
ಕಲಬುರಗಿ: ರಾಮನಗರ, ಆನಂದನಗರ ವಾಸಿಗಳಿಗೆ ‘ಕಸ’ವಿಸಿ: ಗಬ್ಬುನಾರುತ್ತಿರುವ ತ್ಯಾಜ್ಯ
ಕಲಬುರಗಿ: ರಸ್ತೆಯ ಎರಡು ಬದಿಯಲ್ಲಿ ಸೂಕ್ಷ್ಮ ಪರಿಸರ ಒಳಗೊಂಡ ಆಸ್ಪತ್ರೆಗಳು, ಚಿಕ್ಕಮಕ್ಕಳ ಶಾಲೆ, ರಸ್ತೆಗೆ ಹೊಂದಿಕೊಂಡೇ ಮಿನಿ ಉದ್ಯಾನವಿದ್ದರೂ ಇಲ್ಲಿ ಸ್ವಚ್ಛತೆ ಮರೀಚಿಕೆಯಾಗಿ ತ್ಯಾಜ್ಯದ ರಾಶಿ ಗಬ್ಬುನಾರುತ್ತಿದ್ದೆ. ಇದರ ನಡುವೆ ಜನ ಮೂಗು ಮುಚ್ಚಿಕೊಂಡು ಸಾಂಕ್ರಾಮಿಕ ರೋಗದ ಭೀತಿಯಲ್ಲೇ ಓಡಾಡುವ ದೃಶ್ಯ ಕಂಡು ಬಂದಿದ್ದು ಆನಂದನಗರ ಹಾಗೂ ರಾಮನಗರ ಬಡವಾಣೆಯ ರುಬಿ ಇಎನ್ಟಿ ಆಸ್ಪತ್ರೆ ಹಾಗೂ ಖಬರಸ್ತಾನ್ ನಡುವಿನ ರಸ್ತೆಯಲ್ಲಿ.
ಕಲಬುರಗಿ ಮಹಾನಗರ ಪಾಲಿಕೆಯ ವಾರ್ಡ್ ನಂ–36ರ ವ್ಯಾಪ್ತಿಯ ಈ ರಸ್ತೆಯ ಒಂದೆಡೆ ಕಸದ ರಾಶಿ ಮತ್ತೊಂದೆಡೆ ಕೊಳಚೆ ನೀರಿನಿಂದಾಗಿ ಇದು ರಸ್ತೆಯೋ, ಕಸದ ತೊಟ್ಟಿಯೋ ಎನ್ನುವಂತಾಗಿದೆ? ಕಣ್ಣು, ಮೂಗು, ಗಂಟಲು ಅಂತಹ ಸೂಕ್ಷ್ಮ ಕಾಯಿಲೆಗಳಿಗಾಗಿರುವ ರುಬಿ ಆಸ್ಪತ್ರೆಯ ಪಕ್ಕದಲ್ಲೇ ಪ್ಲಾಸ್ಟಿಕ್ ಕವರ್–ಬಾಟಲಿ, ಒಡೆದ ಗಾಜು, ಮುರಿದ ಕುರ್ಚಿ–ಮೇಜು, ಹಳೆ ಬಟ್ಟೆಯ ಮೂಟೆಗಳು ಸೇರಿದಂತೆ ತ್ಯಾಜ್ಯದ ರಾಶಿಯೇ ಸುರಿಯಲಾಗಿದೆ.
ಅದೇ ಆಸ್ಪತ್ರೆಯ ಎದುರಿಗಿರುವ ಉದ್ಯಾನದ ಕಾಂಪೌಂಡ್ ಪಕ್ಕದಲ್ಲಿರುವ ವಿದ್ಯುತ್ ಪರಿವರ್ತಕದ ಬುಡದಲ್ಲೇ ಅಪಾರ ಕಸದ ರಾಶಿ ಬಿದ್ದಿದ್ದು, ಇದರ ಪಕ್ಕದಲ್ಲೇ ಚಿಕ್ಕಮಕ್ಕಳ ನಾಟಿ ಕಿಡ್ಸ್ ಪ್ಲೇಸ್ಕೂಲ್ ಇದೆ. ಜತೆಗೆ ಈ ಉದ್ಯಾನದ ಸ್ಥಿತಿಯೂ ಅಧ್ವಾನವಾಗಿದ್ದು, ಸೂಕ್ತ ನಿರ್ವಹಣೆ ಇಲ್ಲದೆ ಹುಲ್ಲು, ಕಸ ತುಂಬಿ ಹಾವು–ಚೇಳುಗಳ ತಾಣವಾಗಿ ಆತಂಕಕ್ಕೀಡು ಮಾಡಿದೆ.
ಇದನ್ನು ಗಮನಿಸದರೆ ಪಾಲಿಕೆಯವರು ಕಸ ವಿಲೇವಾರಿ ಮಾಡಿ ಅದೆಷ್ಟು ದಿನವಾಗಿದೆಯೋ ಎಂಬತ್ತಿದೆ. ಹತ್ತಿರದಲ್ಲೇ ಶರಣ ಮಕ್ಕಳ ಆಸ್ಪತ್ರೆ ಹಾಗೂ ಮಾತೋಶ್ರೀ ಆರ್ಥೋ ಸೆಂಟರ್ನಂತಹ ಆಸ್ಪತ್ರೆಗಳಿವೆ. ಬೀದಿನಾಯಿಗಳು ಆಹಾರಕ್ಕಾಗಿ ಪ್ಲಾಸ್ಟಿಕ್ ಕವರ್ಗಳನ್ನು ಎಳೆದಾಡಿ ರಸ್ತೆಯೆಲ್ಲ ಹೊಲಸೆಬ್ಬಿಸಿದ್ದು ಈ ಬಗ್ಗೆ ಕೂಡಲೇ ಕ್ರಮ ವಹಿಸಬೇಕು ಎನ್ನುತ್ತಾರೆ ಸ್ಥಳೀಯರು.
ಸಿಕ್ಕಲ್ಲಿ ಕಸ ಸುರಿಯುವ ಸ್ಥಳೀಯರು: ಬಡವಾಣೆಯ ಈ ರಸ್ತೆಯೊಂದರಲ್ಲೇ ಮೂರ್ನಾಲ್ಕು ಆಸ್ಪತ್ರೆಗಳು, ಶಾಲೆ ಇರುವುದರಿಂದ ಇಲ್ಲಿ ಸ್ವಚ್ಛತೆಗೆ ಮೊದಲು ಆದ್ಯತೆ ನೀಡಬೇಕಿತ್ತು. ಆದರೆ, ಪಾಲಿಕೆಯವರ ನಿರ್ಲಕ್ಷ್ಯ ಹಾಗೂ ಸ್ಥಳೀಯರ ಬೇಜವಾಬ್ದಾರಿಯಿಂದಾಗಿ ಇಲ್ಲಿ ಕಸದ ರಾಶಿ ಬಿದ್ದಿದ್ದು, ಇದರಿಂದ ಸೊಳ್ಳೆಗಳ ಉತ್ಪತ್ತಿಯಾಗಿದ್ದು, ಸೊಳ್ಳೆ ಕಚ್ಚಿಸಿಕೊಂಡು ರೋಗಕ್ಕೆ ತುತ್ತಾಗಲೆಂದೇ ಉದ್ಯಾನಕ್ಕೆ ಬರುವಂತಾಗಿದೆ. ಆದ್ದರಿಂದ ಶೀಘ್ರ ಕಸ ವಿಲೇವಾರಿ ಮಾಡಿ ಬ್ಲೀಚಿಂಗ್ ಪೌಡರ್ ಸಿಂಪಡಿಸಿ ರಸ್ತೆ, ಉದ್ಯಾನದಲ್ಲಿ ಸ್ವಚ್ಛತೆ ಕಾಪಾಡಬೇಕು ಎನ್ನುತ್ತಾರೆ ಬಡವಾಣೆಯ ಹಿರಿಯ ನಿವಾಸಿಯೊಬ್ಬರು.
‘ನಿರಂತರ ಜಾಗೃತಿ ಕಾರ್ಯಕ್ರಮ ಅಗತ್ಯ’
‘ರಾಮನಗರ ರಸ್ತೆಯಲ್ಲಿ ಕಸ ಸುರಿಯುವವರು ನಮ್ಮ 36ನೇ ವಾರ್ಡ್ನವರಲ್ಲ, 45ನೇ ವಾರ್ಡ್ ನಿವಾಸಿಗಳು. ಆ ವಾರ್ಡ್ ನನ್ನ ವ್ಯಾಪ್ತಿಗೆ ಬರದೆ ಇದ್ದರು ಜನರ ಹಿತದೃಷ್ಟಿಯಿಂದ ಮೇಲಿಂದ ಮೇಲೆ ತ್ಯಾಜ್ಯ ವಿಲೇವಾರಿ ಮಾಡಿಸಿದ್ದೇನೆ. ಇಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳು ಪಿಜಿಯಲ್ಲಿ ಬಾಡಿಗೆಗೆ ಇದ್ದಾರೆ. ಅವರು ಕಸ ಬಿಸಾಕುವುದರಿಂದಾಗಿಯೂ ಸಮಸ್ಯೆ ಹೆಚ್ಚಾಗಿದೆ’ ಎಂದು ಪಾಲಿಕೆ ಸದಸ್ಯ ಶಂಭುಲಿಂಗ ಪಾಟೀಲ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಇಲ್ಲಿಯ ಕಸದ ವಿಚಾರದಲ್ಲಿ ವಾರ್ಡ್ ನಂ–36 ಮತ್ತು 45 ಸೇರಿ ಎನ್ವೈರ್ನ್ಮೆಂಟಲ್ ಎಂಜಿನಿಯರ್ ಹಾಗೂ ಸ್ಯಾನಿಟರಿ ಇನ್ಸ್ಪೆಕ್ಟರ್ ಅವರು ಇಲ್ಲಿ ನಿರಂತರ 30 ದಿನಗಳ ಜಾಗೃತಿ ಕಾರ್ಯಕ್ರಯ ಆಯೋಜಿಸಿ ಇಬ್ಬರನ್ನು ಸ್ಥಳದಲ್ಲಿ ನಿಯೋಜಿಸಿ ಜನರಿಗೆ ತಿಳಿಹೇಳುವ ಕಾರ್ಯವಾಗಬೇಕು. ಆವಾಗ ಮಾತ್ರ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗಬಹದು’ ಎಂದು ಹೇಳಿದರು.
ಕಸ ಹಾಕಲು ಡಸ್ಟ್ಬಿನ್ಗಳಿಲ್ಲ
ಮೂರ್ನಾಲ್ಕು ಆಸ್ಪತ್ರೆಗಳು, ಚಿಕ್ಕಮಕ್ಕಳ ಶಾಲೆ ಇರುವ ಕಡೆ ಕನಿಷ್ಠ ಸ್ವಚ್ಛತೆ ಕಾಪಾಡುವುದು ಅತ್ಯಗತ್ಯ. ಇಲ್ಲಿ ನಿರಂತರ ಕಸ ಬಿಸಾಡುತ್ತಾರೆ ಎಂಬುದು ತಿಳಿದ ವಿಚಾರವಾಗಿದ್ದರು, ಪಾಲಿಕೆಯಿಂದ ಒಂದು ಡಸ್ಟ್ಬಿನ್ ವ್ಯವಸ್ಥೆ ಮಾಡಿಲ್ಲ. ಹಾಗಾಗಿ ಅನಿವಾರ್ಯವಾಗಿ ಸುತ್ತಮುತ್ತಲ ಅಂಗಡಿಯವರು, ಬಡಾವಣೆ ನಿವಾಸಿಗಳು ರಸ್ತೆಯ ಬದಿಯಲ್ಲೇ ಕಸ ತಂದು ಸುರಿದು ಹೋಗುತ್ತಾರೆ. ಆದ್ದರಿಂದ, ಇಲ್ಲೊಂದು ಡಸ್ಟ್ಬಿನ್ ವ್ಯವಸ್ಥೆ ಮಾಡಬೇಕು ಎಂಬುದು ಸ್ಥಳೀಯರ ಬೇಡಿಕೆಯಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260813-34-1378278752