ಬಸವಕಲ್ಯಾಣ| ನಗರದಲ್ಲಿಲ್ಲ ಶೌಚಾಲಯ: ಗ್ರಾಮೀಣ ಜನರಿಗೆ ಸಂಕಟ

ಬಸವಕಲ್ಯಾಣ| ನಗರದಲ್ಲಿಲ್ಲ ಶೌಚಾಲಯ: ಗ್ರಾಮೀಣ ಜನರಿಗೆ ಸಂಕಟ

ಬಸವಕಲ್ಯಾಣ| ನಗರದಲ್ಲಿಲ್ಲ ಶೌಚಾಲಯ: ಗ್ರಾಮೀಣ ಜನರಿಗೆ ಸಂಕಟ

ಬಸವಕಲ್ಯಾಣ: ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು ಎನ್ನುವ ಮಟ್ಟಕ್ಕೆ ಬೆಳೆದಿರುವ ಈ ನಗರದಲ್ಲಿ ಶೌಚಾಲಯ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ್ದರಿಂದ ತುರ್ತು ಕೆಲಸ ಹಾಗೂ ವ್ಯಾಪಾರಕ್ಕಾಗಿ ಬರುವವರು ಮತ್ತು ಶಾಲಾ ಕಾಲೇಜುಗಳಿಗೆ ಬಂದು ಹೋಗುವ ಗ್ರಾಮೀಣ ಭಾಗದ ಮಕ್ಕಳು ಸಂಕಟ ಅನುಭವಿಸುತ್ತಿದ್ದಾರೆ.

ನಗರ ಉದ್ದವಾಗಿ ಬೆಳೆದಿದ್ದು 2 ಕಿ.ಮೀ ನಷ್ಟು ಒಂದೇ ಮುಖ್ಯ ರಸ್ತೆ ಇದೆ. ಈ ರಸ್ತೆ ಪಕ್ಕದಲ್ಲಿ ಎಲ್ಲಿಯೂ ಶೌಚಾಲಯ ಮತ್ತು ಮೂತ್ರಾಲಯಗಳಿಲ್ಲ. ಪ್ರಮುಖ ಸ್ಥಳಗಳಲ್ಲಿಯೂ ಇಂಥ ವ್ಯವಸ್ಥೆ ಇಲ್ಲ. ಹೀಗಾಗಿ ಮಹಿಳೆಯರು ತೀವ್ರ ಮುಜುಗರ ಅನುಭವಿಸುತ್ತಿದ್ದು ದೂರದೂರದವರೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ಶರಣ ಸ್ಮಾರಕಗಳ ವೀಕ್ಷಣೆಗೆ ಬರುವ ಪ್ರವಾಸಿಗರಿಗೂ ತೊಂದರೆ ಆಗುತ್ತಿದೆ. ಈ ಬಗ್ಗೆ ಕೆಲ ಸಂಘ ಸಂಸ್ಥೆಯವರು ಹಲವಾರು ಸಲ ಮನವಿಪತ್ರ ಸಲ್ಲಿಸಿದ್ದರೂ ಪ್ರಯೋಜನ ಆಗಿಲ್ಲ.

ಕೋಟೆ ನೋಡಲು ಆಗಾಗ ಶಾಲಾ ಮಕ್ಕಳು ಮತ್ತು ಇತರೆ ಜನರು ಬರುತ್ತಾರೆ. ಇಲ್ಲಿಯೇ ನಗರಸಭೆ ಕಚೇರಿಯೂ ಇದೆ. ಸಮೀಪದಲ್ಲಿನ ನೆಹರು ವೃತ್ತದಲ್ಲಿ ಆಯುರ್ವೇದಿಕ ಆಸ್ಪತ್ರೆ ಇದೆ. ತರಕಾರಿ ಮಾರಾಟವೂ ನಡೆಯುತ್ತದೆ. ಆದರೆ ಶೌಚಾಲಯ ಇಲ್ಲದ್ದರಿಂದ ಪ್ರಾಚ್ಯವಸ್ತು ಸಂಗ್ರಹಾಲಯದ ಆವರಣದ ಗೋಡೆ ಹಾಗೂ ಇತರೆ ಗೋಡೆಗಳ ಪಕ್ಕದಲ್ಲಿ ಮೂತ್ರ ವಿಸರ್ಜಿಸುವುದರಿಂದ ಎಲ್ಲೆಡೆ ಅಸ್ವಚ್ಛತೆ ಇದೆ. ದುರ್ನಾತ ಸೂಸುತ್ತದೆ. ಸೊಳ್ಳೆ, ನೊಣಗಳ ಕಾಟ ಹೆಚ್ಚಿದೆ.

ಟೂರಿಸ್ಟ್ ಲಾಡ್ಜ್ ಎದುರಿನ ಮಿನಿ ಬಸ್ ನಿಲ್ದಾಣಕ್ಕೆ ಬರುವವರು ಹಾಗೂ ಸಮೀಪದ ಡಾ.ಅಂಬೆಡ್ಕರ್ ವೃತ್ತದಲ್ಲಿನವರು ಎಪಿಎಂಸಿ ಕಚೇರಿಯ ಎದುರಿನ ರಸ್ತೆ ಪಕ್ಕದಲ್ಲಿ ಹಾಗೂ ಶಾಂತಿನಿಕೇತನ ಶಾಲೆ ಹಿಂದುಗಡೆ ಮೂತ್ರ ಮಾಡುತ್ತಾರೆ. ತ್ರಿಪುರಾಂತದ ಮಡಿವಾಳ ವೃತ್ತದಲ್ಲಿನ ಮಿನಿ ಬಸ್ ನಿಲ್ದಾಣಕ್ಕೆ ಬರುವವರು ಹಾಗೂ ವ್ಯಾಪಾರಸ್ಥರು, ಗ್ರಾಹಕರು ಇಲ್ಲಿನ ಪ್ರವಾಸಿ ಮಂದಿರದ ಎದುರಿನ ಆವರಣದ ಒಳಗೆ ಮೂತ್ರ ವಿಸರ್ಜನೆ ಮಾಡುವುದರಿಂದ ಈ ಸ್ಥಳ ಹೊಲಸಾಗಿದೆ.

ಮಹಾತ್ಮ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಶರಣ ಹರಳಯ್ಯ ವೃತ್ತ, ಶಿವಾಜಿ ಪಾರ್ಕ್, ಶಿವಪುರ ರಸ್ತೆ, ಕೋರ್ಟ್ ಆವರಣ, ತಾಲ್ಲೂಕು ಆಸ್ಪತ್ರೆ ಆವರಣ ಮತ್ತಿತರೆಡೆ ಇಂಥ ಸಮಸ್ಯೆ ಇದೆ. ಬಸ್ ನಿಲ್ದಾಣದ ರಸ್ತೆ ಪಕ್ಕದಲ್ಲಿ, ನಾರಾಯಣಪುರ ರಸ್ತೆ ಹಾಗೂ ಸದಾನಂದ ಸ್ವಾಮಿ ಮಠದ ಹಿಂದುಗಡೆಯಲ್ಲಿ ಸುಲಭ ಶೌಚಾಲಯಗಳು ಇದ್ದರೂ ಅವು ಬಹಳಷ್ಟು ಜನರಿಗೆ ಗೊತ್ತಿಲ್ಲ. ಧರ್ಮಪ್ರಕಾಶ ಓಣಿ, ಶಹಾಪುರ ಓಣಿಯಲ್ಲಿನ ಶೌಚಾಲಯಗಳು ದುಸ್ಥಿತಿ ಕಂಡಿವೆ.

ಮುಖ್ಯವೆಂದರೆ, ಬಸವವನದ ಪ್ರವೇಶ ದ್ವಾರದ ಬಳಿಯಲ್ಲಿ, ತ್ರಿಪುರಾಂತ ಪ್ರವಾಸಿ ಮಂದಿರ ಎದುರು, ಮಿನಿ ವಿಧಾನಸೌಧದ ಎದುರಲ್ಲಿ, ಸದಾನಂದ ಸ್ವಾಮಿ ಮಠದ ಆವರಣದಲ್ಲಿ ಹೀಗೆ ಐದು ಸ್ಥಳಗಳಲ್ಲಿ ಆಧುನಿಕ ಪದ್ಧತಿಯ ಸೌಕರ್ಯಗಳಿರುವ ಶೌಚಾಲಯಗಳನ್ನು ಅಳವಡಿಸಲಾಗಿದೆ. ಅವುಗಳಿಗೆ ವಿದ್ಯುತ್ ಸಂಪರ್ಕವಿದೆ. ನೀರಿನ ಸೌಲಭ್ಯವಿದೆ. ಆದರೆ ಇವು ಏನಿವೆ ಎಂಬುದನ್ನೇ ಯಾರೂ ಗೊತ್ತು ಪಡಿಸಿಲ್ಲ. ಹೀಗಾಗಿ ಐದು ವರ್ಷದಿಂದ ಬಳಕೆಯಾಗದೆ ಇವು ಹಾಳಾಗುತ್ತಿವೆ. ಸಂಬಂಧಿತರು ಇನ್ನು ಮುಂದಾದರೂ ಈ ಬಗ್ಗೆ ಲಕ್ಷ ವಹಿಸಬೇಕು ಎಂಬುದು ಜನರ ಆಗ್ರಹವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260817-33-809853032

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ