
ಬಿಡದಿ ಟೌನ್‌ಶಿಪ್ ವಿರುದ್ಧ ರಣಕಹಳೆ: ಸಿಎಂ ಡಿಕೆಶಿ ವಿರುದ್ಧ ಎಚ್‌ಡಿಕೆ ವಾಗ್ದಾಳಿ
ರಾಮನಗರ: ತಾಲ್ಲೂಕಿನ ಬಿಡದಿಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ (ಜಿಬಿಐಟಿ) ವಿರುದ್ಧ ರಣಕಹಳೆ ಊದಿರುವ ಜೆಡಿಎಸ್, ಟೌನ್‌ಶಿಪ್ ವಿರೋಧಿಸಿ ಬೈರಮಂಗಲದಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದವರೆಗೆ ಹಮ್ಮಿಕೊಂಡಿರುವ ಮೂರು ದಿನಗಳ ಪಾದಯಾತ್ರೆಗೆ ಭಾನುವಾರ ಚಾಲನೆ ಸಿಕ್ಕಿತು.
ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಸಮರಕ್ಕಿಳಿದಿರುವ ಜೆಡಿಎಸ್, ಯೋಜನಾ ಪ್ರದೇಶದಲ್ಲಿ ಈಗಾಗಲೇ ಪಕ್ಷದ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೂನ್‌ನಲ್ಲಿ ಪಾದಯಾತ್ರೆ ನಡೆಸಿದೆ. ಅದಾದ ಒಂದೂವರೆ ತಿಂಗಳಲ್ಲಿ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳುವ ಮೂಲಕ ಸರ್ಕಾರಕ್ಕೆ ತಿರುಗೇಟು ನೀಡಲು ಮುಂದಾಗಿದೆ.
ಕಾರ್ಯಕರ್ತರ ಸಮೂಹದ ಮಧ್ಯೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರೈತರೊಂದಿಗೆ ತೆಂಗಿನ ಮರಕ್ಕೆ ನೀರೆರೆಯುವ ಮೂಲಕ ಪಾದಯಾತ್ರೆಗೆ ಮಧ್ಯಾಹ್ನ ಚಾಲನೆ ನೀಡಿದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಸೇರಿದಂತೆ ಜೆಡಿಎಸ್ ನಾಯಕರು ಸಾಥ್ ನೀಡಿದರು.
ಪಾದಯಾತ್ರೆ ಮಾರ್ಗದುದ್ದಕ್ಕೂ ‘ನಮ್ಮ ಭೂಮಿ, ನಮ್ಮ ಹಕ್ಕು’, ‘ಜೀವ ಬಿಟ್ಟೇವು, ಭೂಮಿ ಕೊಡೆವು’, ‘ರಿಯಲ್ ಎಸ್ಟೇಟ್ ಯೋಜನೆಗೆ ಧಿಕ್ಕಾರ’ ಎಂಬ ಘೋಷಣೆಗಳು ಮೊಳಗಿದವು. ವೈವಿಧ್ಯಮಯ ಪ್ರತಿಭಟನಾ ಫಲಕಗಳು ಹಾಗೂ ನಾಯಕರ ಫ್ಲೆಕ್ಸ್‌ಗಳು ರಸ್ತೆಯುದ್ದಕ್ಕೂ ಗಮನ ಸೆಳೆದವು. ಸಂಜೆ ಕೆಲ ಹೊತ್ತು ಸುರಿದ ಮಳೆ ಲೆಕ್ಕಿಸದ ಕಾರ್ಯಕರ್ತರು ಉತ್ಸಾಹದಿಂದ ನಾಯಕರೊಂದಿಗೆ ಹೆಜ್ಜೆ ಹಾಕಿದರು.
ಬಿಡದಿ ಕೈಗಾರಿಕಾ ಪ್ರದೇಶದ ಜೋಗರದೊಡ್ಡಿಯಲ್ಲಿ ಊಟದ ವಿರಾಮ ಪಡೆದ ಮುಖಂಡರು, ಸಂಜೆ 6 ಗಂಟೆ ಸುಮಾರಿಗೆ ಬಿಡದಿ ತಲುಪುವುದರೊಂದಿಗೆ ಮೊದಲ ದಿನದ 8 ಕಿ.ಮೀ. ಪಾದಯಾತ್ರೆ ಮುಗಿಸಿದರು. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಬಂದಿದ್ದರಿಂದ ಮಾರ್ಗದುದ್ದಕ್ಕೂ ಸಂಚಾರ ದಟ್ಟಣೆ ಉಂಟಾಯಿತು.
ಪಾದಯಾತ್ರೆ ಬೆಂಗಳೂರು–ಮೈಸೂರು ರಸ್ತೆ ತಲುಪುವವರೆಗೆ ಬೆಳಗ್ಗೆಯಿಂದ ಸಂಜೆವರೆಗೆ ಬಿಡದಿ–ಹಾರೋಹಳ್ಳಿ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಆಗಿತ್ತು. ಬಂದೋಬಸ್ತ್‌ಗಾಗಿ 1,200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.
ಬೆಳಗ್ಗೆ 10.30ಕ್ಕೆ ಶುರುವಾಗಬೇಕಿದ್ದ ಪಾದಯಾತ್ರೆ ಮಧ್ಯಾಹ್ನ 1.30ಕ್ಕೆ ಆರಂಭಗೊಂಡಿತು. ಜೆಡಿಎಸ್ ಸಂಸದ ಮಲ್ಲೇಶ್ ಬಾಬು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಬಿಜೆಪಿಯ ಜಿಲ್ಲಾ ಘಟಕ ಹಾಗೂ ಸ್ಥಳೀಯ ಪದಾಧಿಕಾರಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಎರಡನೇ ದಿನದ ಪಾದಯಾತ್ರೆ ಬಿಡದಿ ಬಿಜಿಎಸ್ ವೃತ್ತದಿಂದ ಸೋಮವಾರ ಆರಂಭಗೊಂಡು ನೈಸ್ ರಸ್ತೆ ಜಂಕ್ಷನ್‌ವರೆಗೆ ಸಾಗಲಿದೆ.
ಟೌನ್‌ಶಿಪ್ ಬೇಡ ಎಂದು ವರದಿ ಕೊಟ್ಟಿದ್ದ ಡಿಕೆಶಿ: ಎಚ್‌ಡಿಕೆ ಕಿಡಿ
‘ಬೆಂಗಳೂರಿನ ಮೇಲೆ ಒತ್ತಡ ತಗ್ಗಿಸಲು 2006ರಲ್ಲಿ 5 ಉಪನಗರ ನಿರ್ಮಾಣಕ್ಕೆ ನಾನು ನಿರ್ಧರಿಸಿ ಅಧಿವೇಶನದಲ್ಲಿ ಪ್ರಸ್ತಾವ ಮಂಡಿಸಿದ್ದೆ. ಆದರೆ ಅಧಿಸೂಚನೆ ಹೊರಡಿಸಿರಲಿಲ್ಲ. ಆಗ ಇದೇ ಡಿ.ಕೆ.ಶಿವಕುಮಾರ್ ಯೋಜನೆ ವಿರೋಧಿಸಿದ್ದರು. ಬಳಿಕ ಶಿವಕುಮಾರ್ ಸೇರಿದಂತೆ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಸತ್ಯಶೋಧನ ಸಮಿತಿ ರಚಿಸಲಾಯಿತು. ಈ ಭಾಗದ ಕೃಷಿ ಸೇರಿದಂತೆ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿದ್ದು ಇದೇ ಮಹಾನುಭಾವ. ಟೌನ್‌ಶಿಪ್ ಬೇಡ ಎಂದು ವರದಿ ಕೊಟ್ಟಿದ್ದರು. ಆಗ ನಾನೂ ಯೋಜನೆಯಿಂದ ಹಿಂದೆ ಸರಿದೆ. ಅದಕ್ಕೆಲ್ಲ ನನ್ನ ಬಳಿ ದಾಖಲೆಗಳಿವೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸತ್ಯಶೋಧನ ಸಮಿತಿಯ ವರದಿ ಪ್ರದರ್ಶಿಸಿದರು.
‘ಆಗ ಬೇಡ ಎಂದಿದ್ದ ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ಅತಿ ಕಾಳಜಿ ವಹಿಸುತ್ತಿದ್ದಾರೆ. ಯಾರಿಗೋ ಲಾಭ ಮಾಡಿಕೊಡಲು ಪ್ರಯತ್ನಿಸುತ್ತಿದ್ದಾರೆ. ಯೋಜನೆಗೆ ಭೂಮಿ ಕೊಟ್ಟವರಿಗೆ ಪ್ರತಿ ಎಕರೆಗೆ ₹2 ಕೋಟಿ ಪರಿಹಾರ ಕೊಡುವುದಾಗಿ ಹೇಳಿದ್ದವರು ಇಂದು ಬೆಳಗ್ಗೆ ವಿಡಿಯೊ ಬಿಡುಗಡೆ ಮಾಡಿ ಎಕರೆಗೆ ₹3 ಕೋಟಿ ಕೊಡುತ್ತೇವೆ ಎನ್ನುತ್ತಿದ್ದಾರೆ. ಯಾವ ಆಧಾರದ ಮೇಲೆ ಹೀಗೆ ಹೇಳಿದ್ದಾರೆ? ಟೌನ್‌ಶಿಪ್ ಏನು ಚೌಕಾಸಿ ವ್ಯಾಪಾರವೇ’ ಎಂದು ಪ್ರಶ್ನಿಸಿದರು.
‘ಡಿಕೆಶಿಗೆ ದುರ್ಯೋಧನನ ಗತಿ ಬರಲಿದೆ’
‘ರೈತರ ವಿರುದ್ಧ ನಡೆದ ಯಾವ ಸರ್ಕಾರವೂ ಉಳಿದಿಲ್ಲ. ಈ ಪಾದಯಾತ್ರೆಯು ಸರ್ಕಾರಕ್ಕೆ ಹೊಡೆಯುವ ಕೊನೆ ಮೊಳೆಯಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯೋಜನೆ ಜಾರಿಗಾಗಿ ದುರ್ಯೋಧನನ ರೀತಿ ಹಟಕ್ಕೆ ಬಿದ್ದಿದ್ದಾರೆ. ಹಟ ಬಿಡದಿದ್ದರೆ ದುರ್ಯೋಧನನಿಗೆ ಆದ ಗತಿಯೇ ಅವರಿಗೂ ಆಗಲಿದೆ. ಹಣ ಲೂಟಿ ಹೊಡೆಯುವ ರಿಯಲ್ ಎಸ್ಟೇಟ್ ಯೋಜನೆ ಇದಾಗಿದೆ. ಆ ದುಡ್ಡನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕಳಿಸಲಿದ್ದಾರೆ. ರೈತರ ಪರವಾದ ಈ ಯೋಜನೆಯನ್ನು ಪ್ರಾಯಶ್ಚಿತ್ತದ ಯಾತ್ರೆ ಎಂದು ಜಾಹೀರಾತು ನೀಡಿರುವ ಅವರು ಅದಕ್ಕಾಗಿ ₹4 ಕೋಟಿ ಖರ್ಚು ಮಾಡಿದ್ದಾರೆ. ಅಂದು ಯೋಜನೆ ವಿರೋಧಿಸಿ ಇಂದು ಅನುಷ್ಠಾನಕ್ಕೆ ಮುಂದಾಗಿರುವ ಶಿವಕುಮಾರ್ ಅವರೇ ರೈತರ ವಿಷಯದಲ್ಲಿ ಪ್ರಾಯಶ್ಚಿತ್ತಪಡಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.