
ರೈತರ ನಿರೀಕ್ಷೆ ಹುಸಿ ಮಾಡಿದ ಬರ
ರಾಯಚೂರು: ಕೇಂದ್ರ ಸರ್ಕಾರ ನಿಗದಿಪಡಿಸಿದ ಮಾನದಂಡಗಳ ಆಧಾರದ ಮೇಲೆ ರಾಜ್ಯ ಸರ್ಕಾರ ಎರಡು ತಾಲ್ಲೂಕನ್ನು ತೀವ್ರ ಬರ ಪೀಡಿತ ಹಾಗೂ ಇನ್ನೆರಡು ತಾಲ್ಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ಘೋಷಣೆ ಮಾಡಿದೆ.
ಉಳಿದ ಮೂರು ತಾಲ್ಲೂಕಿನಲ್ಲೂ ಬರ ಪರಿಸ್ಥಿತಿ ಇದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸದೇ ಇರುವುದು ರೈತರಲ್ಲಿ ಅಸಮಾಧಾನ ಮೂಡಿಸಿದೆ.
ಜಿಲ್ಲೆಯ ದೇವದುರ್ಗ, ಮಸ್ಕಿ ತಾಲ್ಲೂಕಿನಲ್ಲಿ ತೀವ್ರ ಬರ ಹಾಗೂ ಲಿಂಗಸುಗೂರು, ರಾಯಚೂರು ತಾಲ್ಲೂ ಕಿನಲ್ಲಿ ಸಾಧಾರಣ ಬರ ಇದೆ. ಬರ ಪರಿಸ್ಥಿತಿ ಎದುರಿಸುತ್ತಿರುವ ಮಾನ್ವಿ, ಸಿರವಾರ ಹಾಗೂ ಸಿಂಧನೂರು ತಾಲ್ಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿಲ್ಲ. ಹೀಗಾಗಿ ಈ ಮೂರು ತಾಲ್ಲೂಕುಗಳ ರೈತರ ನಿರೀಕ್ಷೆಯೂ ಹುಸಿಯಾಗಿದೆ.
ಕೇಂದ್ರ ಸರ್ಕಾರ ಸೂಚಿಸಿದ ಬರ ನಿರ್ಧಾರಕ ಮಾನದಂಡಗಳ ಆಧಾರದಲ್ಲಿ ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ)ವು ರಾಜ್ಯದಲ್ಲಿ ಜೂನ್ 1ರಿಂದ ಅಗಸ್ಟ್ 12ರವರೆಗೆ ಬರಪರಿಸ್ಥಿತಿ ಕುರಿತು ನಡೆಸಿದ ವೈಜ್ಞಾನಿಕ ಮೌಲ್ಯಮಾಪನದ ಆಧಾರ ಮೆಲೆ ಬರಪೀಡಿತ ತಾಲ್ಲೂಕುಗಳ ಘೋಷಣೆ ಮಾಡಲಾಗಿದೆ. ಆದರೆ, ಸ್ಥಳೀಯ ವಾಸ್ತವ ಅಂಶಗಳನ್ನೇ ಪರಿಗಣನೆಗೆ ತೆಗೆದುಕೊಂಡಿಲ್ಲ.
ಒಣಗಿದ ಬೆಳೆ: ರಾಯಚೂರು ತಾಲ್ಲೂಕಿನ ಒಟ್ಟಾರೆ ಬಿತ್ತನೆ ಪ್ರದೇಶದ ಪೈಕಿ ಶೇ 30ರಷ್ಟು ಕೇತ್ರದಲ್ಲಿ ಶೇ 70ರಷ್ಟು ಬೆಳೆ ನಷ್ಟವಾಗಿದೆ. ಶೇ 33ರಿಂದ ಶೇ 50ರಷ್ಟು ಪ್ರದೇಶದಲ್ಲಿ ಶೇ 30ರಷ್ಟು ಬೆಳೆ ನಷ್ಟವಾಗಿದೆ. ಶೇ 50ರಷ್ಟು ಪ್ರದೇಶದಲ್ಲಿ ಶೇ 70ರಷ್ಟು ಬೆಳೆ ಹಾನಿಯಾಗಿದೆ. ರಾಯಚೂರು ತಾಲ್ಲೂಕಿನ ದೇವಸುಗೂರಲ್ಲಿ ಉತ್ತಮ ಮಳೆಯಾದರೆ, ಕಲ್ಮಲಾದಲ್ಲಿ ನಿರೀಕ್ಷೆಯಷ್ಟು ಮಳೆಯೇ ಆಗಿಲ್ಲ.
‘ತಾಲ್ಲೂಕಿನ ನಾಲ್ಕು ಹೋಬಳಿಗಳಲ್ಲಿ ವಾಡಿಕೆಯಷ್ಟು ಮಳೆ ಸುರಿದಿಲ್ಲ. ಒಂದು ವೇಳೆ ಸರ್ಕಾರ ಪರಿಹಾರ ಘೋಷಣೆ ಮಾಡಿದರೆ, ತೀವ್ರ ಹಾಗೂ ಸಾಧಾರಣ ಬರ ಇದ್ದರೂ ಎಲ್ಲ ರೈತರಿಗೆ ಸಮಾನಂತರವಾದ ಪರಿಹಾರ ಬರಲಿದೆ’ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.
ಮಳೆ ಕೊರತೆಯಿಂದಾಗಿ ರಾಯ ಚೂರು, ದೇವದುರ್ಗ ಹಾಗೂ ಮಾನ್ವಿ ತಾಲ್ಲೂಕಿನಲ್ಲಿ ಹತ್ತಿ, ಸಿಂಧನೂರು, ಲಿಂಗಸುಗೂರು ತಾಲ್ಲೂಕಿನಲ್ಲಿ ಸೂರ್ಯಕಾಂತಿ ಹಾಗೂ ತೊಗರಿ ಬೆಳೆ ಒಣಗಿದೆ.
ದೇವದುರ್ಗ, ಮಸ್ಕಿಯ ಶೇ 10ರಷ್ಟು ಪ್ರದೇಶದಲ್ಲಿ ಶೇ 33ರಷ್ಟು ಬೆಳೆ ಹಾನಿಯಾಗಿದೆ. ಶೇ 50 ರಷ್ಟು ಪ್ರದೇಶದಲ್ಲಿ ಶೇ 90ರಷ್ಟು ಬೆಳೆ ನಷ್ಟವಾಗಿದೆ. ಹೀಗಾಗಿ ಈ ತಾಲ್ಲೂಕುಗಳಲ್ಲಿ ತೀವ್ರ ಬರವೆಂದು ಪರಿಗಣಿಸಲಾಗಿದೆ.
ಮಳೆಯೂ ಇಲ್ಲ, ನಾಲೆ ನೀರು ಇಲ್ಲ: ಸಿರವಾರ ತಾಲ್ಲೂಕಿನಾದ್ಯಂತ ಬರ ತಾಂಡವವಾಡುತ್ತಿದೆ. ಬಯಲು ಸೀಮೆ ಪ್ರದೇಶದಲ್ಲಿ ಮಳೆ ಇಲ್ಲದೆ, ಬಿತ್ತನೆಯಾದ ಬೆಳೆಗಳು ನಾಶವಾದರೆ, ತುಂಗಭದ್ರಾ ಎಡದಂಡೆ ನಾಲೆಯ ನೀರು ನಂಬಿದ್ದ ರೈತರು ಭತ್ತದ ಬೆಳೆಗೆ ಅಗತ್ಯ ಸಿದ್ದತೆ ಮಾಡಿಕೊಂಡಿದ್ದರು. ಅಧಿಕಾರಿಗಳ ನಿರ್ಲಕ್ಷ್ಯದಿಂ ದಾಗಿ ನಾಲೆಗಳಿಗೆ ನೀರು ಬಾರದೆ ಸಂಕಷ್ಟ ಎದುರಿಸುತ್ತಿದ್ದಾರೆ.
ಬಯಲು ಸೀಮೆಯಲ್ಲಿ ಮಳೆಯನ್ನು ನಂಬಿ ಬಿತ್ತನೆ ಮಾಡಿದ ತೊಗರಿ, ಹತ್ತಿ, ಸೂರ್ಯಕಾಂತಿ ಬೆಳೆಗಳು ನೀರಿಲ್ಲದೇ ನಾಶವಾಗಿವೆ. ಸರ್ಕಾರ ಸಿರವಾರ ತಾಲ್ಲೂಕು ಬರಪೀಡಿತ ಎಂದು ಘೋಷಿಸದ ಕಾರಣ ರೈತರು ಸಂಕಷ್ಟ ಎದುರಿಸುವಂತಾಗಿದೆ.
‘20 ದಿನ ಕಳೆದರೂ ತುಂಗಭದ್ರಾ ಎಡದಂಡೆ ನಾಲೆಯ ಕೊನೆ ಭಾಗಕ್ಕೆ ನೀರು ಬಂದಿಲ್ಲ. ಮುಂದೆ ಬೆಳೆ ಬೆಳೆಯೋದೆ ಕಷ್ಟ. ಸಿರವಾರ ತಾಲ್ಲೂಕನ್ನು ಬರ ಪೀಡಿತ ತಾಲ್ಲೂಕು ಘೋಷಣೆಯಿಂದ ದೂರವಿಟ್ಟು ಅನ್ಯಾಯ ಮಾಡಲಾಗಿದೆ’ ಎಂದು ಭಾಗ್ಯನಗರ ಕ್ಯಾಂಪ್ ರೈತ ರೇವಣಸಿದ್ದಪ್ಪ ಬೇಸರ ವ್ಯಕ್ತಪಡಿಸುತ್ತಾರೆ.
ಲಿಂಗಸುಗೂರು ತಾಲ್ಲೂಕಿನ 35 ಮಳೆ ಮಾಪನ ಕೇಂದ್ರಗಳ ವ್ಯಾಪ್ತಿಯಲ್ಲಿ ಅಲ್ಪಸ್ವಲ್ಪ ಮಳೆ ಪ್ರಮಾಣವನ್ನೇ ಆಧರಿಸಿ, ರಾಜ್ಯ ಸರ್ಕಾರ ತಾಲ್ಲೂಕನ್ನು ಸಾಧಾರಣ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಆದರೆ, ತಾಲ್ಲೂಕಿನಲ್ಲಿ ತೀವ್ರ ಸ್ವರೂಪದ ಬರಗಾಲವಿದೆ.
ಬಿತ್ತನೆ ಮಾಡಿದ ಬೆಳೆ ಉಳಿಸಿಕೊಳ್ಳಲು ರೈತರು ಪ್ರಯತ್ನ ಮಾಡುತ್ತಿದ್ದಾರೆ ಎಂದು ರೈತರು ಹೇಳುತ್ತಾರೆ.
ಜಿಲ್ಲೆಯಲ್ಲಿ ಮಳೆ ಕೊರತೆ
ಜಿಲ್ಲೆಯಲ್ಲಿ ಮುಂಗಾರಿನಲ್ಲಿ 756 ಮಿ.ಮೀ ವಾಡಿಕೆ ಮಳೆಯಾಗುತ್ತದೆ. ಆದರೆ, ಜೂನ್ 1ರಿಂದ ಆಗಸ್ಟ್ ಮೂರನೇ ವಾರದವರೆಗಿನ ಒಟ್ಟು ಸಂಚಿತ ಮಳೆ ಸುಮಾರು 185.7 ಮಿ.ಮೀ ದಾಖಲಾಗಿದೆ.
ಜೂನ್ ತಿಂಗಳ ಆರಂಭದಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರೂ ಜುಲೈ ಮತ್ತು ಆಗಸ್ಟ್ ಆರಂಭದಲ್ಲಿ ಮಳೆ ಕೊಂಚ ಬಿಡುವು ನೀಡಿತ್ತು. ಇದರಿಂದಾಗಿ ಒಣ ಬೇಸಾಯದ ಬೆಳೆಗಳಿಗೆ ತುಸು ಹಿನ್ನಡೆಯಾಗಿದೆ. ಮಳೆ ಎಲ್ಲೆಡೆ ಸಮಾನಾಂತರವಾಗಿ ಸುರಿದಿಲ್ಲ. ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆ. ಹೀಗಾಗಿ ಬರ ಪರಿಸ್ಥಿತಿ ಹಾಗೂ ಬೆಳೆ ನಷ್ಟವೂ ಒಂದೇ ತರನಾಗಿಲ್ಲ.
‘ರೈತರು ಹತ್ತಿ, ಮೆಣಸಿನಕಾಯಿ, ತೊಗರಿ ಮತ್ತು ಇತರೆ ಬೆಳೆ ಬಿತ್ತನೆ ಮಾಡಿದ್ದಾರೆ. ಬೀಜ, ರಸಗೊಬ್ಬರ ಖರೀದಿಸಿ ಸಂಕಷ್ಟದಲ್ಲಿದ್ದಾರೆ. ತೀವ್ರ ಮಳೆ ಕೊರತೆ ಎದುರಿಸುತ್ತಿರುವ ಪ್ರದೇಶಗಳಿಗೆ ಸರ್ಕಾರ ತ್ವರಿತವಾಗಿ ಅನುದಾನ ಬಿಡುಗಡೆಗೊಳಿಸಿ, ರೈತರ ನೆರವಿಗೆ ಧಾವಿಸಬೇಕು’ ಎಂದು ದೇವದುರ್ಗ ತಾಲ್ಲೂಕಿನ ಜಾಗಟಗಲ್ ರೈತ ಸಿದ್ದಾರೂಢ ಒತ್ತಾಯಿಸುತ್ತಾರೆ.
ಮಳೆಯೂ ಇಲ್ಲ, ನಾಲೆ ನೀರು ಇಲ್ಲ
ಸಿರವಾರ ತಾಲ್ಲೂಕಿನಾದ್ಯಂತ ಬರ ತಾಂಡವವಾಡುತ್ತಿದೆ. ಬಯಲು ಸೀಮೆ ಪ್ರದೇಶದಲ್ಲಿ ಮಳೆ ಇಲ್ಲದೆ, ಬಿತ್ತನೆಯಾದ ಬೆಳೆಗಳು ನಾಶವಾದರೆ, ತುಂಗಭದ್ರಾ ಎಡದಂಡೆ ನಾಲೆಯ ನೀರು ನಂಬಿದ್ದ ರೈತರು ಭತ್ತದ ಬೆಳೆಗೆ ಅಗತ್ಯ ಸಿದ್ದತೆ ಮಾಡಿಕೊಂಡಿದ್ದರು. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಾಲೆಗಳಿಗೆ ನೀರು ಬಾರದೆ ಸಂಕಷ್ಟ ಎದುರಿಸುತ್ತಿದ್ದಾರೆ.
ಲಿಂಗಸುಗೂರು ತಾಲ್ಲೂಕಿನ 35 ಮಳೆ ಮಾಪನ ಕೇಂದ್ರಗಳ ವ್ಯಾಪ್ತಿಯಲ್ಲಿ ಅಲ್ಪಸ್ವಲ್ಪ ಮಳೆ ಪ್ರಮಾಣವನ್ನೇ ಆಧರಿಸಿ, ರಾಜ್ಯ ಸರ್ಕಾರ ತಾಲ್ಲೂಕನ್ನು ಸಾಧಾರಣ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಆದರೆ, ತಾಲ್ಲೂಕಿನಲ್ಲಿ ತೀವ್ರ ಸ್ವರೂಪದ ಬರಗಾಲವಿದೆ. ಬಿತ್ತನೆ ಮಾಡಿದ ಬೆಳೆ ಉಳಿಸಿಕೊಳ್ಳಲು ರೈತರು ಪ್ರಯತ್ನ ಮಾಡುತ್ತಿದ್ದಾರೆ ಎಂದು ರೈತರು ಹೇಳುತ್ತಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260829-32-1508209444