ಬಿಜೆಪಿಗೆ ಹೊಸ ರಾಷ್ಟ್ರೀಯ ತಂಡ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಮೇಲೆ ಕಣ್ಣು?

ಬಿಜೆಪಿಗೆ ಹೊಸ ರಾಷ್ಟ್ರೀಯ ತಂಡ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಮೇಲೆ ಕಣ್ಣು?

ಬಿಜೆಪಿಗೆ ಹೊಸ ರಾಷ್ಟ್ರೀಯ ತಂಡ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಮೇಲೆ ಕಣ್ಣು?

ಲಖನೌ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ಹೊಸ ತಂಡದಲ್ಲಿ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಉತ್ತರ ಪ್ರದೇಶಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಲ್ಲಿನ ಎಂಟು ಪ್ರಮುಖ ನಾಯಕರಿಗೆ ಮಹತ್ವದ ಜವಾಬ್ದಾರಿಗಳನ್ನು ವಹಿಸಲಾಗಿದೆ.

ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಹೊಸ ರಾಷ್ಟ್ರೀಯ ತಂಡದಲ್ಲಿ ಅಲ್ಲಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅದರೊಂದಿಗೆ ಜಾತಿ ಸಮೀಕರಣವನ್ನು ಸರಿದೂಗಿಸಲು ಕೂಡ ಬಿಜೆಪಿಯ ಕೇಂದ್ರ ನಾಯಕತ್ವ ಪ್ರಯತ್ನಿಸಿದೆ.

ಅಮೇಥಿಯಲ್ಲಿ ಗಾಂಧಿ ಕುಟುಂಬದ ನಿಷ್ಠಾವಂತ ಕೆ.ಎಲ್. ಶರ್ಮಾ ವಿರುದ್ಧ ಸೋಲು ಅನುಭವಿಸಿದ್ದ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಪ್ರಧಾನ ಕಾರ್ಯದರ್ಶಿಗಳಲ್ಲಿ ಒಬ್ಬರನ್ನಾಗಿ ನೇಮಕ ಮಾಡಲಾಗಿದೆ. ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಮಾಜಿ ಸಂಸದ ಹರೀಶ್ ದ್ವಿವೇದಿ ಅವರಿಗೂ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿದ್ದು, ಚುನಾವಣಾ ದೃಷ್ಟಿಯಿಂದ ಇದು ಗಮನ ಸೆಳೆದಿದೆ.

ಇದರ ಜೊತೆಗೆ, ಕುರ್ಮಿ ಸಮುದಾಯಕ್ಕೆ ಸೇರಿದ ಮತ್ತು ಎರಡು ಬಾರಿಯ ಶಾಸಕಿಯಾಗಿರುವ ರೇಖಾ ವರ್ಮಾ ಅವರನ್ನು ಉಪಾಧ್ಯಕ್ಷರಲ್ಲಿ ಒಬ್ಬರನ್ನಾಗಿ ನೇಮಿಸಲಾಗಿದೆ.

ಉತ್ತರ ಪ್ರದೇಶದದಿಂದ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಗೊಂಡ ಇತರ ಪ್ರಮುಖರಲ್ಲಿ ಬುಲಂದ್‌ಶಹರ್‌ನ ಸಂಸದ ಹಾಗೂ ದಲಿತ ನಾಯಕ ಭೋಲಾ ಸಿಂಗ್ ಮತ್ತು ಸಂಗೀತಾ ಯಾದವ್ ಪ್ರಮುಖರಾಗಿದ್ದಾರೆ. ಇವರಿಬ್ಬರನ್ನು ರಾಷ್ಟ್ರೀಯ ಕಾರ್ಯದರ್ಶಿಗಳನ್ನಾಗಿ ಮಾಡಲಾಗಿದೆ.

ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರಿಗೆ ಆಪ್ತರೆನ್ನಲಾದ ಒಬಿಸಿ ಸಮುದಾಯಕ್ಕೆ ಸೇರಿದ ಪ್ರಬಲ ನಾಯಕ ಅಮರ್‌ಪಾಲ್ ಮೌರ್ಯ ಅವರಿಗೆ ಪಕ್ಷದ ಒಬಿಸಿ ಮೋರ್ಚಾದ ನೇತೃತ್ವದ ಜವಾಬ್ದಾರಿ ವಹಿಸಲಾಗಿದೆ.

ಆಶ್ಚರ್ಯದ ಸಂಗತಿಯೆಂದರೆ, ಈ ಹೊಸ ತಂಡದಲ್ಲಿರುವ ಇಬ್ಬರು ಮುಸ್ಲಿಂ ನಾಯಕರೂ ಕೂಡ ಉತ್ತರ ಪ್ರದೇಶದವರಾಗಿದ್ದಾರೆ. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ಮಾಜಿ ಉಪಕುಲಪತಿ ತಾರಿಖ್ ಮನ್ಸೂರ್ ಅವರನ್ನು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮೀರತ್‌ನ ಕುನ್ವರ್ ಬಾಸಿತ್ ಅಲಿ ಅವರನ್ನು ಪಕ್ಷದ ಅಲ್ಪಸಂಖ್ಯಾತರ ಮೋರ್ಚಾದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ಉತ್ತರ ಪ್ರದೇಶದಿಂದ ಇಷ್ಟೊಂದು ನಾಯಕರನ್ನು ಸೇರಿಸಿಕೊಂಡಿರುವುದು ಪಕ್ಷಕ್ಕೆ ರಾಜ್ಯ ಎಷ್ಟು ಪ್ರಮುಖವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ರಾಜ್ಯ ಬಿಜೆಪಿ ನಾಯಕರು ಹೇಳಿದ್ದಾರೆ. ಹಲವು ಒಬಿಸಿ ನಾಯಕರ ಸೇರ್ಪಡೆಯನ್ನು ಸಮಾಜವಾದಿ ಪಕ್ಷದ ಬಹುಪ್ರಚಾರಿತ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಸೂತ್ರವನ್ನು ಎದುರಿಸುವ ಪ್ರಯತ್ನವೆಂದು ನೋಡಲಾಗುತ್ತಿದೆ.

ನಿತಿನ್ ನವೀನ್ ಅವರು ಉತ್ತರ ಪ್ರದೇಶದ ಸಂಸದರೊಂದಿಗೆ ಸಭೆ ನಡೆಸಿ ಜಾತಿ ಸಮೀಕರಣಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

2019ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ 64 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಗೆ, 2024ರ ಲೋಕಸಭಾ ಚುನಾವಣೆಯಲ್ಲಿ ಆಘಾತ ಎದುರಾಗಿತ್ತು. ಕೇವಲ 33 ಸ್ಥಾನಗಳಲ್ಲಿ ಗೆದ್ದಿತ್ತು. ಅದರಲ್ಲೂ ಅಯೋಧ್ಯೆ ಕ್ಷೇತ್ರದಲ್ಲೂ ಬಿಜೆಪಿ ಸೋಲನುಭವಿಸಿತ್ತು. ಹಾಗಾಗಿ, ಮುಂದಿನ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ