
ಆತ್ಮ, ಪರಮಾತ್ಮನ ಅಭೇದ ಜ್ಞಾನ ಬೋಧನೆ - ಬ್ರಹ್ಮಾನಂದ ಸರಸ್ವತಿ ಮಹಾರಾಜರು
ಬೈಂದೂರು: ಕೊಡಚಾದ್ರಿ ತಪ್ಪಲಿನ ಗೋಳಿಹೊಳೆ ಗ್ರಾಮದ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಪೀಠಾಧೀಶ ಮಹಾಮಂಡಲೇಶ್ವರ 1008 ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜರು ಚಾತುರ್ಮಾಸ್ಯ ವೃತಾಚರಣೆ ನಡೆಸುತ್ತಿದ್ದಾರೆ.
ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಶಂಭೂರು ಗ್ರಾಮಕ್ಕೆ ಸೇರಿದ ಇರಂತಬೆಟ್ಟು ಎಂಬಲ್ಲಿ ಜನಿಸಿ, ಸ್ವಗ್ರಾಮವಾದ ಶಂಭೂರಿನಲ್ಲಿ ಕಿರಿಯ ಪ್ರಾಥಮಿಕ ಶಾಲೆ, ಅನಂತರ ಸಮೀಪದ ಪಾಣೆಮಂಗಳೂರು ಗ್ರಾಮದ ಶ್ರೀ ವೆಂಕಟರಮಣ ಸ್ವಾಮಿ ವಿದ್ಯಾ ಸಂಸ್ಥೆಯಲ್ಲಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾಭ್ಯಾಸವನ್ನು ಹಾಗೂ ಕಾಲೇಜು ವಿದ್ಯಾಭ್ಯಾಸವನ್ನು ತಾಲ್ಲೂಕು ಕೇಂದ್ರವಾದ ಬಂಟ್ವಾಳ ಪಟ್ಟಣದ ಶ್ರೀ ವೆಂಕಟರಮಣಸ್ವಾಮಿ ಕಾಲೇಜಿನಲ್ಲಿ ಮುಂದುವರಿಸಿದರು.
ಪದವಿಪೂರ್ವ ಶಿಕ್ಷಣದ ತರುವಾಯ ಅಲ್ಲಿಯೇ ಇತಿಹಾಸ, ವಾಣಿಜ್ಯ ವಿಜ್ಞಾನ, ಸಮಾಜವಿಒಜ್ಞಾನ ಅಧ್ಯಯನದ ವಿಶೇಷ ವಿಷಯಗಳನ್ನಾಗಿ ಆಯ್ದುಕೊಂಡು ಬಿ.ಎ. ಪದವೀಧರಾದರು. ಮೈಸೂರು ವಿಶ್ವವಿದ್ಯಾನಿಲಯದ ಸಮಾಜ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ತಮ್ಮದಾಗಿಸಿಕೊಂಡರು. ಅಲ್ಲದೆ ಶ್ರೀ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ನ್ಯಾಯಶಾಸ್ತ್ರ ಅಧ್ಯಯನ ಮಾಡಿ ಎಲ್.ಎಲ್.ಬಿ. ಪದವಿಯನ್ನೂ ಪಡೆದಿದ್ದಾರೆ.
ತಮ್ಮ 13ನೇಯ ವಯಸ್ಸಿನಲ್ಲಿ ತಂದೆಯ ವರಿಂದಲೇ ಓಂಕಾರ ದೀಕ್ಷೆ, ಯೋಗ ದೀಕ್ಷೆಯನ್ನು ಪಡೆದು, ಶಿಕ್ಷಣದ ನಂತರ ವಿವಿಧ ಕಾರ್ಯಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ 2009ರಲ್ಲಿ ಜಗದ್ಗುರು ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ನಂತರ ಶ್ರೀರಾಮ ಕ್ಷೇತ್ರದ ಗುರುಪೀಠದ ಉತ್ತರಾಧಿಕಾರಿಯಾಗಿ ಪೀಠಾರೋಹಣ ಮಾಡಿದರು.
‘ದೇಶದ ಮೂಲೆ ಮೂಲೆಗಳಲ್ಲಿ ಜಾತಿಯ ಭಾವ ಮೈಳೈಸುತ್ತಿದ್ದು, ನಮ್ಮ ಪೀಠದ ಮುಖಾಂತರ ಆತ್ಮ ಮತ್ತು ಪರಮಾತ್ಮನ ಅಬೇಧ ಜ್ಞಾನವನ್ನು ಬೋಧಿಸುವ ಕೆಲಸ ಮಾಡುತ್ತಿದ್ದೇವೆ. ವೇದ ಉಪನಿಷತ್ತುಗಳ ಮೂಲಕ ಜ್ಞಾನವನ್ನು ಪಸರಿಸುವ ಕಾರ್ಯ ಈ ಚಾತುರ್ಮಾಸ್ಯದಲ್ಲಿ ಕೈಗೊಳ್ಳಲಾಗಿದೆ’ ಎಂದು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
‘ಜನರಿಗೆ ಸಂಸ್ಕಾರ ಹಾಗೂ ಆಧ್ಯಾತ್ಮದ ಕೊರತೆ ಇದ್ದು ಆಧುನೀಕರಣದಿಂದ ಎಲ್ಲವನ್ನೂ ಮರೆಯುತ್ತಿದ್ದೇವೆ. ಅಂತವರಿಗೆ ನಮ್ಮ ಸತ್ಸಂಗದಲ್ಲಿ ನಡೆಯುವ ಆಧ್ಯಾತ್ಮಿಕ ಪ್ರವಚನದ ಮೂಲಕ ಅರಿವು ಮೂಡಿಸುವ ಕೆಲಸವಾಗುತ್ತಿದೆ. ಇಂದು ಹೊರ ದೇಶಗಳು ರಾಷ್ಟ್ರ್ರೀಯತೆಯಿಂದಾಗಿ ಅಭಿವೃದ್ಧಿ ಹೊಂದಿವೆ. ನಮ್ಮಲ್ಲಿ ಒಂದೇ ಜಾತಿ, ಒಂದೇ ದೇಶ ಎಂಬ ಭಾವನೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಬಂದಿಲ್ಲ. ಈ ಕಾರ್ಯವನ್ನು ಮಠಾಧೀಶರು, ಸನ್ಯಾಸಿಗಳು ಜಾತಿಯ ಕೋಟೆಯನ್ನು ಒಡೆದು ಹೊರಗೆ ಬಂದು ಶಾಸ್ತ್ರ, ವೇದ, ಉಪನಿಷತ್ತುಗಳನ್ನು ಬೋಧಿಸಿ ಜಾತಿಮತಪಂಥಗಳ ಭೇದಭಾವಗಳು ಅಳಿದು, ಭಕ್ತರ ಮನಸ್ಸು ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಒಬ್ಬನೇ ಆದ ಪರಮಾತ್ಮನನ್ನು ಕಾಣುವಂತೆ ಮಾಡಬೇಕು’ ಎಂದು ಶ್ರೀಗಳು ಹೇಳಿದರು.
ಚಾತುರ್ಮಾಸ್ಯದ ಪರ್ವಕಾಲದಲ್ಲಿ ಪ್ರತಿ ದಿನ ಬೆಳಿಗ್ಗೆ 10 ಗಂಟೆಯಿಂದ 11 ರವರೆಗೆ ಭಜನಾ ಕಾರ್ಯಕ್ರಮ. ಬಳಿಕ ಗುರುಪಾದುಕಾ ಪೂಜೆ, ಆಶೀರ್ವಚನ, ಮಂತ್ರಾಕ್ಷತೆ ಅನುಗ್ರಹ ಅನ್ನಸಂತರ್ಪಣೆ ನಡೆಯುತ್ತದೆ.
ಪ್ರತೀ ಅಮಾವಾಸ್ಯೆ, ಹುಣ್ಣೆಮೆ, ಏಕಾದಶಿಯಂದು ಶ್ರೀಗಳವರು ಮೌನ ವ್ರತದಲ್ಲಿರುವುದರಿಂದ ಆ ದಿನಗಳಲ್ಲಿ ಸೂರ್ಯಾಸ್ತದ ಬಳಿಕ ಗುರುಗಳ ದರ್ಶನ ಇರುತ್ತದೆ. ಪ್ರತೀ ದಿನ ಸಂಜೆ 5.30 ರಿಂದ 9.30 ರ ತನಕ ಭಕ್ತಿಪ್ರಧಾನ ವಿವಿಧ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ. ಚಾತುರ್ಮಾಸ್ಯ ವ್ರತಾಚರಣೆಯು ಸೆಪ್ಟೆಂಬರ್ 14ರಂದು ಮುಕ್ತಾಯಗೊಳ್ಳಲಿದ್ದು, ಅದೇ ದಿನ ಬೆಳಿಗ್ಗೆ ಶ್ರೀಗಳ ಸೀಮೋಲ್ಲಂಘನ ಕಾರ್ಯಕ್ರಮ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಳದ ತಟದಲ್ಲಿರುವ ಸುಮನಾವತಿ ನದಿಯಲ್ಲಿ ಗಂಗಾ ಪೂಜೆ ಸಲ್ಲಿಸುವುದರೊಂದಿಗೆ ಸಮಾಪನಗೊಳ್ಳಲಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260813-28-1091453566