‘ಬರ’ ಇದ್ದರೂ ಸರ್ಕಾರದ ಪಟ್ಟಿಗೆ ಸೇರದ ಹಾವೇರಿ: ರೈತರ ಆಕ್ರೋಶ

‘ಬರ’ ಇದ್ದರೂ ಸರ್ಕಾರದ ಪಟ್ಟಿಗೆ ಸೇರದ ಹಾವೇರಿ: ರೈತರ ಆಕ್ರೋಶ

‘ಬರ’ ಇದ್ದರೂ ಸರ್ಕಾರದ ಪಟ್ಟಿಗೆ ಸೇರದ ಹಾವೇರಿ: ರೈತರ ಆಕ್ರೋಶ

ಹಾವೇರಿ: ಮಳೆ ನೆಚ್ಚಿಕೊಂಡಿರುವ ಹಾವೇರಿ ಜಿಲ್ಲೆಯಲ್ಲಿ ಈ ವರ್ಷ ಬರಗಾಲದ ಛಾಯೆ ದಟ್ಟವಾಗಿದೆ. ಮಳೆ ಕೊರತೆಯಿಂದ ಹಲವು ಕಡೆಗಳಲ್ಲಿ ಬೆಳೆ ಹಾಳಾಗಿದೆ. ಇದರಿಂದ ಕಂಗೆಟ್ಟ ರೈತರು, ಬೆಳೆಯನ್ನೇ ನಾಶಪಡಿಸಿದ್ದು, ಈ ಬಾರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಆತಂಕದಲ್ಲಿದ್ದಾರೆ. ಅಷ್ಟಾದರೂ ಜಿಲ್ಲೆಯನ್ನು ಬರಗಾಲ ಪೀಡಿತ ಪಟ್ಟಿಯಲ್ಲಿ ಸೇರ್ಪಡೆ ಮಾಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ರೈತಾಪಿ ನಾಡಾಗಿರುವ ಹಾವೇರಿ ಜಿಲ್ಲೆ ಭೀಕರ ಬರಗಾಲದಿಂದ ತತ್ತರಿಸಿದೆ. ಮುಂಗಾರು ಆರಂಭವಾದ ನಂತರ ಜೂನ್ 1ರಿಂದ ಆಗಸ್ಟ್ 30ರವರೆಗೆ ಶೇ 50ರಷ್ಟು ಮಳೆ ಕೊರತೆ ಉಂಟಾಗಿದೆ. ಇದರಿಂದ ಮಳೆಯನ್ನೇ ನೆಚ್ಚಿಕೊಂಡಿದ್ದ ರೈತರಿಗೆ ಬರಸಿಡಿಲು ಬಡಿದಂತಾಗಿದೆ.

ಹಾವೇರಿ ಜಿಲ್ಲೆಯೊಂದಿಗೆ ಗಡಿ ಹಂಚಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಹಾಗೂ ಯಲ್ಲಾಪುರ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಲಾಗಿದೆ. ಆದರೆ, ಇದೇ ತಾಲ್ಲೂಕಿಗೆ ಹೊಂದಿಕೊಂಡಿರುವ ಹಾವೇರಿ ಜಿಲ್ಲೆಯ ಶಿಗ್ಗಾವಿ ಹಾಗೂ ಹಾನಗಲ್‌ ತಾಲ್ಲೂಕಿನಲ್ಲಿ ಬರಗಾಲವಿದ್ದರೂ ಘೋಷಣೆ ಮಾಡದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

‘ಪ್ರಸಕ್ತ ಮುಂಗಾರು ಕೈಕೊಟ್ಟಿದ್ದರಿಂದ, ರಾಜ್ಯದ 101 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಅದರಲ್ಲಿ 89 ತಾಲ್ಲೂಕುಗಳಲ್ಲಿ ತೀವ್ರ ಬರ ಹಾಗೂ 12 ತಾಲೂಕುಗಳಲ್ಲಿ ಸಾಧಾರಣ ಬರವಿದೆ’ ಎಂದು ರಾಜ್ಯ ಸರ್ಕಾರ ಪಟ್ಟಿ ಬಿಡುಗಡೆ ಮಾಡಿದೆ. ‘ಹಾವೇರಿ ಜಿಲ್ಲೆಯ ತಾಲ್ಲೂಕುಗಳು ಸಹ ಬರಪೀಡಿತ ಆಗಬಹುದು’ ಎಂದು ಕಾದು ಕುಳಿತಿದ್ದ ರೈತರಿಗೆ, ರಾಜ್ಯ ಸರ್ಕಾರದ ನಡೆ ಬೇಸರ ತರಿಸಿದೆ.

‘ಹಾವೇರಿ ಜಿಲ್ಲೆಯ ಆರೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಸಿಕ್ಕಿದೆ. ಜಿಲ್ಲೆಯ ಬರಗಾಲದ ಬಗ್ಗೆ ಅವರೆಲ್ಲರಿಗೂ ಮಾಹಿತಿ ಇದೆ. ಬರಗಾಲ ಘೋಷಣೆ ಮಾಡಿಸುವುದಾಗಿ ಹೇಳಿಕೊಂಡು ಓಡಾಡುತ್ತಿದ್ದಾರೆ. ಆದರೆ, ಈಗ ಬಿಡುಗಡೆ ಆಗಿರುವ ಪಟ್ಟಿಯಲ್ಲಿ ಹಾವೇರಿ ಜಿಲ್ಲೆಯ ಒಂದೂ ತಾಲ್ಲೂಕಿನ ಹೆಸರಿಲ್ಲ. ಶಾಸಕರು–ಸಚಿವರು ಇದ್ದರೂ ಜಿಲ್ಲೆಗೆ ಉಪಯೋಗವಿಲ್ಲ’ ಎಂದು ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ.

‘ಸಚಿವ ರುದ್ರಪ್ಪ ಲಮಾಣಿ ಅವರು ಅಧಿಕಾರ ಸ್ವೀಕರಿಸುತ್ತಿದ್ದಂತೆ, ಹಾವೇರಿಗೆ ಬಂದು ಬರಗಾಲದ ಬಗ್ಗೆ ಸಮೀಕ್ಷೆ ನಡೆಸಿದ್ದರು. ರೈತರ ಜಮೀನುಗಳಿಗೂ ಭೇಟಿ ನೀಡಿದ್ದರು. ರಾಜ್ಯ ಸರ್ಕಾರಕ್ಕೂ ವರದಿ ನೀಡುವುದಾಗಿ ಹೇಳಿದ್ದರು. ಆದರೆ, ಅವರ ವರದಿಗೂ ಸರ್ಕಾರ ಕಿಮ್ಮತ್ತು ನೀಡಿಲ್ಲ. ಇದರಿಂದ ಇಡೀ ಜಿಲ್ಲೆಗೆ ಅನ್ಯಾಯವಾಗಿದೆ’ ಎಂದು ರೈತರು ದೂರುತ್ತಿದ್ದಾರೆ.

‘ಹಾವೇರಿ, ರಾಣೆಬೆನ್ನೂರು, ರಟ್ಟೀಹಳ್ಳಿ, ಹಿರೇಕೆರೂರು, ಹಾನಗಲ್, ಶಿಗ್ಗಾವಿ, ಸವಣೂರು ಹಾಗೂ ಬ್ಯಾಡಗಿ ತಾಲ್ಲೂಕಿನಲ್ಲಿ ಬಹುತೇಕ ಕಡೆ ಬರಗಾಲದಿಂದ ಬೆಳೆ ಹಾನಿಯಾಗಿದೆ. ರಟ್ಟೀಹಳ್ಳಿ ಹಾಗೂ ರಾಣೆಬೆನ್ನೂರು ತಾಲ್ಲೂಕಿನಲ್ಲಿ ತೀವ್ರ ಬರವಿದೆ. ಕೂಡಲೇ ಸರ್ಕಾರ ಮರುಪರಿಶೀಲನೆ ನಡೆಸಿ, ಜಿಲ್ಲೆಯ ತಾಲ್ಲೂಕುಗಳ ಹೆಸರು ಸೇರ್ಪಡೆ ಮಾಡಿ ಬರಗಾಲ ಪರಿಹಾರ ನೀಡಬೇಕು’ ಎಂದು ರೈತರು ಆಗ್ರಹಿಸುತ್ತಿದ್ದಾರೆ.

ಅರ್ಧದಷ್ಟು ಮಳೆ ಕೊರತೆ: ಜಿಲ್ಲೆಯಲ್ಲಿ ಜೂನ್ 1ರಿಂದ ಆಗಸ್ಟ್ 30ರವರೆಗೆ 40.14 ಸೆಂ.ಮೀ. ಮಳೆಯಾಗಬೇಕಿತ್ತು. ಆದರೆ, ಅರ್ಧದಷ್ಟು ಮಾತ್ರ ಮಳೆಯಾಗಿದೆ. ಮುಂಗಾರು ಪೂರ್ವದಲ್ಲಿ ಸುರಿದ ಅಲ್ಪ ಮಳೆ ನಂಬಿ ರೈತರು, ಬಿತ್ತನೆ ಮಾಡಿದ್ದಾರೆ.

ಬಿತ್ತನೆ ಬಳಿಕ ಮಳೆಯ ತೀವ್ರ ಕೊರತೆ ಉಂಟಾಗಿದೆ. ಹಲವು ಕಡೆಗಳಲ್ಲಿ ಬೀಜಗಳು ಮೊಳಕೆಯೊಡೆದಿಲ್ಲ. ಎಕರೆಗೆ ಸುಮಾರು ₹ 20 ಸಾವಿರದಿಂದ ₹ 40 ಸಾವಿರ ಖರ್ಚು ಮಾಡಿ ರೈತರು ಬಿತ್ತನೆ ಮಾಡಿದ್ದರು. ಆದರೆ, ಬಹುತೇಕ ಕಡೆ ಬೆಳೆ ಹಾಳಾಗಿದೆ.

‘ಪ್ರತಿ ವರ್ಷವೂ ಮೆಕ್ಕೆಜೋಳ ಚೆನ್ನಾಗಿ ಬೆಳೆಯುತ್ತಿತ್ತು. ಈ ವರ್ಷವೂ ಅದೇ ಬೀಜ ಹಾಕಿದ್ದೇವೆ. ಆದರೆ, ಮಳೆ ಕೈಕೊಟ್ಟಿದೆ. ಸರಿಯಾಗಿ ಬೆಳೆ ಬೆಳೆದಿಲ್ಲ. ಗೊಬ್ಬರ ಹಾಕಿದರೂ ಉಪಯೋಗವಿಲ್ಲ. ಹೀಗಾಗಿ, ಟ್ರ್ಯಾಕ್ಟರ್‌ನ ರೋಟಾವೇಟರ್‌ ಮೂಲಕ ಬೆಳೆಯನ್ನು ನಾಶಪಡಿಸಿದ್ದೇನೆ’ ಎಂದು ಹಾನಗಲ್ ತಾಲ್ಲೂಕಿನ ಗುಡ್ಡದಮತ್ತಿಹಳ್ಳಿ ರೈತ ಬಸಯ್ಯ ಹಿರೇಮಠ ಅಳಲು ತೋಡಿಕೊಂಡರು. ‘ಹಾನಗಲ್ ಭಾಗದಲ್ಲಿ ಬರಗಾಲ ಛಾಯೆ ಹೆಚ್ಚಿದ್ದು, ಬಹುತೇಕ ರೈತರು ನಷ್ಟ ಅನುಭವಿಸಿದ್ದಾರೆ. ಇಂಥ ಸಂದರ್ಭದಲ್ಲಿ ಸರ್ಕಾರ ಕೈ ಹಿಡಿಯದಿದ್ದರೆ, ಆತ್ಮಹತ್ಯೆಯೇ ಗತಿ ಎಂಬ ಭಾವನೆ ಮೂಡಲಿದೆ’ ಎಂದು ಎಚ್ಚರಿಸಿದರು.

‘ಸಚಿವರದ್ದು ಜವಾಬ್ದಾರಿರಹಿತ ಹೇಳಿಕೆ’

‘ಮಳೆ ಕೈಕೊಟ್ಟು ಬೆಳೆ ಕಣ್ಣೆದುರೇ ಒಣಗಿದೆ. ಸಾಲ ಮಾಡಿ ಮರು ಬಿತ್ತನೆ ಮಾಡಿದರೂ ಮಳೆಯಿಲ್ಲದೆ ಬೀಜವು ಮಣ್ಣು ಪಾಲಾಗಿದೆ. ಹಸಿರು ಕಂಡರೂ ಸರಿಯಾದ ಇಳುವರಿ ಇಲ್ಲ. ಸ್ಥಳೀಯ ಸ್ಥಿತಿಗತಿ ಹಾಗೂ ರೈತರ ಆಕ್ರಂದನವನ್ನು ಆಲಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿಯವರು, ‘ಹೊಲದಲ್ಲಿ ಹಸಿರು ಇದೆ. ಬರಗಾಲವಿಲ್ಲ’ ಎಂಬುದಾಗಿ ಜವಾಬ್ದಾರಿ ರಹಿತ ಹೇಳಿಕೆ ನೀಡಿರುವುದು ಖಂಡನೀಯ’ ಎಂದು ಕೃಷಿ ಇಲಾಖೆಯ ಮಾಜಿ ಸಚಿವರೂ ಆಗಿರುವ ಬಿಜೆಪಿ ಮುಖಂಡ ಬಿ.ಸಿ. ಪಾಟೀಲ ಕಿಡಿಕಾರಿದ್ದಾರೆ.

‘ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಹೊಸದಾಗಿ ಸಚಿವರಾಗಿದ್ದಾರೆ. ಇವರಿಗೆ ನಮ್ಮ ಜಿಲ್ಲೆಯ ರೈತರ ಕಣ್ಣೀರು ಕಾಣುತ್ತಿಲ್ಲವೆ? ರೈತರ ಹಿತ ಕಾಯಲು ಅಧಿಕಾರ ಸಿಕ್ಕಿದೆ. ಅವರ ಸಂಕಷ್ಟಕ್ಕೆ ಸ್ಪಂದಿಸದಿದ್ದರೆ ಅಧಿಕಾರಕ್ಕೆ ಏನು ಅರ್ಥ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಕಂದಾಯ ಮತ್ತು ಕೃಷಿ ಇಲಾಖೆಯಿಂದ ನೈಜ ಬೆಳೆ ಹಾನಿ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಜಿಲ್ಲೆಯ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು. ರೈತರಿಗೆ ಪರಿಹಾರ ಹಾಗೂ ಬೆಳೆ ವಿಮೆ ಹಣ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.

‘ಬರಗಾಲ ಘೋಷಣೆಗೆ ಕೆಲ ಮಾನದಂಡಗಳಿವೆ. ಅದನ್ನು ಪರಿಗಣಿಸಿ ಬರಗಾಲ ಘೋಷಣೆ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ತಿಳಿಸಿದರು.

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ರಾಜ್ಯ ಸರ್ಕಾರದಿಂದ ಎರಡನೇ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆಯಿದೆ. ಅದರಲ್ಲಿ ಹಾವೇರಿಯ ಕೆಲ ತಾಲ್ಲೂಕುಗಳು ಘೋಷಣೆಯಾಗುವ ನಿರೀಕ್ಷೆಯಿದೆ’ ಎಂದರು.

‘ಜಿಲ್ಲೆಯ ಮಳೆಯ ಪ್ರಮಾಣ, ಬೆಳೆಯ ಸ್ಥಿತಿಗತಿ, ತೇವಾಂಶ ಸೇರಿದಂತೆ ಸಕಲ ಮಾಹಿತಿಯೂ ಸರ್ಕಾರಕ್ಕೆ ಲಭ್ಯವಾಗುತ್ತದೆ. ಸ್ಯಾಟ್‌ಲೈಟ್‌ ಫೋಟೊವನ್ನು ಪರಿಶೀಲಿಸಲಾಗುತ್ತದೆ. ಎಲ್ಲ ಮಾಹಿತಿ ಆಧರಿಸಿ, ಯಾವ ತಾಲ್ಲೂಕಿನಲ್ಲಿ ಬರವಿದೆ ? ಯಾವ ತಾಲ್ಲೂಕಿನಲ್ಲಿ ಇಲ್ಲ ? ಎಂಬುದು ಗೊತ್ತಾಗುತ್ತದೆ. ಹಾವೇರಿಯಲ್ಲೂ ಬರಗಾಲ ಇರುವುದಾಗಿ ಮನದಟ್ಟು ಮಾಡಿಕೊಡಲಾಗಿದೆ’ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260831-22-829419419

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ