
ಚಿತ್ರದುರ್ಗ|ಕಾಯಕಲ್ಪಕ್ಕೆ ಕಾಯುತ್ತಿವೆ ಜಲಪಾತ್ರೆಗಳು; ಕಲ್ಯಾಣಿಗಳಲ್ಲಿ ಕಸ ಸಂಗ್ರಹ
ಚಿತ್ರದುರ್ಗ: ಏಳು ಸುತ್ತಿನ ಕೋಟೆ, ಐತಿಹಾಸಿಕ ಸ್ಮಾರಕಗಳಿಂದಾಗಿ ಹೆಸರಾಗಿರುವ ಮಧ್ಯ ಕರ್ನಾಟಕದ ಚಿತ್ರದುರ್ಗ ನಗರದಲ್ಲಿ ಜಲಪಾತ್ರೆಗಳಿಗೆ ಕಂಟಕ ಎದುರಾಗಿದೆ. ಹಿಂದಿನವರು ಮಳೆನೀರು ಸಂಗ್ರಹಿಸಿ ಜನ– ಜಾನುವಾರುಗಳ ದಾಹ ನೀಗಿಸಲು ನಿರ್ಮಿಸಿದ್ದ ಹೊಂಡ, ಬಾವಿ, ಕಲ್ಯಾಣಿಗಳು ಅವಸಾನದ ಅಂಚಿಗೆ ತಲುಪಿವೆ.
ನಗರದ ವಿವಿಧೆಡೆ ಇರುವ ಐತಿಹಾಸಿಕ ಪುಷ್ಕರಣಿಗಳ ಪೈಕಿ ಕೆಲವು ಕಣ್ಮರೆಯಾಗಿವೆ. ಉಳಿದವುಗಳಲ್ಲಿ ನೀರಿನ ಬದಲು ಹೂಳು, ಕಸ, ಕಡ್ಡಿ, ಪ್ಲಾಸ್ಟಿಕ್‌ಗಳೇ ತುಂಬಿವೆ. ಕೆಲವು ಬಯಲು ಶೌಚಾಲಯಗಳಾಗಿ ಮಾರ್ಪಟ್ಟಿದ್ದು, ನಗರದ ಜಲಪರಂಪರೆಯ ಕುರುಹುಗಳು ನಿಧಾನವಾಗಿ ನಶಿಸಿಹೋಗುತ್ತಿವೆ.
ನಗರದ ಕೋಟೆ ಆವರಣದಲ್ಲಿರುವ ಕಾಮನಬಾವಿ, ಮಧ್ಯಭಾಗದ ಸಂತೆ ಹೊಂಡ, ತುರುವನೂರು ರಸ್ತೆಯ ವೆಂಕಟರಮಣ ಸ್ವಾಮಿ ದೇವಸ್ಥಾನದ ಮುಂಭಾಗ, ಕೆಳಗೋಟೆಯ ಚನ್ನಕೇಶವ ದೇವಸ್ಥಾನದ ಹಿಂಭಾಗ, ಕೋಟೆ ಮುಂಭಾಗದಿಂದ ತಿಮ್ಮಣ್ಣ ನಾಯಕನ ಕೆರೆಗೆ ಸಾಗುವ ಮಾರ್ಗ ಮಧ್ಯದ ಈಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ಕಲ್ಯಾಣಿ, ಎಲ್‌ಐಸಿ ಕಚೇರಿ ಪಕ್ಕದ ಕೆಂಚಮಲ್ಲಪ್ಪನ ಬಾವಿ, ಕೆಎಸ್‌ಆರ್‌ಟಿಸಿ ಡಿಪೊ ಹಿಂಭಾಗ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿರುವ ಪಾರಂಪರಿಕ ಪುಷ್ಕರಣಿಗಳು ನಗರದ ಜಲಪರಂಪರೆಗೆ ಕನ್ನಡಿಯಂತಿದ್ದವು.
ಇವುಗಳ ಪೈಕಿ ಬಹುತೇಕವು ನಿರ್ವಹಣೆಯ ಕೊರತೆಯಿಂದ ಅವ್ಯವಸ್ಥೆಯ ಆಗರವಾಗಿವೆ. ಕೆಲವು ಪುಷ್ಕರಣಿಗಳಲ್ಲಿ ವರ್ಷಗಳಿಂದ ಹೂಳು ತೆಗೆದಿಲ್ಲ. ಹೀಗಾಗಿ ಅವು ಜಲ ಸಂಗ್ರಹಣಾ ಸಾಮರ್ಥ್ಯವನ್ನೇ ಕಳೆದುಕೊಂಡಿವೆ. ಇನ್ನೂ ಹಲವು ಪುಷ್ಕರಣಿಗಳಲ್ಲಿ ನೀರಿದೆ. ಆದರೆ ಬಳಕೆಗೆ ಯೋಗ್ಯವಾಗಿಲ್ಲ.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿರುವ ಐತಿಹಾಸಿಕ ಪುಷ್ಕರಣಿಯ ಸ್ಥಿತಿ ಶೋಚನೀಯವಾಗಿದೆ. ಗಿಡ, ಗಂಟಿ ಬೆಳೆದು ಬಹುಭಾಗ ಮುಚ್ಚಿಹೋಗಿದೆ. ಇಲ್ಲಿ ಪುಷ್ಕರಣಿ ಇದೆ ಎಂಬುದೇ ತಿಳಿಯದಂತಾಗಿದೆ. ಡಿಪೊ ಹಿಂಭಾಗದ ಪುಷ್ಕರಣಿಯ ಪರಿಸ್ಥಿತಿಯೂ ಭಿನ್ನವಾಗಿಲ್ಲ.
ಕಾಮನಬಾವಿ ಮತ್ತು ಕೆಂಚಮಲ್ಲಪ್ಪನ ಹೊಂಡ ಸ್ವಲ್ಪ ಉತ್ತಮ ಸ್ಥಿತಿಯಲ್ಲಿದ್ದರೂ, ನಿರ್ವಹಣೆಯ ಕೊರತೆಯಿಂದ ಇಲ್ಲಿನ ನೀರು ಮಲಿನಗೊಂಡಿದೆ. ಹೊಂಡ, ಕಲ್ಯಾಣಿಗಳಲ್ಲಿ ದೇವರ ಪೂಜೆಗೆ ಬಳಸಿದ ಹೂವು, ತೆಂಗಿನಕಾಯಿ, ಬಟ್ಟೆಯ ಗಂಟು, ಹಳೆಯ ಪುಸ್ತಕಗಳು, ಪ್ಲಾಸ್ಟಿಕ್ ಚೀಲಗಳು, ಖಾಲಿ ಬಾಟಲಿಗಳು ಹೀಗೆ ನಾನಾ ವಿಧದ ತ್ಯಾಜ್ಯ ಎಸೆಯಲಾಗುತ್ತಿದೆ. ಕೆಲವೆಡೆ ದೇವರ ಫೋಟೊಗಳನ್ನೂ ನೀರಿಗೆ ಎಸೆದಿರುವುದು ಕಂಡುಬರುತ್ತದೆ. ಒಂದೆಡೆ ಆಡಳಿತದ ನಿರ್ಲಕ್ಷ್ಯ, ಮತ್ತೊಂದೆಡೆ ಜನರ ಬೇಜವಾಬ್ದಾರಿಯು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸುತ್ತಿದೆ.
ಒಮ್ಮೆ ಸ್ವಚ್ಛತೆ, ಮತ್ತೆ ತ್ಯಾಜ್ಯ
ಸಂಬಂಧಪಟ್ಟ ಆಡಳಿತವು ಕೆಲವು ವರ್ಷಗಳಿಂದ ನಿಯಮಿತ ಸ್ವಚ್ಛತೆ ಇರಲಿ, ಅವುಗಳ ಸಂರಕ್ಷಣೆಯತ್ತ ಗಮನ ಹರಿಸದೇ ಇರುವುದು ಸಮಸ್ಯೆ ಉಲ್ಬಣಿಸಲು ಕಾರಣವಾಗಿದೆ. ನಗರಸಭೆಯಿಂದ ಸ್ವಚ್ಛತೆ ಮಾಡಿಸಿದರೂ ಕೆಲವರು ಮತ್ತೆ ಕಸ ತಂದು ಸುರಿಯುತ್ತಿರುವುದು ಕಂಡುಬರುತ್ತಿದೆ.
ಪುಷ್ಕರಣಿಗಳ ಸುತ್ತಲೂ ಕಾಂಪೌಂಡ್ ನಿರ್ಮಿಸಿ, ಅಗತ್ಯವಿರುವ ಕಡೆ ಕಬ್ಬಿಣದ ಮೆಷ್ ಅಳವಡಿಸಬೇಕು. ಪ್ರವೇಶ ನಿಯಂತ್ರಣ, ಎಚ್ಚರಿಕೆ ಫಲಕ, ತ್ಯಾಜ್ಯ ಹಾಕಿದರೆ ದಂಡ ವಿಧಿಸುವ ಕ್ರಮದ ಜತೆಗೆ ಸ್ಥಳೀಯ ನಿವಾಸಿಗಳ ಸಹಭಾಗಿತ್ವದಲ್ಲಿ ನಿರಂತರ ಮೇಲ್ವಿಚಾರಣೆ ನಡೆಸಬೇಕು ಎಂಬುದು ಜನರ ಒತ್ತಾಯ.
ಚಿಕ್ಕಕೆರೆಯಲ್ಲಿ ಘನತ್ಯಾಜ್ಯದ ಕಾರುಬಾರು
ನಾಯಕನಹಟ್ಟಿ: ಪಟ್ಟಣಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಐತಿಹಾಸಿಕ ಗುರುತಿಪ್ಪೇರುದ್ರಸ್ವಾಮಿ ಚಿಕ್ಕಕೆರೆಯ ಆವರಣಕ್ಕೆ ಹಳೆಯ ಕಟ್ಟಡಗಳ ತ್ಯಾಜ್ಯ ಸುರಿಯುವ ಕಾರ್ಯ ಎಗ್ಗಿಲ್ಲದೆ ಸಾಗಿದೆ.
ಮದ್ಯದ ಪೌಚ್‍ಗಳು, ಬಾಟಲಿಗಳು, ಕ್ಷೌರಮಾಡಿದ ಕೂದಲು ಹೀಗೆ ಎಲ್ಲ ತ್ಯಾಜ್ಯವನ್ನು ರಾಜಾರೋಷವಾಗಿ ಕೆರೆಗೆ ಹಾಕಲಾಗುತ್ತಿದೆ. ಇದರಿಂದ ಕೆರೆ ಪರಿಸರ ಹಾಳಾಗುತ್ತಿದೆ. ಪಟ್ಟಣ ಪಂಚಾಯಿತಿಯಿಂದ ಎಚ್ಚರಿಕೆಯ ನಾಮಫಲಕ ಅಳವಡಿಸಿದ್ದರೂ ಜನ ಕ್ಯಾರೆ ಎನ್ನುತ್ತಿಲ್ಲ.
ಕೆರೆಯು 389.19 ಎಕರೆ ವಿಸ್ತೀರ್ಣ ಹೊಂದಿದೆ. ಮಳೆಯ ಕೊರತೆಯಿಂದಾಗಿ ಕೆರೆಯ ಒಡಲು ಬರಿದಾಗಿದ್ದು, ಸೀಮೆ ಜಾಲಿ ಗಿಡಗಳು ಯಥೇಚ್ಛವಾಗಿ ಬೆಳೆದಿವೆ. ಹಾಡುಹಗಲೇ ಹಳೇ ಕಟ್ಟಡಗಳ ತ್ಯಾಜ್ಯವನ್ನು ಟ್ಯಾಕ್ಟರ್‌ಗಳಲ್ಲಿ ತಂದು ಸುರಿಯಲಾಗುತ್ತಿತ್ತು. ಇದನ್ನು ತಡೆಯಲು ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ಕಬ್ಬಿಣದ ತಂತಿಗಳ ಬ್ಯಾರಿಕೇಡ್ ವ್ಯವಸ್ಥೆ ಮಾಡಿದ್ದರು. ಇಷ್ಟಾದರೂ ತ್ಯಾಜ್ಯ ಸುರಿಯುವುದು ನಿಂತಿಲ್ಲ.
ಸಣ್ಣ ನೀರಾವರಿ ಇಲಾಖೆ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳ ಹಲವು ಉಪಕ್ರಮಗಳಿಂದಲೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದರಿಂದ ಕೆರೆಯ ಅಂದ ಕೆಡುತ್ತಿದ್ದು, ಈ ಬಗ್ಗೆ ಜಾಗೃತಿ ಆಂದೋಲನ ಆರಂಭವಾಗಬೇಕಿದೆ ಎಂದು ಪರಿಸರವಾದಿಗಳು ಹೇಳುತ್ತಾರೆ.
ಸಂತೆ ಹೊಂಡದ ಸ್ವಚ್ಛತೆ ಮರೀಚಿಕೆ
ಹೊಸದುರ್ಗ: ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಸಮೀಪವಿರುವ ಸಂತೆ ಹೊಂಡದ (ಮಠದ ಬಾವಿ) ಆವರಣದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ.
ಹೊಂಡದ ಸುತ್ತಮುತ್ತ ಕೆಸರು ಹಾಗೂ ತ್ಯಾಜ್ಯ ನೀರು ನಿಲ್ಲುತ್ತಿದ್ದು, ಪಾದಚಾರಿಗಳು ಸಂಚರಿಸಲು ಕಷ್ಟವಾಗುತ್ತಿದೆ. ಮಳೆ ಬಂದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಇದರಿಂದ ವ್ಯಾಪಾರಸ್ಥರು, ಗ್ರಾಹಕರು ಹಾಗೂ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ.
ಈ ಮೊದಲು ಸುತ್ತಮುತ್ತಲಿನ ಅಂಗಡಿಯವರು, ವ್ಯಾಪಾರಸ್ಥರು ಸ್ವಚ್ಛತೆ ಕೈಗೊಂಡಿದ್ದರು. ಇಲ್ಲಿನ ಗೇಟ್ ಮುರಿದು ವರ್ಷಗಳೇ ಕಳೆದಿದ್ದರೂ ಅಧಿಕಾರಿಗಳು ಗೇಟ್ ಹಾಕಿಸಿಲ್ಲ. ಹಾಗಾಗಿ ಇಲ್ಲಿ ತ್ಯಾಜ್ಯ ಹಾಕುವವರ ಸಂಖ್ಯೆ ಹೆಚ್ಚುತ್ತಿದೆ.
ಮಲ, ಮೂತ್ರ ವಿಸರ್ಜನೆಯೂ ಇಲ್ಲೇ ಮಾಡುವುದರಿಂದ ದುರ್ವಾಸನೆ ಹರಡುತ್ತಿದೆ. ತರಕಾರಿ ಅಂಗಡಿಗಳ ತ್ಯಾಜ್ಯವನ್ನು ಇದೇ ಹೊಂಡಕ್ಕೆ ಸುರಿಯಲಾಗುತ್ತಿದೆ. ಹೊಂಡದ ಸುತ್ತ ಮುತ್ತ ಗಿಡಗಂಟಿಗಳು ಬೆಳೆದಿದ್ದು, ಬೀದಿ ದೀಪದ ವ್ಯವಸ್ಥೆ ಇಲ್ಲದ ಕಾರಣ ರಾತ್ರಿ ವೇಳೆ ಇದು ಕುಡುಕರ ಅಡ್ಡವಾಗಿದೆ. ಬೀದಿ ದೀಪದ ಜೊತೆಗೆ ಸಿ.ಸಿ.ಟಿವಿ ಕ್ಯಾಮೆರಾ ಹಾಕಿಸುವ ಮೂಲಕ ಹೊಂಡ ಕಲುಷಿತವಾಗುವುದನ್ನು ತಡೆಯಬೇಕು ಎಂದು ಇಲ್ಲಿನ ಅಂಗಡಿ ಮಾಲೀಕರು ಒತ್ತಾಯಿಸುತ್ತಾರೆ.
ಗಣೇಶ, ದುರ್ಗಾಪರಮೇಶ್ವರಿ ಮೂರ್ತಿಗಳ ವಿಸರ್ಜನೆಯೂ ಇಲ್ಲಿಯೇ ನಡೆಯುತ್ತದೆ. ಇನ್ನೇನು ಹಬ್ಬಗಳು ಆರಂಭವಾಗುತ್ತಿದ್ದು, ಅಧಿಕಾರಿಗಳು ಹೊಂಡದ ಸಂರಕ್ಷಣೆಗೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಒತ್ತಾಸೆಯಾಗಿದೆ.
ನಿರ್ಲಕ್ಷ್ಯಕ್ಕೆ ಒಳಗಾದ ಸಿಹಿ ನೀರು ಬಾವಿ
ಸಿರಿಗೆರೆ: ತರಳಬಾಳು ಗುರುಪರಂಪರೆಯ ಶ್ರೀಗಳ ಸಮಾಧಿಗಳ ಸಮೀಪದಲ್ಲೇ ಇರುವ ಸಿಹಿನೀರು ಬಾವಿ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿ ಸುತ್ತಲೂ ಮುಳ್ಳಿನ ಪೊದೆ ಬೆಳೆದುಕೊಂಡಿದೆ. ಐದಾರು ದಶಕಗಳ ಕಾಲ ಸಿರಿಗೆರೆ ಜನರ ದಾಹ ತಣಿಸಿದ್ದ ಈ ಬಾವಿ ನಿಧಾನವಾಗಿ ಅವಸಾನದ ಅಂಚಿಗೆ ತಲುಪುತ್ತಿದೆ.
ಹತ್ತಾರು ಮೆಟ್ಟಿಲು ಇಳಿದು ಅದರೊಳಗೆ ನಾಲ್ಕಾರು ಹೆಜ್ಜೆ ಹಾಕಿದರೆ ಅಲ್ಲೊಂದು ಪುಷ್ಕರಣಿ ರೀತಿಯ ಆಳವಾದ ಬಾವಿ ಕೊರೆಯಲ್ಪಟ್ಟಿರುವುದು ಕಾಣುತ್ತದೆ. ಅದರಲ್ಲಿ ಸದಾಕಾಲ ನೀರು ಇದ್ದೇ ಇರುತ್ತದೆ. ದಶಕಗಳ ಹಿಂದೆ ನಾಡಿನ ಎಲ್ಲೆಡೆ ಬರ ಬಂದಾಗ ಬತ್ತಿದ್ದು ಬಿಟ್ಟರೆ ಮತ್ತೆಂದೂ ಈ ಬಾವಿ ಬತ್ತಿಲ್ಲ. ಊರಿನ ಸಕಲ ಧಾರ್ಮಿಕ ಸಮಾರಂಭಗಳು ಇಲ್ಲಿನ ಗಂಗೆಯ ಪೂಜೆಯ ನಂತರವೇ ಆರಂಭವಾಗುತ್ತದೆ.
ಐತಿಹಾಸಿಕ ಪಾವಿತ್ರ್ಯತೆ ಉಳಿಸಿಕೊಂಡು ಬಂದಿರುವ ತಾಣವನ್ನೇ ಸ್ಥಳೀಯ ಆಡಳಿತ ಮರೆತಿದೆ. ಸಂಬಂಧ ಪಟ್ಟ ಇಲಾಖೆ ಇತ್ತ ಗಮನ ಹರಿಸಿ ಬಾವಿಗೆ ಕಾಯಕಲ್ಪ ನೀಡಬೇಕೆಂಬುದು ನಾಗರಿಕರ ಆಗ್ರಹವಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260817-44-1112182587