
ಬರದ ತಾಲ್ಲೂಕಿಗೆ ಶ್ರೀಗಂಧ ಬೆಳೆ ಪರಿಚಿಸಿದ ಪ್ರಗತಿಪರ ರೈತನ ಯಶೋಗಾಥೆ
ಬಾಗೇಪಲ್ಲಿ: ಬರದ ತಾಲ್ಲೂಕಿಗೆ ಶ್ರೀಗಂಧ ಬೆಳೆ ಪರಿಚಿಸಿದವರು ಐವಾರಪಲ್ಲಿ ಗ್ರಾಮದ ಪ್ರಗತಿಪರ ರೈತ ಆರ್.ಸೋಮಶೇಖರ ರೆಡ್ಡಿ. ಇವರು ತೋಟಗಾರಿಕೆ ಮತ್ತು ಅರಣ್ಯ ಕೃಷಿ ಮಾಡುತ್ತಾ ಲಾಭ ಗಳಿಸುತ್ತಿದ್ದಾರೆ.
ಸೋಮಶೇಖರ ರೆಡ್ಡಿ ಅವರು ಕೃಷಿ ಕುಟುಂಬದವರಾಗಿದ್ದು, 6 ಎಕರೆ ಜಮೀನಿನಲ್ಲಿ ವಿವಿಧ ರೀತಿಯ ಬೆಳೆ ಬೆಳೆಯುತ್ತಿದ್ದಾರೆ. 1995 ರಿಂದ ಇಲ್ಲಿಯವರೆಗೆ 22 ಕೊಳವೆಬಾವಿ ಕೊರೆಸಿದ್ದಾರೆ. ಆದರೆ, ಅಂತರ್ಜಲ ಕುಸಿತದಿಂದ ಒಂದು ಕೊಳವೆಬಾವಿಯಲ್ಲಿ ಕೇವಲ ಅರ್ಧ ಇಂಚು ನೀರು ಲಭ್ಯವಿದೆ.
ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ತೋಟಗಾರಿಕೆ, ಅರಣ್ಯ ಕೃಷಿ ಹಾಗೂ ರೇಷ್ಮೆಯನ್ನು ಬೆಳೆಯುತ್ತಿದ್ದಾರೆ. ಜೊತೆಗೆ ಹೈನುಗಾರಿಕೆ ಹಾಗೂ ಜೇನುಸಾಗಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇದುವರೆಗೂ 4 ಎಕರೆಯಲ್ಲಿ 2 ಸಾವಿರ ಶ್ರೀಗಂಧ ಮರಗಳನ್ನು ಬೆಳೆಸಿದ್ದಾರೆ. ವಿಶೇಷವಾಗಿ ಶ್ರೀಗಂಧ ಮರಗಳಿಗೆ ನೀರು ಮತ್ತು ಗೊಬ್ಬರದ ಅವಶ್ಯಕತೆ ಇಲ್ಲ. ಜೊತೆಗೆ ಶ್ರೀಗಂಧ ಪರಾವಂಬಿ ಬೆಳೆ ಆಗಿದ್ದು, ಪಕ್ಕದಲ್ಲಿ ಅಡಿಕೆ, ರೇಷ್ಮೆ, ಜಾಲಿ, ಬೇಲಿ ಗಿಡ, ತೇಗ ಬೆಳೆಸಿದ್ದಾರೆ.
ಸಾವಿರ ಅಡಿಕೆ ಗಿಡ, 100 ತೆಂಗು, 150 ತೇಗ, 500 ಸೀತಾಫಲ, 50 ರಕ್ತಚಂದನ ಸೇರಿದಂತೆ ಅಡಿಕೆ, ಕಾಫಿ, ಕಬ್ಬು, ಪರಂಗಿ, ಸಪೋಟ, ಮಾವು, ನುಗ್ಗೆ, ರಾಮಫಲ, ಲಕ್ಷ್ಮಣಫಲ, ನೆಲ್ಲಿಗಿಡ, ಜಂಬು ನೇರಳೆ, ಮಹಾಗಣಿ ಮತ್ತು ಟೀಕ್ ಮರಗಳನ್ನು ಬೆಳೆದಿದ್ದಾರೆ. ಉಳಿದ 2 ಎಕರೆಯಲ್ಲಿ ಕೋಳಿ ಸಾಕಾಣೆ, ಜೇನು ಸಾಕಾಣೆ ಮಾಡುತ್ತಿದ್ದಾರೆ. ಜೊತೆಗೆ 20 ವಿವಿಧ ತಳಿಯ ಹೂ ಗಿಡಗಳನ್ನು ಬೆಳೆಸಿದ್ದಾರೆ.
ಅರಣ್ಯ, ತೋಟಗಾರಿಕೆ ಕೃಷಿ ಪದ್ಧತಿ ಅಳವಡಿಕೆ ಕಾರ್ಯಕ್ಕೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಿಂದ 2020ರಲ್ಲಿ ಜಿಲ್ಲಾ ಉತ್ತಮ ಪ್ರಗತಿಪರ ರೈತ ಎಂಬ ಪ್ರಶಸ್ತಿ ಆರ್.ಸೋಮಶೇಖರ ರೆಡ್ಡಿ ಅವರಿಗೆ ದೊರೆತಿದೆ.
ಈ ಬಾರಿ ಮುಂಗಾರು ಕೈಕೊಟ್ಟಿರುವುದರಿಂದ ತಾಲ್ಲೂಕಿನಲ್ಲಿ ಬಿತ್ತನೆ ಇಲ್ಲದೆ ಹದಗೊಂಡಿರುವ ಭೂಮಿ ಹಾಗೆ ಉಳಿದಿದೆ. ಅನೇಕ ರೈತರಿಗೆ ಮಿಶ್ರ, ನೈಸರ್ಗಿಕ, ತೋಟಗಾರಿಕೆ ಹಾಗೂ ಅರಣ್ಯ ಕೃಷಿ ಬಗ್ಗೆ ಜಾಗೃತಿ ಇಲ್ಲ. ಈ ಬಗ್ಗೆ ರೈತರು ಜಾಗೃತಿರಾಗಿ ತೋಟಗಾರಿಕೆ ಹಾಗೂ ಅರಣ್ಯ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಿ. ಜೊತೆಗೆ ಹೈನುಗಾರಿಕೆ ಒತ್ತು ನೀಡಿದರೆ ಆದಾಯ ಸಿಗಲಿದೆ ಎಂಬುದು ರೈತ ಆರ್.ಸೋಮಶೇಖರರೆಡ್ಡಿ ಅವರ ಮಾತಾಗಿದೆ.
ಅರಣ್ಯ ಕೃಷಿ ಅಳವಡಿಸಿಕೊಳ್ಳಿ
ಮರ ಬೆಳೆಸಿರುವುದರಿಂದ ಉತ್ತಮ ಆದಾಯ ಸಿಗುತ್ತದೆ. ಜೊತೆಗೆ ಮಿಶ್ರ ಬೆಳೆಯಿಂದ ಕಾಲಕ್ಕೆ ಫಸಲು ಕೈ ಸೇರುತ್ತದೆ. ಅರಣ್ಯ ಮತ್ತು ತೋಟಗಾರಿಕಾ ಬೆಳೆಗೆ ಹೆಚ್ಚು ನೀರಿನ ಅವಶ್ಯಕತೆ ಇಲ್ಲ. ಹಾಗಾಗಿ ರೈತರು ತಮ್ಮ ಕೃಷಿಯಲ್ಲಿ ಅರಣ್ಯ ಹಾಗೂ ತೋಟಗಾರಿಕೆ ಕೃಷಿಯನ್ನು ಅಳವಡಿಸಿಕೊಳ್ಳಿ. ಇದರಿಂದ ಸ್ವಲ್ಪ ಮಟ್ಟಿಗೆ ಲಾಭ ಸಿಗಲಿದೆ ಎಂಬುದು ರೈತ ಆರ್.ಸೋಮಶೇಖರ ರೆಡ್ಡಿ ಅವರ ಅಭಿಪ್ರಾಯವಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260815-16-1788977569