
ಗುರುಮಠಕಲ್: ರೋಗಗ್ರಸ್ತ ಕಾಲುವೆಗಳಿಗೆ ಬೇಕು ಚಿಕಿತ್ಸೆ
ಗುರುಮಠಕಲ್: ‘ಮಳೆ ಸುರಿದು ಕೆರೆ ತುಂಬಿದರೂ ನಮ್ಮ ಜಮೀನುಗಳಿಗೆ ಬಳಕೆ ಮಾಡುವ ನೀರಿಗಿಂತಲೂ ಎಲ್ಲೆಂದರಲ್ಲಿ ಸೋರಿಕೆಯಾಗಿ ಪೋಲಾಗುವ ನೀರಿನ ಪಾಲೇ ಹೆಚ್ಚು. ಸರ್ಕಾರ ತುರ್ತಾಗಿ ನಮ್ಮ ಕೆರೆಗಳ ಕೆಳಗಿನ ರೋಗಗ್ರಸ್ತ ಹೊಲಗಾಲುವೆಗಳ ಚಿಕಿತ್ಸೆಗೆ ಮುಂದಾಗಬೇಕಿದೆ’ ಎಂಬುದು ತಾಲ್ಲೂಕಿನ ರೈತರ ಆಗ್ರಹ.
ಕಾಲುವೆಗಳ ಎರಡೂ ಬದಿಯ ಕಲ್ಲುಗಳು ಕಾಲುವೆಯೊಳಗೆ ಉರುಳಿವೆ. ಲಂಟಾನ ಪೊದೆ, ಸರ್ಕಾರಿ ಜಾಲಿ, ಮುಳ್ಳಿನ ಜಾತಿಯ ಪೊದೆಗಳು ಬೆಳೆದು ನಿಂತಿವೆ. ಸಿಮೆಂಟಿನಿಂದ ನಿರ್ಮಿಸಿದ ಕಾಲುವೆಗಳಿಗೆ ಎಲ್ಲೆಂದರಲ್ಲಿ ರಂಧ್ರಗಳು, ಕಲ್ಲಿನಿಂದ ಕಟ್ಟಿದ ಕಾಲುವೆಗಳು ಉರುಳಿ ದಶಕವೇ ಕಳೆದರೂ ದುರಸ್ತಿ ಮಾತ್ರ ಮಾಡಿಲ್ಲ. ಇದು ಕಾಕಲವಾರ, ಕೇಶ್ವಾರ ಸೇರಿದಂತೆ ತಾಲ್ಲೂಕಿನ ಕೆರೆಗಳ ಕೆಳಗಿರುವ ಕಾಲುವೆಗಳ ದೈನೇಸಿ ಸ್ಥಿತಿ.
‘ಒಂದೆಡೆ ಕೆರೆಗಳಲ್ಲಿ ಹೂಳು ತುಂಬಿ, ಸಂಗ್ರಹ ಸಾಮರ್ಥ್ಯ ಕುಸಿತ. ಹೊಲಗಾಲುವೆಗಳ ಅವ್ಯವಸ್ಥೆಯಿಂದ ಪೋಲಾಗುತ್ತಿರುವ ಜೀವ ಜಲ ಇನ್ನೊಂದೆಡೆ. ಒಟ್ಟಾರೆ ರೈತರ ಬೆಳೆಗಳಿಗೆ ಮಾತ್ರ ಸದಾ ನೀರಿನ ಕೊರತೆಯೇ. ಸದ್ಯ ಕಾಲುವೆಗಳು ಪಳಯುಳಿಕೆಗಳಂತೆ ಮಾರ್ಪಟ್ಟಿವೆ’ ಎಂದು ರೈತರು ಅಲವತ್ತುಕೊಳ್ಳುತ್ತಾರೆ.
ಇಪ್ಪತ್ತು ವರ್ಷಗಳ ಕೆಳಗೆ ನಿರ್ಮಿಸಲಾದ ಕಾಲುವೆ ಅಲ್ಲಲ್ಲಿ ಧ್ವಂಸಗೊಂಡಿದೆ. ಅದರಿಂದ ನೀರು ಸೋರಿಕೆಯಾಗಿ ಕೆರೆಯಿಂದ ಕೂಗಳತೆಯ ದೂರದ ಜಮೀನುಗಳಿಗೂ ನೀರು ತಲುಪದಾಗಿದೆ. ಇನ್ನು ಕೊನೆಯ ಭಾಗಕ್ಕೆ ನೀರು ತಲುಪುವಷ್ಟಕ್ಕೆ ‘ನೀರು ಸ್ವತಃ ಯುದ್ಧ ಗೆದ್ದು ಬಂದಂತೆ’ ಎಂದು ಕೇಶ್ವಾರ ಗ್ರಾಮದ ರೈತರು ವ್ಯಂಗ್ಯವಾಡಿದರು.
ರೈತರಿಂದಲೇ ಕಾಲುವೆ ದುರಸ್ತಿ: ತಾಲ್ಲೂಕಿನ ಚಿಂತನಳ್ಳಿ ಗ್ರಾಮದಲ್ಲಿ ಕೆರೆಯ ಕೆಳಗಿನ ರೈತರು ಸರ್ಕಾರದ ಮೇಲಿನ ಭರವಸೆ ಕಳೆದು, ಸ್ವಂತ ಹಣ ಖರ್ಚು ಮಾಡಿ, ಜೆಸಿಬಿ ಮೂಲಕ ಕಳೆದ ವಾರದಲ್ಲಿ ಕಾಲುವೆ ಹೂಳು, ಪೊದೆ, ಕಲ್ಲುಗಳನ್ನು ತೆಗೆಸಿ ದುರಸ್ತಿ ಮಾಡಿದ್ದಾರೆ.
ನಜರಾಪುರ ರೈತರು ಆಗಾಗ ಕಾಲುವೆಗಳಲ್ಲಿನ ಹೂಳನ್ನು ತೆಗೆದುಕೊಳ್ಳುತ್ತಿದ್ದಾರೆ. ಮಿನಸಪುರ ಕೆರೆ ವ್ಯಾಪ್ತಿಯಲ್ಲಿ ಕೆಲವು ಕಾಲುವೆಗಳನ್ನು ಉದ್ಯೋಗ ಖಾತ್ರಿಯಡಿ ಹೂಳು ತೆಗೆಯಲಾಗಿದೆ ಎಂದು ರೈತರು ತಿಳಿಸಿದರು
‘ನಮ್ಮಿಂದಾದಷ್ಟು ನಾವು ಮಾಡಿಕೊಂಡೆವು. ಆಳುವ ರಾಜರಿಗೆ ಬಡ ರೈತರ ಸಮಸ್ಯೆ ಪರಿಹರಿಸುವ ಸಮಯವಿಲ್ಲ. ಕಾಲುವೆಗಳನ್ನು ಸಂಪೂರ್ಣ ಸರಿಪಡಿಸಲು ಬೇಕಾದ ಹಣ ರೈತ ಎಲ್ಲಿಂದ ತರೋದು’ ಎಂದು ರೈತರು ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು.
ಸಮಸ್ಯೆಯ ಕುರಿತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ.
ಬಹುತೇಕ ಕಚ್ಚಾ ಕಾಲುವೆಗಳು
ತಾಲ್ಲೂಕು ವ್ಯಾಪ್ತಿಯ ಕೆರೆಗಳ ರೈತರ ಜಮೀನುಗಳಿಗೆ ಹಲವೆಡೆ ಕಚ್ಚಾ(ಮಣ್ಣಿನ ಕಾಲುವೆ) ಕಾಲುವೆಗಳಿಂದ ನೀರು ಹರಿಸುತ್ತಾರೆ. ಇದರಿಂದಾಗಿ ನೀರು ಜಮೀನಿಗೆ ತಲುಪುವುದಕ್ಕಿಂತ ಪೋಲಾಗುತ್ತಿರುವುದೇ ಹೆಚ್ಚು.
ಕಲ್ಲಿನ ಅಥವಾ ಕಾಂಕ್ರಿಟ್ ಕಾಲುವೆಗಳನ್ನು ನಿರ್ಮಿಸಿದರೆ ನೀರಿನ ಕೊರತೆ ನೀಗಿಸುವ, ಕೊನೆಯ ಜಮೀನಿಗೂ ಸರಾಗವಾಗಿ ನೀರು ಹಾಯಿಸುವ ಮತ್ತು ಅನಗತ್ಯ ಪೋಲಾಗುವ ನೀರನ್ನು ಉಳಿಸಲು ಸಾಧ್ಯವಾಗಲಿದೆ ಎಂಬುದು ರೈತರ ಅಂಬೋಣ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260830-30-1056915878