ಶಿರಹಟ್ಟಿ: ತುಂಗಭದ್ರಾ ನದಿಯಲ್ಲಿ ದೋಣಿ ಸಂಚಾರ ಪುನರಾರಂಭ

ಶಿರಹಟ್ಟಿ: ತುಂಗಭದ್ರಾ ನದಿಯಲ್ಲಿ ದೋಣಿ ಸಂಚಾರ ಪುನರಾರಂಭ

ಶಿರಹಟ್ಟಿ: ತುಂಗಭದ್ರಾ ನದಿಯಲ್ಲಿ ದೋಣಿ ಸಂಚಾರ ಪುನರಾರಂಭ

ಶಿರಹಟ್ಟಿ: ತಾಲ್ಲೂಕಿನ ಗಡಿಯಂಚಿನ ಗ್ರಾಮಗಳಲ್ಲಿ ಹಾಯ್ದು ಹೋಗಿರುವ ತುಂಗಭದ್ರಾ ನದಿಯಲ್ಲಿ ನಾಡದೋಣಿಯ ಸಂಚಾರ ಕಳೆದ ವರ್ಷದಿಂದ ಸ್ಥಗಿತಗೊಂಡಿತ್ತು. ದೋಣಿಗೆ ಬಿದ್ದಿದ್ದ ರಂಧ್ರವನ್ನು ದುರಸ್ತಿಗೊಳಿಸಿದ ಬಳಿಕ ತಾಲ್ಲೂಕಿನ ಕಲ್ಲಾಗನೂರು-ಮಾಗಳ ನಡುವಿನ ಜಲಮಾರ್ಗ ಸಂಚಾರವು ಸದ್ಯ ಪ್ರಾರಂಭವಾಗಿದೆ. ಇದರಿಂದ ಜನರು ನಿಟ್ಟಿಸುರು ಬಿಡುವಂತಾಗಿದೆ. ಆದರೆ, ಜೀವಭಯದಲ್ಲೇ ಪ್ರಯಾಣಿಸುವುದು ಮಾತ್ರ ತಪ್ಪುತ್ತಿಲ್ಲ.

ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಮಾಗಳ ಗ್ರಾಮ, ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಕಲ್ಲಾಗನೂರು ಹಾಗೂ ಮುಂಡರಗಿ ತಾಲೂಕಿನ ವಿಠಲಾಪುರ ನಡುವೆ ಹರಿಯುವ ತುಂಗಭದ್ರಾ ನದಿಯನ್ನು ದಾಟಲು ಈ ನಾಡದೋಣಿಯೇ ಆಧಾರವಾಗಿದೆ. ಹಲವು ತಿಂಗಗಳಿಂದ ದೋಣಿ ಕೆಟ್ಟು ನಿಂತಿದ್ದರಿಂದ ಪ್ರತಿದಿನ ಸಂಚರಿಸುವ ಸಾರ್ವಜನಿಕರು, ರೈತರು ಹಾಗೂ ವಿದ್ಯಾರ್ಥಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದರು. ಈಗ ದೋಣಿ ದುರಸ್ತಿಯಾಗಿ ಸಂಚಾರ ಆರಂಭಿಸಿರುವುದು ಗದಗ, ಹಾವೇರಿ ಹಾಗೂ ವಿಜಯನಗರ ಜಿಲ್ಲೆಯ ಗಡಿಭಾಗದ ಗ್ರಾಮಗಳ ಸಂ‍ಪರ್ಕ ಸಾಧ್ಯವಾಗಿದೆ.

1972ರಿಂದ ಸೇತುವೆಗಾಗಿ ಬೇಡಿಕೆ: ಕಲ್ಲಾಗನೂರು ಸೇರಿದಂತೆ 3 ಜಿಲ್ಲೆಗಳ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಸೇತುವೆ ನಿರ್ಮಾಣಕ್ಕಾಗಿ 1972ರಿಂದ ಬೇಡಿಕೆ ಇಡುತ್ತ ಬರಲಾಗಿದೆ. ಈ ಕುರಿತು ಹೋರಾಟ ಸಮಿತಿ ಪ್ರತಿಭಟನೆಯನ್ನೂ ನಡೆಸಿವೆ. ಅಂದಿನ ಶಾಸಕ ದಿ. ಗೂಳಪ್ಪ ಉಪನಾಳ ಅವರು ಕಲ್ಲಾಗನೂರು ಮಾಗಳ ಸೇತುವೆಗೆ ಅಡಿಗಲ್ಲು ಹಾಕಿ ದ್ದರು. ನಂತರ ದಿನಗಳಲ್ಲಿ ಆಯ್ಕೆಯಾದ ಶಾಸಕರಲ್ಲಿ ಯಾರೂ ಈ ಬಗ್ಗೆ ಆಸಕ್ತಿ ತೋರದೆ ಇರುವುದರಿಂದ ಸೇತುವೆ ನಿರ್ಮಾಣ ನನೆಗುದಿಗೆ ಬಿದ್ದಿತ್ತು.

2023ರಲ್ಲಿ ಆಯ್ಕೆಯಾದ ಶಾಸಕ ಡಾ. ಚಂದ್ರು ಲಮಾಣಿ ಅವರು ಸಿದ್ದರಾ ಮಯ್ಯ ನೇತೃತ್ವದ ಸರ್ಕಾರ ದಲ್ಲಿ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ. ಶಿವ ಕುಮಾರ್‌ ಅವರಿಗೆ ಪತ್ರ ಬರೆದಿದ್ದರು. ಸೇತುವೆ ಕಾಮಗಾರಿಗೆ ₹74 ಕೋಟಿ ಅನು ದಾನವನ್ನು ಬಜೆಟ್‌ನಲ್ಲಿ ಮಂಜೂರು ಮಾಡುವಂತೆ ಕೋರಿದ್ದರು.

ಅದೇ ವರ್ಷ ಡಿಸೆಂಬರ್‌ನಲ್ಲಿ ಅಂದಿನ ಕಾನೂನು ಸಂಸದೀಯ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಅವರು, ‘ಕಲ್ಲಾಗನೂರು ಬಳಿ ಸೇತುವೆ ನಿರ್ಮಾಣದ ಅಂದಾಜು ವೆಚ್ಚ ಅಧಿಕವಾ ಗುತ್ತದೆ. ಸುತ್ತಲಿನ ಜನರಿಗೆ ಯಾವುದೇ ಅನುಕೂಲವಾಗುವುದಿಲ್ಲ’ ಎಂದು ಕಾಮಗಾರಿಯನ್ನು ಬದಲಾಯಿಸಿದ್ದರು. ಇಟಗಿ–ಸಾಸಲವಾಡ ನಡುವೆ ಸೇತುವೆ ನಿರ್ಮಾಣಕ್ಕಾಗಿ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದರು.

ಗೊಂದಲ ಸೃಷ್ಟಿ: ಸಚಿವರು ಹಾಗೂ ಶಾಸಕರ ಪತ್ರದ ಆಧಾರದ ಮೇಲೆ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಮಲಪ್ರಭಾ ಯೋಜನಾ ವಲಯ ಧಾರವಾಡ ಮುಖ್ಯ ಎಂಜಿನಿಯರ್ ಅಶೋಕ ಎಲ್. ವಾಸನದ ಅವರ ಅಧ್ಯಕ್ಷತೆಯಲ್ಲಿ 5 ಜನರ ತಂಡ ರಚಿಸಿದ್ದರು.

ಸೇತುವೆ ನಿರ್ಮಾಣಕ್ಕೆ ಸೂಕ್ತ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು.

ಅದರಂತೆ, ಎರಡು ಬದಿಗೆ ಸಂಪರ್ಕ ರಸ್ತೆ, ಕಳೆದ 50 ವರ್ಷಗಳಲ್ಲಿ ಎದುರಾಗುವ ಪ್ರವಾಹ ಸಂದರ್ಭದಲ್ಲಿ ನದಿ ನೀರಿನ ಮಟ್ಟ, ಸಿಂಗಟಾಲೂರು ಜಲಾಶಯದ ಹಿನ್ನೀರಿನ ಮಟ್ಟ, ಸದರಿ ಸ್ಥಳದಲ್ಲಿ ವಾರ್ಷಿಕ ಸರಾಸರಿ ಮಳೆ ಪ್ರಮಾಣ, ನದಿಯು ಹರಿಯುವ ನೀರಿನ ಪ್ರಮಾಣ ಆಧಾರವಾಗಿ ಇಟ್ಟುಕೊಂಡು ಪರಿಶೀಲನೆ ಮಾಡಿ, ವರದಿ ಸಿದ್ಧಗೊಳಿಸಲಾಗಿತ್ತು. 2024ರ ಏಪ್ರಿಲ್ 23ರಂದು ಕರ್ನಾಟಕ ನೀರಾವರಿ ನಿಗಮಕ್ಕೆ ವರದಿ ಸಲ್ಲಿಸಲಾಗಿತ್ತು.

ಜನಪ್ರತಿನಿಧಿಗಳ ಪ್ರತಿಷ್ಠೆ ಕಾರಣ: ಸೇತುವೆ ನಿರ್ಮಾಣ ಕಾರ್ಯ ವಿಳಂಬವಾಗಿರುವುದಕ್ಕೆ ರಾಜಕಾರಣಿಗಳ ಸ್ವಪ್ರತಿಷ್ಠೆಯೇ ಮುಖ್ಯ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೇತುವೆ ಎಲ್ಲಿ ನಿರ್ಮಾಣವಾಗಬೇಕು ಎನ್ನುವ ವಿಷಯದಲ್ಲೇ ಜನಪ್ರತಿನಿಧಿಗಳ ನಡುವೆ ಒಮ್ಮತ ಇರಲಿಲ್ಲ. ಎಚ್.ಕೆ. ಪಾಟೀಲ ಅವರು ಇಟಗಿ ಮತ್ತು ಬ್ಯಾಲಹುಣಸಿ ಮಧ್ಯೆ ಸೇತುವೆ ನಿರ್ಮಿಸಬೇಕು ಎಂದು ಪಟ್ಟು ಹಿಡಿದಿದ್ದರೆ, ಶಾಸಕ ಚಂದ್ರು ಲಮಾಣಿ ಅವರು ಕಲ್ಲಾಗನೂರು ಬಳಿ ಸೇತುವೆಯಾದರೆ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ವಾದಿಸಿದ್ದರು. ಸದ್ಯ ಕಲ್ಲಾಗನೂರು ಗ್ರಾಮದಲ್ಲಿ ಸೇತುವೆ ನಿರ್ಮಾಣ ಮಾಡುವುದಾಗಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಬಹುವರ್ಷದ ಕನಸು ನನಸಾಗಿಸಿ

ಜನಪ್ರತಿನಿಧಿಗಳ ನಡುವಿನ ಪ್ರತಿಷ್ಠೆಯ ಹಗ್ಗಜಗ್ಗಾಟದಿಂದ ಸೇತುವೆ ನಿರ್ಮಾಣ ಕಾಮಗಾರಿ ಇನ್ನೂ ಆರಂಭವಾಗದೆ, ನನೆಗುದಿಗೆ ಬಿದ್ದಿದೆ. ಆಡಳಿತದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಮೂರು ಜಿಲ್ಲೆಗಳ ಜನಸಾಮಾನ್ಯರು ಇಂದಿಗೂ ಜೀವ ಕೈಯಲ್ಲಿ ಹಿಡಿದು ನಾಡದೋಣಿಯನ್ನೇ ಸಂಚರಿಸುವ ಅನಿವಾರ್ಯತೆ ಬಂದೊದಗಿದೆ.

ತುಂಗಭದ್ರಾ ನದಿಗೆ ಅಡ್ಡಲಾಗಿ ಒಂದು ಸುಸಜ್ಜಿತ ಸೇತುವೆ ನಿರ್ಮಾಣವಾಗಬೇಕು ಎಂಬುದು ಹಲವು ವರ್ಷಗಳಿಂದ ಕೇಳಿಬರುತ್ತಿರುವ ಹಕ್ಕೊತ್ತಾಯ. ದಶಕಗಳು ಉರುಳಿದರೂ, ಸರ್ಕಾರಗಳು ಬದಲಾದರೂ ಈ ಭಾಗದ ಜನರ ಸೇತುವೆ ಕನಸು ಮಾತ್ರ ಇನ್ನೂ ನನಸಾಗಿಲ್ಲ. ಈಗಾಗಲೇ ಯೋಜನೆಯ ಡಿಪಿಆರ್ ಕಾರ್ಯ ಮಾತ್ರ ಪೂರ್ಣಗೊಂಡಿದೆ.

‘₹35 ಕೋಟಿಗೆ ಕಾಮಗಾರಿ ಸೀಮಿತ’

2023ರಲ್ಲಿ ಕಲ್ಲಾಗನೂರು–ಮಾಗಳ ನಡುವಿನ ಸೇತುವೆ ಹಾಗೂ ಕಲ್ಲಾಗನೂರು ಗ್ರಾಮದಲ್ಲಿ ಪ್ರವಾಸಿ ಮಂದಿರ ಒಳಗೊಂಡು ಪ್ರವಾಸಿ ತಾಣವನ್ನಾಗಿ ನಿರ್ಮಿಸುವುದಕ್ಕೆ ₹74 ಕೋಟಿ ಅನುದಾನ ಕೋರಲಾಗಿತ್ತು. ಅಲ್ಲಿಂದ ಜನಪ್ರತಿನಿಧಿಗಳ ತಿಕ್ಕಾಟ ಶುರುವಾಗಿದ್ದರಿಂದ ಈ ಕಾಮಗಾರಿಗೆ ಪ್ರಸ್ತುತ ₹35 ಕೋಟಿ ಅನುದಾನಕ್ಕೆ ಸೀಮಿತಗೊಳಿಸಲಾಗಿದೆ. 500 ಮೀಟರ್ ಸೇತುವೆ ಹಾಗೂ ಸಂಪರ್ಕ ರಸ್ತೆ ನಿರ್ಮಿಸಲಾಗುತ್ತದೆ. ಸೇತುವೆ ನಿರ್ಮಾಣದಿಂದ ಜಿಲ್ಲೆಯ ಜನರು ಕೇವಲ 4–5 ಕಿ.ಮೀಗಳಲ್ಲಿ ದೂರದ ಜಿಲ್ಲೆಗಳಿಗೆ ಸಂಪರ್ಕ ಸಾಧಿಸಬಹುದು. ಶೀಘ್ರದಲ್ಲೇ ಸೇತುವೆ ನಿರ್ಮಿಸಿ ಮೂರು ಜಿಲ್ಲೆಗಳ ಊರಿಗಳಿಗೆ ಸಂಪರ್ಕ ಕಲ್ಪಿಸಬೇಕೆಂದು ಮೂರೂ ಜಿಲ್ಲೆಗಳ ಜನರ ಒಕ್ಕೊರಲ ಒತ್ತಾಸೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260831-23-1963277659

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ