ಸಿನಿಸಿಪ್: ಬದಲಾದ ವರಸೆ; ಪ್ರೇಕ್ಷಕರ ತಲೆಗೆ ಹುಳುಬಿಡುವ ಸಿನಿಮಾ ಪ್ರಚಾರ ತಂತ್ರಗಳು
‘ಟಾಕ್ಸಿಕ್’ ಸಿನಿಮಾ ತಯಾರಿಯಲ್ಲಿ ಕಳೆದು ಹೋದಂತಿದ್ದ ನಟ ಯಶ್ ಈಗ ಸಾಮಾಜಿಕ ಮಾಧ್ಯಮದ ತುಂಬೆಲ್ಲ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ರಜತ್ ಶರ್ಮಾ ನಡೆಸಿಕೊಡುವ ‘ಆಪ್ ಕಿ ಅದಾಲತ್’ ಹಿಂದಿ ಟಿ.ವಿ ಸಂದರ್ಶನ ಕಾರ್ಯಕ್ರಮದ ನಂತರ ಅವರ ಬಗ್ಗೆ ಓತಪ್ರೋತ ಹೊಗಳಿಕೆಗಳು ಕೇಳಿಬರುತ್ತಿವೆ. ಸಿನಿಮಾ ತೆರೆಕಾಣುವ ತಿಂಗಳ ಮುಂಚಿನಿಂದ ಈ ರೀತಿ ಪ್ರಚಾರದ ವರಸೆಗಳನ್ನು ತೋರುವುದು ಈಗ ಸಹಜವಾಗಿಬಿಟ್ಟಿದೆ. ಉಳಿದಂತೆ ಈಗಿನ ತಾರಾ ನಟ–ನಟಿಯರು ಚಿಪ್ಪಿನೊಳಗೆ ಸೇರಿಕೊಂಡಂತೆ ಇದ್ದುಬಿಡುತ್ತಾರೆ.
‘ಶಾಂತಿ ಕ್ರಾಂತಿ’ ಸಿನಿಮಾಗೆ ರವಿಚಂದ್ರನ್ ದೇಶದ ಮೂಲೆ ಮೂಲೆಗಳಿಂದ ಸುದ್ದಿಮಿತ್ರರನ್ನು ಕರೆಸಿದ್ದ ಸಂಗತಿಯನ್ನು ಕಳೆದ ವಾರ ನೆನಪಿಸಿಕೊಂಡಿದ್ದೆವಷ್ಟೆ. ‘ಟಾಕ್ಸಿಕ್’ ಸಿನಿಮಾ ಟ್ರೇಲರ್ ಬಿಡುಗಡೆ ಸಮಾರಂಭದಲ್ಲೂ ಕಂಡದ್ದೂ ಅದೇ ವರಸೆ. ಮುಂದಿನ ಸಾಲಿನಲ್ಲಿ ಎಲ್ಲಿಂದಲೋ ಬಂದಿದ್ದ ಪತ್ರಕರ್ತರನ್ನು ಕೂರಿಸಿ, ಹಿಂದಿನ ಸಾಲಿನಲ್ಲಿ ಸ್ಥಳೀಯ ಸುದ್ದಿಮಿತ್ರರನ್ನು ಕೂರಿಸಿದ್ದಕ್ಕೆ ಮುನಿಸಿಕೊಂಡು ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಗಳನ್ನು ಹಾಕಿದರು.
ನಿಂದನೆಯೂ ಪ್ರಚಾರದ ಮಾರ್ಗ
‘ಟಾಕ್ಸಿಕ್’ ಎನ್ನುವ ಶೀರ್ಷಿಕೆಯಂತೆಯೇ ಆ ಸಿನಿಮಾದ ಇದುವರೆಗಿನ ಪ್ರಚಾರ ತಂತ್ರವೆಲ್ಲ ‘ಡಾರ್ಕ್’ ಆಗಿದೆ. ಮೊದಲು ಯುಟ್ಯೂಬ್‌ನಲ್ಲಿ ಬಿಡುಗಡೆಯಾದ ಯಶ್ ಪಾತ್ರ ಪರಿಚಯದ ವಿಡಿಯೊದಲ್ಲಿ ಕಾರಿನೊಳಗಿನ ಲಲನೆ, ಆಕೆಯ ಮೇಲೆರಗುವ ಯಶ್, ವಾಲಾಡುವ ಆ ಕಾರನ್ನು ಕಂಡು ಟ್ರೋಲ್‌ಗಳು ಪುಂಖಾನುಪುಂಖ ಹರಿದವು. ಆಮೇಲೆ ‘ಲೇಡೀಸ್ ಆ್ಯಂಡ್ ಲೇಡೀಸ್... ಒಬ್ಬೊಬ್ಬರಾಗಿ ಬರ್ತೀರೊ, ಎಲ್ಲ ಒಟ್ಟಿಗೆ ಬರ್ತೀರೊ’ ಎಂದು ಕೇಳುವ ದ್ವಂದ್ವಾರ್ಥ ಸಂಭಾಷಣೆಯನ್ನು ಟೀಕಿಸಿದವರಿಗೂ ಲೆಕ್ಕವಿಲ್ಲ. ‘ನಿನ್ನ ರೇಟೆಸ್ಟು’ ಎಂದು ಹಿಂದಿಯ ಪ್ರಮುಖ ನಟಿ ಕಿಯಾರಾ ಅಡ್ವಾಣಿ ಅವರನ್ನೇ ಯಶ್ ಪ್ರಶ್ನಿಸಿದ್ದನ್ನು ವಾಚಾಮಗೋಚರ ಬೈದು ನಟಿ ರಿಷಿಕಾ ಸಿಂಗ್ ಒಂದು ವಿಡಿಯೊವನ್ನೇ ಮಾಡಿಬಿಟ್ಟರು. ಆ ವಿಡಿಯೊಗೆ ಪ್ರತಿಕ್ರಿಯಾತ್ಮಕವಾಗಿ ಅಸಂಖ್ಯ ವಿಡಿಯೊಗಳನ್ನು ವ್ಲಾಗರ್‌ಗಳು ಹಾಕತೊಡಗಿದ್ದಾರೆ.
‘ನಕಾರಾತ್ಮಕ ಪ್ರಚಾರ ತಂತ್ರ’ದ ಜಾಯಮಾನ ಇರುವುದೇ ಹೀಗೆ. ಕೆಣಕಬೇಕು. ಕೆರೆಯಬೇಕು. ಮಾತಿಗೆಳೆಯಬೇಕು. ಸಂತೆಯೊಳಗೆ ನಿಂತು ಚೀರುವಂತೆ ಎಲ್ಲವನ್ನೂ ಮಾಡಬೇಕು. ಫಿಲ್ಟರ್ ಬೇಕೆಂದೇನೂ ಇಲ್ಲ. ಟ್ರೇಲರ್‌ಗಳಿಗೆ ಯಾವ ಸೆನ್ಸಾರ್‌ಶಿಪ್ ಕೂಡ ಇಲ್ಲ. ‘ಟಾಕ್ಸಿಕ್’ ಚಿತ್ರದ ಪ್ರಚಾರ ತಂತ್ರದ ಒಳಿತು–ಕೆಡಕಿನ ಅಂಶಗಳ ಪ್ರಮಾಣವನ್ನು ತೂಕಕ್ಕೆ ಹಾಕಿದರೆ, ಕೆಡಕಿನ ಭಾರವೇ ಹೆಚ್ಚು. ಪ್ರಚಾರ ತಂತ್ರ ರೂಪಿಸಿದವರಿಗೆ ಬೇಕಿರುವುದು ಇದೇ. ತಲೆಗೆ ಹುಳ ಬಿಡಬೇಕು, ಬೈಯಿಸಿಕೊಳ್ಳಬೇಕು. ಆ ಬೈಗುಳಗಳ ಸುರಿಮಳೆ ಆದಮೇಲೆ ಅಂಥದ್ದೇನಿದೆ ಸಿನಿಮಾದಲ್ಲಿ ಎಂಬ ಕುತೂಹಲ ಮೂಡಬೇಕು. ಮರಿ ಹಾಕಿದಂತೆ ಅದೇ ವಿಷಯದ ಸುತ್ತ ರೀಲ್ಸ್ ತೇಲಿ ಬರಬೇಕು. ಈ ಎಲ್ಲ ವಿಷಯಗಳಲ್ಲೂ ‘ಟಾಕ್ಸಿಕ್’ ಸಿನಿಮಾದ ಪ್ರಚಾರ ಯಶಸ್ವಿಯಾಗಿದೆ ಎಂದೇ ಹೇಳಬೇಕು.
‘ಟಾಕ್ಸಿಕ್’ ಸಿನಿಮಾದ ಈ ಪ್ರಚಾರ ವೈಖರಿ ನಿಮಗೆ ಹಿಡಿಸಿದೆಯೇ? ಹಾಗಿದ್ದರೆ, ಬರೆದು ತಿಳಿಸಿ.
ಈಗೇನೋ ಸಾಮಾಜಿಕ ಮಾಧ್ಯಮದ ಮೂಲಕ ಪ್ರೇಕ್ಷಕರ ಅಂಗೈ ಅಗಲದ ಮೊಬೈಲ್ ಪರದೆಯ ಮೇಲೆ ಕಾಣಿಸಿಕೊಳ್ಳಲು ರಹದಾರಿಗಳಿವೆ. ಅಂತಹ ಅವಕಾಶವೇ ಇಲ್ಲದೆ, ಭೌತಿಕ ಪ್ರಚಾರವನ್ನೇ ನೆಚ್ಚಿಕೊಂಡಂತಿದ್ದ ಕಾಲವೀಗ ಇತಿಹಾಸ.
ವಕ್ಷಸ್ಥಳ ತೋರಿದ ಮೊದಲ ಪೋಸ್ಟರ್
ಡಿ. ಶಂಕರ್ ಸಿಂಗ್ ಅವರು 1948ರಲ್ಲಿ ನಿರ್ಮಿಸಿದ ಎರಡನೇ ಸಿನಿಮಾ ‘ಭಕ್ತ ರಾಮದಾಸ’. ಡಿ. ಕೆಂಪರಾಜ್ ಅರಸ್ ನಿರ್ದೇಶನದ ಆ ಸಿನಿಮಾ ಸೋತಿತು. ‘ಸಿನಿಮಾ ನಿರ್ಮಾಣವನ್ನು ಇನ್ನು ನಿಲ್ಲಿಸಿ ಬಿಡುವಿರಾ?’ ಎಂದು ಸ್ನೇಹಿತರೊಬ್ಬರು ಶಂಕರ್ ಸಿಂಗ್ ಅವರನ್ನು ಕೇಳಿದರು. ‘ಮತ್ತೆ ಸಿನಿಮಾ ಮಾಡಿ, ಗೆದ್ದು ತೋರಿಸುತ್ತೇನೆ’ ಎಂದು ಸಿಂಗ್ ಸವಾಲು ಹಾಕಿದರೇ ವಿನಾ ಕಂಗಾಲಾಗಲಿಲ್ಲ.
ಮೊದಲಿಗೆ ಗೆಲ್ಲುವಂತಹ ಚಿತ್ರ ನಿರ್ಮಿಸಬೇಕು ಎನ್ನುವುದು ಅವರ ಗುರಿಯಾಯಿತು. ಅದರ ಫಲವೇ ‘ನಾಗ ಕನ್ನಿಕಾ’ ಸಿನಿಮಾ. ಈಗ ‘ಟಾಕ್ಸಿಕ್’ ಬಿಡುಗಡೆಗೆ ಮೊದಲೇ ಕುತೂಹಲವನ್ನು ಮೂಡಿಸಿರುವಂತೆ, ಆಗ ಆ ಚಿತ್ರದ ಕುರಿತು ಜನರು ಮಾತನಾಡಿಕೊಳ್ಳಲಾರಂಭಿಸಿದ್ದರು.
ಕಲಾವಿದೆ ಜಯಶ್ರೀ ಅವರ ಮೊದಲ ಸಿನಿಮಾ ‘ನಾಗ ಕನ್ನಿಕಾ’. ಮುಂದೆ ಅವರೇ ತಾಯಿ ಹಾಗೂ ಅಜ್ಜಿಯ ಪಾತ್ರಗಳಲ್ಲಿ ಚಿತ್ರರಂಗದಲ್ಲಿ ದೀರ್ಘಾವಧಿ ಛಾಪು ಮೂಡಿಸಿದರು.
ಸಿನಿಮಾಗೆ ಜನ ಬರುವಂತೆ ಮಾಡುವುದು ಹೇಗೆ ಎಂದು ಶಂಕರ್ ಸಿಂಗ್ ಆಲೋಚಿಸಿದಾಗ, ಅವರಿಗೆ ಪೋಸ್ಟರ್‌ನಲ್ಲಿ ನಾಯಕಿಯ ಮಾದಕತೆಯನ್ನು ತೋರಿಸಬೇಕು ಎಂದೆನ್ನಿಸಿತು. ತಮ್ಮ ವಕ್ಷಸ್ಥಳದ ಒಂದು ಭಾಗವನ್ನು ಕೇಂದ್ರೀಕರಿಸಿದ ಪೋಸ್ ಒಂದು ಭಿತ್ತಿಪತ್ರಗಳಲ್ಲಿ, ಜಾಹೀರಾತುಗಳಲ್ಲಿ ಎದ್ದು ಕಾಣುತ್ತದೆ ಎನ್ನುವುದು ಜಯಶ್ರೀ ಅವರಿಗೂ ಗೊತ್ತಿತ್ತು. ಆ ರೀತಿಯ ನಾಯಕಿ ಭಂಗಿಯ ಚಿತ್ರ ನೋಡಿ ಚಿತ್ರಮಂದಿರಗಳ ಮಾಲೀಕರೇ ಬಾಯ ಮೇಲೆ ಬೆರಳಿಟ್ಟುಕೊಂಡರು. ಈ ಚಿತ್ರವನ್ನು ಸುತರಾಂ ಪ್ರದರ್ಶಿಸುವುದಿಲ್ಲ ಎಂದು ಬೆಂಗಳೂರಿನ ಮೂವಿಲ್ಯಾಂಡ್ ಚಿತ್ರಮಂದಿರದ ಮಾಲೀಕರು ಹಟ ಹಿಡಿದರು. ಆಗ ಸಚಿವರಾಗಿದ್ದ ಕೆ.ಟಿ. ಭಾಷ್ಯಂ ಅವರು ಮಧ್ಯಪ್ರವೇಶಿಸಿ, ಅವರು ಪಟ್ಟು ಸಡಿಲಿಸುವಂತೆ ಮಾಡಿದರು.
ಚಿತ್ರಮಂದಿರದ ಮಾಲೀಕರಿಗಾಗಿಯೇ ಶಂಕರ್ ಸಿಂಗ್ ಅವರು ಒಂದು ವಿಶೇಷ ಪ್ರದರ್ಶನ ಏರ್ಪಡಿಸಿದರು. ಆಗ ಮೂವಿಲ್ಯಾಂಡ್ ಚಿತ್ರಮಂದಿರದ ಮಾಲೀಕರೂ ಸಿನಿಮಾ ನೋಡಿದರು. ‘ಜನ ಗಲಾಟೆ ಮಾಡಿದರೆ ಚಿತ್ರ ಪ್ರದರ್ಶನ ನಿಲ್ಲಿಸಿಬಿಡುತ್ತೇವೆ’ ಎಂಬ ಷರತ್ತನ್ನು ಅವರು ಹಾಕಿಯೇ ಸಿನಿಮಾ ಪ್ರದರ್ಶಿಸಲು ಒಪ್ಪಿದ್ದು.
ಮಾಂತ್ರಿಕನೊಬ್ಬನ ಅಲೌಕಿಕ ಶಕ್ತಿಯ ಸುತ್ತ ಹೆಣೆದಿದ್ದ ಚಿತ್ರಕಥೆಯನ್ನು ‘ನಾಗಕನ್ನಿಕಾ’ ಒಳಗೊಂಡಿತ್ತು. ತರುಣಿಯರು ಇದ್ದಕ್ಕಿದ್ದಂತೆ ಸರ್ಪಗಳಾಗಿ ಬದಲಾಗುವುದು, ಸರ್ಪಗಳು ಸುಂದರ ಯುವತಿಯರಾಗಿ ರೂಪಾಂತರಗೊಳ್ಳುವ ‘ಫ್ಯಾಂಟಸಿ’ ಆ ಸಿನಿಮಾದಲ್ಲಿ ದೃಶ್ಯವತ್ತಾಗಿ ಇತ್ತು. ಋಷಿಗಳು ಕಲ್ಲಾಗುವುದು, ಕಲ್ಲು ಋಷಿಯಾಗಿ ಬದಲಾಗುವಂತಹ ಚಮತ್ಕಾರಗಳಿಗೂ ಕೊರತೆ ಇರಲಿಲ್ಲ.
ಪ್ರೇಕ್ಷಕರಿಗೆ ಈ ಇಡೀ ಚಿತ್ರ ನಾಯಕಿಯ ಮಾದಕತೆಯ ಜತೆಗೆ ಪವಾಡಸದೃಶ ದೃಶ್ಯಗಳ ಮೂಟೆಯಂತೆ ಆಕರ್ಷಿಸಿತು. ನೂರು ದಿನ ಓಡಿದ ಈ ಸಿನಿಮಾದ ನಿರ್ದೇಶಕರು ಜಿ. ವಿಶ್ವನಾಥನ್. ಮುಂದೆ ಈ ಚಿತ್ರವು ತಮಿಳಿಗೂ ಡಬ್ ಆಯಿತು.
ನಾಯಕಿ ಪ್ರಧಾನ ಸಿನಿಮಾಗಳೇ ಅದುವರೆಗೆ ಇದ್ದರೂ ಗ್ಲಾಮರ್‌ಗೆ ಒತ್ತುನೀಡಿದ್ದು ಅದೇ ಮೊದಲು. ಕ್ರಮೇಣ ನಾಯಕಿಯರ ಮೈಮಾಟ ತೋರಿಸುವಂತಹ ಚಿತ್ರಗಳು ಬರಲಾರಂಭಿಸಿದವು.
ನಿಮ್ಮ ನೆನಪಿನ ಭಿತ್ತಿಯಲ್ಲಿಯೂ ನಾಯಕಿಯರ ಕಾಡುವ ಪೋಸ್ಟರ್ಗಳು ಅಚ್ಚೊತ್ತಿದ್ದರೆ, ಅಂಥವನ್ನು ಹಂಚಿಕೊಳ್ಳಿ.
‘ನಾಗಕನ್ನಿಕಾ’ ಸಿನಿಮಾದ ನಾಯಕಿಯ ಮಾದಕತೆಯು ಮಾರುಕಟ್ಟೆ ವಿಸ್ತರಿಸಿದ್ದರ ರುಚಿ ಹತ್ತಿದ್ದೇ ಶಂಕರ್ ಸಿಂಗ್ ಅವರು ‘ಜಗನ್ಮೋಹಿನಿ’ ಸಿನಿಮಾವನ್ನು 1951ರಲ್ಲಿ ತಯಾರಿಸಿದರು. ಮಹಾತ್ಮ ಸಂಸ್ಥೆ ನಿರ್ಮಾಣದ ಈ ಚಿತ್ರದ ನಾಯಕಿ ಹರಿಣಿ.
ನಿಜ ಬದುಕಿನಲ್ಲಿ ಖಾದಿ ಸೀರೆಗಳನ್ನೇ ಹೆಚ್ಚಾಗಿ ಉಡುತ್ತಿದ್ದ ಹರಿಣಿ ಅವರು ಈ ಚಿತ್ರದಲ್ಲಿ ಎದೆಯ ಭಾಗ ಕಾಣುವಂತಹ, ಮೈಗಂಟುವ ಉಡುಗೆ ತೊಟ್ಟು ಕೆಂಪರಾಜ ಅರಸ್ ಅವರೊಟ್ಟಿಗೆ ನೀರಿಗಿಳಿಯುವ ದೃಶ್ಯದಲ್ಲಿ ಕಾಣಿಸಿಕೊಂಡರು. ಸಿನಿಮಾದ ಭಿತ್ತಿಚಿತ್ರಗಳಾಗಿ ಈ ದೃಶ್ಯವನ್ನೇ ಬಳಸಿದ್ದು ಜನರನ್ನು ಆಕರ್ಷಿಸಲು ಕಾರಣವಾಯಿತು.
ಪಿ. ಶ್ಯಾಮಣ್ಣ ಈ ಸಿನಿಮಾದ ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿದ್ದರು. ಹಿಂದಿಯ ‘ಮಹಲ್’ ಸಿನಿಮಾದ ‘ಆಯೇಗಾ ಆಯೇಗಾ ಆಯೇಗಾ ಆನೆವಾಲಾ ಆಯೇಗಾ’ ಹಾಡಿನ ಶೈಲಿಯಲ್ಲೇ ‘ಎಂದೋ ಎಂದೋ ಎಂದೋ ನಿನ್ನ ದರುಶನಾ ಎಂದೋ’ ಎಂಬ ಗೀತೆಯನ್ನು ಈ ಚಿತ್ರಕ್ಕೆಂದು ಸಂಯೋಜಿಸಲಾಗಿತ್ತು. ಆ ಹಾಡು ತುಂಬ ಜನಪ್ರಿಯವಾಯಿತು.
ದೂರದ ಊರುಗಳಿಂದ ಎತ್ತಿನ ಗಾಡಿ ಕಟ್ಟಿಕೊಂಡು ಬಂದು ಜನ ಚಿತ್ರಮಂದಿರಗಳಲ್ಲಿ ಈ ಸಿನಿಮಾ ನೋಡಲು ಕಾರಣವೇ ನಾಯಕಿಯ ಮಾದಕತೆ. ಯುವಕರಂತೂ ಹತ್ತಿಪ್ಪತ್ತು ಸಲ ಈ ಸಿನಿಮಾ ನೋಡತೊಡಗಿದರು. ಒಂದು ಊರಿನ ತಹಶೀಲ್ದಾರರೊಬ್ಬರು, ‘ಇಂತಹ ಸಿನಿಮಾ ಯುವಕರಲ್ಲಿ ಹುಚ್ಚು ಹಿಡಿಸಿ, ಹಾದಿ ತಪ್ಪಿಸುತ್ತದೆ. ಇದನ್ನು ಬಹಿಷ್ಕರಿಸಬೇಕು’ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದನ್ನು ಆ ಕಾಲದ ‘ಟ್ರೋಲ್’ ಎನ್ನಬಹುದೇನೊ?
ಹುಣಸೂರು ಕೃಷ್ಣಮೂರ್ತಿಯವರು ಬರೆದ ಸಾಹಿತ್ಯ ಇದ್ದ ಗೀತೆಗಳ ಈ ಸಿನಿಮಾ, ದಾವಣಗೆರೆ ಒಂದರಲ್ಲೇ 36 ವಾರ ಓಡಿತು. 12 ಹಾಡುಗಳಿದ್ದ ಸಿನಿಮಾ ಇದು.
ಬಹಿಷ್ಕೃತ ನಟಿಯ ಭಾವತೀವ್ರ ಅಭಿನಯ
ಪತ್ರಕರ್ತರು ನಟಿಯೊಬ್ಬರ ಹೆಸರನ್ನೇ ಉಲ್ಲೇಖಿಸದೆ ವರದಿಗಳನ್ನು ಪ್ರಕಟಿಸುತ್ತಿದ್ದ ಇನ್ನೊಂದು ಪ್ರಸಂಗವೂ ನಡೆದಿತ್ತು.
ಬಿ. ಸರೋಜಾದೇವಿ ಅವರು 1960–61ರಲ್ಲಿ ತಮಿಳು ಚಿತ್ರರಂಗದ ಬಹು ಬೇಡಿಕೆಯ ನಟಿಯಾದರು. ಕರ್ನಾಟಕದಲ್ಲಿನ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಬರುವಂತೆ ಪತ್ರಕರ್ತರು ಅವರನ್ನು ಕರೆದಾಗ, ‘ಚಿತ್ರೀಕರಣ ಬಿಟ್ಟು ಬರುವುದಿಲ್ಲ’ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿಬಿಟ್ಟರು. ಆಗ ಅವರ ಹೆಸರನ್ನು ಸುದ್ದಿಗಳಲ್ಲಿ ಬರೆಯದೇ ಇರಲು ಪತ್ರಕರ್ತರು ನಿರ್ಧರಿಸಿದರು. ಸಂಪಾದಕರೂ ಈ ನಿಲುವಿಗೆ ಒಪ್ಪಿಗೆ ಸೂಚಿಸಿದರು. ಸರೋಜಾದೇವಿ ಅವರ ಹೆಸರನ್ನು ಉಲ್ಲೇಖಿಸದೆ, ಅವರು ಅಭಿನಯಿಸಿದ್ದ ಸಿನಿಮಾಗಳ ಕುರಿತು ಮಾಹಿತಿಯನ್ನು ಕನ್ನಡದ ಪತ್ರಕರ್ತರು ಬರೆಯುತ್ತಿದ್ದರು.
ಅದೇ ಹೊತ್ತಿನಲ್ಲಿ ಬಿ.ಆರ್. ಪಂತುಲು ಅವರು ‘ಕಿತ್ತೂರು ಚೆನ್ನಮ್ಮ’ ಸಿನಿಮಾ ತೆಗೆಯಲು ಮುಂದಾದರು. ಪಾತ್ರಕ್ಕೆ ಸರೋಜಾದೇವಿ ಅವರೇ ಸೂಕ್ತ ಎಂದು ಅವರಿಗೆ ಅನ್ನಿಸಿತ್ತು. ಆದರೆ, ಸುದ್ದಿಮಿತ್ರರು ಅವರ ಹೆಸರನ್ನೇ ಬರೆಯದ ಸಂದರ್ಭದಲ್ಲಿ ಚಿತ್ರಕ್ಕೆ ಅಗತ್ಯ ಪ್ರಚಾರ ಸಿಗದೇಹೋದರೆ ಏನು ಗತಿ ಎಂಬ ಆತಂಕವೂ ಅವರಿಗಿತ್ತು.
ಪಂತುಲು ಬೆಂಗಳೂರಿಗೆ ಬಂದು, ಒಂದು ಪತ್ರಿಕಾಗೋಷ್ಠಿ ಕರೆದರು. ತಮ್ಮ ಮನಸ್ಸಿನಲ್ಲಿ ಇದ್ದ ವಿಷಯವನ್ನು ಪತ್ರಕರ್ತರಿಗೆ ತಿಳಿಸಿ, ಸರೋಜಾದೇವಿ ಅವರು ಆ ಪಾತ್ರಕ್ಕೆ ಬೇಡ ಎನ್ನುವುದಾದರೆ, ಬೇರೆ ನಟಿಯ ಹೆಸರನ್ನು ಸೂಚಿಸುವಂತೆ ಕೇಳಿಕೊಂಡರು. ಆಗ ಸುದ್ದಿಮಿತ್ರರು, ‘ಸರೋಜಾದೇವಿಯವರೇ ಆ ಪಾತ್ರಕ್ಕೆ ಹೊಂದುತ್ತಾರೆ’ ಎಂದು ಹೇಳಿದರು. ಹಾಗೆಂದು, ನಟಿಯ ಮೇಲಿನ ಬಹಿಷ್ಕಾರವನ್ನು ಅವರು ಕ್ಷಮಾಪಣೆ ಕೇಳುವವರೆಗೆ ಮುಂದುವರಿಸುವುದಾಗಿ ಪಟ್ಟು ಹಿಡಿದರು.
ಪತ್ರಕರ್ತರು ತಮ್ಮ ಹೆಸರನ್ನೇ ಚೆನ್ನಮ್ಮನ ಪಾತ್ರಕ್ಕೆ ಸೂಚಿಸಿದ್ದರಿಂದ ಸರೋಜಾದೇವಿ ಅವರ ಮನಸ್ಸು ತುಸು ಕರಗಿತು. ಮೊದಲೇ ಸಿನಿಮಾ ಒಪ್ಪಿಕೊಂಡಿದ್ದರಿಂದ ತಮಿಳುನಾಡಿನಿಂದ ಕರ್ನಾಟಕಕ್ಕೆ ಬಂದು ಸಮಾರಂಭದಲ್ಲಿ ಭಾಗವಹಿಸಲು ಆಗಲಿಲ್ಲವೆಂದೂ, ಅದಕ್ಕಾಗಿ ಕ್ಷಮೆಯಾಚಿಸುವುದಾಗಿಯೂ ಸ್ಪಷ್ಟನೆ ನೀಡಿದರು.
ಈ ಘಟನೆಯ ನಂತರವೇ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಿದ್ದು. ಪತ್ರಕರ್ತರು ತಮ್ಮ ಮೇಲೆ ಇಟ್ಟಿದ್ದ ವಿಶ್ವಾಸ ಸರಿ ಎನ್ನುವುದನ್ನು ಅಭಿನಯದ ಮೂಲಕ ಸರೋಜಾದೇವಿ ಮತ್ತೊಮ್ಮೆ ಸಾಬೀತುಪಡಿಸಿದರು.
‘ಕಿತ್ತೂರು ಚೆನ್ನಮ್ಮ’ ಸಿನಿಮಾದ ‘ನಿಮಗೇಕೆ ಕೊಡಬೇಕು ಕಪ್ಪ’ ಎಂಬ ಸಮರ್ಥವಾದ ಸಂಭಾಷಣೆಯನ್ನು ಅವರು ಹೇಳಿದ್ದ ಧಾಟಿ ನಾಡಿನ ಉದ್ದಗಲಕ್ಕೂ ಅನುರಣಿಸಿತು. ಪಕ್ಕಾ ರಾಷ್ಟ್ರಾಭಿಮಾನಿಯ ಶೈಲಿಯಲ್ಲಿ ಠೀವಿಯಿಂದ ಅವರು ಉಚ್ಚರಿಸಿದ್ದ ಸಾಲುಗಳನ್ನು ಬರೆದಿದ್ದವರು ಜಿ.ವಿ. ಅಯ್ಯರ್.
ಪಂತುಲು ಅವರ ನಿರ್ಮಾಣದಲ್ಲಿ ರಾಜ್ಕುಮಾರ್ ಅಭಿನಯಿಸಿದ ಮೊದಲ ಚಿತ್ರವೂ ಇದೇ ಆಗಿದೆ. ರಾಷ್ಟ್ರಪತಿಗಳ ರಜತ ಕಮಲ ಪ್ರಶಸ್ತಿಯು ‘ಕಿತ್ತೂರು ಚನ್ನಮ್ಮ’ ಚಿತ್ರಕ್ಕೆ ಸಂದಿತು.
ಸಿನಿಮಾ ನೂರು ದಿನ ಓಡಿದ ಮೇಲೆ ಒಂದು ಸಮಾರಂಭ ಏರ್ಪಾಟಾಗಿತ್ತು. ಆ ದಿನದ ಔತಣಕೂಟದಲ್ಲಿ ತಮ್ಮ ಸಮಕ್ಕೂ ಅಭಿನಯಿಸಿದ್ದ ಎಂ.ವಿ. ರಾಜಮ್ಮನವರಿಗೆ ಖುದ್ದು ಸರೋಜಾದೇವಿ ಮೊದಲ ತುತ್ತು ತಿನ್ನಿಸಿದ್ದರು. ಸರೋಜಾದೇವಿ ಅವರ ಅಭಿನಯವನ್ನು ರಾಜಮ್ಮನವರು ಮನದುಂಬಿ ಶ್ಲಾಘಿಸಿದ್ದರು.
ಈಗ ಯಶ್, ನಯನತಾರಾ, ರುಕ್ಮಿಣಿ ವಸಂತ, ಶ್ರದ್ಧಾ ಕಪೂರ್, ನಿರ್ದೇಶಕಿ ಗೀತು ಮೋಹನ್‌ದಾಸ್ ಎಲ್ಲರೂ ಪರಸ್ಪರ ಬೆನ್ನುತಟ್ಟಿಕೊಳ್ಳುತ್ತಿರುವುದು ಸುದ್ದಿಯಾಗುತ್ತಿದೆಯಷ್ಟೆ. ಆಗ ಇಂತಹ ಅಸಂಖ್ಯ ಪ್ರಸಂಗಗಳು ಸಿನಿಮಾ ಪ್ರಚಾರಕ್ಕೆ ಪೂರಕವಾಗಿ ಇರುತ್ತಿದ್ದವು.
ಈಗಿನ ಟ್ರೋಲ್‌ಗಳ ಜಾಗದಲ್ಲಿ ಆಗ ಜನರ ಭೌತಿಕ ಪ್ರತಿಕ್ರಿಯೆಗಳು ವ್ಯಕ್ತಗೊಳ್ಳುತ್ತಿದ್ದುದಕ್ಕೆ ಇಂತಹ ಹಲವಾರು ಉದಾಹರಣೆಗಳು ಸಿಗುತ್ತವೆ.
ನಿಮ್ಮಲ್ಲಿಯೂ ಮರೆಯದ ಪ್ರಚಾರ ತಂತ್ರದ ಪುಟವೊಂದು ಇದ್ದರೆ ನಮಗೆ ನಿಮ್ಮ ಪ್ರತಿಕ್ರಿಯೆಯ ಸಹಿತ ಬರೆದು ಕಳುಹಿಸಿ.