
ಶಹಾಬಾದ್: ಆರು ತಿಂಗಳಾದರೂ ಮುಗಿಯದ ಮುಖ್ಯ ರಸ್ತೆ ಕಾಮಗಾರಿ ಸಮಸ್ಯೆ
ಶಹಾಬಾದ್: ನಗರದ ಲಕ್ಷ್ಮೀ ಗಂಜ್ ಬಡಾವಣೆಯಲ್ಲಿ ನಗರಸಭೆಯ ಉಪ ಖಜಾನೆ ಕಚೇರಿಯಿಂದ ಇಂಗಿನಶೆಟ್ಟಿ ಅವರ ಮನೆಯವರೆಗೂ ಇರುವ ಸಿಸಿ ರಸ್ತೆಯನ್ನು ಅಗೆದು ಹೊಸ ರಸ್ತೆ ನಿರ್ಮಿಸುವ ಕಾಮಗಾರಿಯನ್ನು ಪ್ರಾರಂಭಿಸಿ ಆರು ತಿಂಗಳಾದರೂ ಪೂರ್ಣಗೊಳಿಸಿಲ್ಲ. ಇದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆಯಲ್ಲಿ ಹಾಕಲಾದ ದಪ್ಪ ಪ್ರಮಾಣದ ಜಲ್ಲಿಕಲ್ಲಿನಿಂದ ಜನರ ಸಂಚಾರಕ್ಕೆ ತೊಂದರೆ ಉಂಟಾಗಿ ದಿನನಿತ್ಯ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ನಗರುತ್ಥಾನ ಯೋಜನೆಯಲ್ಲಿ ರಸ್ತೆ ಕಾಮಗಾರಿಗಾಗಿ ₹50 ಲಕ್ಷ ರೂಪಾಯಿಯಲ್ಲಿ 255 ಮೀಟರ್ ರಸ್ತೆ ನಿರ್ಮಿಸಲು ಎನ್. ವಿ. ಕುಲಕರ್ಣಿ ಗುತ್ತೇದಾರ್ ಅವರು ಟೆಂಡರ್ ಮೂಲಕ ಕಾಮಗಾರಿ ಪಡೆದು 6 ತಿಂಗಳ ಹಿಂದೆ ರಸ್ತೆ ಕಾಮಗಾರಿ ಪ್ರಾರಂಭಿಸಿ ಮನಬಂದಂತೆ ಕಾಮಗಾರಿ ಮಾಡಿದ್ದರು. ಈಗ ಸಂಪೂರ್ಣ ಕಾಮಗಾರಿ ಸ್ಥಗಿತ ಮಾಡಿದ್ದಾರೆ. ಸಂಪರ್ಕಿಸಿದದರೂ ಪ್ರತಿಕ್ರಿಯೆ ನೀಡದಂತೆ ನಾಪತ್ತೆ ಆಗಿದ್ದಾರೆ ಎಂದು ಸ್ಥಳೀಯರು ಅಸಹಾಯಕತೆ ವ್ಯಕ್ತಪಡಿಸಿದರು.
ಈ ರಸ್ತೆಯ ಮಾರ್ಗವಾಗಿ ಎರಡು ಖಾಸಗಿ ಶಾಲೆಗಳು ಮತ್ತು ಹರಳಯ್ಯ ನಗರ, ಮಿಲತ್ ನಗರ ಹಾಗೂ ಬಸವೇಶ್ವರನಗರ ಸೇರಿದಂತೆ ಅನೇಕ ಬಡಾವಣೆಗಳಿಗೆ ಸಂಚರಿಸಲು ಮುಖ್ಯರಸ್ತೆ ಬದಲು ಈ ಗಂಜ್ ಏರಿಯಾ ರಸ್ತೆ ಎಲ್ಲರಿಗೂ ಅನುಕೂಲ ಮತ್ತು ಉಪಯುಕ್ತವಾಗಿದೆ.
ಆದರೆ, ಮನ ಬಂದಂತೆ ಎಲ್ಲೆಂದರಲ್ಲಿ ರಸ್ತೆಯನ್ನು ಅಗೆದು ದತ್ತ ಪ್ರಮಾಣದ ಜಲ್ಲಿ ಕಲ್ಲುಗಳು ಹಾಕಿರುವುದರಿಂದ ರಸ್ತೆಗಳಿಗೆ ಓಡಾಡುವ ಶಾಲಾ ವಾಹನಗಳು ದ್ವಿಚಕ್ರ ವಾಹನಗಳ ಟೈರ್‌ಗಳು ಒಡೆದು ಹೋಗುತ್ತಿವೆ. ಸುಗಮವಾಗಿ ಸಂಚರಿಸಲು ತೊಂದರೆ ಆಗುತ್ತಿದ್ದು ಕೆಲವರು ಆಯ ತಪ್ಪಿ ಬೀಳುತ್ತಿದ್ದಾರೆ. ರಸ್ತೆ ಯಾವಾಗ ಪೂರ್ಣಗೊಳ್ಳುತ್ತದೆ ಎಂದು ಕಾದು ನೋಡುತ್ತಿದ್ದಾರೆ.
ಆದರೆ, ಅಧಿಕಾರಿಗಳಾಗಲಿ ಗುತ್ತಿಗೆದಾರರಾಗಲಿ ಇದರ ಬಗ್ಗೆ ಕಿಂಚಿತ್ತು ಕಾಳಜಿ ವಹಿಸದೇ ಜನರಿಗೆ ಎಷ್ಟೇ ತೊಂದರೆ ಆದರೇನು ಬಿಟ್ಟರೆ ನಮಗೇನು ಸಂಬಂಧ ಇಲ್ಲ ಅನ್ನುವ ಮಟ್ಟಿಗೆ ಕೈಕಟ್ಟಿ ಕುಳಿತಿದ್ದಾರೆ.
ಸ್ಥಳೀಯ ವ್ಯಾಪಾರಸ್ಥರಾದ ಮಹೇಶ ಸಚ್ಚಿದಾನಂದ ಹಲವು ಬಾರಿ ನಗರಸಭೆ ಅಧಿಕಾರಿಗಳಿಗೆ ಭೇಟಿಯಾಗಿ ಮನವಿ ಮಾಡಿದ್ದೇನೆ ಆದಷ್ಟು ಬೇಗ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಎಂದು ಕೇಳಿದರು ಯಾವುದೇ ಪ್ರಯೋಜನವಾಗಿಲ್ಲ. ಜನರ ಬಗ್ಗೆ ಯಾವುದು ಕಾಳಜಿಯನ್ನು ವಹಿಸದ ಅಧಿಕಾರಿಗಳು ಬೇಜವಾಬ್ದಾರಿಯಿಂದ ಮಾತನಾಡುತ್ತಾರೆ ಎಂದು ‘ಪ್ರಜಾವಾಣಿ’ಯೊಂದಿಗೆ ಅಳಲನ್ನು ತೋಡಿಕೊಂಡರು.
ಮೇಲಾಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ಸಂಚರಿಸಲು ಅನುಕೂಲ ಮಾಡಿಕೊಡುತ್ತದೆಯೋ ನೋಡಬೇಕಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260816-31-882062379