
ಆದಿವಾಸಿಗಳಿಗೆ ಪೌಷ್ಟಿಕ ಆಹಾರದ ಕಿಟ್ ಆರು ತಿಂಗಳಿಂದ ಸಿಗದೆ ಹೋರಾಟ
ಮೈಸೂರು: ಆದಿವಾಸಿಗಳ ಅಪೌಷ್ಟಿಕತೆ ನಿವಾರಣೆಗೆ ಸರ್ಕಾರ ವಿತರಿಸು ತ್ತಿದ್ದ ಪೌಷ್ಟಿಕ ಆಹಾರದ ಕಿಟ್ ಆರು ತಿಂಗಳಿಂದ ಸಿಗದೆ ಆದಿವಾಸಿಗಳು ಬೀದಿಗೆ ಇಳಿದು ಹೋರಾಟ ನಡೆಸಿದ್ದಾರೆ.
ಕಿಟ್ ವಿತರಿಸುವಂತೆ ಆಗ್ರಹಿಸಿ ಆದಿವಾಸಿ ಕುಟುಂಬಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರೂ ಪ್ರಯೋಜನವಾಗಿಲ್ಲ. ಟೆಂಡರ್‌ಗೆ ಸಂಬಂಧಿಸಿದಂತೆ ತಾಂತ್ರಿಕ ಸಮಸ್ಯೆ ಎದುರಾದ ಕಾರಣ ಕಿಟ್ ವಿತರಣೆ ವಿಳಂಬವಾಗುತ್ತಿದೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹೇಳಿದೆ.
ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಕಾಡು ಮತ್ತು ಕಾಡಂಚಿನಲ್ಲಿ ನೆಲಸಿರುವ ಜೇನುಕುರುಬ, ಕಾಡುಕುರುಬ, ಸಿದ್ದಿ, ಹಲಸರು, ಕೊರಗ, ಸೋಲಿಗ, ಯರವ, ಮಲೆಕುಡಿಯ, ಕುಡಿಯ ಜನಾಂಗದ ಸುಮಾರು 48 ಸಾವಿರ ಕುಟುಂಬಗಳು ಆಹಾರ ಕಿಟ್ ಸಿಗದೆ ಪರದಾಡುತ್ತಿದ್ದಾರೆ.
ಏನಿದು ಯೋಜನೆ?: ಆದಿವಾಸಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2005-06 ರಲ್ಲಿ ವರದಿ ನೀಡಿತ್ತು. ಇದರಿಂದ ಎಚ್ಚೆತ್ತ ರಾಜ್ಯ ಸರ್ಕಾರ ಆದಿವಾಸಿಗಳಿಗೆ 2008 ರಿಂದ ಉಚಿತವಾಗಿ ಪೌಷ್ಟಿಕ ಆಹಾರದ ಕಿಟ್ ವಿತರಿಸುವ ಯೋಜನೆ ಜಾರಿಗೆ ತಂದಿದೆ.
ಕಿಟ್ ಸಾಮಗ್ರಿ ಖರೀದಿ ಸಮಿತಿಯ ಅಧ್ಯಕ್ಷರಾಗಿದ್ದ ಜಿಲ್ಲಾಧಿಕಾರಿಗಳೇ ಟೆಂಡರ್ ಅಂತಿಮಗೊಳಿಸುತ್ತಿದ್ದರು. ಆದರೆ, ಈಚೆಗೆ ಎಲ್ಲಾ ಜಿಲ್ಲೆಗಳಿಗೆ ಒಬ್ಬರೇ ಟೆಂಡರ್‌ದಾರರು ಎಂಬ ನಿಯಮ ಜಾರಿಯಾಗಿದೆ. ಇದರ ವಿರುದ್ಧ ಗುತ್ತಿಗೆದಾರರು ನ್ಯಾಯಾಲಯದ ಮೊರೆ ಹೋಗಿದ್ದರು. ಒಬ್ಬರೇ ಟೆಂಡರ್ ನಿರ್ವಹಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾಗಿ ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡ ಟಿ.ರಘುಮೂರ್ತಿ ಸಹಿ ಹಾಕಿದ ನಂತರ ಕಿಟ್ ಬಿಡುಗಡೆಯಾಗಲಿವೆ. ಹಾಗಾಗಿ ಇನ್ನೂ ವಿಳಂಬವಾಗುವ ಸಾಧ್ಯತೆ ಇದೆ ಎನ್ನುತ್ತವೆ ಮೂಲಗಳು.
‘ಕಿಟ್‌ಗಾಗಿ ಬೀದಿಗಿಳಿದು ಹೋರಾಟ ಮಾಡುವ ಸ್ಥಿತಿಯನ್ನು ತಪ್ಪಿಸಿ, ಗೌರವಯುತವಾಗಿ ನಮ್ಮ ಮನೆ ಬಾಗಿಲಿಗೆ ನಿಗದಿತ ಅವಧಿಯಲ್ಲಿ ಕಿಟ್ ತಲುಪಿಸುವ ಶಾಶ್ವತ ವ್ಯವಸ್ಥೆ ಜಾರಿಯಾಗಲಿ’ ಎನ್ನುವುದು ಆದಿವಾಸಿ ಕುಟುಂಬಗಳ ಬೇಡಿಕೆ.
ಕಿಟ್‌ನಲ್ಲಿ ಏನಿರುತ್ತದೆ?
ಪೌಷ್ಟಿಕ ಆಹಾರ ಪೂರೈಕೆ ಯೋಜನೆಯಡಿ ಸರ್ಕಾರ ಪ್ರತಿ ತಿಂಗಳು ಆದಿವಾಸಿ ಕುಟುಂಬಕ್ಕೆ ವಿತರಿಸುವ ಪೌಷ್ಟಿಕ ಆಹಾರದ ಕಿಟ್‌ನಲ್ಲಿ ಪೌಷ್ಟಿಕ ಆಹಾರ ಸಾಮಗ್ರಿಗಳಿರುತ್ತವೆ.
ಅಕ್ಕಿ, ರಾಗಿ, ತೊಗರಿಬೇಳೆ, ಹುರುಳಿಕಾಳು, ಕಡಲೆಕಾಳು, ಅಲಸಂದೆ, ಹೆಸರುಕಾಳು, ಕಡಲೆಬೀಜ, ಬೆಲ್ಲ, ಸಕ್ಕರೆ, ತುಪ್ಪ, ಮೊಟ್ಟೆಗಳು ಇರುತ್ತವೆ.
ಕೂಲಿಯೂ ಇಲ್ಲದೆ ಪೌಷ್ಟಿಕ ಆಹಾರವೂ ಸಿಗದೆ ನಿತ್ಯ ಸಮಸ್ಯೆ ಹೆಚ್ಚುತ್ತಿದೆ. ಪೌಷ್ಟಿಕ ಆಹಾರ ಸಾಮಗ್ರಿ ವಿತರಿಸದಿದ್ದರೆ ಮಕ್ಕಳು, ವೃದ್ಧರು, ಮಹಿಳೆಯರು ಸಾಯುವ ಸ್ಥಿತಿ ಇದೆ ಗಂಗಮ್ಮ, ಆದಿವಾಸಿ ಮಹಿಳೆ, ಗೋಳೂರು ಹಾಡಿ, ಎಚ್.ಡಿ.ಕೋಟೆ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260829-39-1349192929