
ಸ್ವಚ್ಛತೆ ಜಾಗೃತಿಗೆ ನಗರಸಭೆಯಿಂದ ‘ನನ್ನ ನಗರ ನನ್ನ ಹೆಮ್ಮೆ’ ಕಾರ್ಯಕ್ರಮ
ಕನಕಪುರ: ನಗರದದಲ್ಲಿ ತ್ಯಾಜ್ಯ ನಿರ್ವಹಣೆ ಹಾಗೂ ಸ್ವಚ್ಛತೆಗಾಗಿ ಈಗಾಗಲೇ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿರುವ ಇಲ್ಲಿನ ನಗರಸಭೆಯು, ಇದೀಗ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ರಸ್ತೆ ಬದಿ ಕಸದ ತಿಪ್ಪೆ ನಿರ್ಮಾಣವಾಗದಂತೆ ಹಾಗೂ ಜನರು ಕಸ ಎಸೆಯದಂತೆ ಜಾಗೃತಿ ಮೂಡಿಸುವ ಸಲುವಾಗಿ ‘ನನ್ನ ನಗರ ನನ್ನ ಹೆಮ್ಮೆ’ ಎಂಬ ಕಾರ್ಯಕ್ರಮ ರೂಪಿಸಿದೆ.
ನಗರಸಭೆಯ ಆರೋಗ್ಯ ವಿಭಾಗವು ರೂಪಿಸಿರುವ ಈ ಹೊಸ ಕಾರ್ಯಕ್ರಮದಡಿ, ಕಸದ ತಾಣವಾಗಿರುವ ನಗರದ ರಸ್ತೆ ಹಾಗೂ ಖಾಲಿ ಸ್ಥಳಗಳ ಬ್ಲ್ಯಾಕ್ಸ್ಪಾಟ್ಗಳನ್ನು ಗುರುತಿಸಿ ಸ್ವಚ್ಛಗೊಳಿಸಲಾಗುತ್ತಿದೆ. ಬಳಿಕ ಅದೇ ತಿಪ್ಪೆಯ ಜಾಗವನ್ನು ಸಿಂಗರಿಸಿ, ಮತ್ತೆ ಯಾರೂ ಇಲ್ಲಿ ಕಸದ ಎಸೆಯದಂತೆ ಜಾಗೃತಿಯ ಫ್ಲೆಕ್ಸ್ ಜೊತೆಗೆ ಗೋಡೆಬರಹ ಮಾಡಲಾಗುತ್ತಿದೆ. ಸಮುದಾಯ ಸಂಘಟಕರ ಸಹಯೋಗದಲ್ಲಿ ನಡೆಯುತ್ತಿರುವ ನಗರಸಭೆಯ ಕಾರ್ಯವೈಖರಿಗೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
‘ನಗರಸಭೆಯಿಂದ ಕಸ ಸಂಗ್ರಹಿಸುವುದಕ್ಕಾಗಿಯೇ ಪ್ರತಿ ಗಲ್ಲಿಗೂ ವಾಹನಗಳು ಹಾಗೂ ಪೌರ ಕಾರ್ಮಿಕರು ಬರುತ್ತಾರೆ. ಆದರೂ ಕೆಲ ವೃತ್ತಗಳು, ಮುಖ್ಯರಸ್ತೆಗಳು ಹಾಗೂ ಗಲ್ಲಿ ರಸ್ತೆಗಳಲ್ಲಿ ಜನ ಕಸ ಎಸೆಯುವುದು ತಪ್ಪುತ್ತಿರಲಿಲ್ಲ. ನಸುಕಿನಲ್ಲಿ ಅಥವಾ ರಾತ್ರಿ ಜನರು ಪ್ಲಾಸ್ಟಿಕ್ನಲ್ಲಿ ಕಸ ತುಂಬಿಕೊಂಡು ಬಂದು ಎಸೆದು ಹೋಗುತ್ತಿದ್ದರು. ಇದರಿಂದಾಗಿ ಬೆಳಿಗ್ಗೆ ಹೊತ್ತಿಗೆ ರಸ್ತೆ ಬದಿ ಕಸದ ರಾಶಿ ಕಣ್ಣಿಗೆ ರಾಚುತ್ತಿತ್ತು’ ಎಂದು ನಗರಸಭೆಯ ಪರಿಸರ ವಿಭಾಗದ ಎಇಇ ಧನಂಜಯ ‘ಪ್ರಜಾವಾಣಿ’ಗೆ ತಿಳಿಸಿದರು.
‘ಹೇಗಾದರೂ ಮಾಡಿ ಈ ರೀತಿ ಕಸ ಹಾಕುವುದನ್ನು ತಡೆಗಟ್ಟಬೇಕೆಂದು ಚಿಂತನೆ ನಡೆಸಿದೆವು. ಬಳಿಕ ಕೆಲ ಕಸದ ಬ್ಲ್ಯಾಕ್ಸ್ಪಾಟ್ಗಳನ್ನು ಗುರುತಿಸಿ ಸ್ವಚ್ಛತೆಗೊಳಿಸಿದೆವು. ಅದೇ ಜಾಗಕ್ಕೆ ರಂಗೋಲಿ ಬಿಡಿಸುವ ಜೊತೆಗೆ ದೇವರ ಫೋಟೊಗಳನ್ನಿಟ್ಟು ಕಸ ಹಾಕದಂತೆ ಮನವಿ ಮಾಡಿದೆವು. ಈ ಪ್ರಯೋಗಕ್ಕೆ ಪ್ರಾರಂಭದಲ್ಲಿ ಉತ್ತಮ ಸ್ಪಂದನೆ ಸಿಗದಿದ್ದರೂ ನಿಧಾನವಾಗಿ ಕಸ ಹಾಕುವುದು ನಿಂತಿತು’ ಎಂದರು.
‘ಬಳಿಕ ಸುಮಾರು 30 ಸ್ಥಳಗಳನ್ನು ಗುರುತಿಸಿ ಸ್ವಚ್ಛಗೊಳಿಸಿ ಸುಂದರ ಸ್ಥಳವಾಗಿಸಿದೆವು. ಜೊತೆಗೆ ಆ ಸ್ಥಳಗಳಲ್ಲಿ ಕಸ ಎಸೆದರೆ ದಂಡದ ಜೊತೆಗೆ ಪ್ರಕೃಣ ದಾಖಲಿಸುವ ಪೊಲೀಸ್ ಪ್ರಕಟಣೆಯ ಫ್ಲೆಕ್ಸ್ ಅಳವಡಿಸಿದೆವು. ಸಿಸಿಟಿವಿ ಕ್ಯಾಮೆರಾ ಅಳವಡಿಸಿ ನಿಗಾ ಇರಿಸಿದೆವು. ನಿರಂತವಾಗಿ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು.
ವಿಂಗಡಣೆಗೆ ಒತ್ತು: ನಗರದಲ್ಲಿ ನಿತ್ಯ ಸಂಗ್ರಹವಾಗುವ ಕಸವನ್ನು ನಿತ್ಯ ವಿಂಗಡಿಸಬೇಕು. ಹಸಿಕಸ, ಒಣ, ಪ್ಲಾಸ್ಟಿಕ್ ಅನ್ನು ಪ್ರತ್ಯೇಕಿಸಿಯೇ ನಗರಸಭೆ ವಾಹನಗಳಿಗೆ ಕೊಡಬೇಕು ಎಂದು ವಾಹನಗಳಲ್ಲಿ ಧ್ವನಿಮುದ್ರಿತ ಆಡಿಯೊ ಪ್ರಸಾರ ಮಾಡಲಾಗುತ್ತಿದೆ. ಇದರ ಪರಿಣಾಮವಾಗಿ ಬಹುತೇಕರು ಮನೆಯಲ್ಲಿಯೇ ಕಸವನ್ನು ವಿಂಗಡಿಸಿ ಕಸದ ವಾಹನಗಳಿಗೆ ನೀಡುತ್ತಿದ್ದಾರೆ. ಆದರೆ, ಕೆಲವರು ನಮ್ಮ ಕ್ಯಾಮೆರಾ ಕಣ್ತಪ್ಪಿಸಿ ಕಸ ಹಾಕುತ್ತಿದ್ದಾರೆ.
ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ, ಮನೆಯ ಕಸವನ್ನು ನಾಲ್ಕು ಭಾಗಗಳಾಗಿ ಪ್ರತ್ಯೇಕಿಸಿ ಕಸದ ವಾಹನಗಳಿಗೆ ಕಡ್ಡಾಯವಾಗಿ ನೀಡಬೇಕು. ಖಾಲಿ ನಿವೇಶನಗಳು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದು ಕಂಡುಬಂದರೆ ಅವರ ವಿರುದ್ಧ ಕಾನೂನು ಕ್ರಮದ ಜೊತೆಗೆ ದಂಡ ವಿಧಿಸಬೇಕು. ಅಂತವರ ಮನೆಗಳಿಗೆ ವಿದ್ಯುತ್ ಸಂಪರ್ಕ ಮತ್ತು ನೀರಿನ ಸಂಪರ್ಕ ಕಡಿತಗೊಳಿಸುವಂತೆ ಆದೇಶ ಮಾಡಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕ್ಷೇತ್ರವಾಗಿರುವ ಕನಕಪುರವನ್ನು ಸ್ವಚ್ಛ ಹಾಗೂ ಸುಂದರ ನಗರವನ್ನಾಗಿ ಮಾಡುವ ಮೂಲಕ ರಾಜ್ಯದಲ್ಲಿ ಮಾದರಿ ನಗರವನ್ನಾಗಿ ಮಾಡಿ ಮುಖ್ಯಮಂತ್ರಿಗಳಿಗೆ ಗೌರವ ತರಬೇಕಿದೆ. ಆ ನಿಟ್ಟಿನಲ್ಲಿ ನಗರದ ಜನರು ನಗರಸಭೆ ಜೊತೆ ಕೈ ಜೋಡಿಸಿ ಸಹಕರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದರು.
ಸ್ವಚ್ಛತೆಗೆ ಕೈ ಜೋಡಿಸೋಣ
ನಮ್ಮ ಮನೆಗಳು ಸ್ವಚ್ಛವಾಗಿರಬೇಕು, ಸುಂದರವಾಗಿರಬೇಕೆಂದು ಬಯಸುವ ನಾವು, ಅದೇ ರೀತಿ ನಮ್ಮ ರಸ್ತೆಗಳು ಹಾಗೂ ನಾವು ವಾಸಿಸುವ ನಗರವೂ ಸುಂದರವಾಗಿರಬೇಕು ಎಂದು ಆಲೋಚಿಸಬೇಕು. ಒಂದು ನಗರ ಸುಂದರವಾಗಿರಬೇಕಾದರೆ ಅದರಲ್ಲಿ ಸ್ವಚ್ಛತೆ ಅತಿ ಮುಖ್ಯ. ನಾಗರಿಕರಾಗಿ ನಾವು ಕಸವನ್ನು ರಸ್ತೆಗಳಲ್ಲಿ ಹಾಕದೆ ಮನೆಯಲ್ಲೇ ವಿಂಗಡಿಸಿ ಕಸದ ವಾಹನಗಳಿಗೆ ನೀಡಬೇಕು. ನಗರಸಭೆಯ ನಮ್ಮ ನಗರ ನಮ್ಮ ಹೆಮ್ಮೆ ಅಭಿಯಾನಕ್ಕೆ ಕೈ ಜೋಡಿಸಬೇಕು ಎಂದು ಹೌಸಿಂಗ್ ಬೋರ್ಡ್ ನಿವಾಸಿ ಪೂರ್ಣಿಮಾ ಎಚ್.ಸಿ ಹೇಳಿದರು.
ನಗರದಲ್ಲಿ ಎಲ್ಲಂದರಲ್ಲಿ ಖಾಲಿ ನಿವೇಶನಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಹೆದ್ದಾರಿ ರಸ್ತೆ ಬದಿಯಲ್ಲಿ ಕಸ ಹಾಕುವುದು, ಕಾನೂನು ಬಾಹಿರ. ಆ ರೀತಿ ಕಸ ಹಾಕದಂತೆ ತಡೆಗಟ್ಟಲು ನಾವು ಪ್ರಯತ್ನಿಸುತ್ತಿದ್ದೇವೆ. ಜಾಗೃತಿ ಮೂಡಿಸುತಿದ್ದೇವೆ. ಸಭೆ– ಸಮಾರಂಭಗಳು, ಮನೆಗಳಲ್ಲಿ ನಡೆಯುವ ಶುಭ ಸಮಾರಂಭಗಳ ಸಂದರ್ಭದಲ್ಲಿ ನಗರಸಭೆಗೆ ತಿಳಿಸಿ ನಿಗದಿತ ಶುಲ್ಕ ಕಟ್ಟಿದರೆ ಕಸದ ವಾಹನವನ್ನು ಅಲ್ಲಿಗೆ ಕಳಿಸಿ ಕೊಡುತ್ತೇವೆ. ನಮ್ಮ ಕಣ್ಣು ತಪ್ಪಿಸಿ ರಸ್ತೆ ಬದಿಗಳಲ್ಲಿ ಕಸ ಹಾಕಿದರೆ ದಂಡ ವಿಧಿಸಲಾಗುವುದು ಎಂದು ನಗರಸಭೆಯ ಹೌಸಿಂಗ್ ಬೋರ್ಡ್ ಸಮುದಾಯ ಸಂಘಟಕಿ ಸರಿತಾ ಎಚ್ಚರಿಕೆ ನೀಡಿದರು.
‘ಕನಕಪುರವನ್ನು ಸ್ವಚ್ಛ ನಗರವನ್ನಾಗಿ ಮಾಡಲು ನಗರಸಭೆಯು ಶ್ರಮಿಸುತ್ತಿದೆ. ಪರಿಸರ ವಿಭಾಗವು ಅದಕ್ಕಾಗಿ ನಗರಸಭೆ ವ್ಯಾಪ್ತಿಯಲ್ಲಿ 9 ಮಹಿಳೆಯರನ್ನು ಸಮುದಾಯ ಸಂಘಟಕರನ್ನಾಗಿ ನೇಮಕ ಮಾಡಿಕೊಂಡಿದೆ. ಎಲ್ಲರೂ ಬೆಳಿಗ್ಗೆ 5 ಗಂಟೆಯಿಂದಲೇ ಕೆಲಸ ಮಾಡುತ್ತಾರೆ. ಪ್ರತಿ ಮನೆಗೆ ಹೋಗಿ ಕಸ ಹಾಕುವ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ಕಸ ಹಾಕದಿದ್ದರೆ ದಂಡ ವಿಧಿಸುತ್ತಾರೆ. ಕಸದ ಬ್ಲ್ಯಾಕ್ಸ್ಪಾಟ್ಗಳನ್ನು ಗುರುತಿಸಿ ಅವರೇ ನಿಂತು ಸ್ವಚ್ಛಗೊಳಿಸುತ್ತಾರೆ. ಅಲ್ಲಿ ರಂಗೋಲಿ ಬಿಡಿಸಿ ಸುಂದರ ಸ್ಥಳವನ್ನಾಗಿ ಮಾಡುತ್ತಾರೆ. ನಮ್ಮ ಈ ಒಂದು ಪ್ರಯತ್ನಕ್ಕೆ ನಗರದ ಜನತೆ ಕೈ ಜೋಡಿಸಬೇಕು. ಎಲ್ಲೆಂದರಲ್ಲಿ ಕಸ ಹಾಕದೆ ಸುಂದರ ಕನಕಪುರ ನಿರ್ಮಾಣಕ್ಕೆ ಸಹಕರಿಸಬೇಕು’ ಎಂದು ನಗರಸಭೆಯ ಕಿರಿಯ ಆರೋಗ್ಯ ನಿರೀಕ್ಷಕ ಶರಣಬಸವ ಮನವಿ ಮಾಡಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260824-14-320986526