
ಉದ್ಯಾನ ನಗರಿಯ ಹಸಿರಿಗೆ ಕುತ್ತು?
ಬೆಂಗಳೂರು: ಸರ್ಕಾರಿ ಉದ್ಯಾನಗಳ ಶೇ 5ರಷ್ಟು ಜಾಗವನ್ನು ಸಾರ್ವಜನಿಕ ಉದ್ದೇಶಗಳಿಗೆ ಬಳಸಲು ಮುಂದಾಗಿರುವ ಸರ್ಕಾರದ ನಡೆಗೆ ವಿರೋಧ ವ್ಯಕ್ತವಾಗಿದ್ದು, ಉದ್ಯಾನ ನಗರಿಯ ಹಸಿರು ಹೊದಿಕೆ ಗಣನೀಯವಾಗಿ ಕಡಿಮೆಯಾಗುವ ಆತಂಕ ಪರಿಸರವಾದಿಗಳಲ್ಲಿ ಮೂಡಿದೆ.
197 ಎಕರೆ ವಿಸ್ತೀರ್ಣದ ಕಬ್ಬನ್ ಉದ್ಯಾನ, 240 ಎಕರೆ ವಿಸ್ತೀರ್ಣದ ಲಾಲ್‌ಬಾಗ್ ಸೇರಿದಂತೆ ನಗರದಲ್ಲಿ ಒಟ್ಟು 1,355 ಉದ್ಯಾನಗಳಿವೆ. 1970ರಲ್ಲಿ ಶೇ 78ರಷ್ಟಿದ್ದ ಹಸಿರು ಹೊದಿಕೆಯು ಸದ್ಯ ಶೇ 3ಕ್ಕೆ ಇಳಿದಿದೆ. ಇದೀಗ ‘ಕರ್ನಾಟಕ ಸರ್ಕಾರಿ ಉದ್ಯಾನಗಳ (ಸಂರಕ್ಷಣೆ) ಕಾಯ್ದೆ– 1975’ ತಿದ್ದುಪಡಿ ಮಸೂದೆಗೆ ಅನುಮೋದನೆ ಸಿಕ್ಕರೆ, ಹಸಿರು ಪ್ರದೇಶ ಶೇ 2ಕ್ಕೆ ಇಳಿಯಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕಬ್ಬನ್ ಹಾಗೂ ಲಾಲ್‌ಬಾಗ್ ಉದ್ಯಾನಗಳು ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿದ್ದರೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ 10 ಗುಂಟೆಯಿಂದ 85 ಎಕರೆಯಷ್ಟು ವಿಸ್ತೀರ್ಣದ ಉದ್ಯಾನಗಳಿವೆ. ಯಶವಂತಪುರದ ಮತ್ತಿಕೆರೆ ಜೆ.ಪಿ.ಉದ್ಯಾನ 85 ಎಕರೆ, ಸ್ವಾತಂತ್ರ್ಯ ಉದ್ಯಾನ, ಬಸವನಗುಡಿಯ ಕೃಷ್ಣರಾವ್ ಉದ್ಯಾನ ತಲಾ 20 ಎಕರೆ ವಿಸ್ತೀರ್ಣವಿದೆ. ನೂರಾರು ವರ್ಷದ ಸಾವಿರಾರು ಮರಗಳು ನಗರಕ್ಕೆ ಉಸಿರು ನೀಡುತ್ತಿವೆ.
ಸಾವಿರಾರು ಕೋಟಿ ಬೆಲೆ: ‘ಕಬ್ಬನ್ ಉದ್ಯಾನದ ಶೇ 5ರಷ್ಟು ಭೂಮಿ ಎಂದರೆ 10 ಎಕರೆಯಷ್ಟಾಗುತ್ತದೆ. ಅದರ ಮಾರುಕಟ್ಟೆ ಬೆಲೆ ₹ 1,740 ಕೋಟಿ ಆಗುತ್ತದೆ. ಲಾಲ್‌ಬಾಗ್‌ನಲ್ಲಿ ಸಾರ್ವಜನಿಕ ಉದ್ದೇಶದ 12 ಎಕರೆ ಭೂಮಿ ಬೆಲೆ ₹1,568 ಕೋಟಿ ಬಾಳುತ್ತದೆ. ಒಂದು ಕಡೆ ಅಭಿವೃದ್ಧಿ ಯೋಜನೆಗಳಿಗೆ ಉದ್ಯಾನ ಕಿರಿದಾಗುತ್ತಿದೆ. ಗೋಮಾಳಗಳು, ಕೆರೆ– ಕಟ್ಟೆ, ರಾಜಕಾಲುವೆ, ಸರ್ಕಾರಿ ಭೂಮಿಗಳು ಒತ್ತುವರಿಯಾಗಿವೆ. ಇದೀಗ ಅಳಿದುಳಿದ ಉದ್ಯಾನಗಳು ಮಾರಾಟಕ್ಕೆ ಬಂದಿವೆ’ ಎನ್ನುತ್ತಾರೆ ಪರಿಸರ ಹೋರಾಟಗಾರ ಮನೋಜ್ ಕುಮಾರ್ ನಾಯರ್.
‘300 ಎಕರೆಯಷ್ಟಿದ್ದ ಕಬ್ಬನ್ ಉದ್ಯಾನದಲ್ಲಿ ರಾಜ್ಯಪಾಲರ ನಿವಾಸ, ವಿಧಾನಸೌಧ, ಶಾಸಕರ ಭವನ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ 103 ಎಕರೆ ಬಳಕೆಯಾಗಿತ್ತು. ಲಾಲ್‌ಬಾಗ್ ಉದ್ಯಾನದ 1,135 ಚದರ ಮೀಟರ್ ಅನ್ನು ಮೆಟ್ರೊ ಮಾರ್ಗ ನಿರ್ಮಾಣಕ್ಕೆ ನೀಡಲಾಗಿತ್ತು’ ಎಂದರು.
‘30 ವರ್ಷಗಳಿಂದ ಬೆಂಗಳೂರಿನಲ್ಲಿರುವೆ. ಉದ್ಯಾನ ನಗರಿಯೆಂಬ ಬ್ರ್ಯಾಂಡ್ ಮಾಯವಾಗಿ ದಶಕಗಳಾಗಿವೆ. ಒಂದು ಕಡೆ ಲಕ್ಷ ಗಿಡ ನೆಡುವ ಅಭಿಯಾನ ನಡೆಸುತ್ತಾರೆ. ಇನ್ನೊಂದೆಡೆಯಿಂದ ಸಾವಿರಾರು ಕೋಟಿ ಮೌಲ್ಯದ ಹಸಿರು ಪ್ರದೇಶ ಅನ್ಯ ಉದ್ದೇಶಕ್ಕೆ ನೀಡಲು ಹುನ್ನಾರ ನಡೆಸಲಾಗಿದೆ’ ಎಂದರು.
ಹಿಂದಿನಿಂದಲೂ ನೀಡಲಾಗಿದೆ: ‘ಎಲ್ಲ ಉದ್ಯಾನಗಳು ಸೇರಿದರೆ ಜಿಬಿಎ ವ್ಯಾಪ್ತಿಯಲ್ಲಿ 1,350 ಎಕರೆಯಷ್ಟು ಹಸಿರು ಹೊದಿಕೆಯಿದ್ದು, ಸಾರ್ವಜನಿಕ ಉದ್ದೇಶಕ್ಕೆ ಶೇ 5ರಿಂದ 10ರಷ್ಟು ಪ್ರದೇಶವನ್ನು ದಶಕಗಳಿಂದ ನೀಡಲಾಗಿದೆ’ ಎಂದು ಜಿಬಿಎ ಅಧಿಕಾರಿಯೊಬ್ಬರು ತಿಳಿಸಿದರು.
ಉದ್ಯಾನಗಳ ಶೇ 5ರಷ್ಟು ಜಾಗವನ್ನು ಮಾರಾಟ, ಗುತ್ತಿಗೆ, ಉಡುಗೊರೆ, ವಿನಿಮಯ, ಅಡಮಾನ ಅಥವಾ ಇತರ ವಿಧಾನಗಳ ಮೂಲಕ ಖಾಸಗಿಯವರಿಗೆ ನೀಡಿದರೆ ನಗರದ 70ರಿಂದ 100 ಎಕರೆಯಷ್ಟು ಹಸಿರು ಪ್ರದೇಶ ಮಾಯವಾಗಲಿದೆ.
‘ಸುರಂಗ ರಸ್ತೆ ಯೋಜನೆಗೆ ತಿದ್ದುಪಡಿ’
‘ಅಭಿವೃದ್ಧಿ ಯೋಜನೆಗಳಿಗಾಗಿ ಉದ್ಯಾನಗಳನ್ನು ನೀಡಲು ಉತ್ತಮ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಕಾಯ್ದೆಯ ಮೂಲ ಉದ್ದೇಶವನ್ನೇ ನಗಣ್ಯಗೊಳಿಸಲಾಗುತ್ತಿದೆ’ ಎಂದು ಪರಿಸರವಾದಿ ದತ್ತಾತ್ರೇಯ ದೇವರ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಉದ್ಯಾನಗಳು ನಾಗರಿಕರಿಗೆ ಮನೋಲ್ಲಾಸ ನೀಡುವ ತಾಣ. 1975ರ ಕಾಯ್ದೆ ತಿದ್ದುಪಡಿಯಿಂದ ಉದ್ಯಾನಗಳಲ್ಲಿನ ನೂರಾರು ವರ್ಷಗಳ ಸಾವಿರಾರು ಮರಗಳು ನಾಶವಾಗಲಿವೆ. ಸುರಂಗ ರಸ್ತೆ ಯೋಜನೆ ವಿರೋಧಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿವೆ. ಹೀಗಾಗಿಯೇ ಅಧಿವೇಶನದಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡಲಾಗುತ್ತಿದೆ’ ಎಂದರು.