
ಭಾರತವನ್ನು ವಿಶ್ವಮಟ್ಟಕ್ಕೇರಿಸಲು ಪಣ ತೊಡಬೇಕು: ಖಾದರ್
ಮಂಗಳೂರು: ಸ್ವಾತಂತ್ರ್ಯಕ್ಕಾಗಿ ಒಂದು ಪೀಳಿಗೆಯವರು ತಮ್ಮ ಜೀವನವನ್ನೇ ತ್ಯಾಗ ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ. ಭಾರತವನ್ನು ವಿಶ್ವದ ಉನ್ನತ ಸ್ಥಾನಕ್ಕೇರಿಸಲು ಈಗಿನ ಪೀಳಿಗೆ ಪ್ರಯತ್ನಪಟ್ಟು ಇತಿಹಾಸವನ್ನು ಮರುಸೃಷ್ಟಿಸಬೇಕಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಹೇಳಿದರು.
ನಗರದ ನೆಹರು ಮೈದಾನದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಸಂದೇಶ ನೀಡಿದ ಅವರುಸ್ವಾತಂತ್ರ್ಯದ ಹಬ್ಬ ಅಮೂಲ್ಯ ಸ್ವಾತಂತ್ರ್ಯವನ್ನು ಕಾಪಿಟ್ಟುಕೊಳ್ಳಲು ದೀಕ್ಷೆ ತೊಡುವ ದಿನವೂ ಆಗಬೇಕು ಎಂದರು.
ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ದೇಶದ ಪ್ರಜೆಗಳಾಗಿ ಹುಟ್ಟಿರುವವರೆಲ್ಲರೂ ಅದೃಷ್ಟವಂತು. ಬ್ರಿಟಿಷರ ಆಡಳಿತವನ್ನು ಅಹಿಂಸಾ ಮಾರ್ಗವನ್ನೇ ಬಳಸಿ ಕಿತ್ತೊಗೆದ ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಭಗತ್‌ಸಿಂಗ್, ಸುಭಾಷ್‌ಚಂದ್ರ ಭೋಸ್ ಮುಂತಾದ ಅನೇಕ ಹೋರಾಟಗಾರರ ತ್ಯಾಗ-ಬಲಿದಾನ ಮತ್ತು ಅವರ ಆದರ್ಶಗಳು ಎಲ್ಲರ ಸ್ಫೂರ್ತಿ. ಅವರನ್ನು ಸ್ಮರಿಸುವುದರ ಜೊತೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವ ಕಾರ್ಯವೂ ಸ್ವಾತಂತ್ರ್ಯೋತ್ಸವ ದಿನದಲ್ಲಿ ಆಗಬೇಕು ಎಂದು ಖಾದರ್ ಹೇಳಿದರು.
ಸ್ವಾತಂತ್ರ್ಯೋತ್ತರದಲ್ಲಿ ದೇಶದಲ್ಲಿ ಆಗಿರುವ ಪ್ರಗತಿ ಗಮನಾರ್ಹ. ಮೊದಲ ಪ್ರಧಾನಿ ಪಂಡಿತ್ ಜವಹರ್‌ಲಾಲ್ ನೆಹರೂ ದೇಶದ ವಿಕಾಸಕ್ಕೆ ಮಹತ್ತರ ಮುನ್ನುಡಿ ಬರೆದರು. ಅವರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮಹತ್ವ ಕೊಟ್ಟ ಕಾರಣ ದೇಶದ ನಿವಾಸಿಗಳು ಮಾನವ ಸಂಪನ್ಮೂಲವಾಗಿ ಪರಿವರ್ತನೆಗೊಂಡರು. ಕೃಷಿ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿಯಾಯಿತು.
ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿಯೊಂದು ರಾಜ್ಯವೂ ಪ್ರತ್ಯೇಕ ಭಾಷೆ, ಸಂಸ್ಕೃತಿ ಮತ್ತು ಜೀವನ ವಿಧಾನವನ್ನು ಹೊಂದಿದ್ದರೂ ಭಾರತೀಯತೆ ಎಂಬ ಬಂಧ ಎಲ್ಲರನ್ನೂ ಹಿಡಿದಿಟ್ಟಿದೆ. ದುಷ್ಟ ಶಕ್ತಿಗಳು ತಲೆ ಎತ್ತದಂತೆ ಮಾಡುವುದರ ಜೊತೆಯಲ್ಲಿ ಎಲ್ಲ ಧರ್ಮಗಳನ್ನು ಗೌರವಿಸಿ ಹಿಂಸಾ ಚಟುವಟಿಕೆಗೆ ಅವಕಾಶ ಕೊಡದೆ ಸಮನ್ವಯದಿಂದ ಮುಂದೆ ಸಾಗಲು ಪ್ರತಿಜ್ಞೆ ಮಾಡಬೇಕಾಗಿದೆ ಎಂದು ಅವರು ಸಲಹೆ ನೀಡಿದರು.
ಕರ್ನಾಟಕವನ್ನು ಸರ್ವಾಂಗೀಣ ಪ್ರಗತಿಯ ಹಾದಿಯಲ್ಲಿ ಮುನ್ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಸರ್ಕಾದ ಯೋಜನೆಗಳು ನೆಮ್ಮದಿ ತಂದು ಜನರ ಆರ್ಥಿಕ ಸಂಕಟಗಳಿಗೆ ಸ್ವಲ್ಪ ಪರಿಹಾರ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೂ ಸರ್ಕಾರ ಪೂರಕವಾಗಿ ಸ್ಪಂದಿಸುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ ಈ ವರೆಗೆ ಜಿಲ್ಲೆಯಲ್ಲಿ 3.82 ಲಕ್ಷ ಮಹಿಳೆಯರಿಗೆ ₹. 2001 ಕೋಟಿ ಮೊತ್ತ ಪಾವತಿಸಲಾಗಿದೆ. ಯುವನಿಧಿ ಯೋಜನೆಯಲ್ಲಿ ಜಿಲ್ಲೆಯಲ್ಲಿ 7542 ಯುವಕ ಯುವತಿಯರಿಗೆ ₹21 ಕೋಟಿ ಮೊತ್ತದ ಆರ್ಥಿಕ ನೆರವು ನೀಡಿದೆ. ಶಕ್ತಿ ಯೋಜನೆಯನ್ನು 14 ಕೋಟಿ ಮಹಿಳೆಯರು ಉಪಯೋಗಿಸಿಕೊಂಡಿದ್ದಾರೆ. ‘ಗೃಹ ಜ್ಯೋತಿ’ಯಡಿ 5.52 ಲಕ್ಷ ಫಲಾನುಭವಿಗಳು ಸೌಲಭ್ಯ ಪಡೆಯುತ್ತಿದ್ದಾರೆ.
ಮಂಗಳೂರು ನಗರದ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಭೂಗತ ಕೇಬಲ್ ವ್ಯವಸ್ಥೆಗೆ ಪರಿವರ್ತಿಸಲು ₹ 106 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಹಾಗೂ ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ₹ 166 ಕೋಟಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಕಟ್ಟಡಕ್ಕೆ ₹5 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿ 9 ಡಯಾಲಿಸಿಸ್ ಕೇಂದ್ರಗಳಿದ್ದು 823 ಫಲಾನುಭವಿಗಳು ಇದರ ಸದುಪಯೋಗ ಪಡೆಯುತ್ತಿದ್ದಾರೆ. 2025ರ ಮಾರ್ಚ್‌ನಿಂದ ಈ ವರ್ಷ ಜುಲೈ ವರೆಗೆ 10 ಮಂದಿಗೆ ಅಂಗಾಂಗ ಕಸಿ ಮಾಡಲಾಗಿದೆ. 2530 ಮಂದಿ ಅಂಗ ದಾನದ ಪ್ರತಿಜ್ಞೆ ಮಾಡಿದ್ದಾರೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಉತ್ಪತ್ತಿಯಾಗುವ ಮಲತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸಲು 7 ಘಟಕಗಳು ಕಾರ್ಯಾರಂಭಗೊಂಡಿವೆ. ಇಂಧನ ಪೆಲೆಟ್ ಉತ್ಪಾದನಾ ಕೇಂದ್ರ ಮೂಲ್ಕಿ ತಾಲ್ಲೂಕಿನ ಕೆಮ್ರಾಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಜಲಮೂಲ ಕಲುಷಿತಗೊಳಿಸುತ್ತಿರುವ ಪ್ಲಾಸ್ಟಿಕ್ ಮಾಲಿನ್ಯವನ್ನು ನಿರ್ವಹಿಸಲು ‘ಕೆ-ಶೋರ್’ ಯೋಜನೆ ಜಾರಿಗೊಳ್ಳುತ್ತಿದೆ. ಜಿಲ್ಲೆ ಮತ್ತು ಮಂಗಳೂರು ನಗರದಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದ್ದು ಸಮಾಜ ವಿರೋಧಿ ಶಕ್ತಿಗಳು, ಮಾಫಿಯಾಗಳು, ಡ್ರಗ್ಸ್ ಜಾಲ ನಿಯಂತ್ರಣಕ್ಕಾಗಿ ಸರ್ಕಾರ ಪೊಲೀಸರಿಗೆ ಮುಕ್ತ ಅಧಿಕಾರ ನೀಡಿದೆ ಎಂದು ಅವರು ಹೇಳಿದರು.