ಕಲಬುರಗಿಯಲ್ಲಿ ಮಳೆಗಾಲದಲ್ಲೂ ಅಂತರ್ಜಲ ಕುಸಿತ

ಕಲಬುರಗಿಯಲ್ಲಿ ಮಳೆಗಾಲದಲ್ಲೂ ಅಂತರ್ಜಲ ಕುಸಿತ

ಕಲಬುರಗಿಯಲ್ಲಿ ಮಳೆಗಾಲದಲ್ಲೂ ಅಂತರ್ಜಲ ಕುಸಿತ

ಕಲಬುರಗಿ: ಬೇಸಿಗೆಯಲ್ಲಿ ಅಂತರ್ಜಲ ಕುಸಿತ ನಿರೀಕ್ಷಿತ. ಆದರೆ, ಜಿಲ್ಲೆಯಲ್ಲಿ ವರುಣನ ಮುನಿಸಿನಿಂದ ಬರದ ಛಾಯೆ ಆವರಿಸಿದ್ದು, ಮಳೆಗಾಲದಲ್ಲೂ ಅಂತರ್ಜಲಮಟ್ಟ ಕುಸಿಯುತ್ತಿದೆ.

2026ರ ಏಪ್ರಿಲ್‌ಗೆ ಹೋಲಿಸಿದರೆ ಜುಲೈನಲ್ಲಿ ಅಂತರ್ಜಲಮಟ್ಟವು ಜಿಲ್ಲೆಯಲ್ಲಿ ಸರಾಸರಿ 3 ಅಡಿಗಳಷ್ಟು ಕುಸಿದಿದೆ. ಏಪ್ರಿಲ್‌ನಲ್ಲಿ ಭೂಮಿಯ ಆಳದಲ್ಲಿ ಸರಾಸರಿ 9.44 ಮೀಟರ್‌ಗೆ ನೀರು ಸಿಗುತ್ತಿತ್ತು. ಜುಲೈನಲ್ಲಿ ಅದು 10.30 ಮೀಟರ್‌ಗೆ ಇಳಿದಿತ್ತು.

ಕಳೆದ ವರ್ಷ ಜಿಲ್ಲೆಯಲ್ಲಿ ಭರಪೂರ ಮಳೆಯಾಗಿತ್ತು. ಹೀಗಾಗಿ 2025ರ ಏಪ್ರಿಲ್‌ಗೆ ಹೋಲಿಸಿದರೆ ಜುಲೈನಲ್ಲಿ ಅಂತರ್ಜಲಮಟ್ಟವು ಸರಾಸರಿ 10 ಅಡಿಗಳಷ್ಟು ಜಿಗಿತ ಕಂಡಿತ್ತು. ಹೋದ ವರ್ಷ ಏಪ್ರಿಲ್‌ನಲ್ಲಿ ಭೂಮಿ ಒಡಲಾಳದ ನೀರಿನ ಮಟ್ಟವು ಸರಾಸರಿ 10.01 ಮೀಟರ್‌ಗೆ ಕುಸಿದಿತ್ತು. ಆದರೆ, ಜುಲೈ ಹೊತ್ತಿಗೆ ಮಳೆಯಿಂದಾಗಿ ಚೇತರಿಸಿಕೊಂಡು ಸರಾಸರಿ 7.01 ಮೀಟರ್‌ಗೆ ಏರಿಕೆಯಾಗಿತ್ತು.

ನೆಲದಾಳದ ನೀರಿನಮಟ್ಟ ಕುಸಿತದಿಂದ ಜಿಲ್ಲೆಯಲ್ಲಿ ಕೊಳವೆಬಾವಿಗಳು ಬಿಕ್ಕುತ್ತಿವೆ. ಒಂದೆಡೆ ನಗರ–ಪಟ್ಟಣಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಮತ್ತೊಂದೆಡೆ ಕೊಳವೆ ಬಾವಿಗಳನ್ನೇ ನೆಚ್ಚಿದ್ದ ರೈತರ ಬೆಳೆಗಳು ಬಾಡುತ್ತಿವೆ.

‘ನನಗೆ ಸ್ವಂತ ನಾಲ್ಕು ಎಕರೆ ಜಮೀನಿದೆ. ಹತ್ತಿ ಬಿತ್ತಿರುವೆ. ಹೊಲದಲ್ಲಿ ಸದ್ಯ ಒಂದು ತೆರೆದ ಬಾವಿ, ಎರಡು ಕೊಳವೆಬಾವಿಗಳಿವೆ. ಈ ವರ್ಷ ಮಳೆ ಕೊರತೆಯಿಂದ ತೆರೆದಬಾವಿ ಒಣಗಿದೆ. ಒಂದು ಬೋರ್‌ನಿಂದ ದಿನಕ್ಕೆ ಒಂದು ಗಂಟೆ ನೀರು ಸಿಕ್ಕರೆ ಅದೇ ಹೆಚ್ಚು. ಇನ್ನೊಂದು ಬೋರ್‌ನಲ್ಲಿ ಮೂರ್ನಾಲ್ಕು ತಾಸು ನೀರು ಬರುತ್ತಿದೆ. ಅದನ್ನೇ ತೆರೆದಬಾವಿಯಲ್ಲಿ ಸಂಗ್ರಹಿಸಿ ಬಳಸುತ್ತಿದ್ದೇನೆ’ ಎಂದು ಅಫಜಲಪುರ ತಾಲ್ಲೂಕಿನ ಮಾಶಾಳ ಗ್ರಾಮದ ರೈತ ಸಂತೋಷ ಹಣಮಂತ ಗಂಜಿ ಹೇಳುತ್ತಾರೆ.

‘ಹತ್ತಿ ಬೆಳೆಗೆ ಆಗಸ್ಟ್‌ ತಿಂಗಳಲ್ಲಿ ನೀರುಣಿಸುವುದೇ ಅಪರೂಪ. ಆಗೀಗ ಸುರಿಯುತ್ತಿರುವ ತುಂತುರು ಮಳೆ ಹತ್ತಿ ಬೆಳೆಗೆ ಸಾಲುತ್ತಿಲ್ಲ. ಕೊಳವೆಬಾವಿ ನೀರು ತೆರೆದ ಬಾವಿಯಲ್ಲಿ ಸಂಗ್ರಹಿಸಿ ಹತ್ತಿ ಬೆಳೆ ಡ್ರಿಪ್‌ ಮೂಲಕ ನೀರುಣಿಸುತ್ತಿದ್ದೇನೆ. ಪಕ್ಕದಲ್ಲೇ ಹಲವು ಎಕರೆ ಜಮೀನು ಕಡತಕ್ಕೆ ಪಡೆದು ತೊಗರಿ ಬಿತ್ತಿದ್ದೇನೆ. ಅದು ಕಣ್ಮುಂದೆಯೇ ಬಾಡುತ್ತಿದ್ದರೂ, ಅದಕ್ಕೆ ನೀರುಣಿಸಿ ರಕ್ಷಿಸಿಕೊಳ್ಳಲು ಬೋರ್‌ವೆಲ್‌ಗಳಲ್ಲಿ ನೀರಿಲ್ಲ’ ಎಂದು ಅವರು ಬೇಸರಿಸಿದರು.

ಜಿಲ್ಲೆಯಲ್ಲಿ ಜೂನ್‌ನಲ್ಲಿ ವಾಡಿಕೆಯಂತೆ 107.3 ಮಿಮೀ ಮಳೆಯಾಗಬೇಕಿತ್ತು. ಆದರೆ, 69.2 ಮಿಮೀ ಮಳೆ ಸುರಿದಿದ್ದು, ಶೇ36ರಷ್ಟು ಕೊರತೆಯಾಗಿತ್ತು. ಜುಲೈನಲ್ಲಿ ವಾಡಿಕೆಯಂತೆ 138.4 ಮಿಮೀ ಮಳೆ ಸುರಿಯಬೇಕಿತ್ತು. ವಾಸ್ತವದಲ್ಲಿ 90.4 ಮಿಮೀ ಮಾತ್ರವೇ ಮಳೆಯಾಗಿದ್ದು, ಶೇ35ರಷ್ಟು ಮಳೆ ಕೊರತೆಯಾಗಿದೆ. ಆಗಸ್ಟ್‌ 12ರ ತನಕ ವಾಡಿಕೆಯಂತೆ 63.6 ಮಿಮೀ ಮಳೆಯಾಗಬೇಕಿತ್ತು. ಆದರೆ, 34.3 ಮಿಮೀ ಮಾತ್ರವೇ ಮಳೆಯಾಗಿದ್ದು, ಶೇ46ರಷ್ಟು ಮಳೆ ಕೊರತೆಯಾಗಿದೆ ಎಂದು ಹವಾಮಾನ ಇಲಾಖೆ ಮೂಲಗಳುತಿಳಿಸಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260813-34-1327104150

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ