
ಬರದ ಮಾನದಂಡವೇನು? ರೈತರ ಆಕ್ರೋಶ
ತಿಪಟೂರು: ‘ಹೊಲದಲ್ಲಿ ಬೆಳೆ ಇಲ್ಲ,ಕೊಳವೆಬಾವಿಯಲ್ಲಿ ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ ಆದರೂ ತಿಪಟೂರು ಬರಪೀಡಿತವಲ್ಲ. ಹಾಗಾದರೆ, ಸರ್ಕಾರದ ಬರದ ಮಾನದಂಡವೇನು?’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಬರಪೀಡಿತ ತಾಲ್ಲೂಕುಗಳ ಘೋಷಣೆ ಮಾಡಿರುವ ಬೆನ್ನಲ್ಲೇ, ಜಿಲ್ಲೆಯ 9 ತಾಲ್ಲೂಕುಗಳನ್ನು ಬರಪೀಡಿತ ಎಂದು ಗುರುತಿಸಿ ತಿಪಟೂರು ತಾಲ್ಲೂಕನ್ನು ಮಾತ್ರ ಪಟ್ಟಿಯಿಂದ ಹೊರಗಿಟ್ಟಿರುವುದಕ್ಕೆ ರೈತರು, ರೈತ ಮುಖಂಡರ ಆಕ್ರೋಶದ ಕಟ್ಟೆ ಒಡೆದಿದೆ.
ಜಿಲ್ಲೆಯ ಇತರ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವಾಗ ತಿಪಟೂರನ್ನು ಹೊರಗಿಟ್ಟಿರುವುದಕ್ಕೆ ಸ್ಪಷ್ಟ ಕಾರಣ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಬೆಳೆ ಹಾನಿ, ಮಳೆಯ ಪ್ರಮಾಣ, ಅಂತರ್ಜಲ ಮಟ್ಟ, ಕೆರೆ-ಕಟ್ಟೆಗಳ ಸ್ಥಿತಿ, ಕುಡಿಯುವ ನೀರಿನ ಲಭ್ಯತೆ ಹಾಗೂ ಜಾನುವಾರುಗಳ ಪರಿಸ್ಥಿತಿ ಸೇರಿದಂತೆ ಸಮಗ್ರ ಮಾನದಂಡಗಳಆಧಾರದ ಮೇಲೆ ತಿಪಟೂರು ತಾಲ್ಲೂಕಿನ ವಾಸ್ತವ ಸ್ಥಿತಿಯನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಳೆ ಕೈಕೊಟ್ಟಿರುವುದರಿಂದ ರೈತರಿಗೆ ಸಮಯಕ್ಕೆ ಸರಿಯಾಗಿ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಈಗಾಗಲೇ ಬಿತ್ತಿರುವ ಬೆಳೆಗಳನ್ನೂ ಉಳಿಸಿಕೊಳ್ಳಲು ನೀರಿನ ಕೊರತೆ ಎದುರಾಗಿದೆ. ಕೃಷಿಗಾಗಿ ಸಾಲ ಮಾಡಿಕೊಂಡಿರುವ ರೈತರು ಬೆಳೆ ಕೈಕೊಟ್ಟರೆ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ತಿಪಟೂರು ತಾಲ್ಲೂಕನ್ನು ಬರಪೀಡಿತ ಪಟ್ಟಿಯಿಂದ ಹೊರಗಿಟ್ಟಿರುವುದು ರೈತರ ನೋವನ್ನು ಮತ್ತಷ್ಟು ಹೆಚ್ಚಿಸಿದೆ.
ತಾಲ್ಲೂಕಿನ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸದೇ ಕಚೇರಿ ಮಟ್ಟದ ಅಂಕಿ-ಅಂಶಗಳ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260828-17-1340712905