
ಕಲಬುರಗಿ | ಅಭಿವೃದ್ಧಿ ಗೌಣ: ದನಗಳ ದೊಡ್ಡಿಯಾದ ಉದ್ಯಾನದ ತಾಣ
ಕಲಬುರಗಿ: ಮಹಾನಗರ ಪಾಲಿಕೆಯ ವ್ಯಾಪ್ತಿಯ ಹಲವು ಬಡಾವಣೆಗಳಲ್ಲಿ ಉದ್ಯಾನಗಳಿಗೆ ಒಂದಿಷ್ಟು ಜಾಗವೇನೋ ಕಾಯ್ದಿರಿಸಲಾಗಿದೆ. ಆದರೆ, ಅವು ಅನಾಥ ಮಕ್ಕಳಂತೆ ದಿವ್ಯ ನಿರ್ಲಕ್ಷ್ಯಕ್ಕೆ ತುತ್ತಾಗಿವೆ. ಅಲ್ಲಿ ಅಭಿವೃದ್ಧಿ ಗೌಣವಾಗಿದೆ.
ಚಿಣ್ಣರ ಕಲರವ, ಯುವಜನರ ಆರೋಗ್ಯಕರ ಚಟುವಟಿಕೆಗೆ ವೇದಿಕೆಯಾಗಬೇಕಿದ್ದ ಉದ್ಯಾನಗಳು ಪಾಳು ಬಿದ್ದಿವೆ. ಕೆಲವು ಉದ್ಯಾನಗಳು ತ್ಯಾಜ್ಯ ಸುರಿಯುವ ತಾಣಗಳಾದರೆ, ಮತ್ತೆ ಕೆಲವು ದನಗಳ ದೊಡ್ಡಿಗಳಾಗಿ ಬದಲಾಗಿವೆ. ಕಸ–ಮುಳ್ಳು ಕಂಟಿ ಬೆಳೆದು ಕಾಲಿಡಲೂ ಹೆದರುವಂತಾಗಿದೆ. ನಾಗರಿಕರ ಮನಸ್ಸಿನ ಆಹ್ಲಾದಕ್ಕೆ ಕಾರಣವಾಗಬೇಕಿದ್ದ ಉದ್ಯಾನಗಳು ಅಕ್ಷರಶಃ ನೆಮ್ಮದಿ ಕೆಡಿಸುತ್ತಿವೆ.
ಕೋಟನೂರ (ಡಿ) ಪ್ರದೇಶದ ಧರಿಯಾಪುರ ಜಿಡಿಎ ಬಡಾವಣೆಯ ಉದ್ಯಾನ ದುಸ್ಥಿತಿಯಲ್ಲಿ ಇದೆ. ವರ್ಷಗಳ ಹಿಂದೆ ನೆಟ್ಟ ಗಿಡಗಳೇ ನೆರಳು ಚೆಲ್ಲಿವೆ. ಆದರೆ, ಅದು ಉದ್ಯಾನದ ಸ್ವರೂಪದಲ್ಲಿ ಉಳಿದಿಲ್ಲ. ದನಗಳ ದೊಡ್ಡಿಯಾಗಿ ಪರಿವರ್ತನೆಯಾಗಿದೆ. ಅಲ್ಲೇ ಎಮ್ಮೆ–ಹಸು ಕಟ್ಟಲಾಗಿದೆ. ಅದಕ್ಕೆ ಬೇಕಾದ ಮೇವಿನ ಬಣವೆಯನ್ನೂ ಒಟ್ಟಲಾಗಿದೆ. ಕೂರಲು ಬೆಂಚ್ ಬಿಡಿ, ಗೇಟ್ ಹಾಕುವವರೂ ದಿಕ್ಕಿಲ್ಲ.
ಪಿ ಅಂಡ್ ಟಿ ಕಾಲೊನಿಯ ಗಾಬರೆ ಬಡಾವಣೆಯ ವೆಂಕಟೇಶ ರಾಮಯ್ಯ ಯರಗೋಳ ಸ್ಮಾರಕ ಸರ್ಕಾರಿ ಶಾಲೆ ಪಕ್ಕದ ಉದ್ಯಾನ ಬೆಂಗಾಡಿನಂತೆ ಭಾಸವಾಗುತ್ತಿದೆ. ಮರಗಳು ಮುಗಿಲೆತ್ತರಕ್ಕೆ ಬೆಳೆದು ನೆರಳು ಚೆಲ್ಲಿವೆ. ಆದರೆ ಇಡೀ ಆವರಣ ಕಲ್ಲಿನ ರಾಶಿ, ತೆಗ್ಗುಗಳಿಂದ ಕೂಡಿದೆ. ಉದ್ಯಾನ ಒಂದು ಪಾರ್ಶ್ವದಲ್ಲಿ ತ್ಯಾಜ್ಯ ತಂದು ಸುರಿಯುವುದು ಮಾಮೂಲಿಯಾಗಿದೆ.
‘ಈ ಉದ್ಯಾನದಲ್ಲಿ ಮೊದಲೆಲ್ಲ ಕೆಲವರು ದನ ಮೇಯಿಸುತ್ತಿದ್ದರು. ಬಡಾವಣೆ ಜನರು ಸೇರಿ ಅದನ್ನು ಬಿಡಿಸಿ ಗೇಟ್‌ಗೆ ಬೀಗ ಜಡಿದಿದ್ದಾರೆ. ಆದರೆ, ಯಾರೂ ಅದನ್ನು ಅಭಿವೃದ್ಧಿಪಡಿಸುವ ಮನಸು ಮಾಡಿಲ್ಲ. ಪಾಲಿಕೆ ಅಧಿಕಾರಿಗಳಿಗಂತೂ ಇತ್ತ ಸುಳಿಯುವುದೇ ಇಲ್ಲ. ಮನೆ ಪಕ್ಕದಲ್ಲೇ ಉದ್ಯಾನವಿದ್ದರೂ, ವಾಕಿಂಗ್‌ಗೆ ದೂರ ಹೋಗುವುದು ಅನಿವಾರ್ಯವಾಗಿದೆ’ ಎಂದು ಬಡಾವಣೆಯ ಮಹಿಳೆಯೊಬ್ಬರು ಬೇಸರಿಸುತ್ತಾರೆ.
ಧರಿಯಾಪುರ ಜಿಡಿಎ ಬಡಾವಣೆ, ಲುಕ್ಮನ್ ಕಾಲೇಜು ಪ್ರದೇಶ ಉದ್ಯಾನಗಳಲ್ಲಿ ಮುಳ್ಳು ಕಂಟಿ ಬೆಳೆದಿದೆ. ಮಕ್ಕಳ ಆಟಿಕೆಗಳು ಮೂಲೆಗುಂಪಾಗಿವೆ. ನವಜೀವನ ನಗರ, ಈಶ್ವರ ನಗರ, ಮಹಾದೇವಪ್ಪ ರಾಂಪುರೆ ಬಡಾವಣೆ ಸೇರಿದಂತೆ ಸುತ್ತಲಿನ ಬಡಾವಣೆಗಳ ಉದ್ಯಾನಗಳ ಸ್ಥಿತಿಯೂ ಇದೇ ಬಗೆಯದು. ಹಳೇ ಜೇವರ್ಗಿ ರಸ್ತೆಯ ಗಣೇಶ ನಗರದ ಉದ್ಯಾನ ಆಟಿಕೆಗಳು ಮುರಿದಿವೆ. ನಡಿಗೆ ಪಥವೂ ಇಲ್ಲ.
‘ಕೋಟನೂರು–ಧರಿಯಾಪುರ ಬಡಾವಣೆಯ ಪ್ರದೇಶ ಸ್ಥಿತಿಯು ಜಿಡಿಎ–ಪಾಲಿಕೆಯ ನಿರ್ಲಕ್ಷ್ಯಕ್ಕೆ ಒಳಗಾದ ಅನಾಥ ಮಗುವಿನಂತಾಗಿದೆ. ಕರ್ನಾಟಕ ಹೌಸಿಂಗ್ ಬೋರ್ಡ್, ಜಿಡಿಎ ಖುದ್ದು ಬಡಾವಣೆ ನಿರ್ಮಿಸಿದರೂ ಇಂದಿಗೂ ಪಾರ್ಕ್‌ಗಳು ಸೇರಿದಂತೆ ಮೂಲಸೌಕರ್ಯಗಳಿಗೆ ಪರದಾಡುವಂತಾಗಿದೆ. ರಸ್ತೆಗಳ ಸ್ಥಿತಿ ಅಯೋಮಯವಾಗಿದೆ. ಪಾರ್ಕ್‌ಗಳ ಪರಿಸ್ಥಿತಿಯಂತೂ ಕೇಳುವವರೇ ಇಲ್ಲ. ಹೆಸರಿಗೆ ಉದ್ಯಾನ ಎಂದು ಕಾಂಪೌಂಡ್ ಕಟ್ಟಿದ್ದಾರೆ. ಅದರಲ್ಲಿ ಗಿಡ–ಮರಗಳ ಹಸಿರಾಗಲಿ, ನಡಿಗೆಗಾಗಿ ವಾಕಿಂಗ್ ಪಾಥ್ ಆಗಲಿ, ಕೂರಲು ಆಸನಗಳಾಗಲಿ ಕಾಣಲ್ಲ’ ಎಂದು ಜಿಡಿಎ ಮಹಾದೇವಪ್ಪ ರಾಂಪುರೆ ಬಡಾವಣೆಯ ಸ್ಪಂದನ ನಾಗರಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಾಬುರಾವ ಕುಲಕರ್ಣಿ ಬೇಸರಿಸುತ್ತಾರೆ.
‘ಉದ್ಯಾನದ ಜಾಗದಲ್ಲಿ ಮುಳ್ಳು–ಕಂಟಿ ಬೆಳೆದಿವೆ. ಅನೈರ್ಮಲ್ಯದಿಂದ ಹುತ್ತಗಳೂ ತಲೆಎತ್ತಿವೆ. ಹಾವು–ಚೇಳುಗಳ ಬಾಧೆ ಸಾಮಾನ್ಯವಾಗಿದೆ. ಈ ಭಾಗದಲ್ಲಿ ಒಟ್ಟು 9 ಹಾಸ್ಟೆಲ್‌ಗಳಿವೆ. ಬಡಾವಣೆಗಳ ಉದ್ಯಾನಗಳನ್ನು ಅಭಿವೃದ್ಧಿಪಡಿಸಿ, ಬೆಂಚ್ ಅಳವಡಿಸಿದರೆ, ಸಾವಿರಾರು ವಿದ್ಯಾರ್ಥಿಗಳು, ಬಡಾವಣೆಯ ನಾಗರಿಕರ ವಾಕಿಂಗ್‌ಗೆ ನೆರವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-34-64517214