ದಾವಣಗೆರೆ: ಬಿಸಿಯೂಟ ಯೋಜನೆಗೆ ಸಕ್ಕರೆ ದರ ಏರಿಕೆ ಬಿಸಿ

ದಾವಣಗೆರೆ: ಬಿಸಿಯೂಟ ಯೋಜನೆಗೆ ಸಕ್ಕರೆ ದರ ಏರಿಕೆ ಬಿಸಿ

ದಾವಣಗೆರೆ: ಬಿಸಿಯೂಟ ಯೋಜನೆಗೆ ಸಕ್ಕರೆ ದರ ಏರಿಕೆ ಬಿಸಿ

ದಾವಣಗೆರೆ: ಸಕ್ಕರೆ ದರ ಏರಿಕೆಯ ಬಿಸಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಗೂ ತಟ್ಟಿದೆ. ಬಿಸಿಯೂಟ ನಿರ್ವಹಣೆ ಹೊಣೆ ಹೊತ್ತಿರುವ ಮುಖ್ಯಶಿಕ್ಷಕರು ಹೆಚ್ಚುವರಿ ಹಣವನ್ನು ತಮ್ಮ ಕೈಯಿಂದ ಭರಿಸುತ್ತಿದ್ದಾರೆ.

ರಾಜ್ಯದ ಸರ್ಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟದ ಜೊತೆ ಸಕ್ಕರೆ ಬೆರೆಸಿದ ಹಾಲು ಹಾಗೂ ರಾಗಿ ಮಾಲ್ಟ್‌ ನೀಡಲಾಗುತ್ತಿದೆ. ಸಕ್ಕರೆ ದರ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 75ರ ಆಸುಪಾಸಿನಲ್ಲಿದೆ. ಆದರೆ, ಸರ್ಕಾರವು ಸಕ್ಕರೆ ಖರೀದಿಗಾಗಿ ಆಯಾ ಶಾಲೆಗೆ ₹32 ನೀಡುತ್ತಿದೆ. ಅಂದರೆ ಒಂದು ಪಟ್ಟು ಹೆಚ್ಚಾಗಿರುವ ದರವನ್ನು ಶಾಲೆಗಳ ಮುಖ್ಯಸ್ಥರು ತೆರಬೇಕಿದೆ. ಬಿಸಿಯೂಟ ನಿರ್ವಹಣೆ ಮಾಡುವ ಮುಖ್ಯಶಿಕ್ಷಕರು, 10 ದಿನಗಳಿಂದ ಹೆಚ್ಚುವರಿ ಹಣವನ್ನು ತಮ್ಮ ಜೇಬಿನಿಂದ ನೀಡಿ ಸಕ್ಕರೆ ಖರೀದಿಸುವಂತಾಗಿದೆ ಎಂದು ಮುಖ್ಯಶಿಕ್ಷಕರೊಬ್ಬರು ತಿಳಿಸಿದರು.

‘ನಮ್ಮ ಶಾಲೆಯಲ್ಲಿ 326 ವಿದ್ಯಾರ್ಥಿಗಳಿದ್ದು, ಸರಾಸರಿ 300 ಹಾಜರಾತಿ ಇದೆ. ಹಾಲು ಹಾಗೂ ರಾಗಿ ಮಾಲ್ಟ್‌ಗೆ ದಿನವೂ 2 ಕೆ.ಜಿ. ಸಕ್ಕರೆಯನ್ನು ಬಳಸುತ್ತೇವೆ. ಸರ್ಕಾರವು ಎರಡು ಕೆ.ಜಿಗೆ ₹ 64 ನೀಡಿದರೆ, ಮಾರುಕಟ್ಟೆಯಲ್ಲಿ ಖರೀದಿ ದರ ₹150 ಆಗುತ್ತದೆ. ದಿನಕ್ಕೆ ಅಂದಾಜು ₹90 ಹೊರೆಯಾಗುತ್ತಿದೆ. ಈಗಾಗಲೇ ಪ್ರತಿ ಮೊಟ್ಟೆ ಖರೀದಿಗೆ ₹ 2 ಹೆಚ್ಚುವರಿ ದರವನ್ನು ಭರಿಸಿ ಬಸವಳಿದಿದ್ದೇವೆ. ಈಗ ಸಕ್ಕರೆ ದರವೂ ಹೊಡೆತ ನೀಡುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ, ನಗರದ ಶಾಲೆಯೊಂದರ ಮುಖ್ಯಶಿಕ್ಷಕರೊಬ್ಬರು ಹೇಳಿದರು.

ಪ್ರತಿ ಮೊಟ್ಟೆ ಖರೀದಿಗೆ ಸರ್ಕಾರವು ₹ 6 ನೀಡುತ್ತಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ₹7ರಿಂದ ₹ 8 ಬೆಲೆ ಇದೆ. ಶ್ರಾವಣ ಮಾಸದ ಕಾರಣ ಸದ್ಯ ಮೊಟ್ಟೆಯ ದರ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದ್ದರೂ, ಅದು ಹಲವು ತಿಂಗಳಿನಿಂದ ಏರುಗತಿಯಲ್ಲಿತ್ತು. ಆದರೂ ಸರ್ಕಾರ ದರ ಪರಿಷ್ಕರಣೆಗೆ ಮುಂದಾಗಲಿಲ್ಲ ಎಂದು ಅಳಲು ತೋಡಿಕೊಂಡರು.

ಅಕ್ಕಿ, ಬೇಳೆ, ಗೋಧಿ ಹಾಗೂ ಅಡುಗೆ ಎಣ್ಣೆಯನ್ನು ಸರ್ಕಾರವು ಏಜೆನ್ಸಿಗಳ ಮೂಲಕ ಶಾಲೆಗಳಿಗೆ ಪೂರೈಸುತ್ತಿದೆ. ತರಕಾರಿ, ಉಪ್ಪು, ಸಾಂಬಾರು ಪುಡಿಯನ್ನು ಖರೀದಿಸಲು ಆಯಾ ಮುಖ್ಯಶಿಕ್ಷಕರ ಖಾತೆಗೆ ಪರಿವರ್ತನಾ ವೆಚ್ಚವನ್ನು ಜಮಾ ಮಾಡುತ್ತದೆ. 1ರಿಂದ 5ನೇ ತರಗತಿಯವರೆಗಿನ ಪ್ರತಿ ವಿದ್ಯಾರ್ಥಿಗೆ ₹2.39 ಹಾಗೂ 6ರಿಂದ 10ನೇ ತರಗತಿಯವರೆಗಿನ ಪ್ರತಿ ವಿದ್ಯಾರ್ಥಿಗೆ ₹ 3.55 ಲೆಕ್ಕಹಾಕಿ ಸರ್ಕಾರ ಈ ವೆಚ್ಚವನ್ನು ನೀಡುತ್ತದೆ. ಆದರೆ ಮೊಟ್ಟೆ, ಬಾಳೆಹಣ್ಣು, ಸಕ್ಕರೆಯನ್ನು ಆಯಾ ಶಾಲೆಯವರೇ ಸ್ಥಳೀಯವಾಗಿ ಖರೀದಿಸಬೇಕಿದೆ. ಇದು ನಮಗೆ ಹೊರೆಯಾಗಿದೆ’ ಎಂದು ಮುಖ್ಯ ಶಿಕ್ಷಕರು ತಿಳಿಸಿದ್ದಾರೆ.

ತೆರೆಯದ ‘ಪ್ರವೇಶಾತಿ’ ವಿಂಡೊ

ಸರ್ಕಾರಿ ಶಾಲೆಗೆ ಸೇರುವ ಪ್ರತಿ ವಿದ್ಯಾರ್ಥಿಯನ್ನೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಪೋರ್ಟಲ್‌ನಲ್ಲಿ ದಾಖಲಿಸಲಾಗುತ್ತದೆ. ಜುಲೈ 31ರವರೆಗೆ ಪ್ರವೇಶಾತಿ ಗುರಿ ನೀಡಲಾಗಿತ್ತು. ಆದರೆ, ನಂತರ ವರ್ಗಾವಣೆಯಾಗಿ ಶಾಲೆಗೆ ಸೇರಿರುವ ವಿದ್ಯಾರ್ಥಿಗಳನ್ನು ಪೋರ್ಟಲ್‌ನಲ್ಲಿ ದಾಖಲಿಸಲು ಸಾಧ್ಯವಾಗುತ್ತಿಲ್ಲ.

ಆನ್‌ಲೈನ್‌ ಪೋರ್ಟಲ್‌ನಲ್ಲಿ ‘ಪ್ರವೇಶಾತಿ’ ವಿಂಡೊ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದರೂ ಅವರ ಸೇರ್ಪಡೆಯನ್ನು ನಿರಾಕರಿಸುವಂತಿಲ್ಲ. ಭೌತಿಕವಾಗಿ ಪ್ರವೇಶಾತಿ ನೀಡಿ ಅವರಿಗೆ ಬಿಸಿಯೂಟ ನೀಡಲಾಗುತ್ತಿದೆ. ಸರ್ಕಾರವು ಪೋರ್ಟಲ್‌ನಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಲೆಕ್ಕಹಾಕಿ ಬಿಸಿಯೂಟದ ವೆಚ್ಚವನ್ನು ಆಯಾ ಶಾಲೆಗಳ ಮುಖ್ಯಶಿಕ್ಷಕರ ಬಿಸಿಯೂಟದ ಖಾತೆಗೆ ಪಾವತಿಸುತ್ತದೆ. ಆದರೆ ವಾಸ್ತವವಾಗಿ ಪ್ರತಿ ಶಾಲೆಯಲ್ಲಿ ಒಂದಿಬ್ಬರು ವಿದ್ಯಾರ್ಥಿಗಳು ಹೆಚ್ಚಿಗೆ ಇದ್ದಾರೆ ಎಂದು ಶಿಕ್ಷಕರೊಬ್ಬರು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260829-44-1434624069

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ