
ದುಬಾರಿಯಾದ ಬೆಣ್ಣೆ, ಡಾಲ್ಡ: ಪ್ರತಿ ಕೆ.ಜಿ.ತುಪ್ಪದ ದರ ₹15ರಿಂದ ₹25ರವರೆಗೆ ಏರಿಕೆ
ಚಿಕ್ಕಮಗಳೂರು: ತುಪ್ಪ, ಬೆಣ್ಣೆ, ಡಾಲ್ಡಾ, ಮೊಟ್ಟೆ ಹಾಗೂ ವಾಣಿಜ್ಯ ಬಳಕೆಯೆ ಸಿಲಿಂಡರ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಬೇಕರಿ ಉದ್ಯಮದ ಮೇಲೆ ಪರಿಣಾಮ ಬೀರಿದೆ.
ಹಾಲಿನ ಉತ್ಪನ್ನಗಳನ್ನು ಗೃಹಬಳಕೆಯ ಜೊತೆ ಬೇಕರಿಗಳಲ್ಲಿ ಸಿಹಿ ತಿಂಡಿ ತಯಾರಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯಾಗಿರುವುದು ಬೇಕರಿ ಉದ್ಯಮದ ಮೇಲೆ ದೊಡ್ಡ ಹೊರೆ ಬಿದ್ದಿದೆ.
ಪ್ರತಿ ಕೆ.ಜಿ. ತುಪ್ಪದ ದರ ₹15ರಿಂದ ₹25ರವರೆಗೆ ಏರಿಕೆಯಾಗಿದ್ದು, ಬೆಣ್ಣೆ ದರ ಪ್ರತಿ ಕೆ.ಜಿಗೆ ₹22ರಿಂದ ₹30ರವರೆಗೆ ಹೆಚ್ಚಾಗಿದೆ. ಡಾಲ್ಡಾ ದರದಲ್ಲೂ ಪ್ರತಿ ಕೆ.ಜಿಗೆ ₹30 ಏರಿಕೆಯಾಗಿದೆ. ಮೊಟ್ಟೆ ದರವೂ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಏರಿಕೆಯಾಗುತ್ತಿದ್ದು, ಒಂದು ಮೊಟ್ಟೆಯ ದರ ₹7.25ಕ್ಕೆ ತಲುಪಿದೆ.
ಬೇಕರಿಗಳಲ್ಲಿ ತುಪ್ಪ, ಬೆಣ್ಣೆ, ಡಾಲ್ಡಾ ಸೇರಿದಂತೆ ಹಾಲಿನ ಉತ್ಪನ್ನಗಳನ್ನು ಬಳಸಿ ಮೈಸೂರು ಪಾಕ್, ಪೇಡಾ, ಹಲ್ವಾ, ಬಿಸ್ಕತ್, ಕೇಕ್, ಬರ್ಫಿ, ಪನ್ನೀರ್, ಕೋವಾ ಸೇರಿದಂತೆ ಹಲವು ಸಿಹಿ ತಿನಿಸುಗಳನ್ನು ತಯಾರಿಸಲಾಗುತ್ತದೆ.
ಕಳೆದ ತಿಂಗಳು 1 ಕೆ.ಜಿ. ತುಪ್ಪದ ಬೆಲೆ ₹700 ಇದ್ದು, ಇದೀಗ ₹725ಕ್ಕೆ ಏರಿಕೆಯಾಗಿದೆ. ಬೆಣ್ಣೆಯ ದರ ಕಳೆದ ತಿಂಗಳು ಪ್ರತಿ ಕೆ.ಜಿಗೆ ₹610 ಇದ್ದು, ಇದೀಗ ₹630ಕ್ಕೆ ತಲುಪಿದೆ. ನಿರಂತರವಾಗಿ ಬೆಲೆ ಏರಿಕೆಯಾಗುತ್ತಿರುವುದರಿಂದ ಬೇಕರಿಗಳಲ್ಲಿ ಸಿಹಿ ತಿಂಡಿ-ತಿನಿಸು ತಯಾರಿಕೆ ವೆಚ್ಚ ಹೆಚ್ಚಾಗಿದೆ ಎಂದು ಬೇಕರಿ ಮಾಲೀಕರೊಬ್ಬರು ತಿಳಿಸಿದರು.
ಸಕ್ಕರೆ ದರದಲ್ಲೂ ಪ್ರತಿ ಕೆ.ಜಿಗೆ ₹10 ಏರಿಕೆಯಾಗಿದೆ. ಮೈದಾ ಹಿಟ್ಟಿನ ದರ ಕೆ.ಜಿಗೆ ₹35ರಿಂದ ₹50ರವರೆಗೆ ಇದೆ. ಮೊಟ್ಟೆಯ ಸಗಟು ದರ ₹6.80 ಹಾಗೂ ಚಿಲ್ಲರೆ ದರ ₹7.20 ಇದೆ. ಇದರೊಂದಿಗೆ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಏರಿಕೆಯಾಗಿರುವುದು ಬೇಕರಿ ಉದ್ಯಮಕ್ಕೆ ಮತ್ತಷ್ಟು ಹೊರೆ ತಂದಿದೆ ಎಂದರು.
ಹಿಂದೆ ಬೇಕರಿ ತಿನಿಸುಗಳ ತಯಾರಿಕೆಗೆ ಅಗತ್ಯವಾದ ದಿನಸಿ ಸಾಮಗ್ರಿಗಳನ್ನು ಒಂದು ತಿಂಗಳಿಗೂ ಹೆಚ್ಚು ಕಾಲ ಬಳಕೆಯಾಗುವಂತೆ ಮುಂಚಿತವಾಗಿಯೇ ಖರೀದಿಸಿ ಸಂಗ್ರಹಿಸಲಾಗುತ್ತಿತ್ತು. ಆದರೆ, ಬೆಲೆ ಏರಿಕೆಯಿಂದಾಗಿ ಸಾಮಗ್ರಿಗಳನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಒಂದು ತಿಂಗಳಿಗೆ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನು ಖರೀದಿಸಲು ಹೆಚ್ಚಿನ ಹಣ ಬೇಕಾಗುತ್ತಿದೆ ಎಂದು ಬೇಕರಿ ಮಾಲೀಕರು ಅಳಲು ತೋಡಿಕೊಂಡರು.
ನಿರಂತರ ಬೆಲೆ ಏರಿಕೆಯಿಂದ ಬೇಕರಿ ತಿನಿಸುಗಳ ತಯಾರಿಕೆ ವೆಚ್ಚ ಹೆಚ್ಚಾಗುತ್ತಿದೆ. ಆದರೆ, ಗ್ರಾಹಕರಿಗೆ ಹೊರೆಯಾಗದಂತೆ ಸದ್ಯಕ್ಕೆ ಹಿಂದಿನ ದರದಲ್ಲೇ ತಿನಿಸುಗಳನ್ನು ಮಾರಾಟ ಮಾಡಲಾಗುತ್ತಿದೆ. ಏಕಾಏಕಿ ದರ ಹೆಚ್ಚಿಸಿದರೆ ಗ್ರಾಹಕರು ದೂರವಾಗುವ ಸಾಧ್ಯತೆ ಇರುವುದರಿಂದ ಸದ್ಯ ದರ ಹೆಚ್ಚಿಸಿಲ್ಲ. ಮುಂದಿನ ದಿನಗಳಲ್ಲಿ ಕೆಲವು ತಿನಿಸುಗಳ ಬೆಲೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.
ಹಾಲಿನ ಉತ್ಪನ್ನಗಳು, ದಿನಸಿ ಸಾಮಗ್ರಿಗಳು, ಮೊಟ್ಟೆ ಹಾಗೂ ವಾಣಿಜ್ಯ ಅನಿಲ ಸೇರಿದಂತೆ ಬೇಕರಿ ತಿನಿಸುಗಳ ತಯಾರಿಕೆಗೆ ಅಗತ್ಯವಾದ ಬಹುತೇಕ ವಸ್ತುಗಳ ಬೆಲೆ ಹೆಚ್ಚಾಗಿದೆ. ಇದರಿಂದ ಸಿಹಿ ತಿನಿಸುಗಳ ತಯಾರಿಕೆ ವೆಚ್ಚ ಹೆಚ್ಚಾಗಿದ್ದರೂ ಗ್ರಾಹಕರಿಗೆ ಹೊರೆಯಾಗದಂತೆ ಸದ್ಯಕ್ಕೆ ಹಿಂದಿನ ದರದಲ್ಲೇ ತಿನಿಸುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಬೇಕರಿ ಮಾಲೀಕರು ತಿಳಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-126-2039731151