ಕಾಣದ ಅಭಿವೃದ್ಧಿ: ಆಳಂದ ಪಟ್ಟಣದಲ್ಲಿ ಉದ್ಯಾನಗಳಿಗೆ ಬರ

ಕಾಣದ ಅಭಿವೃದ್ಧಿ: ಆಳಂದ ಪಟ್ಟಣದಲ್ಲಿ ಉದ್ಯಾನಗಳಿಗೆ ಬರ

ಕಾಣದ ಅಭಿವೃದ್ಧಿ: ಆಳಂದ ಪಟ್ಟಣದಲ್ಲಿ ಉದ್ಯಾನಗಳಿಗೆ ಬರ

ಆಳಂದ: ಪಟ್ಟಣದಲ್ಲಿ 20ಕ್ಕೂ ಹೆಚ್ಚು ಹೊಸ ಬಡಾವಣೆಗಳು, 45 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದರೂ ಪಟ್ಟಣದ ಸೌಂದರ್ಯ ಹೆಚ್ಚಿಸುವ ಉದ್ಯಾನಗಳಿಗೆ ಮಾತ್ರ ಬರ ಕಾಡುತ್ತಿದೆ. ಪಟ್ಟಣದಲ್ಲಿ ಪುರಸಭೆಗೆ ಹೇಳಿಕೊಳ್ಳಲು ಒಂದೂ ಉದ್ಯಾನವು ಅಭಿವೃದ್ಧಿ ಕಂಡಿಲ್ಲ.

ಆಳಂದ ಪಟ್ಟಣದ ಸಂಗಾ ಕಾಲೋನಿ, ರೇವಣಸಿದ್ದೇಶ್ವರ ಕಾಲೊನಿ, ದೇಶಮುಖ ಕಾಲೊನಿ, ಶೇರಿಕಾರ ಕಾಲೊನಿ, ನೇಕಾರ ಕಾಲೊನಿ, ಪಾಟೀಲ ಲೇಔಟ್‌ ಸೇರಿದಂತೆ ಹೊಸ ಬಡಾವಣೆಗಳು ತಲೆ ಎತ್ತಿವೆ. ದೊಡ್ಡ ದೊಡ್ಡ ಕಟ್ಟಡಗಳು, ಜನದಟ್ಟಣೆಯುಳ್ಳ ಬಡವಾಣೆಗಳಲ್ಲಿಯೂ ಸುತ್ತಲಿನ ಹಿರಿಯರು, ಮಕ್ಕಳು ಹಾಗೂ ಮಹಿಳೆಯರ ಕನಿಷ್ಠ ವಾಯುವಿಹಾರಕ್ಕೆ, ವಿಶ್ರಾಂತಿ ಸಮಯ ಕಳೆಯಲು ಒಂದು ಉದ್ಯಾನಗಳು ಕಾಣುತ್ತಿಲ್ಲ.

ಪಟ್ಟಣದಲ್ಲಿ 5 ಉದ್ಯಾನಕ್ಕೆ ಮಾತ್ರ ಪುರಸಭೆ ಅನುದಾನದಲ್ಲಿ ತಡೆಗೋಡೆ ಹಾಕಲಾಗಿದೆ. ಸಂಗಾ ಕಾಲೊನಿ, ಸರ್ಕಾರಿ ಆಸ್ಪತ್ರೆ ಮಾರ್ಗದಲ್ಲಿ, ಚೆಕ್‌ ಪೋಸ್ಟ್‌, ಸುಲ್ತಾನಪುರ ಗಲ್ಲಿ ಸಮೀಪದ ಉದ್ಯಾನದಲ್ಲಿ ಪುರಸಭೆ ಗಿಡಮರ ಬೆಳೆಸಿ, ಕಾಂಪೌಂಡ್‌ ನಿರ್ಮಿಸಿ, ಅಗತ್ಯ ನೀರಿನ ವ್ಯವಸ್ಥೆ, ಬೋರವೆಲ್‌ ಹಾಕಿದರೂ ಅದು ಜನಸಾಮಾನ್ಯರಿಗಾಗಿ ಬಳಕೆ ಆಗುತ್ತಿಲ್ಲ. ಪುರಸಭೆಯು ತನ್ನ ವಾಹನಗಳ ನಿಲ್ದಾಣದಂತೆ ಬಳಸುತ್ತಿದೆ. ದಿನಾಲೂ ಮುಖ್ಯಗೇಟ್‌ ಹಾಕಿ, ಒಳಗೆ ಪುರಸಭೆ ಹಳೆಯ, ಹೊಸ ವಾಹನಗಳ ನಿಲುಗಡೆ ತಾಣವಾಗಿ ಮಾರ್ಪಟ್ಟಿದೆ.

ಆರ್‌.ಎಸ್‌ ಕಾಲೊನಿ, ಸಂಗಾ ಕಾಲೊನಿಯಲ್ಲಿನ ಉದ್ಯಾನಗಳಿಗೂ ಪುರಸಭೆ ಅನುದಾನದಲ್ಲಿ ಅಗತ್ಯ ಕಾಂಪೌಂಡ್‌, ನೀರಿನ ವ್ಯವಸ್ಥೆ ಅಳವಡಿಸಿದರೂ ಅದು ಅಭಿವೃದ್ಧಿ ಕಂಡಿಲ್ಲ.

ಪಟ್ಟಣದಲ್ಲಿನ ಬಂಗಡೀಪೀರ್‌, ಶಶಾಂಕ್‌ ಲೇಔಟ್‌ ಸೇರಿದಂತೆ 20ಕ್ಕೂ ಹೆಚ್ಚು ಹೊಸ ಬಡಾವಣೆಗಳು ನಿರ್ಮಾಣವಾದರೂ ಉದ್ಯಾನಗಳು ಕಾಣುತ್ತಿಲ್ಲ. ಸುತ್ತಲೂ ಕಾಂಪೌಂಡ್‌ ಸಹ ನಿರ್ಮಿಸಿಲ್ಲ. ಪಟ್ಟಣದ ಹಳೆಯ ಬಡವಾಣೆಗಳಲ್ಲಿ ಉದ್ಯಾನಗಳಿಗಾಗಿ ಸ್ಥಳ ನಿಗದಿಯಾಗಿಲ್ಲ. ಹೊಸ ಬಡಾವಣೆಗಳಲ್ಲಿ ಉದ್ಯಾನಕ್ಕಾಗಿ ಸ್ಥಳ ನಿಗದಿ ಮಾಡಿದ್ದರೂ ಸರ್ಕಾರದ ವಿವಿಧ ಕಚೇರಿ, ವಸತಿ ನಿಲಯ ನಿರ್ಮಿಸಲಾಗುತ್ತಿದೆ.

ಹೊಸ ಬಡವಣೆ ನಿರ್ಮಾಣ ಹಂತದಲ್ಲಿ ಶೇ 10ರಷ್ಟು ಉದ್ಯಾನಕ್ಕೆ ಸ್ಥಳ ಗುರುತಿಸಿ ನಿಗದಿ ಪಡಿಸಿದರೂ ಅದು ಕಾಮಗಾರಿ ಹಂತಕ್ಕೆ ಬರುತ್ತಿಲ್ಲ. ಪುರಸಭೆ ಅನುದಾನದ ಕೊರತೆಯಿಂದ ಹೆಚ್ಚಿನ ಉದ್ಯಾನದ ನಿವೇಶನಗಳು ಗಿಡಗಂಟಿ, ತ್ಯಾಜ್ಯ ಬೀಸಾಡುವ ಸ್ಥಳವಾಗಿ ಮಾರ್ಪಟ್ಟಿವೆ.

ಉದ್ಯಾನವಿಲ್ಲದೆ ವಯೋವೃದ್ಧರು ಸರ್ಕಾರಿ ಬಾಲಕರ ಕಾಲೇಜು ಆವರಣ, ಲಿಂಗಾಯತ ಭವನ, ಗುರುಭವನ, ಶರಣ ಮಂಟಪ, ಹನುಮಾನ ಮಂದಿರದಲ್ಲಿ ವಿಶ್ರಾಂತಿ ಪಡೆದು ಮನೆಗಳಿಗೆ ತೆರಳುವ ಸ್ಥಿತಿ ಇದೆ. ವಾಯುವಿಹಾರ, ವಾಕಿಂಗ್‌ಕ್ಕೆ ಮಹಿಳೆಯರು ರಸ್ತೆಗಳನ್ನು ಅವಲಂಬಿಸಿದ್ದಾರೆ. ಮಕ್ಕಳಿಗೆ ಆಟ, ಮನರಂಜನೆಗೆ ಸ್ಥಳವಿಲ್ಲ. ಹೀಗಾಗಿ ಮನೆಯ ಮುಂದೆ, ರಸ್ತೆಗಳು ಮಕ್ಕಳ ಆಟೋಟ, ಮನರಂಜನೆ ತಾಣಗಳಾಗಿ ಮಾರ್ಪಟ್ಟಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-31-2100931932

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ