ಹವಾಮಾನ ವೈಪರೀತ್ಯ; ಯಳಂದೂರು ತಾಲ್ಲೂಕಿನಲ್ಲಿ ಅಡಿಕೆ ಇಳುವರಿ ಕುಸಿತ

ಹವಾಮಾನ ವೈಪರೀತ್ಯ; ಯಳಂದೂರು ತಾಲ್ಲೂಕಿನಲ್ಲಿ ಅಡಿಕೆ ಇಳುವರಿ ಕುಸಿತ

ಹವಾಮಾನ ವೈಪರೀತ್ಯ; ಯಳಂದೂರು ತಾಲ್ಲೂಕಿನಲ್ಲಿ ಅಡಿಕೆ ಇಳುವರಿ ಕುಸಿತ

ಯಳಂದೂರು: ಈ ವರ್ಷ ತಾಲ್ಲೂಕಿನಲ್ಲಿ ನಿರೀಕ್ಷಿತ ಮಳೆಯಾಗದ ಪರಿಣಾಮ ಮಳೆಗಾಲದಲ್ಲೂ ಬೇಸಿಗೆಯ ವಾತಾವರಣ ನಿರ್ಮಾಣವಾಗಿದ್ದು, ತೋಟಗಾರಿಕಾ ಬೆಳೆಗಳಿಗೆ ಬಿಸಿಲಿನ ತಾಪ ತಟ್ಟಿದೆ.

ನಿರಂತರ ಮಳೆಯ ಕೊರತೆ ಹಾಗೂ ತೀವ್ರ ಬಿಸಿಲು ಇರುವುದರಿಂದ ಅಡಿಕೆ, ತೆಂಗು, ಮೆಣಸು, ಕಾಫಿ, ಏಲಕ್ಕಿ ಹಾಗೂ ಅರಿಸಿನ ಬೆಳೆಗಳು ತೇವಾಂಶದ ಕೊರತೆ ಎದುರಿಸುತ್ತಿವೆ. ಇದರಿಂದ ಬೆಳೆಗಳ ಗುಣಮಟ್ಟ ಹಾಗೂ ಇಳುವರಿ ಕುಸಿತವಾಗುವ ಆತಂಕ ರೈತರನ್ನು ಕಾಡುತ್ತಿದೆ.

ಹವಾಮಾನ ವೈಪರೀತ್ಯದಿಂದ ವಿಶೇಷವಾಗಿ ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಮಾನ್ಯವಾಗಿ ಅತಿಯಾದ ಮಳೆಯಿಂದ ಅಡಿಕೆಗೆ ಕೊಳೆರೋಗ ಕಾಣಿಸಿಕೊಳ್ಳುತ್ತದೆ. ಆದರೆ, ಈ ಬಾರಿ ಮಳೆಯ ಕೊರತೆಯಿಂದ ಕೊಳೆ ರೋಗದ ಸಮಸ್ಯೆ ಬಾಧಿಸದಿದ್ದರೂ ಮಳೆಯ ಕೊರತೆ ಹಾಗೂ ಬಿಸಿಲಿನ ಹೊಡೆತಕ್ಕೆ ಅಡಿಕೆ ಮರಗಳ ಬೆಳವಣಿಗೆ ಕುಂಠಿತವಾಗಿವೆ. ಜೊತೆಗೆ ಅಡಿಕೆ ಕಾಯಿಗಳ ಇಳುವರಿ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯವಾಗಿ ಗೌರಿ–ಗಣೇಶ ಹಬ್ಬದ ಆಸುಪಾಸಿನಲ್ಲಿ ಅಡಿಕೆ ಕೊಯ್ಲು ಆರಂಭವಾಗಲಿದ್ದು, ಕಾಯಿಗಳ ಗಾತ್ರಕ್ಕೆ ಅನುಗುಣವಾಗಿ ಬೆಲೆ ನಿರ್ಧಾರವಾಗುತ್ತಿತ್ತು. ಆದರೆ, ಈ ಬಾರಿ ತಾಲ್ಲೂಕಿನ ಕೆಲವು ತೋಟಗಳಲ್ಲಿ ಅಡಿಕೆ ಕಾಯಿ ಕಟ್ಟುವ ಮುನ್ನವೇ ಉದುರಿ ಬೀಳುತ್ತಿವೆ. ಇದರಿಂದ ಗುಣಮಟ್ಟದ ಅಡಿಕೆ ಉತ್ಪಾದನೆ ಕುಸಿತವಾಗು ಆತಂಕ ಹೆಚ್ಚಾಗಿದೆ ಎಂದು ಗೂಳಿಪುರ ಗ್ರಾಮದ ಕೃಷಿಕ ಕಪಿನಿ ನಾಯಕ ಹೇಳಿದರು.

ಜೂನ್–ಜುಲೈನಲ್ಲಿ ಉತ್ತಮ ಮಳೆ ಸುರಿಯುವ ನಿರೀಕ್ಷೆಯಿಂದ ಅಡಿಕೆ ಮರಗಳಿಗೆ ಸುಣ್ಣದ ನೀರು ಹಾಕಿ ಗೊಬ್ಬರ ನೀಡಲಾಗಿತ್ತು. ನಂತರ ನಿರೀಕ್ಷಿತ ಮಳೆಬಾರದ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿರುವುದರಿಂದ ಗಿಡಗಳಿಗೆ ನೀರಿನ ಕೊರತೆ ಎದುರಾಗಿದೆ.

ಅಡಿಕೆಗೆ ರೋಗ ಬಾಧೆ ಅಷ್ಟಾಗಿ ಕಾಡುತ್ತಿಲ್ಲ, ಮರವೊಂದಕ್ಕೆ ದಿನಕ್ಕೆ ಕನಿಷ್ಠ 20 ಲೀಟರ್ ನೀರಿನ ಅವಶ್ಯಕತೆ ಇದ್ದು. ರೈತರು ತೋಟದಲ್ಲಿ ತೇವಾಂಶ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು. ನೀರಿನ ಲಭ್ಯತೆ ಇರುವವರು ಹನಿ ನೀರಾವರಿ ಸೇರಿದಂತೆ ಸೂಕ್ತ ನೀರಾವರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಾಲ್ಲೂಕು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್. ರಾಜು ಸಲಹೆ ನೀಡಿದ್ದಾರೆ.

ಕುಸಿದ ತೋಟಗಾರಿಕಾ ಕೃಷಿ: ಹವಾಮಾನ ವೈಪರೀತ್ಯದಿಂದ ತಾಲ್ಲೂಕಿನಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಅಡಿಕೆ ಮರಗಳು ಅತಿ ಸೂಕ್ಷ್ಮವಾಗಿದ್ದು, ಮಳೆ ಬಿಸಿಲಿನ ಏರುಪೇರಿಗೆ ತಕ್ಷಣ ಪ್ರತಿಕ್ರಿಯಿಸುತ್ತವೆ. ಬಿಸಿಲು ಹಾಗೂ ಮಳೆಯ ವ್ಯತ್ಯಯದಿಂದ ಕಾಯಿಗಳು ಉದುರುತ್ತಿದ್ದು ರೈತರು ನಷ್ಟ ಅನುಭವಿಸುತ್ತಿದ್ದಾರೆ. ತೋಟದಲ್ಲಿ ಮುಚ್ಚಿಗೆ ಪದ್ಧತಿ ಅಳವಡಿಸಿಕೊಂಡು ಮಣ್ಣಿನ ತೇವಾಂಶ ಕಾಪಾಡಿಕೊಂಡು ಗಿಡಗಳಿಗೆ ತಂಪು ವಾತಾವರಣ ಒದಗಿಸಿ ಇಳುವರಿ ಉಳಿಸಿಕೊಳ್ಳಬಹುದು ಎಂದು ತೋಟಗಾರಿಕಾ ತಜ್ಞರು ತಿಳಿಸಿದ್ದಾರೆ.

ಮಳೆ ಕೊರತೆಯಿಂದ ತಾಲ್ಲೂಕಿನ ರೈತರು ತೋಟಗಾರಿಕಾ ಬೆಳೆಗಳ ನಾಟಿಗೆ ಹೆಚ್ಚಿನ ಆಸಕ್ತಿ ತೋರಿಲ್ಲ. ಹೊಸದಾಗಿ ತೆಂಗು ಮತ್ತು ಅಡಿಕೆ ನಾಟಿ ಮಾಡಲು ಮುಂದಾಗುತ್ತಿಲ್ಲ. ಕಾಫಿ ಹಾಗೂ ಮೆಣಸು ಸಸಿಗಳಿಗೂ ಬೇಡಿಕೆ ಕುಸಿದಿದೆ ಎಂದು ರೈತರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260828-37-1636708022

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ