
ಕಲಬುರಗಿಯ ಅನ್ನದಾತರ ನಿರೀಕ್ಷೆಗೆ ‘ಬರ’ಸಿಡಿಲು
ಕಲಬುರಗಿ: ಸೂಪರ್ ಎಲ್‌ನೀನೊ ಪರಿಣಾಮವು ಮುಂಗಾರು ಮಳೆ ಮಾಯವಾಗಿಸಿದ್ದು, ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದೆ. ಅನ್ನದಾತರು ಸಂಕಷ್ಟಕ್ಕೆ ಸಿಲುಕಿ ನಲುಗುತ್ತಿದ್ದಾರೆ. ಆದರೂ, ರಾಜ್ಯ ಸರ್ಕಾರ ಗುರುವಾರ ಘೋಷಿಸಿರುವ ಬರಪೀಡಿತ 101 ತಾಲ್ಲೂಕುಗಳ ಪಟ್ಟಿಯಲ್ಲಿ ಜಿಲ್ಲೆಯ ಒಂದೂ ತಾಲ್ಲೂಕು ಇಲ್ಲ!
ಜಿಲ್ಲೆಯಲ್ಲಿ ಮುಂಗಾರು ಬೆಳೆಗಳು ಕೈಕೊಟ್ಟಿವೆ. ರೈತಪರ ಸಂಘಟನೆಗಳು ಬರಪೀಡಿತ ಜಿಲ್ಲೆ ಘೋಷಣೆ ಆಗ್ರಹಿಸುತ್ತಲೇ ಇವೆ. ಆಗಸ್ಟ್ 17ರಂದು ‘ಕಲಬುರಗಿ ಬಂದ್’ ಪ್ರಯತ್ನವೂ ನಡೆದಿತ್ತು. ಸರ್ಕಾರ ಬರ ಘೋಷಿಸಿ ತಮ್ಮ ನೆರವಿಗೆ ಧಾವಿಸಲಿದೆ ಎಂಬ ನಿರೀಕ್ಷೆಯಲ್ಲಿ ಜಿಲ್ಲೆಯ ರೈತರಿದ್ದರು. ಆದರೆ, ಸರ್ಕಾರದ ನಡೆ ಇದೀಗ ಅನ್ನದಾತರ ಪಾಲಿಗೆ ಬರಸಿಡಿಲಿನಂತೆ ಬಂದೆರಗಿದೆ.
ಕೇಂದ್ರ ಕೃಷಿ ಸಚಿವಾಲಯದ ‘ಬರ ನಿರ್ವಹಣಾ ಕೈಪಿಡಿ–2020’ರಲ್ಲಿ ಸೂಚಿಸಲಾದ ಬರ ನಿರ್ಧಾರಕ ಮಾನದಂಡಗಳ ಆಧಾರದಲ್ಲಿ ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ಮೇಲ್ವಿಚಾರಣಾ ಕೇಂದ್ರವು (ಕೆಎಸ್‌ಎನ್‌ಡಿಎಂಸಿ) ರಾಜ್ಯದಲ್ಲಿ ಜೂನ್ 1ರಿಂದ ಆಗಸ್ಟ್ 12ರವರೆಗಿನ ಬರಪರಿಸ್ಥಿತಿ ಕುರಿತಂತೆ ವೈಜ್ಞಾನಿಕ ಮೌಲ್ಯಮಾಪನ ನಡೆಸಿತ್ತು. ಅದರ ವರದಿ ಆಧಾರದಲ್ಲಿ ಬರಪೀಡಿತ ತಾಲ್ಲೂಕುಗಳನ್ನು ಘೋಷಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ, ಸರ್ಕಾರದ ನಿರ್ಧಾರ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಮುಂಗಾರು ಅವಧಿಯ ಜೂನ್‌ನಲ್ಲಿ ಶೇ36ರಷ್ಟು, ಜುಲೈನಲ್ಲಿ ಶೇ35ರಷ್ಟು ಹಾಗೂ ಆಗಸ್ಟ್ 27ರ ತನಕ ಶೇ56ರಷ್ಟು ಮಳೆ ಕೊರತೆ ಕಾಡಿದೆ. ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ 8.08 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಆಗಾಗ ಸುರಿದ ಅಲ್ಪ ಮಳೆಯನ್ನು ನೆಚ್ಚಿ ಅನ್ನದಾತರು ಎರಡೆರಡು ಬಾರಿ ಬಿತ್ತನೆ ಸಾಹಸ ಮಾಡಿದ್ದರಿಂದ ತಾಂತ್ರಿಕವಾಗಿ ಜಿಲ್ಲೆಯಲ್ಲಿ ಶೇ86ರಷ್ಟು ಬಿತ್ತನೆ ಏನೋ ಆಗಿದೆ. ಆದರೆ, ಸಸಿ ನೆಲ ಬಿಟ್ಟು ಎದ್ದಿಲ್ಲ, ಹೂವು ಕಟ್ಟುವ ಮುನ್ನವೇ ಬಾಡುತ್ತಿವೆ.
‘ಈ ಸಲ ಪರಿಸ್ಥಿತಿ ಗಂಭೀರ್ ಐತಿ. ಲಕ್ಷಾಂತರ ರೂಪಾಯಿ ಖರ್ಚ್ ಮಾಡೇನಿ. ಲೇಟಾಗಿ ಬಿತ್ತಿದ್ದ 32 ಎಕರೆದಾಗಿನ ತೊಗರಿ ಮಾತ್ರ ಜಿಂವಾ ಹಿಡಿದೈತಿ. ಅದೂ ಗೇಣುದ್ದಷ್ಟ ಬೆಳದೈತಿ. ಮುಂದ್ ಹೆಂಗ್ ಬೆಳೀತೈತೊ, ಎಷ್ಟ ಕೈಗೆ ಬರತೈತೋ ಗೊತ್ತಿಲ್ಲ. ಇಂಥಾದ್ರಾಗ ಸರ್ಕಾರ ಬರ ಘೋಷಣೆ ಮಾಡ್ಬೇಕಿತ್ರಿ’ ಎಂಬುದು ಚಿತ್ತಾಪುರದ ತಾಲ್ಲೂಕಿನ ಅನ್ನದಾತ ರಾಮಲಿಂಗಪ್ಪ ಅಂಬೋಣ.
‘21 ಎಕರೆದಾಗ ಹೆಸರ್ ಬೆಳಿ ಇತ್ತು. ಚಲೋ ಬೆಳೆದಿದ್ರ ಎಕ್ರಗೆ ಐದ್ ಕ್ವಿಂಟಲ್ ಕಾಳ್ ಸಿಗ್ತಿತ್ತು. ಆದ್ರ 21 ಎಕ್ರಗೆ ಬರೀ 35 ಕ್ವಿಂಟಲ್ ಹೆಸರ ಸಿಕ್ಕೈತಿ. ಐದ್ ಎಕ್ರೆ ಹೆಸರು ಬೆಳಿ ಒಣಗಿದ್ದರಿಂದ ಹರಿಗೇವಿ. ಇನ್ನೊಂದ್ 4 ಎಕ್ರೆದಾಗ ಉದ್ದ ಹಾಕೇವಿ. ಚೆಂದ್ ಬೆಳಿದಿದ್ರ 100ರಿಂದ 140 ಕಾಯಿ ಇರ್ತಿದ್ವು. ಈಗ ಒಂದ್ ಗಿಡಕ್ಕ 15ಕ್ಕೆ 20 ಕಾಯಿ ಅಷ್ಟ್ ಅದಾವು. ಇಷ್ಟಾದ್ರೂ ಸರ್ಕಾರ ಬರ ಘೋಷಿಸಾಂಗಿಲ್ಲ ಅಂದ್ರ ನಾವ್ ಏನ ಮಾಡ್ಬೇಕು...’ ಎಂದು ಅಸಹಾಯಕರಾಗಿ ಪ್ರಶ್ನಿಸುತ್ತಾರೆ.
‘ನಮ್ದು ಒಟ್ಟು 12 ಎಕರೆ ಜಮೀನು. ತಲಾ ನಾಲ್ಕು ಎಕರೆ ತೊಗರಿ, ಸೋಯಾಬೀನ್ ಬಿತ್ತಿದ್ದೇವೆ. ಎರಡು ಎಕರೆ ಉದ್ದು, ಎರಡು ಹೆಸರು ಬಿತ್ತಿದ್ದೆವು. ಸೋಯಾ, ಉದ್ದು, ಹೆಸರು ಕೈಕೊಟ್ಟಿವೆ. ಆಗಸ್ಟ್ ಅಂತ್ಯ ತೊಗರಿಯು ಮೂರು ಅಡಿ ಬರಬೇಕಿತ್ತು. ಅದು ಇನ್ನೂ ಒಂದೂವರೆ ಅಡಿಗಿಂತಲೂ ಎತ್ತರ ಬೆಳೆದಿಲ್ಲ. ದೂರಿನಿಂದ ನೋಡಲು ಹೊಲಗಳಲ್ಲಿ ಹಸಿರಿದೆ. ಭೂಮಿಗೆ ಇಳಿದು ನೋಡಿದರೆ, ಸೋಯಾ ತೇವಾಂಶ ಕೊರತೆಯಿಂದ ಹೂವು ಕಟ್ಟುವ ಹಂತದಲ್ಲೇ ಬಾಡುತ್ತಿದೆ. ಇಷ್ಟೆಲ್ಲ ಆದರೂ, ಸರ್ಕಾರ ಬರ ಘೋಷಿಸದಿರುವುದು ರೈತರಿಗೆ ಮಾಡುವ ಅನ್ಯಾಯ’ ಎಂಬುದು ಕಾಳಗಿ ರೈತ ಶಿವರಾಜ ಪಾಟೀಲರ ಆಕ್ರೋಶ.
‘ಆತಂಕ ಬೇಡ, ಆಶಾಭಾವ ಇರಲಿ’
‘ಬರದ ಸನ್ನಿವೇಶವನ್ನು ಮುಂಗಾರು ಹಂಗಾಮು ಕೊನೆಗೊಳ್ಳುವ ತನಕ ಪ್ರತಿವಾರವೂ ನಿರಂತರ ಮೌಲ್ಯಮಾಪನ ನಡೆಸುವುದಾಗಿ ಸರ್ಕಾರ ಹೇಳಿದೆ. ಆ ಸಂದರ್ಭದಲ್ಲಿ ಬರ ನಿರ್ವಹಣೆ ಮಾನದಂಡಗಳನ್ನು ಪೂರೈಸಿದರೆ ಜಿಲ್ಲೆಯ ತಾಲ್ಲೂಕುಗಳನ್ನೂ ಬರಪೀಡಿತ ಎಂದು ಸರ್ಕಾರ ಘೋಷಿಸಲಿದೆ. ಹೀಗಾಗಿ ಜಿಲ್ಲೆಯ ರೈತರು ಈಗಲೇ ಆತಂಕ ಪಡುವ ಅಗತ್ಯವಿಲ್ಲ, ಇನ್ನೂ ಆಶಾಭಾವ ಇಟ್ಟುಕೊಳ್ಳಬಹುದು’ ಎಂದು ಜಿಲ್ಲಾಧಿಕಾರಿ ಇಕ್ರಂ ಶರೀಫ್ ತಿಳಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260828-34-610268545