
ಹನುಮಸಾಗರ: ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ
ಹನುಮಸಾಗರ: ಹನುಮಸಾಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನ್ಯಾಯಬೆಲೆ ಅಂಗಡಿಗಳಲ್ಲಿ ತಾಂತ್ರಿಕ ದೋಷದಿಂದ ನಿಧಾನಗತಿಯ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದ್ದು, ಪಡಿತರ ವಿತರಕರು ಹಾಗೂ ಗ್ರಾಹಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಆಹಾರ ಇಲಾಖೆಯ ಪಡಿತರ ವಿತರಣಾ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷಗಳನ್ನು ಶೀಘ್ರವಾಗಿ ಸರಿಪಡಿಸುವಂತೆ ನ್ಯಾಯಬೆಲೆ ಅಂಗಡಿ ವಿತರಕರು ಒತ್ತಾಯಿಸಿದ್ದಾರೆ.
ಪಡಿತರ ವಿತರಣೆ ಸಂದರ್ಭದಲ್ಲಿ ಸರ್ವರ್ ಬಹಳ ನಿಧಾನವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಗ್ರಾಹಕರ ಆಧಾರ್ ದೃಢೀಕರಣ, ಬೆರಳಚ್ಚು ಪರಿಶೀಲನೆ ಸೇರಿದಂತೆ ವಿವಿಧ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಗಂಟೆಗಟ್ಟಲೇ ಸಮಯ ಬೇಕಾಗುತ್ತಿದೆ. ಕೆಲವೊಮ್ಮೆ ಸರ್ವರ್ ಸಂಪರ್ಕ ಕಡಿತಗೊಳ್ಳುವುದರಿಂದ ಹಲವು ಬಾರಿ ಪ್ರಯತ್ನಿಸಿದರೂ ಪಡಿತರ ವಿತರಣೆ ಸಾಧ್ಯವಾಗದ ಪರಿಸ್ಥಿತಿ ಇದೆ.
ಇದರ ಜೊತೆಗೆ ಇ-ಕೆವೈಸಿ ಪ್ರಕ್ರಿಯೆಯಲ್ಲಿಯೂ ತಾಂತ್ರಿಕ ತೊಂದರೆ ಎದುರಾಗುತ್ತಿದ್ದು, ಗ್ರಾಹಕರು ನ್ಯಾಯಬೆಲೆ ಅಂಗಡಿಗಳಿಗೆ ಪದೇಪದೇ ಅಲೆದಾಡುವಂತಾಗಿದೆ. ಗ್ರಾಮೀಣ ಪ್ರದೇಶದಲ್ಲಿ ದಿನಗೂಲಿ ಕೆಲಸವನ್ನೇ ಅವಲಂಬಿಸಿರುವ ಜನರು ಕೆಲಸ ಬಿಟ್ಟು ಪಡಿತರ ಪಡೆಯಲು ಕಾಯಬೇಕಾಗಿದೆ.
ಸರ್ವರ್ ಸಮಸ್ಯೆಯಿಂದ ಗ್ರಾಹಕರ ಅಸಮಾಧಾನವನ್ನು ನ್ಯಾಯಬೆಲೆ ಅಂಗಡಿ ಮಾಲೀಕರೇ ಎದುರಿಸಬೇಕಾಗಿದೆ. ತಾಂತ್ರಿಕ ದೋಷ ತಮ್ಮ ವ್ಯಾಪ್ತಿಗೆ ಬಾರದಿದ್ದರೂ ಗ್ರಾಹಕರ ಆಕ್ರೋಶಕ್ಕೆ ಪಡಿತರ ವಿತರಕರು ಗುರಿಯಾಗುತ್ತಿದ್ದಾರೆ. ಮತ್ತೊಂದೆಡೆ, ವಿತರಕರಿಗೆ ದೊರೆಯಬೇಕಾದ ಕಮಿಷನ್ ಪಾವತಿಯಲ್ಲಿಯೂ ವಿಳಂಬವಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಪಡಿತರ ವಿತರಕರು ದಿನನಿತ್ಯ ಸರ್ವರ್ ಸಮಸ್ಯೆ, ಇ-ಕೆವೈಸಿ ತೊಂದರೆ ಹಾಗೂ ಗ್ರಾಹಕರ ಒತ್ತಡದಿಂದ ಕೆಲಸ ನಿರ್ವಹಿಸಲು ಪರದಾಡುವಂತಾಗಿದೆ. ಹೀಗಾಗಿ ಆಹಾರ ಇಲಾಖೆಯ ತಾಂತ್ರಿಕ ವಿಭಾಗದ ಅಧಿಕಾರಿಗಳು ಸಮಸ್ಯೆಯ ಮೂಲ ಕಾರಣ ಪತ್ತೆಹಚ್ಚಿ, ಸರ್ವರ್ ಸಾಮರ್ಥ್ಯ ಹೆಚ್ಚಿಸುವುದು, ತಾಂತ್ರಿಕ ದೋಷಗಳನ್ನು ಶಾಶ್ವತವಾಗಿ ಪರಿಹರಿಸುವುದು ಹಾಗೂ ಇ-ಕೆವೈಸಿ ಪ್ರಕ್ರಿಯೆಯನ್ನು ಸುಗಮಗೊಳಿಸುವ ಕ್ರಮ ಕೈಗೊಳ್ಳಬೇಕು ಎಂದು ವಿತರಕರು ಆಗ್ರಹಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260822-35-1119589300