
ಚಿತ್ರದುರ್ಗ | ಜಿಲ್ಲಾ ಕೇಂದ್ರದಲ್ಲಿ ಇಲ್ಲ ಅಂಬೇಡ್ಕರ್, ಬಾಬೂಜಿ ಭವನ...
ಚಿತ್ರದುರ್ಗ: ರಾಜ್ಯದ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತವಾದ ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಭವನಗಳಿವೆ. ಆದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರೇ ಹೆಚ್ಚಿರುವ ಕೋಟೆನಗರಿಯಲ್ಲಿ ಮಾತ್ರ ಈ ಭವನಗಳಿಲ್ಲ. ಇದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ.
ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕು ಎಂಬ ಒತ್ತಾಯ ಹಲವು ದಶಕಗಳಿಂದಲೂ ಇದೆ. ಈ ಕುರಿತು ಹಿಂದಿನ ಕಾಂಗ್ರೆಸ್, ಬಿಜೆಪಿ ಸರ್ಕಾರಗಳಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಈಗಿನ ಕಾಂಗ್ರೆಸ್ ಸರ್ಕಾರಕ್ಕೂ ಒತ್ತಾಯ ಮಾಡಲಾಗಿದೆ. ಆದರೆ, ಇಲ್ಲಿಯವರೆಗೂ ಅಂಬೇಡ್ಕರ್ ಭವನದ ಕನಸು ಸಾಕಾರಗೊಂಡಿಲ್ಲ. ಜಾಗದ ಕೊರತೆಯ ನೆಪ ಹೇಳುತ್ತಿರುವ ಜನಪ್ರತಿನಿಧಿಗಳು, ಅಧಿಕಾರಿಗಳು ಬೇಡಿಕೆಯನ್ನು ಮುಂದೂಡುತ್ತಲೇ ಬಂದಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ವೇಳೆಗಾಗಲೇ ನಗರದಲ್ಲಿ ಸುಸಜ್ಜಿತವಾದ ಬಾಬು ಜಗಜೀವನರಾಂ ಸಮುದಾಯ ಭವನ ಲೋಕಾರ್ಪಣೆ ಆಗಬೇಕಿತ್ತು. ಜಿಲ್ಲಾ ಪಂಚಾಯಿತಿ ಕಚೇರಿಯ ಕೂಗಳತೆ ದೂರದಲ್ಲೇ ಇರುವ ವಿಶಾಲ ಜಾಗದಲ್ಲಿ ಬಾಬೂಜಿ ಭವನದ ಕಾಮಗಾರಿಯನ್ನೂ ಆರಂಭಿಸಲಾಗಿತ್ತು. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದ ಎಚ್. ಆಂಜನೇಯ ನೇತೃತ್ವದಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿತ್ತು. ಆದರೆ, ಅದಕ್ಕೆ ಹಣಕಾಸಿನ ಕೊರತೆ ಎದುರಾದ ಕಾರಣ ಇನ್ನೂ ಕಾಮಗಾರಿ ಮುಗಿದಿಲ್ಲ.
ಹಲವು ವರ್ಷಗಳ ಕಾಲ ಕುಂಟುತ್ತಾ ಸಾಗಿದ ಕಾಮಗಾರಿ ಸ್ಥಗಿತಗೊಂಡು 3 ವರ್ಷಗಳಾಗಿವೆ. ಈಗ ಇಡೀ ಕಟ್ಟಡ ಕಿಡಿಗೇಡಿಗಳ ಅಡ್ಡೆಯಾಗಿದೆ. ಕಟ್ಟಡಕ್ಕೆ ಅಳವಡಿಸಲಾಗಿದ್ದ ಪರಿಕರಗಳೆಲ್ಲಾ ಹಾಳಾಗುತ್ತಿದ್ದು, ಕಿಟಕಿಗಳು ಒಡೆದು ಹೋಗಿವೆ. ಬಾಗಿಲು ಮುಂತಾದ ಮರದ ವಸ್ತುಗಳಿಗೆ ಗೆದ್ದಲು ಹಿಡಿದಿದೆ. ಸರ್ಕಾರದ ಕೋಟ್ಯಂತರ ರೂಪಾಯಿ ಅನುದಾನ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಇಷ್ಟಾದರೂ ಈಗಿನ ಸರ್ಕಾರ ಕಾಮಗಾರಿಯನ್ನು ಮುಗಿಸಿ ಜನೋಪಯೋಗಕ್ಕೆ ನೀಡದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಬಹುತೇಕ ಸಮುದಾಯ ಭವನಗಳ ಸ್ಥಿತಿ ಹೀಗೆಯೇ ಇದೆ. ಸಮಾಜ ಕಲ್ಯಾಣ ಇಲಾಖೆಯಿಂದ ಅಂಬೇಡ್ಕರ್ ಭವನ, ಬಾಬು ಜಗಜೀವನರಾಂ ಭವನಗಳು, ಸ್ಥಳೀಯ ಶಾಸಕರು, ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಹಲವು ಸಮುದಾಯ ಭವನಗಳು ನಿರ್ಮಾಣಗೊಂಡಿವೆ. ಕೆಲವು ಭವನಗಳು ಅಡಿಪಾಯದ ಹಂತದಲ್ಲೇ ಉಳಿದಿವೆ. ಇನ್ನಷ್ಟು ಭವನಗಳು ಆರ್‌ಸಿಸಿವರೆಗೂ ಆಗಿ ಕಾಮಗಾರಿ ನಿಂತು ಹೋಗಿದೆ.
ಈಗಾಗಲೇ ಪೂರ್ಣಗೊಂಡಿರುವ ಸಮುದಾಯ ಭವನಗಳು ಕೂಡ ಮೂಲ ಸೌಲಭ್ಯಗಳಿಂದ ವಂಚಿತವಾಗಿವೆ. ಕೇವಲ ನಾಲ್ಕು ಗೋಡೆಗಳಷ್ಟೇ ಇದ್ದು ಯಾವುದೇ ಸೌಲಭ್ಯಗಳನ್ನು ಹೊಂದಿಲ್ಲ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 70ಕ್ಕೂ ಹೆಚ್ಚು ವಾಲ್ಮೀಕಿ ಭವನ, 45ಕ್ಕೂ ಹೆಚ್ಚು ಅಂಬೇಡ್ಕರ್ ಭವನಗಳಿವೆ. ಬಹುತೇಕ ಕಟ್ಟಡಗಳು 20 X 15 ಅಳತೆಯ ಕಟ್ಟಡಗಳಾಗಿದ್ದು, ಸಾರ್ವಜನಿಕ ಸಮಾರಂಭಗಳಿಗೆ ಬಳಕೆಯಾಗುತ್ತಿಲ್ಲ.
ಅಂಬೇಡ್ಕರ್ ಭವನ, ಬಾಬು ಜಗಜೀವನರಾಂ ಭವನಗಳ ಕಾಮಗಾರಿಯನ್ನು ಸಮಾಜ ಕಲ್ಯಾಣ ಇಲಾಖೆ ಅನುಷ್ಠಾನ ಮಾಡಿದೆ. ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಭವನಗಳನ್ನು ನಿರ್ಮಾಣ ಮಾಡಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭವನಕ್ಕೆ ₹ 12 ಲಕ್ಷ ನಿಗದಿ ಮಾಡಲಾಗಿದೆ. ಆದರೆ, ಬಹುತೇಕ ಕಾಮಗಾರಿಗಳಿಗೆ ಸರಿಯಾಗಿ ಹಣವೇ ಬಿಡುಗಡೆಯಾಗಿಲ್ಲ.
4 ವರ್ಷಗಳಿಂದ ಗ್ರಾಮ ಪಂಚಾಯಿತಿ ಮಟ್ಟದ ಅಂಬೇಡ್ಕರ್ ಭವನಗಳಿಗೆ ಹಣ ಬಿಡುಗಡೆಯಾಗಿಲ್ಲ. ತಾಲ್ಲೂಕು ಮಟ್ಟದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸರ್ಕಾರ ₹ 50 ಲಕ್ಷ ನಿಗದಿ ಮಾಡಿದೆ. ಜಿಲ್ಲಾ ಕೇಂದ್ರದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ₹ 15 ಕೋಟಿವರೆಗೂ ಸರ್ಕಾರ ಹಣ ನೀಡುತ್ತದೆ. ಆದರೆ, ಸಕಾಲದಲ್ಲಿ ಹಂತಹಂತವಾಗಿ ಹಣ ಬಿಡುಗಡೆ ಮಾಡದ ಕಾರಣ ಕಾಮಗಾರಿಗಳು ಅರ್ಧಕ್ಕೆ ನಿಂತು ಪಾಳುಬಿದ್ದಿವೆ. ಚಳ್ಳಕೆರೆಯ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಂಡಿದ್ದರೂ ಇನ್ನೂ ಉದ್ಘಾಟನೆಯ ಭಾಗ್ಯ ದೊರಕಿಲ್ಲ.
ವಾಲ್ಮೀಕಿ ಭವನವನ್ನು ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ಕಚೇರಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ವತಿಯಿಂದ ನಿರ್ಮಾಣ ಮಾಡಲಾಗುತ್ತದೆ. ವಾಲ್ಮೀಕಿ ಭವನ ಕಾಮಗಾರಿಗಳೂ ಪೂರ್ಣಗೊಳ್ಳದ ಕಾರಣ ಕಟ್ಟಡಗಳು ಇದ್ದೂ ಇಲ್ಲದಂತಾಗಿವೆ. ಸಾಮಾಜಿಕ ಚಟುವಟಿಕೆಗಳಿಗೆ ಈ ಭವನಗಳನ್ನು ಬಳಸಲು ಸಾಧ್ಯವಾಗದ ಪರಿಸ್ಥಿತಿ ಇದೆ.
ನಗರದ ಹೃದಯ ಭಾಗವಾಗಿರುವ ಮದಕರಿ ನಾಯಕ ವೃತ್ತದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ನಿರ್ಮಾಣ ಮಾಡಲಾಗಿರುವ ವಾಲ್ಮೀಕಿ ಭವನ ಕಾಮಗಾರಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ ಎಂದು ವಾಲ್ಮೀಕಿ ಸಮುದಾಯದ ಸ್ಥಳೀಯ ಮುಖಂಡರು ಆರೋಪಿಸುತ್ತಾರೆ.
ವಾಲ್ಮೀಕಿ ಭವನ ಉದ್ಘಾಟನೆ ಮಾಡಿ ಕಾರ್ಯಕ್ರಮಗಳಿಗೆ ಬಾಡಿಗೆ ನೀಡಲಾಗುತ್ತಿದೆ. ಆದರೆ, ಮೂಲ ಸೌಲಭ್ಯಗಳಿಲ್ಲದ ಕಾರಣ ಕಾರ್ಯಕ್ರಮ ಸಂಘಟಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಭವನದ ಊಟದ ಹಾಲ್, ಶೌಚಾಲಯಗಳಿಂದ ಯುಜಿಡಿ ಸಂಪರ್ಕ ಕಲ್ಪಿಸಿಲ್ಲ. ಭವನಕ್ಕೆ ಸಾಂಸ್ಕೃತಿಕವಾದ ರೂಪ ಕೊಟ್ಟಿಲ್ಲ, ಸಿನಿಮಾ ಟಾಕೀಸ್ ಮಾದರಿಯಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಬೀಮ್, ಆಸನಗಳ ಅಳವಡಿಕೆಯೂ ಅವೈಜ್ಞಾನಿಕವಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.ಜಿಲ್ಲಾ ಕೇಂದ್ರದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಬೇಡಿಕೆ ಸಲ್ಲಿಸಲಾಗಿದೆ. ಜೊತೆಗೆ ಅಪೂರ್ಣ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವಂತೆ ಕೋರಲಾಗಿದೆ. ಸರ್ಕಾರದ ನಿರ್ದೇಶನದಂತೆ ಕ್ರಮ ವಹಿಸಲಾಗುವುದು ಮಲ್ಲಿಕಾರ್ಜುನ್ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ
ಹಿರಿಯೂರು: ನಗರದ ಶ್ರೀನಿವಾಸ ಬಡಾವಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿಸಿರುವ ವಾಲ್ಮೀಕಿ ಸಮುದಾಯ ಭವನ ಸಮುದಾಯದ ಕಲ್ಯಾಣ ಕಾರ್ಯಕ್ರಮಗಳಿಗೆ ದಕ್ಕದಿರುವುದು ವ್ಯವಸ್ಥೆಯ ಅಣಕದಂತಿದೆ. 2009–10ನೇ ಸಾಲಿನಲ್ಲಿ ₹ 1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ವಾಲ್ಮೀಕಿ ಸಮುದಾಯ ಭವನದಲ್ಲಿ ಅಡುಗೆ ಮನೆ ಊಟದ ಹಾಲ್ ಇಲ್ಲ. ಈ ಕಾರಣಕ್ಕೆ ಕೇವಲ ಸಭಾ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ಇದು ಸೀಮಿತವಾಗಿತ್ತು. ಪ್ರಸ್ತುತ ವಿದ್ಯುತ್ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು ಹಿಂದಿನ ಎರಡು ವರ್ಷದಿಂದ ಯಾವುದೇ ಕಾರ್ಯಕ್ರಮಗಳು ನಡೆದಿಲ್ಲ. ಹಿಂದಿನ ಫೆಬ್ರುವರಿಯಲ್ಲಿ ಸಮುದಾಯ ಭವನದ ಬಗ್ಗೆ ಮಾಹಿತಿ ಪಡೆದಿದ್ದ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಿ.ಸುಧಾಕರ್ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಅನುದಾನ ಕೊಡಿಸುವ ಭರವಸೆ ನೀಡಿದ್ದರು. ಅದಾದ ಎರಡು ತಿಂಗಳಲ್ಲಿ ಸಚಿವರು ನಿಧನರಾಗಿದ್ದು ಸಮುದಾಯ ಭವನ ಮತ್ತೆ ಅನಾಥವಾಗಿದೆ.
ಇದ್ದೂ ಇಲ್ಲದಂತಿರುವ ಭವನ
ಹೊಸದುರ್ಗ: ಪಟ್ಟಣದ ಶಾಂತಿನಗರದಲ್ಲಿನ ಅಂಬೇಡ್ಕರ್ ಭವನ ಮೂಲಸೌಕರ್ಯಗಳಿಂದ ವಂಚಿತವಾಗಿದ್ದು ಸಾರ್ವಜನಿಕರ ಬಳಕೆಗೆ ಲಭ್ಯವಿಲ್ಲ. ಹೀಗಾಗಿ ಇದು ಇದ್ದೂ ಇಲ್ಲದಂತಾಗಿದೆ. ಕಟ್ಟಡದಲ್ಲಿ 7 ಕೊಠಡಿಗಳಿದ್ದು ಒಂದೂ ಸುಸ್ಥಿತಿಯಲ್ಲಿಲ್ಲ. ಒಮ್ಮೆ ಒಳಹೊಕ್ಕು ನೋಡಿದರೆ ಕಸದ ರಾಶಿ ಮದ್ಯದ ಬಾಟಲ್‌ಗಳು ಜೇಡ ಬಲೆ ಹೆಣೆದುಕೊಂಡಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಆದರೂ ಪುರಸಭೆಯವರಾಗಲಿ ಅಥವಾ ಸಂಬಂಧಪಟ್ಟ ಇಲಾಖೆಯವರಾಗಲಿ ಇದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಸಮುದಾಯ ಭವನಗಳಿಗೆ ಗ್ರಹಣ
ಸಾಂತೇನಹಳ್ಳಿ ಸಂದೇಶ್ ಗೌಡ
ಹೊಳಲ್ಕೆರೆ: ತಾಲ್ಲೂಕಿನಲ್ಲಿರುವ ಸಮುದಾಯ ಭವನಗಳು ಮೂಲಸೌಕರ್ಯಗಳ ಕೊರತೆಯಿಂದ ಜನರ ಉಪಯೋಗಕ್ಕೆ ಬಾರದೆ ಹಾಳಾಗುತ್ತಿವೆ. ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ಕನಕ ಭವನವನ್ನು ₹ 3.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು ಸಾರ್ವಜನಿಕರ ಉಪಯೋಗಕ್ಕೆ ಬರುತ್ತಿಲ್ಲ. ಕಟ್ಟಡ ಆಕರ್ಷಕವಾಗಿದ್ದರೂ ಮದುವೆ ಆರತಕ್ಷತೆಯಂತಹ ಸಮಾರಂಭಗಳನ್ನು ಮಾಡಲು ಯಾವುದೇ ಸೌಲಭ್ಯಗಳಿಲ್ಲ. ಊಟದ ಹಾಲ್‌ನಲ್ಲಿ ಕುರ್ಚಿ ಟೇಬಲ್‌ಗಳಿಲ್ಲ. ಭವನವು ಹೊರವಲಯದಲ್ಲಿ ಇರುವುದರಿಂದ ಕಿಡಿಗೇಡಿಗಳು ಕಟ್ಟಡದ ಗಾಜುಗಳನ್ನು ಒಡೆದು ಹಾಕಿದ್ದಾರೆ. ಕನಕ ಭವನದ ಎದುರಿಗೆ ಇರುವ ವಾಲ್ಮೀಕಿ ಭವನ ಭವ್ಯವಾಗಿದ್ದು ಆಗಾಗ ಕಾರ್ಯಕ್ರಮಗಳು ನಡೆಯುತ್ತವೆ. ಪಟ್ಟಣದ ಪ್ರಮುಖ ರಸ್ತೆಯಲ್ಲಿರುವ ಯಾದವ ಭವನದ ಕಾಮಗಾರಿ ಅನುದಾನದ ಕೊರತೆಯಿಂದ ಹಲವು ವರ್ಷಗಳಿಂದ ಕುಂಟುತ್ತಾ ಸಾಗಿದೆ. ಗ್ರಾಮೀಣ ಭಾಗದಲ್ಲೂ ಸಮುದಾಯ ಭವನಗಳಿದ್ದು ಅಷ್ಟೇನು ಉಪಯೋಗಕ್ಕೆ ಬರುತ್ತಿಲ್ಲ. ಉಪಯೋಗಕ್ಕೆ ಬಾರದಿದ್ದ ಮೇಲೆ ಈ ಸಮುದಾಯ ಭವನಗಳನ್ನು ಕಟ್ಟಿದ್ದಾದರೂ ಏಕೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ.