
ಗಾಯಗೊಂಡು ಮೈದಾನ ತೊರೆದಿದ್ದ ಕೆ.ಎಲ್ ರಾಹುಲ್ ಕುರಿತು ಅಪ್‌ಡೇಟ್ ನೀಡಿದ ಕೋಚ್
ಗಾಲ್: ಇಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧ ಮೊದಲ ಪಂದ್ಯದ ಮೊದಲ ದಿನದಾಟದಲ್ಲಿ ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದ ಭಾರತ ತಂಡದ ಉಪನಾಯಕ ಕೆ.ಎಲ್. ರಾಹುಲ್ ಗಾಯಗೊಂಡು ಮೈದಾನದಿಂದ ಹೊರನಡೆದಿದ್ದರು. ಸದ್ಯ, ಅವರ ಆರೋಗ್ಯದ ಕುರಿತು ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ ಅಪ್‌ಡೇಟ್ ನೀಡಿದ್ದಾರೆ.
ದಿನದಾಟದ ಅಂತ್ಯದ ಬಳಿಕ ಕೆ.ಎಲ್ ರಾಹುಲ್ ಅವರ ಗಾಯದ ಕುರಿತು ಮಾತನಾಡಿದ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ ಅವರು ‘ರಾಹುಲ್ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರು ಸ್ನಾಯು ಸೆಳೆತಕ್ಕೆ (cramps) ಒಳಗಾದರು. ದಿನದಾಟ ಮುಗಿಯುವ ವೇಳಗೆ ಅವರು ಬಹುತೇಕ ಚೇತರಿಸಿಕೊಂಡಿದ್ದಾರೆ. ಈಗ ಸಂಪೂರ್ಣ ಚೇತರಿಕೆಯ ಹಾದಿಯಲ್ಲಿದ್ದಾರೆ. 2ನೇ ದಿನದಾಟದಲ್ಲಿ ಅವರು ಮತ್ತೆ ಬ್ಯಾಟಿಂಗ್ ಮಾಡಲು ಕಣಕ್ಕಿಳಿಯುವ ಭರವಸೆಯಿದೆ’ ಎಂದಿದ್ದಾರೆ.
ಆರಂಭಿಕರಾಗಿ ಕಣಕ್ಕಿಳಿದ ಉಪನಾಯಕ ಕೆ.ಎಲ್. ರಾಹುಲ್ 162 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 77 ರನ್ ಗಳಿಸಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ಮಸಲ್ ಕ್ರ್ಯಾಂಪ್ (Cramps) ಸಮಸ್ಯೆಗೆ ಒಳಗಾದ ಅವರು ರಿಟೈರ್ಡ್ ಹರ್ಟ್ ಆಗಿ ಮೈದಾನ ತೊರೆದಿದ್ದರು.
ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (32 ರನ್) ವಿಕೆಟ್ ಪತನದ ಬಳಿಕ ಜೊತೆಯಾದ ಕರ್ನಾಟಕದ ಜೋಡಿ ರಾಹುಲ್ ಮತ್ತು ದೇವದತ್ ಪಡಿಕ್ಕಲ್ 2ನೇ ವಿಕೆಟ್‌ಗೆ 150 ರನ್‌ಗಳ ಅದ್ಭುತ ಜೊತೆಯಾಟ ಆಡಿದರು.
2024ರ ಪರ್ತ್ ಟೆಸ್ಟ್ ಬಳಿಕ ಭಾರತ ತಂಡಕ್ಕೆ ಮರಳಿದ ಕರ್ನಾಟಕದ ಬ್ಯಾಟರ್ ದೇವದತ್ತ ಪಡಿಕ್ಕಲ್ ಅಜೇಯ 131 ರನ್ ಸಿಡಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.