ಕೋಲಾರ: ಯರಗೋಳ್‌ ಡ್ಯಾಂ ಖಾಲಿ ಖಾಲಿ...

ಕೋಲಾರ: ಯರಗೋಳ್‌ ಡ್ಯಾಂ ಖಾಲಿ ಖಾಲಿ...

ಕೋಲಾರ: ಯರಗೋಳ್‌ ಡ್ಯಾಂ ಖಾಲಿ ಖಾಲಿ...

ಬಂಗಾರಪೇಟೆ: ದಶಕಗಳ ಕಾಲದ ಸತತ ಹೋರಾಟ, ಜನಾಗ್ರಹ ಹಾಗೂ ಸುದೀರ್ಘ ಕಾಯುವಿಕೆಯ ಫಲವಾಗಿ ಸಾಕಾರಗೊಂಡ ಅಭಯಪಾತ್ರೆ ಯರಗೋಳ್ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ತಗ್ಗುತ್ತಿದೆ.

ಬಂಗಾರಪೇಟೆ, ಕೋಲಾರ ಹಾಗೂ ಮಾಲೂರು ನಗರಸಭೆಗಳ ವ್ಯಾಪ್ತಿಯ ಲಕ್ಷಾಂತರ ಜನರ ಕುಡಿಯುವ ನೀರಿಗೆ ಆಸರೆಯಾಗಿದ್ದ ಯರಗೋಳ್ ಜಲಾಶಯ ಬರಿದಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಈ ಮೂರು ನಗರಗಳಲ್ಲಿ ಜಲಸಂಕಟ ಎದುರಾಗುವ ಆತಂಕ ಎದುರಾಗಿದೆ.

ಸಾಕಷ್ಟು ವಿಳಂಬ ಹಾಗೂ ಅನುದಾನ ವೆಚ್ಚದ ಹೆಚ್ಚಳದ ನಡುವೆ ಪೂರ್ಣಗೊಂಡು, ಜಿಲ್ಲೆಗೆ ಸಂಜೀವಿನಿಯಾಗಿದ್ದ ಜಲಾಶಯದಲ್ಲಿ ಪ್ರಸ್ತುತ ಗಸಿ ನೀರು (ಡೆಡ್‌ ಸ್ಟೋರೇಜ್‌) ಮಾತ್ರ ಬಾಕಿ ಉಳಿದಿದೆ. ಜಲಾಶಯದಲ್ಲಿ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿದಿರುವುದರಿಂದ ಈಗಾಗಲೇ ಎರಡೂ ಪ್ರಮುಖ ಪಂಪ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಕೇವಲ ಒಂದು ಪಂಪ್ ಮೂಲಕ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ. ಕಳೆದೆರಡು ವರ್ಷಗಳಲ್ಲಿ ಮುಂಗಾರು ಮಳೆ ಕೊರತೆ, ಬಿಸಿಲಿನ ಬೇಗೆ ಹಾಗೂ ನದಿಗೆ ನೀರಿನ ಆವಕ (ಇನ್‌ಫ್ಲೋ) ಸಂಪೂರ್ಣ ಸ್ಥಗಿತಗೊಂಡಿರುವುದು ಈ ಬಿಕ್ಕಟ್ಟನ್ನು ಇನ್ನಷ್ಟು ತೀವ್ರಗೊಳಿಸಿದೆ.

ಬಂಗಾರಪೇಟೆ ತಾಲ್ಲೂಕಿನ ಮಾರ್ಕಂಡೇಯ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಯರಗೋಳ್‌ ಜಲಾಶಯವು ಮೂರು ಪ್ರಮುಖ ಪಟ್ಟಣಗಳು ಹಾಗೂ ಮಾರ್ಗಮಧ್ಯದ 45ಕ್ಕೂ ಹೆಚ್ಚು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆ ಹೊಂದಿತ್ತು. ಆದರೆ, ನಿರೀಕ್ಷಿತ ಮಳೆಯಾಗದಿರುವುದು ಮತ್ತು ಲಭ್ಯ ನೀರಿನ ಹಂಚಿಕೆಯಲ್ಲಿ ಸೂಕ್ತ ವೈಜ್ಞಾನಿಕ ನಿರ್ವಹಣೆ ಕೊರತೆಯಿಂದ ಜಲಮೂಲ ಈಗ ಸಂಪೂರ್ಣವಾಗಿ ಒಣಗುವ ಹಂತ ತಲುಪಿದೆ.

ಯರಗೋಳ್ ಯೋಜನೆ ನೀರು ಸರಬರಾಜು ಆರಂಭಗೊಂಡ ತಕ್ಷಣವೇ ಸ್ಥಳೀಯ ನಗರಸಭೆ ಹಾಗೂ ಪುರಸಭೆಗಳು ತಮ್ಮ ವ್ಯಾಪ್ತಿಯಲ್ಲಿದ್ದ ಹಳೆಯ ಕೊಳವೆಬಾವಿಗಳ ನಿರ್ವಹಣೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದವು. ಇದೀಗ ದಿಢೀರನೆ ಜಲಾಶಯದಲ್ಲಿ ನೀರು ಬರಿದಾಗುತ್ತಿದೆ. ಅಲ್ಲದೆ, ಒಂದೇ ಪಂಪ್‌ನಿಂದ ನೀರು ಸಿಗುತ್ತಿರುವುದರಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗದ ಸ್ಥಿತಿಗೆ ಸಿಲುಕಿದೆ ಸ್ಥಳೀಯ ಆಡಳಿತ.

ಬಂಗಾರಪೇಟೆ ಮತ್ತು ಕೋಲಾರ ಪಟ್ಟಣಗಳಲ್ಲಿ ಅಂತರ್ಜಲ ಮಟ್ಟ 1,600 ಅಡಿಗೆ ಕುಸಿದಿದೆ. ಮೂಲಸೌಕರ್ಯಗಳ ಕೊರತೆಯಿಂದ ಸ್ಥಗಿತಗೊಂಡಿದ್ದ ಹಳೆಯ ಬೋರ್‌ವೆಲ್‌ಗಳನ್ನು ತಕ್ಷಣವೇ ಮರು ಚಾಲನೆಗೊಳಿಸುವ ಪ್ರಯತ್ನಗಳೂ ಸಂಪೂರ್ಣ ಫಲ ನೀಡುತ್ತಿಲ್ಲ.

ಜಲಾಶಯದಲ್ಲಿ ಲಭ್ಯವಿರುವ ಕೊನೆ ಹಂತದ ನೀರನ್ನು ಅತಿಯಾದ ಜಾಗರೂಕತೆಯಿಂದ ರೇಷನಿಂಗ್‌ ಮಾದರಿಯಲ್ಲಿ ಪೂರೈಸುವುದು ತಕ್ಷಣದ ಆದ್ಯತೆಯಾಗಬೇಕು. ನಗರಸಭೆಗಳು ಹಾಗೂ ಸ್ಥಳೀಯಸಂಸ್ಥೆಗಳು ವಾರ್ಡ್‌ವಾರು ಗಸ್ತು ಪಡೆಗಳನ್ನು ರಚಿಸಿ, ಪೈಪ್‌ಲೈನ್‌ ಸೋರಿಕೆ ಹಾಗೂ ನೀರು ಪೋಲಾಗುವುದನ್ನು ಕಟ್ಟುನಿಟ್ಟಾಗಿ ತಡೆಯಬೇಕು ಎಂದು ಸ್ಥಳೀಯರ ಒತ್ತಾಯ.

ಜಿಲ್ಲಾಡಳಿತವು ಸಮೀಪದ ಖಾಸಗಿ ಹಾಗೂ ಕೃಷಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು, ಪಟ್ಟಣಗಳಿಗೆ ನೀರು ಪಂಪ್‌ ಮಾಡುವ ತುರ್ತು ಕ್ರಿಯಾ ಯೋಜನೆಯನ್ನು ಜಾರಿಗೆ ತರಬೇಕು. ಮುಂದಿನ ದಿನಗಳಲ್ಲಿ ಸೂಕ್ತ ಮಳೆಯಾಗದಿದ್ದರೆ ಹಾಗೂ ಆಡಳಿತ ಯಂತ್ರ ತಕ್ಷಣವೇ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳದಿದ್ದರೆ, ಕೋಲಾರ ಜಿಲ್ಲೆಯ ಪ್ರಮುಖ ಪಟ್ಟಣಗಳು ಈ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಎದುರಿಸುವುದು ನಿಶ್ಚಿತ ಎನ್ನುತ್ತಾರೆ ಜನಸಾಮಾನ್ಯರು.

‘ನಮ್ಮ ಭಾಗದಲ್ಲಿ ಅಂತರ್ಜಲ 1,500 ಅಡಿ ದಾಟಿದೆ. ಯರಗೋಳ್ ಯೋಜನೆ ಬಂದ ಮೇಲೆ ಕುಡಿಯುವ ನೀರಿಗೆ ತೊಂದರೆಯಿಲ್ಲ ಎಂದು ಭಾವಿಸಿದ್ದೆವು. ಈಗ ಒಂದೇ ಪಂಪ್‌ನಲ್ಲಿ ನೀರು ಪೂರೈಸಲಾಗುತ್ತಿದ್ದು, ವಾರಕ್ಕೊಮ್ಮೆಯೂ ಸರಿಯಾಗಿ ನೀರು ಸಿಗುತ್ತಿಲ್ಲ. ಆಡಳಿತ ಯಂತ್ರ ತಕ್ಷಣವೇ ಖಾಸಗಿ ಬೋರ್‌ವೆಲ್‌ಗಳನ್ನು ವಶಕ್ಕೆ ಪಡೆದು ಉಚಿತ ಟ್ಯಾಂಕರ್ ವ್ಯವಸ್ಥೆ ಮಾಡಬೇಕು ಎಂದು ವಿ. ಬೋಗ್ಗಲಹಳ್ಳಿ ರೈತ ಮುಖಂಡ ಶಂಕರೇಗೌಡ ಒತ್ತಾಯಿಸಿದರು.

ಕೃತಕ ಅಭಾವ ಸೃಷ್ಟಿ ಸಾಧ್ಯತೆ

ಕೋಲಾರ ಜಿಲ್ಲೆಗೆ ಫ್ಲೋರೈಡ್‌ ರಹಿತ ಶುದ್ಧ ನೀರು ಒದಗಿಸುವುದೇ ಯರಗೋಳ್‌ ಯೋಜನೆಯ ಪ್ರಾಥಮಿಕ ಉದ್ದೇಶವಾಗಿತ್ತು. ಜಲಾಶಯ ಒಣಗಿದರೆ, ಸಾರ್ವಜನಿಕರು ಅನಿವಾರ್ಯವಾಗಿ ಕ್ರಮೇಣ ಮತ್ತೆ ಅಪಾರ ಪ್ರಮಾಣದ ಫ್ಲೋರೈಡ್‌ ಮತ್ತು ರಾಸಾಯನಿಕಯುಕ್ತ ಅಂತರ್ಜಲವನ್ನೇ ನೆಚ್ಚಿಕೊಳ್ಳಬೇಕಾಗುತ್ತದೆ. ಸಾರ್ವಜನಿಕ ನೀರಿನ ಅಭಾವವನ್ನು ಬಂಡವಾಳ ಮಾಡಿಕೊಳ್ಳಲು ಖಾಸಗಿ ಟ್ಯಾಂಕರ್ ಸರಬರಾಜುದಾರರು ಈಗಾಗಲೇ ಸಿದ್ಧತೆ ನಡೆಸಿದ್ದು, ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರ ವಸೂಲಿ ಮಾಡುವ ಭೀತಿ ಎದುರಾಗಿದೆ. ಕೆ.ಸಿ. ವ್ಯಾಲಿ ಯೋಜನೆಯಡಿ ಜಿಲ್ಲೆಯ ಕೆರೆಗಳಿಗೆ ಮರುಸಂಸ್ಕರಿಸಿದ ನೀರು ಹರಿಯುತ್ತಿದ್ದರೂ, ಆ ನೀರು ಕುಡಿಯಲು ಯೋಗ್ಯವಲ್ಲದಿರುವುದರಿಂದ ತಕ್ಷಣದ ಕುಡಿಯುವ ನೀರಿನ ಅಗತ್ಯವನ್ನು ಅದರಿಂದ ಪೂರೈಸಲು ಸಾಧ್ಯವಿಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260817-18-1560712933

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ