ಹೊಸ ಸಂಸತ್ ಕಟ್ಟಡ ‘ಆತ್ಮ ರಹಿತ ಸಮಾವೇಶ ಕೇಂದ್ರ’: ಶಶಿ ತರೂರ್ ಟೀಕೆ
ನವದೆಹಲಿ: ಹೊಸ ಸಂಸತ್ ಕಟ್ಟಡವು ‘ಆತ್ಮ ರಹಿತ ಸಮಾವೇಶ ಕೇಂದ್ರ’ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಬಣ್ಣಿಸಿದ್ದಾರೆ. ಅದರಲ್ಲಿನ ಆತ್ಮೀಯತೆಯ ಕೊರತೆ ಹಾಗೂ ಅಂತರದ ಅನುಭವವು ನಮ್ಮ ರಾಜಕೀಯದಲ್ಲಿನ ಧ್ರುವೀಕರಣವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.
ಪತ್ರಕರ್ತೆ ಶೊಭನಾ ಕೆ. ನಾಯರ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಷ್ಟ್ರ ರಾಜಧಾನಿಯಲ್ಲಿ ಭೌತಿಕ ಛಾಪನ್ನು ಮೂಡಿಸಬೇಕೆನ್ನುವ ಬಯಕೆ ಇದೆ. ಆದರೆ ಎಲ್ಲ ಬದಲಾವಣೆಗಳು ಅಗತ್ಯವಲ್ಲ’ ಎಂದು ಪ್ರತಿಪಾದಿಸಿದರು.
‘ಹೊಸ ಸಂಸತ್ ಭವನವು ನಿಜಕ್ಕೂ ಒಂದು ರೀತಿಯ ಚೈತನ್ಯ ರಹಿತ ಸಮಾವೇಶ ಕೇಂದ್ರದಂತೆ ಭಾಸವಾಗುತ್ತದೆ. ಇದಕ್ಕೆ ಹಲವು ಕಾರಣಗಳಿವೆ. ಭವನದ ಮೇಲ್ಛಾವಣಿ ಅತ್ಯಂತ ಎತ್ತರವಾಗಿದ್ದು, ಇದು ಆತ್ಮೀಯ ವಾತಾವರಣಕ್ಕೆ ಅವಕಾಶವನ್ನೇ ಇಲ್ಲದಂತೆ ಮಾಡಿದೆ. ಹಳೆಯ ಸಂಸತ್ ಭವನದ ಸಭಾಂಗಣಗಳಲ್ಲಿ ಆತ್ಮೀಯತೆ ಇತ್ತು; ಅದು ಸಂಸದರು ಪರಸ್ಪರ ಮಾತನಾಡಲು ಮತ್ತು ವಿಚಾರ ವಿನಿಮಯ ಮಾಡಿಕೊಳ್ಳಲು ಉತ್ತೇಜನ ನೀಡುತ್ತಿತ್ತು. ಆದರೆ ಹೊಸ ಭವನದ ಆಸನ ವಿನ್ಯಾಸವು ಬೀಸಣಿಗೆಯಾಕಾರದಲ್ಲಿದ್ದು, ಸದಸ್ಯರ ನಡುವೆ ಒಂದು ರೀತಿಯ ಅಂತರವನ್ನು ಸೃಷ್ಟಿಸುತ್ತದೆ’ ಎಂದು ಹೇಳಿದ್ದಾರೆ.
ಹೊಸ ಕಟ್ಟಡದ ವಿನ್ಯಾಸವು ಸಂಸತ್‌ನಲ್ಲಿ ಹಿಂದೆ ಇದ್ದ ಅನೌಪಚಾರಿಕ ಸಂವಹನ ಮತ್ತು ಪಕ್ಷಾತೀತ ಸೌಹಾರ್ದವನ್ನು ಕುಗ್ಗಿಸಿದೆ. ಹಳೆಯ ಭವನದಲ್ಲಿದ್ದ ಸೆಂಟ್ರಲ್ ಹಾಲ್ ಇಲ್ಲದಿರುವುದನ್ನು ಅವರು ಪ್ರಸ್ತಾಪಿಸಿದರು.
ಹೊಸ ಸಂಸತ್ ಭವನದಲ್ಲಿನ ಆತ್ಮೀಯತೆಯ ಕೊರತೆ ಇದೆ. ಅದರ ವಿನ್ಯಾಸ ಸಂವಾದಕ್ಕೆ ಉತ್ತೇಜನ ನೀಡುತ್ತಿಲ್ಲ. ಹಾಲಿ-ಮಾಜಿ ಸಂಸದರು, ವೀಕ್ಷಕರು ಮತ್ತು ಮಾಧ್ಯಮದವರು ಅನೌಪಚಾರಿಕವಾಗಿ ಬೆರೆಯಲು ಅವಕಾಶ ನೀಡುತ್ತಿದ್ದ ಸೆಂಟ್ರಲ್ ಹಾಲ್ ಕೂಡ ಇಲ್ಲ. ಇವೆಲ್ಲವೂ ಪಕ್ಷಗಳ ನಡುವಿನ ಸೌಹಾರ್ದ ಮತ್ತು ಸಹಕಾರದ ಕೊರತೆಯನ್ನು ಪ್ರತಿಬಿಂಬಿಸುತ್ತವೆ ಎಂದಿದ್ದಾರೆ.
ಚೀನಾದ ಪೀಪಲ್ಸ್ ಕನ್ಸಲ್ಟೇಟಿವ್ ಕಾಂಗ್ರೆಸ್ ಗೆ ಹೊಸ ಸಂಸತ್ ಕಟ್ಟಡವನ್ನು ಹೋಲಿಸಿದ ಅವರು, ಸಂಸದರು ಪರಸ್ಪರ ಅಪರಿಚಿತರ ದೊಡ್ಡ ಗುಂಪಾಗಿ ಮಾರ್ಪಟ್ಟು, ಮಹಾನ್ ನಾಯಕ ಘೋಷಣೆಗಳನ್ನು ಮಾಡುವಾಗ ಒಟ್ಟಾಗಿ ಮೇಜು ಬಡಿದು ಚಪ್ಪಾಳೆ ತಟ್ಟುವ ಪರಿಸ್ಥಿತಿ ಬರಬಹುದು ಎಂದು ವ್ಯಂಗ್ಯವಾಡಿದರು.
ಆದಾಗ್ಯೂ, ಹೊಸ ಸಂಸತ್ ಭವನದ ಒಂದು ಅಂಶವನ್ನು ತರೂರ್ ಮೆಚ್ಚಿಕೊಂಡಿದ್ದಾರೆ. ಹಳೆಯ ಭವನದ ಆಸನ ವ್ಯವಸ್ಥೆಯಿಂದ ಉಂಟಾಗುತ್ತಿದ್ದ ಅನಾನುಕೂಲವನ್ನು ಹೊಸ ವಿನ್ಯಾಸ ನಿವಾರಿಸಿದೆ. ಹಳೆಯ ಭವನದಲ್ಲಿ ಸದಸ್ಯರು ಒತ್ತೊತ್ತಾಗಿ ಕುಳಿತು, ತಮ್ಮ ಆಸನದಿಂದ ಹೊರಬರಲು ಸಹೋದ್ಯೋಗಿಗಳ ಮೊಣಕಾಲುಗಳ ನಡುವಿನಿಂದ ಕಷ್ಟಪಟ್ಟು ಸಾಗಬೇಕಾಗುತ್ತಿತ್ತು. ಆ ಅನಾನುಕೂಲವನ್ನು ನಿವಾರಿಸಲಾಗಿದೆ ಎಂದು ಅವರು ಹೇಳಿದ್ದಾರೆ.