
ಹಾವೇರಿ | ಚಳಗೇರಿ ಟೋಲ್‌ಗೇಟ್ ಬಳಿ ಅಪಘಾತ: ತಾಯಿ, ಮಕ್ಕಳಿಬ್ಬರು ಸಾವು
ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿ ಟೋಲ್‌ಗೇಟ್ ಬಳಿ ಗುರುವಾರ ತಡರಾತ್ರಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ.
‘ದಾವಣಗೆರೆಯ ನಿಟವಳ್ಳಿ ಮೌನೇಶ್ವರ ಬಡಾವಣೆಯ ನಿವಾಸಿ ಯಶೋಧಾಬಾಯಿ (51), ಅವರ ಮಕ್ಕಳಾದ ಸಿದ್ಧಾರ್ಥ (27) ಹಾಗೂ ಹಸನ್ಮುಖ (29) ಮೃತರು. ಅಪಘಾತದಲ್ಲಿ ಹಸನ್ಮುಖ ಅವರ ಪತ್ನಿ ಸೌಂದರ್ಯಾ (26), ಮಗಳು ಕಶ್ವಿ (1) ಹಾಗೂ ಸಿಂಧೂ (24) ಎಂಬುವರು ಗಾಯಗೊಂಡಿದ್ದಾರೆ. ಅವರನ್ನು ದಾವಣಗೆರೆಯ ಎಸ್.ಎಸ್. ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಸಿದ್ದಾರ್ಥ ಅವರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ (ಕೆಎಸ್‌ಆರ್‌ಟಿಸಿ) ನೌಕರರಾಗಿದ್ದರೆ, ಹಸನ್ಮುಖ ಅವರು ಖಾಸಗಿ ಕಂಪನಿ ಉದ್ಯೋಗಿ ಆಗಿದ್ದರು. ಮಗಳು ಕಶ್ವಿಯ ಒಂದು ವರ್ಷದ ಜನ್ಮದಿನ ಆಚರಿಸಿದ್ದ ಕುಟುಂಬದವರು, ಕಾರಿನಲ್ಲಿ ಕಾರವಾರಕ್ಕೆ ಹೋಗಿದ್ದರು. ಅಲ್ಲಿಂದ ಮರಳುವಾಗ, ಅವಘಡ ಸಂಭವಿಸಿದೆ’ ಎಂದು ರಾಣೆಬೆನ್ನೂರು ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದರು.