
ಚಿಂಚೋಳಿ | ಸರ್ವರ್ ಸಮಸ್ಯೆ: ಅಂಗಡಿಗೆ ತಲುಪದ ಪಡಿತರ!
ಚಿಂಚೋಳಿ: ತಾಲ್ಲೂಕಿನಲ್ಲಿ ಅನ್ನ ಭಾಗ್ಯದ ಪಡಿತರವು ಸಕಾಲದಲ್ಲಿ ನ್ಯಾಯ ಬೆಲೆ ಅಂಗಡಿಗಳಿಗೆ ಪೂರೈಕೆಯಾಗದ ಕಾರಣ ಗ್ರಾಹಕರಿಗೆ ಪ್ರಸಕ್ತ ತಿಂಗಳ ಪಡಿತರ ವಿತರಣೆಯಲ್ಲಿ ತೀವ್ರ ಸಂಕಷ್ಟ ಎದುರಾಗಿದೆ.
ಆಗಸ್ಟ್ ತಿಂಗಳು ಮುಗಿಯಲು ಬಂದರೂ ತಾಲ್ಲೂಕಿನ 7 ನ್ಯಾಯಬೆಲೆ ಅಂಗಡಿಗಳಿಗೆ ಸಗಟು ಮಳಿಗೆಯಿಂದ ಆಹಾರ ಧಾನ್ಯ ಪೂರೈಕೆಯಾಗದೆ ಪಡಿತರ ಚೀಟಿದಾರರು ಸಮಸ್ಯೆಗೆ ಒಳಗಾಗಿದ್ದಾರೆ.
ಕಳೆದ ಎರಡು ವಾರಗಳಿಂದ ಸರ್ವರ್ ನಿಧಾನವಾಗಿದೆ. ಇದರಿಂದ ಪಡಿತರ ಚೀಟಿದಾರರ ಬೆರಳಚ್ಚು ಪಡೆಯಲು ನಿಧಾನವಾಗುತ್ತಿದೆ. ದಿನಕ್ಕೆ ಕೇವಲ 20ರಿಂದ 30 ಕಾರ್ಡ್ದಾರರ ಬೆರಳಚ್ಚು ಪಡೆಯಲು ಸಾಧ್ಯವಾಗುತ್ತಿದೆ.
ದೊಡ್ಡ ಊರುಗಳ ನ್ಯಾಯ ಬೆಲೆ ಅಂಗಡಿಗಳಿಗೆ ಮುಂಚಿತವಾಗಿಯೇ ಪಡಿತರ ಧಾನ್ಯ ಪೂರೈಕೆಯಾಗುತ್ತಿದೆ. ಆದರೆ, ಮಧ್ಯಮ ಗಾತ್ರದ ಊರುಗಳ ನ್ಯಾಯ ಬೆಲೆ ಅಂಗಡಿಗಳಿಗೆ ಪಡಿತರ ಪೂರೈಸಿದರೂ ಕೂಡ ಸರ್ವರ್ ಸಮಸ್ಯೆಯಿಂದ ಶೇ50ರಷ್ಟು ಪಡಿತರ ವಿತರಣೆ ಬಾಕಿಯಿದೆ ಎಂದು ತಿಳಿದು ಬಂದಿದೆ.
ನಮ್ಮ ಊರಿನಲ್ಲಿ ಈವರೆಗೂ ಜನರಿಗೆ ಪಡಿತರ ವಿತರಿಸಿಲ್ಲ. ನ್ಯಾಯ ಬೆಲೆ ಅಂಗಡಿಯವರು ಬೆರಳಚ್ಚು ಪಡೆದಿಲ್ಲ ಅಂಗಡಿಗೆ ಈ ತಿಂಗಳ ಮಾಲು ಬಂದಿಲ್ಲ. ಹೀಗಾದರೆ ಬಡವರ ಗತಿ ಏನು? ಎಂದು ನಾಗರಾಳ ಗ್ರಾಮದ ಜಾವೀದ್ ಪಟೇಲ್ ಪ್ರಶ್ನಿಸಿದ್ದಾರೆ.
ತಾಲ್ಲೂಕಿನ ಧರ್ಮಾಸಾಗರ, ಯಲಮಾಮಡಿ, ಕುಪನೂರ, ಜಿಲವರ್ಷಾ, ಪೋಚಾವರಂ, ನಾಗರಾಳ ಮತ್ತು ಭಂಟನಳ್ಳಿ ಗ್ರಾಮಗಳ ನ್ಯಾಯಬೆಲೆ ಅಂಗಡಿಗಳಿಗೆ ಜೋಳದ ಕೊರತೆಯಿಂದಾಗಿ ಸಗಟು ಮಳಿಗೆಯಿಂದ ಆಹಾರ ಧಾನ್ಯ ಪೂರೈಕೆಯಾಗಿಲ್ಲ.
ಇದರಿಂದ ಇಲ್ಲಿನ ಸಗಟು ಮಳಿಗೆಯ ಉಗ್ರಾಣದ ಎದುರು ಲಾರಿಗಳು ನಿಂತು ಕಾಯುವಂತಾಗಿದೆ. ಆ.28ರಂದು (ಇಂದು) ಅಂಗಡಿಗಳಿಗೆ ಆಹಾರ ಧಾನ್ಯ ಪೂರೈಕೆಯಾದರೂ ಮುಂದಿನ ಮೂರು ದಿನಗಳಲ್ಲಿ ಪಡಿತರ ವಿತರಣೆ ಹೇಗೆ ಸಾಧ್ಯ? ಎಂಬುದು ನ್ಯಾಯ ಬೆಲೆ ಅಂಗಡಿಗಳ ಮಾಲೀಕರ ಪ್ರಶ್ನೆಯಾಗಿದೆ.
ಸರ್ವರ್ ನಿಧಾನದಿಂದ ಪ್ರಸಕ್ತ ತಿಂಗಳು ತಾಲ್ಲೂಕಿನಲ್ಲಿ ಶೇ 30ರಿಂದ 40 ಕಾರ್ಡುದಾರರು ಪಡಿತರದಿಂದ ವಂಚಿತರಾಗಲಿದ್ದಾರೆ ಎಂದು ನ್ಯಾಯ ಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಕಾಳೇಶ್ವರ ರಾಮಗೊಂಡ ತಹಶೀಲ್ದಾರರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ಸರ್ವರ್ ಇಲ್ಲದೇ ಜನ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9 ರವರೆಗೆ ನ್ಯಾಯ ಬೆಲೆ ಅಂಗಡಿ ಮುಂದೆ ನಿಂತು ಬೆರಳಚ್ಚು ನೀಡಲು ಕಾಯುವುದೇ ಕೆಲಸವಾಗಿದೆ. ಹಬ್ಬ ಹರಿ– ದಿನಗಳಲ್ಲಿಯೂ ಎಲ್ಲಾ ಕೆಲಸ ಬಿಟ್ಟು ನ್ಯಾಯಬೆಲೆ ಅಂಗಡಿ ಕಾಯುವಂತಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಶಾದಿಪುರದ ವಸಂತ ವಾಲಿಕಾರ ‘ಪ್ರಜಾವಾಣಿ’ಗೆ ತಿಳಿಸಿದರು.
ಮೇಲಧಿಕಾರಿಗಳು ಸರ್ವರ್ ಸಮಸ್ಯೆ ಪರಿಹರಿಸಬೇಕು. ಎಲ್ಲರಿಗೂ ಪಡಿತರ ವಿತರಣೆಯಾಗಲು ಸೆ.5ರವರೆಗೆ ಬಯೊಮೆಟ್ರಿಕ್ ವಿಸ್ತರಿಸಬೇಕು ಎಂದು ಅವರು ಒತ್ತಾಯಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260828-34-861351407