದು ಒಂದು ಉದಾಹರಣೆ.

ಜುಲೈ 27 ಮತ್ತು 28ರಂದು ನಡೆದ ‘ಕರ್ನಾಟಕ ತತ್ವಪದ ಗಾಯನ ಸಮಾವೇಶ’ದಲ್ಲಿ ನಾಡಿನ ಹನ್ನೊಂದು ತಂಡಗಳ ಗಾಯಕರು ಎರಡು ದಿನ ತತ್ವಪದಗಳನ್ನು ಹಾಡಿದರು. ಕರ್ನಾಟಕ ಸಂಘವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಈ ಸಮಾವೇಶ, ಕೇವಲ ಎರಡು ದಿನಗಳ ಗಾಯನ ಕಾರ್ಯಕ್ರಮವಾಗಿರಲಿಲ್ಲ. ಎಲೆಮರೆ ಕಾಯಿಯಂತಿರುವ ತತ್ವಪದ ಕಾರರನ್ನು ಹುಡುಕಿ, ಅವರ ಹಾಡುಗಳನ್ನು ದಾಖಲಿಸಿ, ತರಬೇತಿ ನೀಡಿ, ಮತ್ತೆ ಜನರ ಮುಂದೆ ತರುವ ಪ್ರಯತ್ನವೂ ಇದರ ಹಿಂದಿತ್ತು.

ಚಂದಗಾಲು ಸಿದ್ದಮ್ಮ ಮತ್ತು ತಂಡದವರು ‘ಎಲ್ಲಿಂದ ನೀ ಬಂದೆ, ಅಲ್ಲಿಂದ ಏನ್‌ ತಂದೆ, ಇಲ್ಲಿಂದ ಏನೋಯ್ದೆ ಮನುಜ...’ ಎಂದು ಹಾಡಿದಾಗ, ಸಭಾಂಗಣದೊಳಗೆ ಬದುಕಿನ ನಶ್ವರತೆಯ ಪ್ರಶ್ನೆ ಮತ್ತೊಮ್ಮೆ ಮೊಳಗಿತು. ಎಲ್ಲಿಂದ ಬಂದೆವು, ಏನು ತಂದೆವು, ಹೋಗುವಾಗ ಏನು ಕೊಂಡೊಯ್ಯುತ್ತೇವೆ ಎಂಬ ಸರಳ ಪ್ರಶ್ನೆಯೊಳಗೆ ವೈರಾಗ್ಯದ ದೊಡ್ಡ ತತ್ವವಿತ್ತು.

ತತ್ವಪದಗಳ ಶಕ್ತಿ ಇದೇ. ಅವು ದೊಡ್ಡ ತತ್ವಶಾಸ್ತ್ರ ವನ್ನು ಸಂಕೀರ್ಣ ಭಾಷೆಯಲ್ಲಿ ಹೇಳುವುದಿಲ್ಲ. ಹೊಲದಲ್ಲಿ ದುಡಿಯುವವನಿಗೂ, ದಿನಗೂಲಿ ಮಾಡುವವನಿಗೂ, ಸಾಮಾನ್ಯ ಬದುಕು ನಡೆಸುವವನಿಗೂ ಅರ್ಥವಾಗುವ ಮಾತುಗಳಲ್ಲಿ ಬದುಕಿನ ಅರ್ಥವನ್ನು ಹುಡುಕುತ್ತವೆ.

‘ಹಿಗ್ಗುವಿ ಯಾಕೋ ಈ ದೇಹಕ್ಕೆ... ಅಗ್ನಿಯೊಳಗೆ ಬಿದ್ದು ದಗ್ಧವಾಗುವ ದೇಹಕ್ಕೆ...’ ಎಂದು ಪುರಂದರದಾಸರ ಪದ ಮೊಳಗಿದಾಗ, ದೇಹದ ಮೇಲಿನ ಮನುಷ್ಯನ ಹೆಮ್ಮೆಯೇ ಪ್ರಶ್ನೆಯಾಯಿತು. ಮತ್ತೊಂದೆಡೆ ಕಡಕೋಳ ಮಡಿವಾಳೇಶ್ವರ ಶಿವಯೋಗಿಗಳ ‘ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು...’ ಎಂಬ ಪದಗಳು ಅನಗತ್ಯ ಮಾತು, ಚಾಡಿ, ಕಾಕಬುದ್ಧಿಯಿಂದ ದೂರವಿರಬೇಕೆಂಬ ಸಂದೇಶ ನೀಡಿದವು.

ಇವು ಶತಮಾನಗಳ ಹಿಂದಿನ ಮಾತುಗಳಾದರೂ, ಇಂದಿನ ಮನುಷ್ಯನ ಬದುಕಿಗೆ ಅಪರಿಚಿತವಾಗಿಲ್ಲ.

ತಂತಿಯೊಂದರಲ್ಲಿ ತತ್ವ: ತತ್ವಪದ ಗಾಯನದ ಸೊಬಗು ಅದರ ಸರಳತೆಯಲ್ಲಿ. ವೇದಿಕೆಯ ಮೇಲೆ ಆಧುನಿಕ ವಾದ್ಯಗಳ ದೊಡ್ಡ ತಂಡವಿಲ್ಲ. ಏಕತಾರಿಯ ಒಂದೇ ತಂತಿ ಸಾಕು. ದಮ್ಮಡಿಯ ಲಯ, ಚಿಟಿಕೆ ತಾಳದ ಸದ್ದು, ಕಂಚಿನ ತಾಳದ ಮೇಳ ಸೇರಿಕೊಂಡಾಗ ಹಾಡು ತನ್ನದೇ ಲೋಕವನ್ನು ಸೃಷ್ಟಿಸಿಕೊಳ್ಳುತ್ತದೆ.

ಗಾಯಕರು ಹಾಡುವುದಷ್ಟೇ ಅಲ್ಲ; ಬದುಕನ್ನು ಹೇಳುತ್ತಾರೆ. ಕೆಲವೊಮ್ಮೆ ಗುರು–ಶಿಷ್ಯ ಪರಂಪರೆಯಿಂದ ಬಂದ ಪದಗಳು, ಮತ್ತೆ ಕೆಲವೊಮ್ಮೆ ಹೊಲ–ಮನೆ–ದುಡಿಮೆಯ ನಡುವೆ ಹುಟ್ಟಿದ ಅನುಭವದ ಮಾತುಗಳು. ಭಕ್ತಿ, ಜ್ಞಾನ, ವೈರಾಗ್ಯ ಇವುಗಳ ಮೂಲಕ ಮನುಷ್ಯನ ಒಳಜಗತ್ತನ್ನು ತಟ್ಟುತ್ತವೆ.

‘ನಮ್ಮ ಎಲುಬಿನ ಹಂದರದೊಳಗೊಂದು ಮಂದಿರವಿದೆ, ಉಚ್ಛ್ವಾಸ ನಿಶ್ವಾಸಗಳಾ ಓಂಕಾರವಿದೆ...’ ಎಂಬ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಕವಿತೆಯೂ ಇದೇ ಒಳನೋಟವನ್ನು ತೆರೆದಿಟ್ಟಿತು. ಹೊರಗೆ ದೇವರನ್ನು ಹುಡುಕುವುದಕ್ಕಿಂತ ನಮ್ಮೊಳಗಿನ ಜೀವಚೈತನ್ಯವನ್ನು ಕಾಣುವ ಭಾವನೆ ಅದರಲ್ಲಿ ಇತ್ತು. ರಾಮ, ಅಲ್ಲಾ, ಬುದ್ಧ, ಏಸು ಎಂಬ ಭಿನ್ನ ಹೆಸರುಗಳಾಚೆ ಇರುವ ಮಾನವೀಯ ಸಾಮರಸ್ಯದ ಧ್ವನಿಯೂ ಅದರೊಳಗಿತ್ತು.

ಮಣ್ಣಿನಿಂದ ಬಂದ ಪದಗಳು: ಮಂಡ್ಯದ ತತ್ವಪದ ಪರಂಪರೆಯ ವಿಶೇಷತೆಯೆಂದರೆ, ಅದು ಅರಮನೆಗಳಲ್ಲಾಗಲಿ, ದೊಡ್ಡ ಸಾಹಿತ್ಯದ ವೇದಿಕೆಗಳಲ್ಲಾಗಲಿ ಮಾತ್ರ ಬೆಳೆದದ್ದಲ್ಲ. ಶ್ರಮಿಕ ವರ್ಗಗಳು, ಶೂದ್ರ ಸಮುದಾಯಗಳು, ದಲಿತರು ಮತ್ತು ತಳಸಮುದಾಯಗಳ ಬದುಕಿನ ನಡುವೆ ಈ ಪದಗಳು ಬೆಳೆದಿವೆ.

ಕೊಪ್ಪದ ಲಿಂಗಪ್ಪ, ಬಸರಾಳಿನ ಜವರಯ್ಯ–ಬೋರಮ್ಮ ದಂಪತಿ, ಚಂದಗಾಲು ಬೋರಪ್ಪ, ಗೊರವಾಲೆ ರುದ್ರಪ್ಪ ಮತ್ತು ಅವರ ಶಿಷ್ಯ ಪರಂಪರೆ ಈ ನೆಲದ ತತ್ವಪದ ಪರಂಪರೆಯ ಪ್ರಮುಖ ಹೆಸರುಗಳು.

ಆದರೆ ಕಾಲ ಬದಲಾಗಿದೆ. ಹಾಡುಗಳನ್ನು ತಿಳಿದಿದ್ದ ಹಿರಿಯರು ಕಡಿಮೆಯಾಗುತ್ತಿದ್ದಾರೆ. ಅವರೊಂದಿಗೆ ಅನೇಕ ಪದಗಳೂ ಕಣ್ಮರೆಯಾಗುವ ಅಪಾಯದಲ್ಲಿವೆ. ಪುಸ್ತಕಗಳಲ್ಲಿ ದಾಖಲಾಗದ, ಧ್ವನಿಮುದ್ರಣವಾಗದ, ಮುಂದಿನ ತಲೆಮಾರಿಗೆ ತಲುಪದ ಅನೇಕ ತತ್ವಪದಗಳು ಇಂದಿಗೂ ಗ್ರಾಮಗಳ ಮನೆಮನೆಗಳಲ್ಲಿ, ಮಠಗಳಲ್ಲಿ, ಹಿರಿಯರ ನೆನಪುಗಳಲ್ಲಿ ಉಳಿದಿವೆ. ಅವುಗಳನ್ನು ಮತ್ತೆ ಹೊರಗೆ ಕರೆತರುವ ಕೆಲಸ ಈಗ ನಡೆಯುತ್ತಿದೆ.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶಗೌಡ ಅವರು ‘ನಾದ ಮಣಿನಾಲ್ಕೂರು’ ಗಾಯನದಿಂದ ಪ್ರೇರಣೆ ಪಡೆದು ತತ್ವಪದ ಅಭಿಯಾನವನ್ನು ಆರಂಭಿಸಿದ್ದಾರೆ. ಇದರ ಭಾಗವಾಗಿ ಎಲೆಮರೆ ಕಾಯಿಯಂತಿರುವ ತತ್ವಪದಕಾರರನ್ನು ಗುರುತಿಸಿ, ಗಾಮನಹಳ್ಳಿ ಸ್ವಾಮಿ ಮತ್ತು ಯಡಗನಹಳ್ಳಿ ಹನುಮಂತ ಅವರಿಂದ ತರಬೇತಿ ಕೊಡಿಸಲಾಗುತ್ತಿದೆ.

ಅವರ ಗಾಯನದ ಮೂಲ ಧಾಟಿಯನ್ನು ಬದಲಿಸದೆ, ಏರಿಳಿತಗಳನ್ನು ಸರಿಪಡಿಸಿ, ಪದಗಳು ಸ್ಪಷ್ಟವಾಗಿ ಕೇಳಿಸುವಂತೆ ಮಾಡಲಾಗುತ್ತಿದೆ. ನಂತರ ವೇದಿಕೆಯನ್ನೂ ಕಲ್ಪಿಸಲಾಗುತ್ತಿದೆ.

ಅಂದರೆ, ಇಲ್ಲಿ ಕೇವಲ ಹಾಡು ಕಲಿಸುವ ಕೆಲಸ ನಡೆಯುತ್ತಿಲ್ಲ. ಒಂದು ಪರಂಪರೆಯ ಉಸಿರನ್ನು ಮುಂದಿನ ತಲೆಮಾರಿಗೆ ತಲುಪಿಸುವ ಕೆಲಸ ನಡೆಯುತ್ತಿದೆ.

ಈ ಪ್ರಯತ್ನದ ಭಾಗವಾಗಿಯೇ ಈಗಾಗಲೇ ‘ಗುರುಸ್ಮರಣೆ’ ಹೆಸರಿನಲ್ಲಿ ಐದು ತತ್ವಪದ ಗಾಯನ ಕಾರ್ಯಕ್ರಮಗಳು ನಡೆದಿವೆ. 2024ರಲ್ಲಿ ‘ಶ್ರಮಣಧಾರೆಗಳ ಸಂಸ್ಕೃತಿ ಉತ್ಸವ’ವೂ ನಡೆದಿತ್ತು.

ಮಂಡ್ಯವನ್ನು ಕೇವಲ ಕಬ್ಬು ಮತ್ತು ಕಾವೇರಿಯ ನೆಲವಾಗಿ ನೋಡುವ ಕಣ್ಣುಗಳಿಗೆ, ಈ ಗಾಯನಗಳು ಮತ್ತೊಂದು ಮಂಡ್ಯವನ್ನು ಪರಿಚಯಿಸುತ್ತಿವೆ. ನಾಥ, ಶರಣ, ಶಾಕ್ತ, ಆರೂಢ, ಅಚಲ, ಸೂಫಿ, ಸಿದ್ಧ ಸೇರಿದಂತೆ ವಿವಿಧ ಶ್ರಮಣಧಾರೆಗಳ ಚಿಂತನೆಗಳು ಇಲ್ಲಿ ತತ್ವಪದಗಳಾಗಿ ರೂಪುಗೊಂಡಿವೆ.

ಅವುಗಳ ಭಾಷೆ ಸರಳ. ಆದರೆ ಪ್ರಶ್ನೆಗಳು ದೊಡ್ಡವು. ನಾವು ಎಲ್ಲಿಂದ ಬಂದೆವು? ಏನು ಕೊಂಡೊಯ್ಯುತ್ತೇವೆ? ದೇಹದ ಮೇಲೆ ಇಷ್ಟೊಂದು ವ್ಯಾಮೋಹ ಏಕೆ? ನಮ್ಮೊಳಗಿನ ದೇವರನ್ನು ಹುಡುಕದೆ ಹೊರಗೆ ಏಕೆ ಅಲೆಯುತ್ತೇವೆ? ಮತ್ತೊಬ್ಬರನ್ನು ನಿಂದಿಸುವುದರಿಂದ ನಮಗೇನು ಸಿಗುತ್ತದೆ?

ಕೊಮ್ಮೇರಹಳ್ಳಿಯ ಆ ಸಭಾಂಗಣದಲ್ಲಿ ಎರಡು ದಿನ ಮೊಳಗಿದ್ದು ಹಳೆಯ ಹಾಡುಗಳಷ್ಟೇ ಅಲ್ಲ. ಮರೆತುಹೋಗುತ್ತಿರುವ ಒಂದು ಜನಪದ ಜ್ಞಾನಪರಂಪರೆಯ ಧ್ವನಿ.

ಏಕತಾರಿಯ ಒಂದೇ ತಂತಿಯಲ್ಲಿ ಆ ಧ್ವನಿ ಇನ್ನೂ ಜೀವಂತವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260816-51-598244958

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ