
ಕೋಲಾರ : ಆರೂ ತಾಲ್ಲೂಕಿಗೂ ಬರದ ಬರೆ!
ಕೋಲಾರ: ಶೇ 50ರಷ್ಟು ಮಳೆಯ ಕೊರತೆಯಿಂದ ಜಿಲ್ಲೆಯ ಕೃಷಿ ಹಾಗೂ ಹೈನುಗಾರಿಕೆ ಕ್ಷೇತ್ರ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಆರೂ ತಾಲ್ಲೂಕುಗಳನ್ನು ರಾಜ್ಯ ಸರ್ಕಾರ ಗುರುವಾರ ಬರಪೀಡಿತ ಎಂದು ಘೋಷಿಸಿದೆ.
ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ, ಬಂಗಾರಪೇಟೆ ಹಾಗೂ ಕೆಜಿಎಫ್ ತಾಲ್ಲೂಕುಗಳನ್ನು ತೀವ್ರ ಬರ ಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಘೋಷಣೆ ಬೆನ್ನಲ್ಲೇ ಸರ್ಕಾರದಿಂದ ಬರ ಪರಿಹಾರದ ನಿರೀಕ್ಷೆಯಲ್ಲಿ ರೈತರು, ಹೈನುಗಾರರು ಇದ್ದಾರೆ. ಈಗಾಗಲೇ ಭಾರಿ ನಷ್ಟಕ್ಕೆ ಒಳಗಾಗಿದ್ದಾರೆ.
ಮುಂಗಾರು ಮಳೆ ಕೊರತೆಯ ತೀವ್ರತೆ ಆಧರಿಸಿ ಹಾಗೂ ಕೇಂದ್ರ ಸರ್ಕಾರ ನಿಗದಿಪಡಿಸಿದ ಮಾನದಂಡಗಳನ್ನು ಪರಿಗಣಿಸಿ ಬರಪೀಡಿತ ಪ್ರದೇಶಗಳ ಪಟ್ಟಿಯನ್ನು ರಾಜ್ಯ ಸರ್ಕಾರ ತಯಾರಿಸಿದೆ. ಮೂರು ಅಥವಾ ಅದಕ್ಕಿಂತ ಹೆಚ್ಚಿನ ವಾರಗಳಲ್ಲಿ ಮಳೆಯಾಗದ ತಾಲ್ಲೂಕು ಬರಪೀಡಿತ ವ್ಯಾಪ್ತಿಗೆ ಸೇರುತ್ತದೆ.
ಬಿತ್ತನೆ ಹಿನ್ನಡೆ, ಬೆಳೆ ನಷ್ಟ ಮಾಹಿತಿಯನ್ನೂ ಪರಿಗಣಿಸಲಾಗಿದೆ.ಜಿಲ್ಲೆಯಲ್ಲಿ ಬಿತ್ತನೆ ತೀವ್ರ ಕುಂಠಿತಗೊಂಡಿದ್ದು, ಪ್ರಮುಖ ಬೆಳೆ ರಾಗಿ ಬಿತ್ತನೆ ಸಮರ್ಪಕವಾಗಿ ನಡೆಯಲೇ ಇಲ್ಲ.
ಈ ವರ್ಷ ಜೂನ್ 1 ರಿಂದ ಆಗಸ್ಟ್ 25 ರವರೆಗೆ ಜಿಲ್ಲೆಯಲ್ಲಿ 115 ಮಿ.ಮೀ ಮಳೆ ಸುರಿದಿದೆ. ವಾಡಿಕೆಯಂತೆ 219 ಮಿ.ಮೀ. ಮಳೆ ಆಗಬೇಕಾಗಿತ್ತು. ಹೀಗಾಗಿ, ಶೇ 48ರಷ್ಟು ಮಳೆ ಕೊರತೆ ಉಂಟಾಗಿದೆ.
ಮಳೆ ಕೊರತೆಯು ಕೃಷಿ, ತೋಟಗಾರಿಕೆ, ಹೈನುಗಾರಿಕೆ ಸೇರಿದಂತೆ ಹಲವುಕ್ಷೇತ್ರಗಳ ಮೇಲೆ ಭಾರಿ ಪರಿಣಾಮ ಬೀರಿದೆ. ಬಹುತೇಕ ಕೆರೆಗಳು ಬರಿದಾಗಿವೆ. ಮುಂದೆ ಜನ, ಜಾನುವಾರಿಗೆ ಕುಡಿಯುವ ನೀರಿನ ಕೊರತೆ ಎದುರಾಗುವ ಆತಂಕ ಸೃಷ್ಟಿಯಾಗಿದೆ.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದಾದ ಗ್ರಾಮೀಣ ಭಾಗದ 130 ಗ್ರಾಮಗಳು ಹಾಗೂ ನಗರ ಪ್ರದೇಶದ 56 ವಾರ್ಡ್‌ಗಳನ್ನು ಜಿಲ್ಲಾಡಳಿತ ಈಗಾಗಲೇ ಗುರುತಿಸಿದೆ. ಈ ತಿಂಗಳಲ್ಲಿ ವಾಡಿಕೆ ಮಳೆ 94 ಮಿ.ಮೀ. ಆಗದಿದ್ದರೆ ಮುಂದಿನ ತಿಂಗಳು ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ.
ಈಗಾಗಲೇ ಅಂತರ್ಜಲ ಮಟ್ಟಿ ಕುಸಿದಿದೆ. ಜಿಲ್ಲೆಯಲ್ಲಿ ಒಟ್ಟು 3,232 ಸಣ್ಣ ಮತ್ತು ದೊಡ್ಡ ಕೆರೆಗಳಿದ್ದು, ಇವುಗಳಲ್ಲಿ ಈಗಾಗಲೇ 995 ಕೆರೆಗಳು ಸಂಪೂರ್ಣ ಬರಿದಾಗಿವೆ. ನಗರ ಸ್ಥಳೀಯ ಸಂಸ್ಥೆಗಳು ನಿರ್ವಹಿಸುವ ಸುಮಾರು 219 ಕೊಳವೆಬಾವಿಗಳು ಈಗಾಗಲೇ ಬತ್ತಿ ಹೋಗಿವೆ. ಹಾಗೆಯೇ ಗ್ರಾಮೀಣ ಭಾಗದಲ್ಲಿ 785 ಕೊಳವೆಬಾವಿಗಳು ಬತ್ತಿ ಹೋಗಿವೆ.
ಜಾನುವಾರುಗಳಿಗೆ ತಿಂಗಳಿಗಾಗುವಷ್ಟು ಮೇವು ಇದೆ ಎಂಬುದಾಗಿ ಜಿಲ್ಲಾಡಳಿತ ಹೇಳುತ್ತಿದ್ದರೂ ಗ್ರಾಮಾಂತರ ಪ್ರದೇಶದಲ್ಲಿ ರೈತರು ಮೇವು ಹೊಂದಿಸಲು ಪರದಾಡುತ್ತಿದ್ದಾರೆ. ಹಸಿರು ಮೇವಿಗೂ ಕೊರತೆ ಉಂಟಾಗಿದ್ದು, ಹಾಲಿನ ಉತ್ಪಾದನೆ ತಗ್ಗುತ್ತಿದೆ. ಇದು ರೈತಾಪಿ ವರ್ಗದಲ್ಲಿ ಭಾರಿ ಆತಂಕ ಸೃಷ್ಟಿಸಿದೆ.
3 ದಿನಗಳ ಹಿಂದೆಯಷ್ಟೇ ಜಿಲ್ಲೆಯ ಬರ ಸ್ಥಿತಿಗತಿ ಕುರಿತಂತೆ ಕ್ಷೇತ್ರ ಪರಿಶೀಲನೆ ಮತ್ತು ದೃಢೀಕರಣದ (ಗ್ರೌಂಡ್ ಟ್ರೂಥಿಂಗ್) ಜಂಟಿ ವರದಿಯನ್ನು ಕೋಲಾರ ಜಿಲ್ಲಾಡಳಿತವು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಿಗೆ ಸಲ್ಲಿಸಿತ್ತು. ಆರೂ ತಾಲ್ಲೂಕುಗಳಲ್ಲಿನ 150 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಬರದಿಂದ ಪ್ರಮುಖವಾಗಿ ರಾಗಿ, ಶೇಂಗಾ ಬೆಳೆಗೆ ಎಷ್ಟು ಹಾನಿಯಾಗಿದೆ ಎಂಬ ಅಂಕಿಅಂಶಗಳನ್ನು ಕ್ರೋಡೀಕರಿಸಿತ್ತು.
ಕೋಲಾರ ಜಿಲ್ಲೆ ಮಳೆ ಮಾಹಿತಿ (ಮಿ.ಮೀ.ಗಳಲ್ಲಿ)
ಜೂನ್ 1ರಿಂದ ಆ. 25; ಆ. 25 ರವರೆಗೆ
ಸದ್ಯಕ್ಕೆ ನೀರು, ಮೇವು ಕೊರತೆ ಇಲ್ಲ
ಜಿಲ್ಲೆಯಲ್ಲಿ ಪ್ರಸ್ತುತ ಯಾವುದೇ ಭಾಗದಲ್ಲಿ ಕುಡಿಯುವ ನೀರು ಮತ್ತು ಮೇವಿನ ಕೊರತೆ ಕಂಡುಬಂದಿಲ್ಲ. ಮುಂಬರುವ ಒಂದು ತಿಂಗಳಲ್ಲಿ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ.
ಲಭ್ಯವಿರುವ ಅನುದಾನದ ಶೇ 50ರಷ್ಟನ್ನು ಕಡ್ಡಾಯವಾಗಿ ಕುಡಿಯುವ ನೀರಿನ ಪೂರೈಕೆಗೆ ಬಳಸಲು ಸೂಚಿಸಿ ಪತ್ರ ರವಾನಿಸಲಾಗಿದೆ. ರಾಜ್ಯ ಸರ್ಕಾರದಿಂದ ಪ್ರತಿ ಕ್ಷೇತ್ರಕ್ಕೆ ನೀಡಲಾದ ₹ 1 ಕೋಟಿ ಅನುದಾನದಲ್ಲಿ ಆ್ಯಕ್ಷನ್ ಪ್ಲಾನ್ ಸಿದ್ಧಪಡಿಸಿ ಕಾರ್ಯಗತಗೊಳಿಸಲಾಗುತ್ತಿದೆ. ಎರಡನೇ ಹಂತದ ಅನುದಾನಕ್ಕಾಗಿ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಸಭೆ ನಡೆಸಿ, ನಡಾವಳಿಗಳನ್ನು ಅನುಮೋದಿಸಿ, ತಾಲ್ಲೂಕು ಹಂತದಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಅನುದಾನ ಪಡೆಯಲಾಗುತ್ತಿದೆ. ಖಾಸಗಿ ಕೊಳವೆಬಾವಿಗಳಿಂದ ನೀರು ಪಡೆದು ಟ್ಯಾಂಕರ್ ಮೂಲಕ ನೀರು ಪೂರೈಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ
-ಎಂ.ಆರ್.ರವಿಕುಮಾರ್, ಜಿಲ್ಲಾಧಿಕಾರಿ
ಶೀಘ್ರದಲ್ಲೇ ಬೆಳೆ ನಷ್ಟ ವರದಿ
ಮಳೆ ಕೊರತೆ, ಬಿತ್ತನೆ ಹಿನ್ನಡೆ ಆಧರಿಸಿ ಜಿಲ್ಲೆಯ ಆರೂ ತಾಲ್ಲೂಕುಗಳನ್ನು ಬರಪೀಡಿತ ಎಂಬುದಾಗಿ ಸರ್ಕಾರ ಘೋಷಿಸಿದೆ. ಬಿತ್ತನೆ ಸಮರ್ಪಕವಾಗಿ ಆಗದಿರುವುದು, ಬಿತ್ತನೆ ಆಗಿಯೂ ಮೊಳಕೆ ಬಾರದಿರುವುದು, ಮೊಳಕೆ ಬಂದಿದ್ದು ಒಣಗಿರುವುದನ್ನು ಪರಿಗಣಿಸಲಾಗಿದೆ. ಜಿಲ್ಲೆಯಲ್ಲಿನ ಬೆಳೆ ನಷ್ಟ ಮಾಹಿತಿಯನ್ನು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಕಳಿಸಿಕೊಡಲಾವುದು. ಬಳಿಕ ರೈತರಿಗೆ ಪರಿಹಾರ ಸಿಗಲಿದೆ. ಇದಲ್ಲದೇ, ಬೆಳೆ ವಿಮೆ ಪರಿಹಾರವೂ ದೊರೆಯಲಿದೆ
-ಮಂಜುಳಾ ಎಂ.ಎನ್., ಕೃಷಿ ಜಂಟಿ ನಿರ್ದೇಶಕಿ
ಮುಂಜಾಗ್ರತಾ ಕ್ರಮ; ಜಿಲ್ಲಾಡಳಿತಕ್ಕೆ ಆಗ್ರಹ
ಕೋಲಾರ ಜಿಲ್ಲೆಯ ಆರೂ ತಾಲ್ಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಿಸಿದ್ದು, ಕೂಡಲೇ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ತೀವ್ರ ಮಳೆ ಕೊರತೆಯಿಂದ ಬಿತ್ತನೆ ಕುಂಠಿತಗೊಂಡಿದೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಂಡು ಕೂಡಲೇ ಕುಡಿಯುವ ನೀರು ಮತ್ತು ಮೇವಿನ ಪೂರೈಕೆಗೆ ಕಾರ್ಯಯೋಜನೆ ರೂಪಿಸಬೇಕು. ಪ್ರತಿ ತಾಲ್ಲೂಕಿಗೆ ಈಗಾಗಲೇ ಬಿಡುಗಡೆ ತಲಾ ₹ 1 ಕೋಟಿ ಸಾಕಾಗುವುದಿಲ್ಲ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕು.
-ಟಿ.ವಿ.ರಮೇಶ್, ತೊಟ್ಲಿ, ರಾಗಿ ಬೆಳೆಗಾರ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260828-18-1398947856