ಉತ್ತರ ಕರ್ನಾಟಕದಲ್ಲಿ ಮಕ್ಕಳ ಆರೋಗ್ಯಕ್ಕೆ ಬಡತನದ ಸಂಕಟ: ಸದ್ಗುರು ಶ್ರೀ ಮಧುಸೂದನ ಸಾಯಿ

ಉತ್ತರ ಕರ್ನಾಟಕದಲ್ಲಿ ಮಕ್ಕಳ ಆರೋಗ್ಯಕ್ಕೆ ಬಡತನದ ಸಂಕಟ: ಸದ್ಗುರು ಶ್ರೀ ಮಧುಸೂದನ ಸಾಯಿ

ಉತ್ತರ ಕರ್ನಾಟಕದಲ್ಲಿ ಮಕ್ಕಳ ಆರೋಗ್ಯಕ್ಕೆ ಬಡತನದ ಸಂಕಟ: ಸದ್ಗುರು ಶ್ರೀ ಮಧುಸೂದನ ಸಾಯಿ

ವಿಜಯಪುರ: "ಉತ್ತರ ಕರ್ನಾಟಕ ಭಾಗದಲ್ಲಿ ಅಪೌಷ್ಟಿಕತೆಯಿಂದಾಗಿ ರಕ್ತಹೀನತೆ, ಕಬ್ಬಿಣಾಂಶದ ಕೊರತೆ ವ್ಯಾಪಕವಾಗಿದೆ. ಇದರಿಂದ ಮಕ್ಕಳ ಎತ್ತರ ಕಡಿಮೆಯಾಗುತ್ತಿದ್ದು, ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. " ಎಂದು 'ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್' ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಎಚ್ಚರಿಸಿದರು.

ನಗರದಲ್ಲಿ ನಡೆದ "ದಿವ್ಯ ಸಂಜೆ" ಸಂವಾದ ಕಾರ್ಯಕ್ರಮದಲ್ಲಿ ಬಸವ ಸಮಿತಿ ಅಧ್ಯಕ್ಷ ಡಾ ಅರವಿಂದ ಜತ್ತಿ ಅವರು ಕೇಳಿದ ಪ್ರಶ್ನೆಗಳಿಗೆ ಸದ್ಗುರು ಉತ್ತರಿಸಿದರು.

"ಸಾಯಿಶ್ಯೂರ್ ಮುಂಜಾನೆ ಪೌಷ್ಟಿಕ ಆಹಾರ ಯೋಜನೆ ಆರಂಭಿಸಿದ ನಂತರ ಪರಿಸ್ಥಿತಿಯಲ್ಲಿ ಬದಲಾವಣೆ ಕಂಡುಬರುತ್ತಿದೆ. ಕರ್ನಾಟಕದಲ್ಲಿ ಪ್ರತಿದಿನ ಒಟ್ಟು 55 ಲಕ್ಷ ಮಕ್ಕಳಿಗೆ ಸಾಯಿ ಶ್ಯೂರ್ ಪೌಷ್ಟಿಕ ಉಪಾಹಾರ ಸಿಗುತ್ತಿದೆ. ವಿಜಯಪುರ ಜಿಲ್ಲೆಯ 3 ಲಕ್ಷ ಮಕ್ಕಳು ಇದರ ಫಲಾನುಭವಿಗಳಾಗಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ವರ್ಷಕ್ಕೆ 100 ಕೋಟಿ ಖರ್ಚು ಬರುತ್ತಿದೆ. ಅದರಲ್ಲಿ ಸರ್ಕಾರವು 25 ಕೋಟಿ ರೂಪಾಯಿ ಅನುದಾನ ನೀಡುತ್ತಿದೆ" ಎಂದು ಸದ್ಗುರುಗಳು ವಿವರಿಸಿದರು.

ಉತ್ತರ ಕರ್ನಾಟಕದಲ್ಲಿ ಬಡತನವಿದೆ (Poverty Prevails in North Karnataka). ಹಲವು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಡತನದ ಕಾರಣಕ್ಕೆ ತಾಯಂದಿರು ಜೀವ ಕಳೆದುಕೊಂಡಿದ್ದಾರೆ. ಮಕ್ಕಳು ಅನಾಥವಾಗುತ್ತಿದ್ದಾರೆ. ಇಂಥವರನ್ನು ನೋಡಿದಾಗ ಬೇಸರವಾಗುತ್ತೆ ಎಂದು ಸದ್ಗುರು ವಿಷಾದ ವ್ಯಕ್ತಪಡಿಸಿದರು.

ಇಷ್ಟು ಮಾಡಿದ್ದೇವೆ ಎನ್ನುವ ತೃಪ್ತಿ ಖಂಡಿತ ನನಗೆ ಇಲ್ಲ. ಇಲ್ಲಿ ಮಾಡಬೇಕಾದ್ದು ಇನ್ನೂ ಸಾಕಷ್ಟಿದೆ. ನಮಗೆ ಸರ್ಕಾರ, ಸಮಾಜದ ಸ್ಪಂದನೆ ಚೆನ್ನಾಗಿದೆ. ಸ್ಥಳೀಯ ಜನಪ್ರತಿನಿಧಿಗಳೂ ಕೈಜೋಡಿಸುತ್ತಿದ್ದಾರೆ ಎಂದು ವಿವರಿಸಿದರು.

"ಕರ್ನಾಟಕ ರಾಜ್ಯದ ಯಾರೊಬ್ಬರೂ ಛತ್ತಿಸ್‌ಗಡದ ನನ್ನನ್ನು 'ಇವನಾರವ' ಎಂದು ದೂರ ತಳ್ಳಲಿಲ್ಲ. ಬದಲಾಗಿ 'ಇವ ನಮ್ಮವ' ಎಂದು ಸ್ವೀಕರಿಸಿದರು. ಇದು ಶರಣರ ನಾಡು. ಇಲ್ಲಿ ಅಧ್ಯಾತ್ಮ ಚಿಂತನೆಗಳು ವ್ಯಾಪಿಸಿದೆ. ಬಸವಣ್ಣನಂತಹ ಚಿಂತಕರು ಬೇರೆ ದೇಶಗಳಲ್ಲಿ ಹುಟ್ಟಲಿಲ್ಲ. ಹೀಗಾಗಿ ಬೇರೆ ದೇಶದವರಿಗೆ ತಮ್ಮ ಸಮುದಾಯ, ದೇಶದ ಚೌಕಟ್ಟು ಮೀರಿ ಯೋಚಿಸುವುದು ಕಷ್ಟ" ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮವು ಇಂಡಿ ತಾಲ್ಲೂಕಿನಲ್ಲಿರುವ "ಶ್ರೀ ಸತ್ಯ ಸಾಯಿ ಪ್ರೇಮ ನಿಕೇತನಂ" ಗುರುಕುಲದ ವಿದ್ಯಾರ್ಥಿಗಳಿಂದ ವೇದಮಂತ್ರಗಳ ಪಾರಾಯಣದಿಂದ ಆರಂಭವಾಯಿತು. ಕಾರ್ಯಕ್ರಮದ ಕೊನೆಯಲ್ಲಿ "ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ"ದ ವಿದ್ಯಾರ್ಥಿನಿಯರು ಅತ್ಯಾಕರ್ಷಕ ನೃತ್ಯ ಪ್ರದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಜ್ಞಾನ ಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ, ಶಿರಶ್ಯಾಡ ಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಸೋಮನಗೌಡ ಸಾಸನೂರ, ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಎನ್.ಎಂ.ಬಿರಾದಾರ, ಎಕ್ಸಲೆಂಟ್ ಸಂಸ್ಥೆ ಅಧ್ಯಕ್ಷ ಬಸವರಾಜ ಕೌಲಗಿ, ಲಿಂಗಾಯತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ವಿ.ಸಿ.ನಾಗಠಾಣ, ಬಾಲ ವಿಕಾಸ ಅಕಾಡೆಮಿ ಮಾಜಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ವೈದ್ಯರು, ಉದ್ಯಮಿಗಳು, ವ್ಯಾಪಾರಸ್ಥರು, ಶಿಕ್ಷಣ ತಜ್ಞರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಅಂಜುಟಗಿಯಲ್ಲಿ ಗೋಲ್‌ಗುಂಬಜ್‌ಗಿಂತಲೂ ದೊಡ್ಡ ಸಭಾಭವನ, ಸಾಯಿಸ್ವಾಸ್ಥ್ಯ ಕೇಂದ್ರ

ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಅಭಿವೃದ್ಧಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸದ್ಗುರು ಶ್ರೀ ಮಧುಸೂದನ ಸಾಯಿ, "ಪ್ರಸ್ತುತ ವಿಜಯಪುರ, ಬಾಗಲಕೋಟೆ, ಕಲಬುರ್ಗಿ, ಗದಗ, ವಿಜಯನಗರ ಜಿಲ್ಲೆಗಳಲ್ಲಿ ನಮ್ಮ ವಿದ್ಯಾಸಂಸ್ಥೆಗಳಿವೆ. ವಿಜಯಪುರದ ಇಂಡಿ ತಾಲ್ಲೂಕು ಅಂಜುಟಗಿ ಸಮೀಪ ಶೀಘ್ರ ಸಾಯಿಸ್ವಾಸ್ಥ್ಯ ಕೇಂದ್ರ ಆರಂಭಿಸಿ ಜನರಿಗೆ ಆರೋಗ್ಯ ಸೇವೆ ಒದಗಿಸಲಾಗುವುದು. ಇನ್ನು 10 ವರ್ಷಗಳಲ್ಲಿ ನಮ್ಮ ಪ್ರಯತ್ನಗಳ ಪರಿಣಾಮ ಗೋಚರಿಸಲಿದೆ" ಎಂದು ಭರವಸೆ ನೀಡಿದರು.

ನಮ್ಮ ಗುರುಕುಲ ಇರುವ ಇಂಡಿ ತಾಲೂಕಿನ ಅಂಜುಟಗಿಯಲ್ಲಿ ಗೋಲ್‌ಗುಂಬಜ್‌ಗಿಂತಲೂ ದೊಡ್ಡದಾದ ಒಂದು ದೊಡ್ಡ ಸಭಾಭವನ ಕಟ್ಟುತ್ತಿದ್ದೇವೆ ಎಂದು ಸದ್ಗುರು ತಿಳಿಸಿದರು.

ನಿಸ್ವಾರ್ಥ ಪ್ರೇಮದ ಶಕ್ತಿಗೆ ಜೀವಂತ ಉದಾಹರಣೆ: ನರಸಿಂಹಮೂರ್ತಿ

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷರಾದ ಡಾ.ಎನ್.ನರಸಿಂಹಮೂರ್ತಿ, "ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಸಾವಿರಾರು ಮಕ್ಕಳಿಗೆ ಉಚಿತ ಶಿಕ್ಷಣ, ಕೋಟ್ಯಂತರ ಮಕ್ಕಳಿಗೆ ಉಚಿತ ಪೌಷ್ಟಿಕ ಆಹಾರ, ಲಕ್ಷಾಂತರ ರೋಗಿಗಳಿಗೆ ಆರೋಗ್ಯ ಸೇವೆ ಒದಗಿಸಿದ್ದಾರೆ" ಎಂದು ಹೇಳಿದರು.

"ಭಾರತದ ಶೇ 70 ಕ್ಕಿಂತ ಹೆಚ್ಚಿನ ಜನರು ಹಳ್ಳಿಗಳಲ್ಲಿದ್ದಾರೆ. ಆದರೆ ಶೇ 80 ಕ್ಕಿಂತ ಹೆಚ್ಚು ವೈದ್ಯಕೀಯ ಕೇಂದ್ರಗಳು ನಗರಗಳಲ್ಲಿವೆ. ಆರೋಗ್ಯ ಸೇವಾ ಕ್ಷೇತ್ರದಲ್ಲಿರುವ ಈ ಅಂತರವನ್ನು ಕಡಿಮೆ ಮಾಡಬೇಕು ಎನ್ನುವ ಉದ್ದೇಶದಿಂದ ಸದ್ಗುರುಗಳು ಭಾರತದ ಮೊದಲ ಖಾಸಗಿ ಸಂಪೂರ್ಣ ಉಚಿತ ವೈದ್ಯಕೀಯ ಕಾಲೇಜು ಆರಂಭಿದರು" ಎಂದು ವಿವರಿಸಿದರು.

ಸೇವೆ ಮಾಡುವ ಕನಸು ನನ್ನದು: ಬಸವರಾಜ್

ವಿಜಯಪುರ ಜಿಲ್ಲೆ ಕನಮಡಿ ಗ್ರಾಮದ ವಿದ್ಯಾರ್ಥಿ ಬಸವರಾಜ್ ಮಾತನಾಡಿ, "ಬಡ ಕುಟುಂಬದಿಂದ ಬಂದ ನನಗೆ ಇಂಗ್ಲಿಷ್ ಮೀಡಿಯಂನಲ್ಲಿ ಓದುವ ಆಸೆಯಿತ್ತು. ಆದರೆ ಮನೆಯಲ್ಲಿ ಬಡತನ ಇದ್ದ ಕಾರಣ ಅದು ಸಾಧ್ಯವಾಗಿರಲಿಲ್ಲ. ಇಂಡಿ ತಾಲ್ಲೂಕಿನ ಸತ್ಯ ಸಾಯಿ ಪ್ರೇಮನಿಕೇತನಂ ಗುರುಕುಲಕ್ಕೆ ಬಂದ ನಂತರ ಒಳ್ಳೆಯ ಶಿಕ್ಷಣ ಪಡೆಯಬೇಕು ಎನ್ನುವ ನನ್ನ ಕನಸು ನನಸಾಯಿತು" ಎಂದು ನೆನಪಿಸಿಕೊಂಡರು.

"ಗುರುಕುಲದಲ್ಲಿ ಪರಾ ವಿದ್ಯೆಯಾದ ಭಗವದ್ಗೀತೆ, ಉಪನಿಷತ್, ವೇದ ಕಲಿಯುತ್ತೇವೆ. ಅಪರಾ ವಿದ್ಯೆಯಾದ ಕನ್ನಡ, ಗಣಿತ, ವಿಜ್ಞಾನವನ್ನೂ ಕಲಿಯುತ್ತೇವೆ ಎಂದು ಹೇಳಿದ ವಿದ್ಯಾರ್ಥಿ, ಮುಂದೆ ದೊಡ್ಡವನಾದ ಮೇಲೆ ಸದ್ಗುರುಗಳಂತೆ ನಾನೂ ಜನರ ಸೇವೆ ಮಾಡುತ್ತೇನೆ" ಎಂದು ತಮ್ಮ ಕನಸು ಹಂಚಿಕೊಂಡರು.

ಲಕ್ಷಾಂತರ ಬದುಕಿಗೆ ಅಸರೆಯಾದ ಸದ್ಗುರು: ಸಿದ್ದರಾಮ

ಕಾರ್ಯಕ್ರಮದಲ್ಲಿ ತಮ್ಮ ಅನುಭವ ಹಂಚಿಕೊಂಡ ವಿಜಯಪುರ ಜಿಲ್ಲೆಯವರೇ ಆದ ಶ್ರೀ ಸತ್ಯ ಸಾಯಿ ಲೋಕ ಸೇವಾ ಗುರುಕುಲಂನ ಹಿರಿಯ ವಿದ್ಯಾರ್ಥಿ ಹಾಗೂ ಕೋಲಾರದ ಕೃಷಿ ವಿಜ್ಞಾನ ಕಾಲೇಜಿನ ಮುಖ್ಯಸ್ಥರಾಗಿರುವ ಸಿದ್ದರಾಮ, "ಸಂಸ್ಥೆಯು ನನ್ನ ಬದುಕಿಗೆ ಧ್ಯೇಯ ಕೊಟ್ಟಿತು. ನಾನು ಚಿಕ್ಕ ಬಾಲಕನಿದ್ದಾಗ ಸೇರಿಕೊಂಡ ಸಂಸ್ಥೆಯಲ್ಲಿ ಇಂದು 100 ಮಕ್ಕಳನ್ನು ನೋಡಿಕೊಳ್ಳುವ ಸೌಭಾಗ್ಯ ಸಿಕ್ಕಿದೆ. ಲಕ್ಷಾಂತರ ಕುಟುಂಬಗಳಿಗೆ ಸದ್ಗುರುಗಳಿಂದ ಪರಿವರ್ತನೆಯಾಗಿವೆ" ಎಂದು ಭಾವುಕರಾದರು.

ಅಸಹಾಯಕ ಮಕ್ಕಳಿಗೆ ಅಕ್ಷರದ ಆಸರೆ

ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಅಂಜುಟಗಿಯ "ಶ್ರೀ ಸತ್ಯಸಾಯಿ ಪ್ರೇಮನಿಕೇತನಮ್" ಗುರುಕುಲವು ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿದೆ. 2015ರಲ್ಲಿ ಆರಂಭಗೊಂಡ ಈ ಗುರುಕುಲವು 52 ಎಕರೆಗಳ ಕ್ಯಾಂಪಸ್ ಹೊಂದಿದೆ. ರಾಷ್ಟ್ರೀಯ ಮುಕ್ತ ಶಾಲಾ ಶಿಕ್ಷಣ ಸಂಸ್ಥೆ (ಎನ್‌ಐಒಎಸ್‌) ಪಠ್ಯಕ್ರಮದಡಿ ಶಿಕ್ಷಣ ನೀಡಲಾಗುತ್ತಿದ್ದು, ಭಾರತೀಯ ಗುರುಕುಲ ಪರಂಪರೆ, ನೈತಿಕ ಮೌಲ್ಯಗಳು ಹಾಗೂ ಆಧ್ಯಾತ್ಮಿಕ ಚಿಂತನೆಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ.

ಪ್ರಸ್ತುತ 65 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದು, ಈ ಸಂಸ್ಥೆ ಸ್ಥಾಪನೆಯಾದ ನಂತರ ಇದುವರೆಗೆ 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ. ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಶೇ 85ರಷ್ಟು ಗ್ರಾಮೀಣ ಹಿನ್ನೆಲೆಯವರಾಗಿದ್ದು, ಶೇ 50ರಷ್ಟು ಬಿಪಿಎಲ್‌ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಅಲ್ಲದೆ, ಶೇ 55ರಷ್ಟು ವಿದ್ಯಾರ್ಥಿಗಳು ತಮ್ಮ ಕುಟುಂಬದ ಮೊದಲ ತಲೆಮಾರಿನ ಕಲಿಕಾರ್ಥಿಗಳಾಗಿದ್ದಾರೆ.

ವಿಶ್ವಮಾನವ: ಸದ್ಗುರು ಶ್ರೀ ಮಧುಸೂದನ ಸಾಯಿ ಪರಿಚಯ

ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ವಿಶ್ವಾದ್ಯಂತ ಅಪಾರ ಗೌರವಕ್ಕೆ ಪಾತ್ರರಾದ ಮಹಾನ್ ಮಾನವತಾವಾದಿ ಹಾಗೂ ಆಧ್ಯಾತ್ಮಿಕ ನಾಯಕರು. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರು ಬೋಧಿಸಿದ 'ಪ್ರೀತಿ ಮತ್ತು ಸೇವೆ'ಯ ಆದರ್ಶಗಳ ತಳಹದಿಯ ಮೇಲೆ, "ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್" ಹೆಸರಿನ ಬೃಹತ್ ಸೇವಾ ಅಭಿಯಾನವನ್ನು ಅವರು ಮುನ್ನಡೆಸುತ್ತಿದ್ದಾರೆ.

ಪ್ರಸ್ತುತ 100 ದೇಶಗಳಿಗೆ ವಿಸ್ತರಿಸಿರುವ ಈ ಅಭಿಯಾನದ ಮೂಲಕ ಶಿಕ್ಷಣ, ಆರೋಗ್ಯ ಹಾಗೂ ಪೌಷ್ಟಿಕ ಆಹಾರ ಕೋಟ್ಯಂತರ ಜನರಿಗೆ ಸಂಪೂರ್ಣ ಉಚಿತವಾಗಿ ಲಭ್ಯವಾಗುತ್ತಿವೆ. ಈ ಅಭಿಯಾನವು ಆಧ್ಯಾತ್ಮಿಕ ಜ್ಞಾನದ ಮೂಲಕ ವ್ಯಕ್ತಿ ಮತ್ತು ಸಮಾಜದ ಆಂತರಿಕ ಪರಿವರ್ತನೆಗೂ ನಾಂದಿ ಹಾಡಿದೆ. ಅದ್ಭುತ ವಾಗ್ಮಿ ಹಾಗೂ ಪ್ರಬುದ್ಧ ಲೇಖಕರೂ ಆಗಿರುವ ಸದ್ಗುರುಗಳು, ತಮ್ಮ ಗ್ರಂಥಗಳು ಮತ್ತು ಪ್ರವಚನಗಳ ಮೂಲಕ ಸನಾತನ ಧರ್ಮದ ತತ್ತ್ವಗಳನ್ನು ಜನಸಾಮಾನ್ಯರಿಗೆ ಸರಳವಾಗಿ ತಲುಪಿಸುತ್ತಿದ್ದಾರೆ.

poverty vijayapura uttara karnataka

poverty vijayapura uttara karnataka

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ