
ಕುಣಿಗಲ್ | ಡಿಜಿಟಲ್ ಗ್ರಂಥಾಲಯ: ಫಲಕಕ್ಕೆ ಸೀಮಿತ
ಕುಣಿಗಲ್: ತಾಲ್ಲೂಕಿನ 36 ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿದ್ದ ಗ್ರಂಥಾಲಯಗಳು ಡಿಜಿಟಲ್ ಆಗಿ ಪರಿವರ್ತನೆಯಾಗಿ ಮೂರು ವರ್ಷ ಗತಿಸಿದರೂ ಫಲಕಗಳಿಗಷ್ಟೇ ಸೀಮಿತಆಗಿವೆ.
ಪ್ರತಿ ಗ್ರಂಥಾಲಯ ದಲ್ಲೂ ಐದು ಸಾವಿರಕ್ಕೂ ಹೆಚ್ಚು ಪುಸ್ತಕ, ಪೀಠೋಪಕರಣಗಳನ್ನು ಸುಸಜ್ಜಿತವಾಗಿ ಜೋಡಿಸಲಾಗಿದೆ. ದಿನಪತ್ರಿಕೆಗಳು ಲಭ್ಯವಿವೆ. ಆದರೆ ನಿತ್ಯವೂ ಐದರಿಂದ 10 ಮಂದಿಯಷ್ಟೇ ಭೇಟಿ ನೀಡುತ್ತಿದ್ದಾರೆ.
ಗ್ರಾಮೀಣ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುವುದರ ಜತೆಗೆ ಶಾಲಾ ಹಂತದಲ್ಲೇ ಕಂಪ್ಯೂಟರ್ ಜ್ಞಾನ ಪಡೆದುಕೊಳ್ಳಲಿ ಎಂಬ ಸದುದ್ದೇಶದಿಂದ ಗ್ರಂಥಾಲಯಗಳನ್ನು ಡಿಜಿಟಲ್ ಗ್ರಂಥಾಲಯ, ಮಾಹಿತಿ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗಿದೆ. ಪ್ರತಿ ಡಿಜಿಟಲ್ ಗ್ರಂಥಾಲಯಕ್ಕೂ ಕಂಪ್ಯೂಟರ್ ನೀಡಲಾಗಿದೆ. ಆದರೆ ಇಂಟರ್ನೆಟ್ ಸಂಪರ್ಕವಿಲ್ಲದ ಕಾರಣ ಬಹುತೇಕ ಕಂಪ್ಯೂಟರ್‌ಗಳು ಅಲಂಕಾರಿಕ ಗೊಂಬೆಗಳಂತೆ ಡಿಜಿಟಲ್ ಗ್ರಂಥಾಲಯದಲ್ಲಿ ವಿರಾಜಮಾನವಾಗಿವೆ.
ಕೆಲವೊಂದೆಡೆ ಪಂಚಾಯಿತಿಗಳ ವೈಫೈ ಸಂಪರ್ಕದಿಂದ ಬಳಕೆ ಆಗುತ್ತಿದ್ದರೂ, ಬಳಸುತ್ತಿರುವವರು ಮಾತ್ರ ಬೆರಳೆಣಿಕೆಯಷ್ಟು.
ಪಂಚಾಯಿತಿಯ ಕಂಪ್ಯೂಟರ್‌ಗಳು ಕೆಟ್ಟುಹೋದಾಗ ಡಿಜಿಟಲ್ ಗ್ರಂಥಾಲಯದ ಕಂಪ್ಯೂಟರ್‌ಗಳು ಆ ಜಾಗಕ್ಕೆ ಸ್ಥಳಾಂತರಆಗುತ್ತಿವೆ. ಗ್ರಂಥಾಲಯಗಳಲ್ಲಿ ಸಕಲ ಸೌಕರ್ಯವಿದ್ದರೂ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುವಲ್ಲಿ ಗ್ರಾಮೀಣರು ಮುಂದಾಗುತ್ತಿಲ್ಲ.
ಶಾಲಾ- ಕಾಲೇಜು, ಗ್ರಾಮ ಪಂಚಾಯಿತಿ ಕಚೇರಿ ಪಕ್ಕದಲ್ಲಿರುವ ಗ್ರಂಥಾಲಯಗಳು ಮಾತ್ರ ಅಲ್ಪ ಪ್ರಮಾಣದಲ್ಲಿ ಬಳಕೆಯಾಗುತ್ತಿದ್ದು, ಉಳಿದವು ಜನರಿಂದ ದೂರವಾಗಿವೆ. ಎಡೆಯೂರು ಹೊರತುಪಡಿಸಿದರೆ ಉಳಿದೆಡೆ ಗ್ರಂಥಪಾಲಕರಿದ್ದಾರೆ. ಸಮಸ್ಯೆಗಳು ಗ್ರಂಥಪಾಲಕರನ್ನು ಬೆಂಬಿಡದೆ ಕಾಡುತ್ತಿವೆ. ಸರ್ಕಾರದಿಂದ ನೀಡಲಾಗುತ್ತಿದ್ದ ಸ್ವಚ್ಛತೆ ವೆಚ್ಚ, ಸಾಧಿಲ್ವಾರು ವೆಚ್ಚ ನಿಂತಿವೆ. ಇಲಾಖೆಯಿಂದ ನೀಡುವ ₹12 ಸಾವಿರ ಗೌರವಧನವೂ ಸಕಾಲಕ್ಕೆ ಸಿಗ್ತಿಲ್ಲ.
ಪಂಚಾಯಿತಿಯಲ್ಲಿ ವಸೂಲಾಗುವ ಗ್ರಂಥಾಲಯ ಕರಗಳ ಮೂಲಕ ವಿತರಿಸಲಾಗುತ್ತಿದ್ದ ಹೆಚ್ಚುವರಿ ಗೌರವಧನವನ್ನು (₹7,200) ಎರಡು ವರ್ಷಗಳಿಂದ ನೀಡಿಲ್ಲ. ದಿನಪತ್ರಿಕೆಗಳ ಚಂದಾ ಹಣವನ್ನು ಸಕಾಲದಲ್ಲಿ ಪಾವತಿಗೆ ವ್ಯವಸ್ಥೆ ಮಾಡಬೇಕಿದೆ ಎನ್ನುತ್ತಾರೆ ಗ್ರಂಥಪಾಲಕರಾದ ರಮೇಶ್, ದೇವರಾಜು, ಇಪ್ಪಾಡಿ ರಮೇಶ್.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260831-17-866076369