
ಬೀದರ್: ರಸ್ತೆಗಳಲ್ಲಿ ಗುಂಡಿಯೋ, ಗುಂಡಿಗಳಲ್ಲಿ ರಸ್ತೆಯೋ...?
ಬೀದರ್: ರಸ್ತೆಗಳಲ್ಲಿ ಗುಂಡಿಯೋ, ಗುಂಡಿಗಳಲ್ಲಿ ರಸ್ತೆಯೋ...?
ನಗರದ ಪ್ರಮುಖ ರಸ್ತೆಗಳಲ್ಲಿ ಓಡಾಡಿದರೆ ಎಂಥವರಲ್ಲೂ ಈ ಪ್ರಶ್ನೆ ಮೂಡುತ್ತದೆ. ನಗರದಲ್ಲಿ ಬಹುತೇಕ ರಸ್ತೆಗಳು ಹಾಳಾಗಿದ್ದು, ಜನರ ಓಡಾಟ ದುಸ್ತರವಾಗಿದೆ. ಎಷ್ಟರಮಟ್ಟಿಗೆ ರಸ್ತೆಗಳು ಹಾಳಾಗಿವೆ ಎಂದರೆ ಇಲ್ಲಿ ಹಿಂದೆ ರಸ್ತೆ ಇತ್ತೋ ಎಂಬ ಪ್ರಶ್ನೆ ಕಾಡುತ್ತದೆ. ಅಷ್ಟರಮಟ್ಟಿಗೆ ಅಸ್ತಿತ್ವ ಇಲ್ಲದಂತಾಗಿದೆ.
ನಗರದ ನ್ಯೂ ಆದರ್ಶ ಕಾಲೊನಿ ರಸ್ತೆ ಸಂಪೂರ್ಣ ಗುಂಡಿಮಯವಾಗಿದೆ. ರಸ್ತೆ ವಿಸ್ತರಣೆ ಕಾರ್ಯ ಅರ್ಧಕ್ಕೆ ನಿಂತಿರುವುದರಿಂದ ವಾಹನ ಸಂಚಾರಕ್ಕೆ ಇನ್ನಷ್ಟು ತೊಡಕಾಗಿದೆ. ಜನ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ.
ಇನ್ನು, ಕುಂಬಾರವಾಡ ಕಮಾನ್‌ನಿಂದ ಎಸ್‌ಪಿ ಮನೆಯವರೆಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಸಂಪೂರ್ಣ ಹದಗೆಟ್ಟಿದೆ. ಹಾರೂರಗೇರಿ ಕಮಾನ್ ಎದುರಿನ ರಸ್ತೆಯ ಸಮಸ್ಯೆಗೆ ಎಂದೂ ಮುಕ್ತಿ ಸಿಗುವುದಿಲ್ಲವೋ ಎಂಬಂತಾಗಿದೆ. ಜನ ಹಿಡಿಶಾಪ ಹಾಕುತ್ತ ಸಂಚರಿಸುತ್ತಾರೆ. ಮೈಲೂರ್ ಕ್ರಾಸ್‌ನಿಂದ ಮೈಲೂರ್ ವರೆಗಿನ ರಸ್ತೆಯ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಮೈಲೂರ್‌ನಿಂದ ಚಿದ್ರಿ ರಿಂಗ್‌ರೋಡ್ ಸಂಪರ್ಕ ಕಲ್ಪಿಸುವ ರಸ್ತೆಯೂ ಹದಗೆಟ್ಟಿದೆ. ಆ ಕಡೆ ತಿರುಗಿ ನೋಡುವವರೂ ಇಲ್ಲದಂತಾಗಿದೆ.
ಅಂದಹಾಗೆ, ಈ ಎಲ್ಲ ಪ್ರಮುಖ ರಸ್ತೆಗಳು ನಗರದ ಹೃದಯ ಭಾಗದಲ್ಲಿವೆ. ನಗರದ ಪ್ರಮುಖ ಸ್ಥಳಗಳಿಗೆ ಹೋಗಬೇಕಾದರೆ ಈ ರಸ್ತೆಗಳ ಮೂಲಕವೇ ಓಡಾಡಬೇಕಾಗುತ್ತದೆ. ಗಣ್ಯರು, ಅಧಿಕಾರಿಗಳು ಸೇರಿದಂತೆ ಎಲ್ಲಾ ವರ್ಗದವರು ಈ ರಸ್ತೆಗಳಿಂದಲೇ ಸಂಚರಿಸುತ್ತಾರೆ. ಆದರೆ, ಯಾರೂ ಕೂಡ ಗಂಭೀರವಾಗಿ ತೆಗೆದುಕೊಂಡು ಅವುಗಳಿಗೆ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳುವ ಗೋಜಿಗೆ ಹೋಗಿಲ್ಲ. ಇದರ ನೇರ ಪರಿಣಾಮ ಜನಸಾಮಾನ್ಯರಿಗೆ ತಟ್ಟುತ್ತಿದೆ.
‘ಬೀದರ್ ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿ ವರ್ಷ ಕಳೆದರೂ ಪರಿಸ್ಥಿತಿ ಸುಧಾರಿಸಿಲ್ಲ. ರಸ್ತೆ, ಚರಂಡಿಯಂಥ ಕನಿಷ್ಠ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಲು ಸಾಧ್ಯವಾಗಿಲ್ಲ. ಕೋಟ್ಯಂತರ ರೂಪಾಯಿ ಜನರ ತೆರಿಗೆ ಹಣ ಎಲ್ಲಿಗೆ ಹೋಗುತ್ತಿದೆ. ಜನರಿಗೆ ಮೂಲಸೌಕರ್ಯ ಕಲ್ಪಿಸುವುದು ಅಧಿಕಾರದಲ್ಲಿರುವವರ ಕೆಲಸವಲ್ಲವೇ’ ಎಂದು ಸ್ಥಳೀಯರಾದ ಸಂಗಮೇಶ, ಚಂದ್ರಕಾಂತ ಹಾಗೂ ಬಾಲಾಜಿ ಪ್ರಶ್ನಿಸಿದ್ದಾರೆ.
ನಗರದ ಹಲವೆಡೆ ರಸ್ತೆಗಳಲ್ಲಿ ಗುಂಡಿ ಬಿದ್ದಿರುವುದನ್ನು ಖಂಡಿಸಿ ಇತ್ತೀಚೆಗೆ ಬಿಜೆಪಿ ಹಾಗೂ ಕೆಲ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿದ ಬಳಿಕ ಎಚ್ಚೆತ್ತಿರುವ ಪಾಲಿಕೆ, ನಗರದ ಕೆಲವೆಡೆಗಳಲ್ಲಿ ಗುಂಡಿಗಳಲ್ಲಿ ಕಾಂಕ್ರೀಟ್, ಮಣ್ಣು ಹಾಕಿ ತಾತ್ಕಾಲಿಕವಾಗಿ ಮುಚ್ಚುವ ಕೆಲಸ ಮಾಡಿದೆ. ಮಳೆಯಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ.
ಈ ಸಂಬಂಧ ಪಾಲಿಕೆಯ ಆಯುಕ್ತ ಮುಕುಲ್ ಜೈನ್ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಮಾಹಿತಿಗೆ ಲಭ್ಯರಾಗಲಿಲ್ಲ.
ಸ್ವಲ್ಪ ಮಳೆ ಬಂದರೂ ಬೀದರ್ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ಸಂಗ್ರಹಗೊಳ್ಳುತ್ತದೆ. ಮಳೆ ನೀರು ನೇರ ಚರಂಡಿಯಲ್ಲಿ ಹರಿದು ಹೋಗದೇ ರಸ್ತೆಗಳಲ್ಲಿ ಜಮಾವಣೆಗೊಳ್ಳುತ್ತದೆ. ಇದರಿಂದ ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ.
ಭಾರಿ ಮಳೆ ಬಂದರಂತೂ ನೀರು ರಸ್ತೆಗಳಲ್ಲಿ ಹೊಳೆಯಂತೆ ಹರಿಯುತ್ತದೆ. ಇದು ಇಂದು, ನಿನ್ನೆಯದಲ್ಲ. ಅನೇಕ ವರ್ಷಗಳಿಂದ ಸಮಸ್ಯೆ ಆಗುತ್ತಿದೆ. ಆದರೆ, ಅದರ ಕಾರಣ ತಿಳಿದು ಸಮಸ್ಯೆ ನೀಗಿಸುವ ಗೋಜಿಗೆ ಹೋಗಿಲ್ಲ. ಮನ್ನಳ್ಳಿ ರಸ್ತೆ, ಬೊಮ್ಮಗೊಂಡೇಶ್ವರ ವೃತ್ತ, ಚಿದ್ರಿ ರಸ್ತೆ, ಓಲ್ಡ್ ಸಿಟಿಯಲ್ಲಿ ಪದೇ ಪದೇ ಈ ಸಮಸ್ಯೆ ಎದುರಾಗುತ್ತದೆ.
ಪ್ರತಿ ವರ್ಷ ಹಾಳಾಗುವ ರಸ್ತೆಗಳು
ಈ ವರ್ಷ ಅಷ್ಟೇನೂ ಹೇಳಿಕೊಳ್ಳುವಂಥ ಮಳೆಯಾಗಿಲ್ಲ. ಆದರೆ, ಸಣ್ಣ ಮಳೆಗೆ ರಸ್ತೆಗಳೆಲ್ಲ ಹಾಳಾಗಿವೆ.
ಇದು ಈ ವರ್ಷದ ಕಥೆಯಷ್ಟೇ ಅಲ್ಲ, ಪ್ರತಿ ವರ್ಷ ಇದೇ ರೀತಿ ರಸ್ತೆಗಳು ಹಾಳಾಗುತ್ತಿದ್ದು, ರಸ್ತೆಗಳ ಗುಣಮಟ್ಟದ ಬಗ್ಗೆ ಪ್ರಶ್ನೆ ಮೂಡುವಂತಾಗಿದೆ. ಪ್ರತಿ ವರ್ಷ ಅನುದಾನವು ರಸ್ತೆಗಳ ಹೆಸರಲ್ಲಿ ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದೆಯೋ ಅಥವಾ ಯಾರದ್ದಾದರೂ ಕಿಸೆ ಸೇರುತ್ತಿದೆಯೋ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.