ಸಿದ್ದಿ ಸಮುದಾಯಕ್ಕೆ 6 ತಿಂಗಳಿಂದ ಕೈಸೇರದ ಆಹಾರ ಕಿಟ್
ಕಾರವಾರ: ಬುಡಕಟ್ಟು ಸಿದ್ದಿ ಸಮುದಾಯದವರಿಗೆ ಪ್ರತಿ ತಿಂಗಳು ಪೂರೈಕೆಯಾಗಬೇಕಿದ್ದ ಪೌಷ್ಟಿಕ ಆಹಾರ ಕಿಟ್ ಕಳೆದ 6 ತಿಂಗಳುಗಳಿಂದ ಸ್ಥಗಿತಗೊಂಡಿದೆ. ಮಳೆಗಾಲದಲ್ಲಿ ಕೆಲಸವೂ ಇಲ್ಲದೆ, ಆದಾಯವೂ ಇಲ್ಲದ ಸಿದ್ದಿ ಜನರು ಆಹಾರ ಸಾಮಗ್ರಿ ಖರೀದಿಗೆ ಪರದಾಡುತ್ತಿದ್ದಾರೆ.
ಯಲ್ಲಾಪುರ, ಹಳಿಯಾಳ ಸೇರಿದಂತೆ ಜಿಲ್ಲೆಯ 7 ತಾಲ್ಲೂಕುಗಳ 4,252 ಸಿದ್ದಿ ಕುಟುಂಬಗಳಿಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ ಪೋಷಕಾಂಶಯುಕ್ತ ಆಹಾರ ಸಾಮಗ್ರಿಗಳ ಕಿಟ್‌ನ್ನು ವಿತರಿಸಲಾಗುತ್ತಿತ್ತು. ಜಿಲ್ಲೆಯಲ್ಲಿ ಫೆಬ್ರವರಿ ಕೊನೆಯಲ್ಲಿ ಕಿಟ್ ವಿತರಿಸಿದ ಬಳಿಕ, ಈವರೆಗೂ ಕಿಟ್ ಪೂರೈಕೆ ಆಗಿಲ್ಲ.
‘ಆರ್ಥಿಕವಾಗಿ, ಸಾಮಾಜಿಕವಾಗಿ ತೀರಾ ಹಿಂದುಳಿದ ಸಿದ್ದಿ ಜನರಿಗೆ ಪೋಷಕಾಂಶಯುಕ್ತ ಆಹಾರ ಸಾಮಗ್ರಿಗಳನ್ನು ಒಳಗೊಂಡ ಕಿಟ್‌ನ್ನು ಸರ್ಕಾರ ನೀಡುತ್ತಿತ್ತು. ವರ್ಷದ 6 ತಿಂಗಳು ಮಾತ್ರ ಈಡುತ್ತಿದ್ದ ಯೋಜನೆಯನ್ನು ವರ್ಷದುದ್ದಕ್ಕೂ ಪೂರೈಸುವುದಾಗಿ ಭರವಸೆ ನೀಡಿತ್ತು. ಆದರೆ, 6 ತಿಂಗಳಿನಿಂದ ವಿತರಣೆಯನ್ನೂ ನಿಲ್ಲಿಸಲಾಗಿದೆ’ ಎಂದು ಯಲ್ಲಾಪುರದ ಜಾನ್ ಸಿದ್ದಿ ಅಸಮಾಧಾನ ವ್ಯಕ್ತಪಡಿಸಿದರು.
‘ಮಳೆಗಾಲದ ಸಮಯದಲ್ಲಿ ಸಿದ್ದಿ ಜನರಿಗೆ ಕೆಲಸವೂ ಇರದು. ಕೈಗೆ ಫಸಲು ಕೂಡ ಸಿಗದು. ಜೂನ್‌ನಿಂದ ನವೆಂಬರ್‌ವರೆಗೆ ಗ್ರಾಮಿಣ ಪ್ರದೇಶದ ಸಿದ್ದಿ ಸಮುದಾಯದ ಜನರು ಆದಾಯವೂ ಇಲ್ಲದೆ ಇಂದಿಗೂ ಪರದಾಡುತ್ತಿದ್ದಾರೆ. ಅಡುಗೆ ಎಣ್ಣೆ, ಇನ್ನಿತರ ಪದಾರ್ಥಗಳ ಖರೀದಿಗೆ ಕೈಗಡ ಸಾಲ, ಉದ್ರಿ ವ್ಯವಹಾರ ನಡೆಸುವ ಸ್ಥಿತಿಗೆ ಸಿಲುಕಿದ್ದಾರೆ. ಜನರಿಗೆ ಅಗತ್ಯವಿರುವ ಸಮಯದಲ್ಲೇ ಪೌಷ್ಟಿಕ ಆಹಾರದ ಕಿಟ್ ನೀಡದಿದ್ದರೆ ಯೋಜನೆ ಜಾರಿಗೆ ತಂದು ಪ್ರಯೋಜನವೇನು?’ ಎಂದು ಹಳಿಯಾಳದ ಸಾಮಾಜಿಕ ಕಾರ್ಯಕರ್ತೆ ಜೂಲಿಯಾನಾ ಸಿದ್ದಿ ಖಾರವಾಗಿ ಪ್ರಶ್ನಿಸಿದರು.
‘ಆರಂಭದ ದಿನಗಳಲ್ಲಿ ಪ್ರತಿ ತಿಂಗಳಿಗೆ ಕಿಟ್ ವಿತರಿಸಲಾಗುತ್ತಿತ್ತು. ನಂತರ ಎರಡು ತಿಂಗಳಿಗೊಮ್ಮೆ ಕಿಟ್ ವಿತರಣೆಯಾಗತೊಡಗಿತು. ಒಮ್ಮೆಲೇ ಎರಡು ತಿಂಗಳ ಕಿಟ್ ನೀಡಿದರೆ ಅದರಲ್ಲಿರುವ ಮೊಟ್ಟೆಗಳು ಹಾಳಾಗತೊಡಗಿದವು. ಈಗ 6 ತಿಂಗಳಿನಿಂದ ಕಿಟ್‌ನ್ನೇ ನೀಡದೆ ಬಡ ಜನರನ್ನು ಸಮಸ್ಯೆಗೆ ತಳ್ಳಿದ್ದಾರೆ’ ಎಂದು ದೂರಿದರು.
ವಾರ್ಷಿಕವಾಗಿ ₹5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ, ಅರಣ್ಯದಂಚಿನ ಪ್ರದೇಶಗಳಲ್ಲಿ ಕೃಷಿ, ಕೂಲಿ ಮಾಡಿ ಬದುಕುವ ಸಿದ್ದಿ ಸಮುದಾಯದ ಕುಟುಂಬಕ್ಕೆ ಪೌಷ್ಟಿಕ ಆಹಾರ ಕಿಟ್ ವಿತರಿಸಲಾಗುತ್ತಿದೆ. ಸಿದ್ದಿ ಜನರಿಗೆ ಗುಣಮಟ್ಟದ ಆಹಾರ ಸಿಗಬೇಕು ಎಂಬ ಕಾರಣದಿಂದ ಅಕ್ಕಿ, ದ್ವಿದಳ ಧಾನ್ಯಗಳು, ಖಾದ್ಯ ತೈಲ, ಬೆಲ್ಲದ ಜೊತೆಗೆ ತಲಾ 30 ಮೊಟ್ಟೆ ಪ್ರತಿ ಕಿಟ್‌ನಲ್ಲಿರಲಿದೆ. ಆಯಾ ಗ್ರಾಮಗಳಿಗೆ ತೆರಳಿ ಕಿಟ್ ವಿತರಣೆ ಮಾಡಲಾಗುತ್ತದೆ.
‘ಸಿದ್ದಿ ಸಮುದಾಯದವರಿಗೆ ಕಾಲಕಾಲಕ್ಕೆ ವಿತರಿಸುವ ಕಿಟ್ ವಿತರಣೆ ಸ್ಥಗಿತಗೊಳಿಸಲಾಗಿದೆ. ಈಚೆಗೆ ಫಲಾನುಭವಿಗಳು ಪೌಷ್ಟಿಕ ಆಹಾರ ಪಡೆಯಲು ಹೊಂದಿರುವ ಗುರುತಿನ ಚೀಟಿ ದೃಢೀಕರಣ ಮಾಡಿಕೊಳ್ಳಲು ಸೂಚನೆ ಬಂದಿದೆ. ಆರಂಭದಲ್ಲಿ ಮನೆ ಮನೆಗೆ ತೆರಳಿ ದೃಢೀಕರಣ ಮಾಡಿಸಿದ್ದ ಅಧಿಕಾರಿಗಳು ಈಗ ಫಲಾನುಭವಿಗಳು ಕಚೇರಿಗೆ ಬರಲು ಸೂಚಿಸುತ್ತಿದ್ದಾರೆ. ವೃದ್ಧರು, ಮಹಿಳೆಯರಿಗೆ ಅಲೆದಾಟ ನಡೆಸುವುದೆ ಸಮಸ್ಯೆಯಾಗುತ್ತಿದೆ’ ಎಂದು ಜೂಲಿಯಾನಾ ಸಿದ್ದಿ ದೂರಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260830-20-1353830226