‘ಸ್ವಚ್ಛ ಸೇನಾನಿ’ಗಳಿಗೆ ಸಿಗದ ಸ್ವಂತ ಸೂರು: ಆಮೆಗತಿಯಲ್ಲಿ ಗೃಹಭಾಗ್ಯ ಕಾಮಗಾರಿ

‘ಸ್ವಚ್ಛ ಸೇನಾನಿ’ಗಳಿಗೆ ಸಿಗದ ಸ್ವಂತ ಸೂರು: ಆಮೆಗತಿಯಲ್ಲಿ ಗೃಹಭಾಗ್ಯ ಕಾಮಗಾರಿ

‘ಸ್ವಚ್ಛ ಸೇನಾನಿ’ಗಳಿಗೆ ಸಿಗದ ಸ್ವಂತ ಸೂರು: ಆಮೆಗತಿಯಲ್ಲಿ ಗೃಹಭಾಗ್ಯ ಕಾಮಗಾರಿ

ಕಾರವಾರ: ಸ್ವಚ್ಛತೆ ಕೆಲಸದ ಮೂಲಕ ಆರೋಗ್ಯಯುತ ಪರಿಸರ ಕಾಪಾಡುವ ಪೌರಕಾರ್ಮಿಕರಿಗೆ ಸುಸಜ್ಜಿತ ಸೂರು ಸಿಗುತ್ತಿಲ್ಲ ಎಂಬ ದೂರುಗಳು ಹೆಚ್ಚುತ್ತಿವೆ. ಪೌರಕಾರ್ಮಿಕರಿಗೆ ಮನೆ ಒದಗಿಸುವ ಗೃಹಭಾಗ್ಯ ಯೋಜನೆ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಗತಿ ಕಂಡಿಲ್ಲ ಎಂಬುದು ಪೌರಕಾರ್ಮಿಕ ಸಂಘಟನೆಗಳ ದೂರು.

ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 101 ಮನೆಗಳು ಮಂಜೂರಾಗಿದೆ. ಆದರೆ, ವರ್ಷ ಕಳೆದರೂ ಇನ್ನೂ ಟೆಂಡರ್ ಪ್ರಕ್ರಿಯೆಯಲ್ಲೇ ನನೆಗುದಿಗೆ ಬಿದ್ದಿದೆ. ಕೆಲವೆಡೆ ನಿವೇಶನ ಸಿಗದೆ ಯೋಜನೆ ಕಾರ್ಯಗತಗೊಳ್ಳುತ್ತಿಲ್ಲ ಎಂಬ ದೂರುಗಳಿವೆ.

ಜಿಲ್ಲಾ ಕೇಂದ್ರ ಕಾರವಾರದ ಪಂಚರಾಶಿವಾಡಾದಲ್ಲಿ ಕೆಲ ವರ್ಷದ ಹಿಂದೆ ಪೌರಕಾರ್ಮಿಕರಿಗೆ ಬಹುಮಹಡಿ ವಸತಿ ಸಮುಚ್ಛಯ ನಿರ್ಮಿಸಿಕೊಡಲಾಗಿದೆ. ಇನ್ನೂ ಹಲವರು ಸೂರಿನ ನಿರೀಕ್ಷೆಯಲ್ಲಿ ವರ್ಷಗಳಿಂದ ಕಾಯುತ್ತಿದ್ದಾರೆ. ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯ ಮೊದಲ ಹಂತದಲ್ಲಿ ಕೆಲವರಿಗೆ ಮಾತ್ರ ಮನೆ ಸಿಕ್ಕಿದೆ. ಇನ್ನೂ ಹಲವರಿಗೆ ಸೌಲಭ್ಯ ಸಿಗುತ್ತಿಲ್ಲ ಎಂಬುದು ಹಲವು ಕಾರ್ಮಿಕರ ದೂರು.

‘ಗಾಂಧಿ ನಗರದಲ್ಲಿ ಪೌರಕಾರ್ಮಿಕರ ಮನೆ ನಿರ್ಮಾಣಕ್ಕೆ ಗುರುತಿಸಿದ ಜಾಗದಲ್ಲಿ ಅವರದೇ ಸಂಬಂಧಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಅವುಗಳನ್ನು ತೆರವುಗೊಳಿಸುವ ಕೆಲಸ ಪ್ರಗತಿಯಲ್ಲಿದೆ. ಅದೇ ಜಾಗದಲ್ಲಿ ಜಿ ಪ್ಲಸ್ 2 ಮಾದರಿಯ ವಸತಿ ಸಮುಚ್ಛಯ ನಿರ್ಮಿಸಿಕೊಡಲಾಗುವುದು’ ಎಂಬುದಾಗಿ ನಗರಸಭೆ ಅಧಿಕಾರಿಗಳು ಹೇಳಿದ್ದಾರೆ.

ಶಿರಸಿ ನಗರದಲ್ಲಿ ₹1.35 ಕೋಟಿ ವೆಚ್ಚದಲ್ಲಿ 18 ಮನೆಗಳನ್ನು ನಿರ್ಮಿಸುವ 2ನೇ ಹಂತದ ಗೃಹಭಾಗ್ಯ ಕಾಮಗಾರಿಗೆ 2023ರಲ್ಲಿ ಚಾಲನೆ ನೀಡಲಾಗಿದೆ. ಇಂದಿಗೂ ಕಟ್ಟಡದ ನಿಧಾನಗತಿಯ ಕಾರ್ಯ ನಡೆಯುತ್ತಿದೆ.

‘ಸರ್ಕಾರ ಪೌರ ಕಾರ್ಮಿಕರಿಗೆ ಸೌಲಭ್ಯ ನೀಡುತ್ತಿದ್ದರೂ, ನಗರಾಡಳಿತದ ನಿರ್ಲಕ್ಷ್ಯದ ಕಾರಣ ಇಂದಿಗೂ ಕಾಮಗಾರಿ ಮುಗಿದಿಲ್ಲ’ ಎಂಬುದು ಪೌರಕಾರ್ಮಿಕರ ದೂರು.

ಭಟ್ಕಳ ನಗರಸಭೆಯ 27 ಮಂದಿ ಕಾಯಂ ಪೌರಕಾರ್ಮಿಕರ ಪೈಕಿ 18 ಜನರಿಗೆ ಮೊದಲ ಹಂತದಲ್ಲಿ ಮನೆ ನಿರ್ಮಿಸಿ ಹಸ್ತಾಂತರ ಮಾಡಲಾಗಿದೆ. 9 ಜನರಿಗೆ ಮನೆ ನಿರ್ಮಿಸಲು ಸರಿಯಾದ ಸ್ಥಳವಕಾಶ ಸಿಗದ ಕಾರಣ ಹಳೆ ಉಪವಿಭಾಗಾಧಿಕಾರಿ ಕಚೇರಿ ಹಿಂಭಾಗ ಜಾಗ ಗುರುತಿಸಿದ್ದು, ಅನುದಾನ ಬಿಡುಗಡೆಗೆ ಕಾಯಲಾಗುತ್ತಿದೆ. ಜಾಲಿ ಪಟ್ಟಣ ಪಂಚಾಯಿತಿಯ 7 ಪೌರಕಾರ್ಮಿಕರಿಗೆ ಪಟ್ಟಣ ಪಂಚಾಯಿತಿ ಕಚೇರಿ ಎದುರು ಗೃಹಭಾಗ್ಯ ಕಟ್ಟಡ ನಿರ್ಮಾಣವಾಗಿದೆ. ಅಂತಿಮ ಹಂತದ ಕಾಮಗಾರಿ ಬಾಕಿ ಇರುವ ಕಾರಣ ಹಸ್ತಾಂತರ ಬಾಕಿ ಇದೆ. 10 ಪೌರಕಾರ್ಮಿಕರಿಗೆ ಮನೆ ನಿರ್ಮಾಣ ಮಾಡಿಕೊಡಬೇಕಾಗಿದೆ ಎಂಬುದಾಗಿ ಅಧಿಕಾರಿಗಳು ಹೇಳುತ್ತಾರೆ.

ಯಲ್ಲಾಪುರ ಪಟ್ಟಣದಲ್ಲಿ ಪೌರ ಕಾರ್ಮಿಕರ ಅನುಕೂಲಕ್ಕಾಗಿ 12 ಮನೆ ನಿರ್ಮಿಸಲಾಗಿದ್ದು ಈ ಪೈಕಿ 9 ಮನೆ ವಿತರಿಸಲಾಗಿದೆ. ತಾಂತ್ರಿಕ ಕಾರಣದಿಂದ ಮೂರು ಮನೆಗಳ ವಿತರಣೆ ಸಾಧ್ಯವಾಗಿಲ್ಲ ಎಂಬುದಾಗಿ ಪಟ್ಟಣ ಪಂಚಾಯಿತಿ ಯೋಜನಾಧಿಕಾರಿ ಹೇಮಾವತಿ ಭಟ್ ಹೇಳಿದರು.

‘ಸಿದ್ದಾಪುರ ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕರಿಗೆ ಮನೆ ನಿರ್ಮಿಸಿಕೊಡಲು ಸ್ಥಳದ ಕೊರತೆ ಇದೆ. ಪಟ್ಟಣ ಪಂಚಾಯಿತಿ ಸಮೀಪದ ಜಾಗವನ್ನು ಹಸ್ತಾಂತರಿಸಲು ಮನವಿ ಮಾಡಿದ್ದೇವೆ. 3 ಪೌರ ಕಾರ್ಮಿಕರಿಗೆ ಆವಾಸ್ ಯೋಜನೆಯ ಅಡಿಯಲ್ಲಿ ಮನೆಯನ್ನು ನೀಡಲಾಗಿದೆ. ಸ್ಥಳ ದೊರೆತ ಬಳಿಕ ಉಳಿದವರಿಗೂ ಮನೆ ಒದಗಿಸಲಾಗುವುದು’ ಎಂದು ಮುಖ್ಯಾಧಿಕಾರಿ ಮಹಮ್ಮದ್ ಯಾಕೂಬ್ ಶೇಖ್ ತಿಳಿಸಿದ್ದಾರೆ.

ಹೊನ್ನಾವರ ಪಟ್ಟಣ ಪಂಚಾಯಿತಿಯಲ್ಲಿ 17 ಕಾಯಂ ಪೌರಕಾರ್ಮಿಕರಿದ್ದು ಹೆಚ್ಚಿನವರಿಗೆ ರಾಯಲ್‌ಕೇರಿ ಸಮೀಪ ಸರ್ಕಾರ ನಿರ್ಮಿಸಿಕೊಟ್ಟ ವಸತಿ ಗೃಹ ಸಿಕ್ಕಿದೆ. ಇನ್ನೂ 13 ವಸತಿ ಗೃಹಗಳ ನಿರ್ಮಾಣ ಕಾಮಗಾರಿಗೆ ಅನುಮೋದನೆ ಕೂಡ ಸಿಕ್ಕಿದೆ. ಆದರೆ ಈಚಿನ ವರ್ಷಗಳಲ್ಲಿ ಅಸ್ತಿತ್ವಕ್ಕೆ ಬಂದಿರುವ ಮಂಕಿ ಪಟ್ಟಣ ಪಂಚಾಯಿತಿಯಲ್ಲಿ ಪೌರಕಾರ್ಮಿಕರಿಗೆ ಇನ್ನೂ ಗೃಹ ಭಾಗ್ಯ ಸಿಕ್ಕಿಲ್ಲ.

‘10 ಪೌರಕಾರ್ಮಿಕರಿದ್ದು ವಸತಿ ಗೃಹ ನಿರ್ಮಾಣಕ್ಕಾಗಿ ಗುರುತಿಸಲಾಗಿರುವ 20 ಗುಂಟೆ ಜಾಗ ಮಂಜೂರಿಯ ಪ್ರಸ್ತಾವ ಕಂದಾಯ ಇಲಾಖೆ ಬಳಿ ಇದೆ’ ಎಂದು ಮಂಕಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜಪ್ಪ ತಿಳಿಸಿದರು.

‘ಹಳಿಯಾಳ 28 ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯ ಫಲ ಸಿಕ್ಕಿದೆ. ಅವರಲ್ಲಿ 10 ಮಂದಿ ತಮ್ಮ ಸ್ವಂತ ನಿವೇಶನದಲ್ಲಿ ಮನೆ ನಿರ್ಮಿಸಿಕೊಂಡಿದ್ದರೆ, 18 ಮಂದಿಗೆ ಪುರಸಭೆಯಿಂದ ಆಶ್ರಯ ಯೋಜನೆಯಡಿ ನಿವೇಶನ ನೀಡಲಾಗಿದೆ. ಪ್ರಧಾನ ಮಂತ್ರಿ ಆವಾಸ್ ವಸತಿ ಯೋಜನೆಯಡಿ ಪ್ರತಿ ಫಲಾನುಭವಿಗೆ ₹7.50 ಲಕ್ಷ ಅನುದಾನ ನೀಡಲಾಗಿದೆ. 7 ಫಲಾನುಭವಿಗಳಿಗೆ ಅನುದಾನ ಸಿಕ್ಕಿದ್ದು, ಇನ್ನೂ 21 ಫಲಾನುಭವಿಗಳಿಗೆ ಹಣ ಮಂಜೂರಾಗಬೇಕಿದೆ’ ಎಂದು ಪುರಸಭೆ ಪರಿಸರ ಇಂಜಿನಿಯರ್ ದರ್ಶಿತಾ ಬಿ.ಎಸ್ ಹೇಳಿದರು.

ಅಂಕೋಲಾ ಪುರಸಭೆಯಲ್ಲಿ ಒಟ್ಟು 17 ಜನ ಕಾಯಂ ಪೌರಕಾರ್ಮಿಕರಿದ್ದು, ಐದು ಕುಟುಂಬಗಳು ಮಾತ್ರ ಸ್ವಂತ ಸೂರಿನಲ್ಲಿ ವಾಸಿಸುತ್ತಿದ್ದಾರೆ. ಇನ್ನೂ ಕೆಲವರು ಪಟ್ಟಣದಲ್ಲಿರುವ ಪುರಸಭೆಯ ವಸತಿಗೃಹದಲ್ಲಿ ವಾಸವಿದ್ದಾರೆ.

‘ಕೇಣಿಯಲ್ಲಿ ಮನೆಗಳು ನಿರ್ಮಾಣ ಕಾಮಗಾರಿ ಮುಗಿಯುವ ಹಂತದಲ್ಲಿದ್ದು. ಆದಷ್ಟು ಬೇಗ ಉಳಿದ ಪೌರಕಾರ್ಮಿಕರಿಗೂ ಸ್ವಂತ ಸೂರು ಕಲ್ಪಿಸಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಯೇಸು ಬೆಂಗಳೂರು ಹೇಳಿದರು. ‘ಕುಮಟಾ ಪಟ್ಟಣದಲ್ಲಿನ ಪೌರ ಕಾರ್ಮಿಕರ 15 ವಸತಿ ಗೃಹಗಳು ಭರ್ತಿಯಾಗಿವೆ. ಚಿತ್ರಿಗಿಯಲ್ಲಿರುವ 23 ಹೊಸ ವಸತಿ ಗೃಹಗಳ ಪೈಕಿ 11 ಬಳಕೆಯಲ್ಲಿದ್ದು, ಉಳಿದ 12 ಖಾಲಿ ಇವೆ’ ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಆರ್ ಸ್ವಾಮಿ ಹೇಳಿದರು.

ಪೌರಕಾರ್ಮಿಕರ ಮನೆಯಲ್ಲಿ ಬೇರೆಯವರ ವಾಸ

ದಾಂಡೇಲಿಯಲ್ಲಿರುವ 72 ಪೌರಕಾರ್ಮಿಕರ ಪೈಕಿ 16 ಮಂದಿಗೆ ಜಿ ಪ್ಲಸ್ ಟು ಮಾದರಿಯ ವಸತಿ ನಿಲಯ ನಿರ್ಮಿಸಿಕೊಡಲಾಗಿದೆ. 2022–23ನೇ ಸಾಲಿಗೆ ನೇಮಕಗೊಂಡ 18 ಮಂದಿಗೆ ಜಿ+2 ಮಾದರಿಯ ವಸತಿ ನಿಲಯ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ನಗರಸಭೆಯ ಆರೋಗ್ಯ ವಿಭಾಗದ ವಿಲಾಸ್ ದೇವಕರ ಮಾಹಿತಿ ನೀಡಿದ್ದಾರೆ. ‘ದಾಂಡೇಲಿಯಲ್ಲಿ ಜಾಗದ ಕೊರತೆ ಇಲ್ಲದಿರುವ ಕಾರಣ ವೈಯಕ್ತಿಕ ವಸತಿ ನಿರ್ಮಾಣ ಮಾಡಬೇಕು. ಈ ಹಿಂದೆ ಪೌರಕಾರ್ಮಿಕರಿಗೆ ನಿರ್ಮಿಸಿದ ಮನೆಗಳಲ್ಲಿ ಬೇರೆಯವರು ವಾಸವಿದ್ದು ಅದನ್ನು ಪರಿಶೀಲಿಸಬೇಕು’ ಎನ್ನುತ್ತಾರೆ ರಾಜ್ಯ ಮುನ್ಸಿಪಲ್ ಕಾರ್ಮಿಕ ಸಂಘಟನೆಯ ಜಿಲ್ಲಾ ಸಮಿತಿ ಸದಸ್ಯ ಡಿ.ಸ್ಯಾಮ್ಸನ್.

ಮುಂಡಗೋಡ ಪಟ್ಟಣದಲ್ಲಿ ಪೌರ ಕಾರ್ಮಿಕರಿಗೆ 2022ರಲ್ಲಿ ಮನೆ ನಿರ್ಮಿಸಿ ಕೊಡಲಾಗಿದೆ. ಕಟ್ಟಡ ನಿರ್ಮಾಣಗೊಂಡು ನಾಲ್ಕೈದು ವರ್ಷಗಳು ಕಳೆಯುವುದರೊಳಗೆ ಕಟ್ಟಡದಲ್ಲಿ ಮಳೆ ನೀರು ಸೋರುತ್ತಿದೆ. ಕೆಲ ಪೌರ ಕಾರ್ಮಿಕರು ತಮಗೆ ನೀಡಿರುವ ಮನೆಗಳನ್ನು ಬೇರೆಯವರಿಗೆ ಬಾಡಿಗೆ ನೀಡಿ, ಹಳೆಯ ಮನೆಯಲ್ಲಿಯೇ ತಾವು ವಾಸವಿದ್ದಾರೆ ಎಂಬ ಆರೋಪವಿದೆ.

‘ಪೌರಕಾರ್ಮಿಕರಿಗೆ 12 ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಇನ್ನೂ 10 ಜನರಿಗೆ ಮನೆ ಕಟ್ಟಿ ಕೊಡುವುದು ಬಾಕಿಯಿದೆ. ಜಾಗದ ಸಮಸ್ಯೆಯಿಂದ ಎರಡನೇ ಹಂತದ ನಿರ್ಮಾಣಕ್ಕೆ ಹಿನ್ನಡೆಯಾಗಿದೆ. ಈಗಿರುವ ಕಟ್ಟಡ ಸೋರುತ್ತಿದ್ದು, ತಗಡಿನ ಚಾವಣಿ ಹಾಕಬೇಕಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷಕುಮಾರ ಎಚ್. ಹೇಳಿದರು.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ಎಂ.ಜಿ.ಹೆಗಡೆ, ಶಾಂತೇಶ ಬೆನಕನಕೊಪ್ಪ, ಎಂ.ಜಿ.ನಾಯ್ಕ, ಪ್ರವೀಣಕುಮಾರ ಸುಲಾಖೆ, ಸುಜಯ್ ಭಟ್, ಮೋಹನ ನಾಯ್ಕ, ವಿಶ್ವೇಶ್ವರ ಗಾಂವ್ಕರ, ಅಜಿತ್ ನಾಯಕ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260817-20-192882905

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ