ಕೆಮಿಸ್ಟ್ರಿ ಪ್ರೊಫೆಸರ್‌ ಟು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ:ದೀಪಕ್ ಮ್ಹಸ್ಕೆ ಹಾದಿ..

ಕೆಮಿಸ್ಟ್ರಿ ಪ್ರೊಫೆಸರ್‌ ಟು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ:ದೀಪಕ್ ಮ್ಹಸ್ಕೆ ಹಾದಿ..

ಕೆಮಿಸ್ಟ್ರಿ ಪ್ರೊಫೆಸರ್‌ ಟು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ:ದೀಪಕ್ ಮ್ಹಸ್ಕೆ ಹಾದಿ..

ಬಿಜೆಪಿ ಸೋಮವಾರ ತನ್ನ ರಾಷ್ಟ್ರೀಯ ಸಾಮಾಜಿಕ ಮಾಧ್ಯಮ ವಿಭಾಗಕ್ಕೆ ದೀಪಕ್ ಮ್ಹಸ್ಕೆ ಅವರನ್ನು ನೂತನ ಮುಖ್ಯಸ್ಥರಾಗಿ ನೇಮಕ ಮಾಡಿದೆ. 11 ವರ್ಷಗಳಿಂದ ಈ ವಿಭಾಗವನ್ನು ಮುನ್ನಡೆಸುತ್ತಿದ್ದ ಅಮಿತ್ ಮಾಳವೀಯ ಅವರಿಗೆ ಕೊಕ್ ನೀಡಲಾಗಿದೆ.

ಶಿಕ್ಷಣ ತಜ್ಞ ಮತ್ತು ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್'ನ(ಇಐಎಲ್‌) ಮಾಜಿ ಸ್ವತಂತ್ರ ನಿರ್ದೇಶಕರಾಗಿರುವ ಮ್ಹಸ್ಕೆ ಅವರು, ಛತ್ತೀಸಗಢದಲ್ಲಿ ರಸಾಯನವಿಜ್ಞಾನದ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ 'ಛತ್ತೀಸಗಢ ಮೆಡಿಕಲ್ ಸರ್ವಿಸಸ್ ಕಾರ್ಪೊರೇಷನ್ ಲಿಮಿಟೆಡ್'ನ(ಸಿಜಿಎಂಎಸ್‌ಸಿ) ಅಧ್ಯಕ್ಷರಾಗಿದ್ದು, ರಾಜ್ಯ ಸಚಿವರ ದರ್ಜೆ ಹೊಂದಿದ್ದಾರೆ. ಮ್ಹಸ್ಕೆ ಅವರು ಬಿಜೆಪಿಯ ಛತ್ತೀಸಗಢ ಘಟಕದ ಶಾಶ್ವತ ಆಹ್ವಾನಿತ ಸದಸ್ಯರೂ ಆಗಿದ್ದಾರೆ.

ತಮಗೆ ನೀಡಿರುವ ಹುದ್ದೆ ಅತ್ಯಂತ ದೊಡ್ಡ ಜವಾಬ್ದಾರಿಯಿಂದ ಕೂಡಿದ್ದಾಗಿದ್ದು, ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ಈ ಹುದ್ದೆಗೆ ಪರಿಗಣಿಸಿದ ಪಕ್ಷಕ್ಕೆ ಆಭಾರಿಯಾಗಿದ್ದೇನೆ ಎಂದು ತಿಳಿಸಿದ್ದಾರೆ. ರಾಜ್ಯ ಮತ್ತು ಕೇಂದ್ರ ಬಿಜೆಪಿ ಘಟಕಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ರಾಜ್ಯದ ಮುಖ್ಯಮಂತ್ರಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ಪ್ರಧಾನಿ ನರೇಂದ್ರ ಮೋದಿ, ಎಲ್ಲ ಹಿರಿಯ ನಾಯಕರಿಗೆ ಆಭಾರಿಯಾಗಿದ್ದೇನೆ. ಪೂರ್ಣ ಬದ್ಧತೆಯಿಂದ ಈ ಜವಾಬ್ದಾರಿಯನ್ನು ನಿರ್ವಹಿಸಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತೇನೆ ಎಂದಿದ್ದಾರೆ.

ಚುನಾವಣೆಗಳಲ್ಲಿ ಗೆದ್ದು ಜನರ ಸೇವೆ ಮಾಡುವುದು ಪಕ್ಷದ ಗುರಿಯಾಗಿದೆ. ಆ ನಿಟ್ಟಿನಲ್ಲಿ ಸಾಮಾಜಿಕ ಮಾಧ್ಯಮ ವಿಭಾಗವನ್ನು ಮುನ್ನಡೆಸುವುದಾಗಿ ದೀಪಕ್ ಹೇಳಿದ್ದಾರೆ.

ಕೆಮಿಸ್ಟ್ರಿ ಪ್ರೊಫೆಸರ್ ಟು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ

ಬಿಜೆಪಿಯ ಸಂಘಟನೆ ಮತ್ತು ಆಡಳಿತಾತ್ಮಕ ವಿಷಯಗಳಲ್ಲಿ ತೊಡಗಿಸಿಕೊಳ್ಳುವುದಕ್ಕೂ ಮುನ್ನ ಮ್ಹಸ್ಕೆ, ಛತ್ತೀಸಗಢದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಕೆಮಿಸ್ಟ್ರಿ ಪ್ರೊಫೆಸರ್ ಆಗಿ ಕೆಲಸ ಮಾಡಿದ್ದಾರೆ. 11 ವರ್ಷಗಳಿಂದ ಐಟಿ ಸೆಲ್ ನಿರ್ವಹಿಸುತ್ತಿದ್ದ ಮಾಳವೀಯ ಅವರನ್ನು ಪಕ್ಕಕ್ಕೆ ಸರಿಸಿ, ದೀಪಕ್ ಅವರಿಗೆ ಹುದ್ದೆ ನೀಡಲಾಗಿದೆ.

ಮ್ಹಸ್ಕೆ ಅವರು 2009 ರಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಈ ಹಿಂದೆ ಪಕ್ಷದ ಛತ್ತೀಸಗಢ ಐಟಿ ವಿಭಾಗದ ಮುಖ್ಯಸ್ಥರಾಗಿ ಮತ್ತು ರಾಜ್ಯ ವಕ್ತಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಛತ್ತೀಸಗಢ ಮೆಡಿಕಲ್ ಸರ್ವಿಸಸ್ ಕಾರ್ಪೊರೇಷನ್ ಲಿಮಿಟೆಡ್'ನ ಅಧ್ಯಕ್ಷರಾಗಿದ್ದಾರೆ. ಕೆಮಿಸ್ಟ್ರಿಯಲ್ಲಿ ಎಂ.ಎಸ್.ಸಿ, ಸಿಮೆಂಟ್ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಮತ್ತು ಕಂಪ್ಯೂಟರ್ ಪ್ರೋಗ್ರಾಮಿಂಗ್‌ನಲ್ಲಿ ಪ್ರಮಾಣಪತ್ರ ಕೋರ್ಸ್ ಅನ್ನು ಪೂರೈಸಿರುವ ಅವರು, ಕೃಷಿ, ತೋಟಗಾರಿಕೆ, ದತ್ತಾಂಶ ವಿಶ್ಲೇಷಣೆ ಮತ್ತು ಪಕ್ಷ ಸಂಘಟನೆಯ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವುದಕ್ಕೂ ಮುನ್ನ ಕಾಲೇಜಿನಲ್ಲಿ ಕೆಮಿಸ್ಟ್ರಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು.

ಮ್ಹಸ್ಕೆ ಅವರಿಗೆ ಅಭಿನಂದನೆ ಸಲ್ಲಿಸಿದ ಮಾಳವೀಯ , ಕಳೆದ ಒಂದು ದಶಕದಲ್ಲಿ ಪ್ರತಿಯೊಬ್ಬರೊಂದಿಗೂ ನಿಕಟವಾಗಿ ಕೆಲಸ ಮಾಡುವ ಅವಕಾಶ ತಮಗೆ ಲಭಿಸಿತ್ತು ಎಂದು ಹೇಳಿದ್ದಾರೆ. ಅಲ್ಲದೆ, ಹೊಸ ನಾಯಕತ್ವದ ಅಡಿಯಲ್ಲಿ ಪಕ್ಷದ ಡಿಜಿಟಲ್ ಸಂವಹನ ವಿಭಾಗವು ಹೊಸ ಮೈಲಿಗಲ್ಲು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಪಕ್ಷವು ಹೊಸ ಎತ್ತರಕ್ಕೇರಲು ಹಾಗೂ ತನ್ನ ಸಂದೇಶ ಮತ್ತು ಸಂಘಟನೆಯನ್ನು ದೇಶದ ಮೂಲೆಮೂಲೆಗೂ ತಲುಪಿಸಲು ಸಜ್ಜಾಗುತ್ತಿರುವ ನಿರ್ಣಾಯಕ ಹಂತದಲ್ಲಿ ಈ ನೇಮಕ ಆಗಿದೆ’ಎಂದು ಮಾಳವೀಯ 'ಎಕ್ಸ್' ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಬಿಜೆಪಿಯ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಮ್ಹಸ್ಕೆ ಅವರನ್ನು ವಿಶೇಷವಾಗಿ ಅಭಿನಂದಿಸಿದ ಅಮಿತ್; ಆ ವಿಭಾಗದ ಸಹ-ಸಂಯೋಜಕರಾಗಿ ನೇಮಕವಾದ ಪ್ರೀತಿ ಗಾಂಧಿ, ಶಿವಾನಂದ ದ್ವಿವೇದಿ, ಅಲೋಕ್ ಭಟ್ ಮತ್ತು ಅರುಣ್ ಯಾದವ್ ಅವರಿಗೂ ಅಭಿನಂದನೆ ತಿಳಿಸಿದ್ದಾರೆ.

ಪಕ್ಷದ ಸಂಘಟನೆಗೆ ಸರ್ಜರಿ

ಬಿಜೆಪಿ ಅಧ್ಯಕ್ಷ ನಿತಿನ್ ನವೀನ್ ಅವರ ನೇತೃತ್ವದಲ್ಲಿ ಪಕ್ಷವು ಗಮನಾರ್ಹ ಸಾಂಸ್ಥಿಕ ಬದಲಾವಣೆಯನ್ನು ಮಾಡಿದ್ದು, 65 ಪದಾಧಿಕಾರಿಗಳ ಪೈಕಿ 51 ಮಂದಿ ಹೊಸಬರಾಗಿದ್ದಾರೆ. ಪಕ್ಷವು ರಾಷ್ಟ್ರೀಯ ಉಪಾಧ್ಯಕ್ಷರ ಸಂಖ್ಯೆಯನ್ನು 11 ರಿಂದ 13ಕ್ಕೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ಸಂಖ್ಯೆಯನ್ನು 7 ರಿಂದ 8ಕ್ಕೆ ಮತ್ತು ರಾಷ್ಟ್ರೀಯ ಕಾರ್ಯದರ್ಶಿಗಳ ಸಂಖ್ಯೆಯನ್ನು 11 ರಿಂದ 16ಕ್ಕೆ ಹೆಚ್ಚಿಸಿದೆ.

ವಸುಂಧರಾ ರಾಜೇ ಸಿಂಧಿಯಾ ಮತ್ತು ಬಿ.ಎಲ್. ಸಂತೋಷ್ ಅವರಂತಹ ಹಿರಿಯ ನಾಯಕರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದ್ದರೂ, ಸ್ಮೃತಿ ಇರಾನಿ (ಪ್ರಧಾನ ಕಾರ್ಯದರ್ಶಿ) ಮತ್ತು ರಾಮ್ ಮಾಧವ್ (ಉಪಾಧ್ಯಕ್ಷ) ಅವರಂತಹ ಪ್ರಮುಖ ಹೊಸ ಮುಖಗಳು ಇದರಲ್ಲಿ ಸೇರ್ಪಡೆಗೊಂಡಿವೆ. ಈ ಪುನರ್‌ರಚನೆಯು ಯುವ ನಾಯಕರಿಗೆ ಹೆಚ್ಚಿನ ಪ್ರಾತಿನಿಧ್ಯವನ್ನೂ ನೀಡಿದ್ದು, ತಂಡದಲ್ಲಿ 10 ಮಹಿಳೆಯರು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಆರು ನಾಯಕರು ಸ್ಥಾನ ಪಡೆದಿದ್ದಾರೆ.

ಪಕ್ಷದ ಯುವ ಮೋರ್ಚಾ, ಮಹಿಳಾ ಮೋರ್ಚಾ ಮತ್ತು ಒಬಿಸಿ ವಿಭಾಗಗಳ ನೇತೃತ್ವ ವಹಿಸಲು ಹೊಸ ನಾಯಕರನ್ನು ಸಹ ನೇಮಕ ಮಾಡಲಾಗಿದೆ. 2029 ರವರೆಗಿನ ವಿಧಾನಸಭಾ ಚುನಾವಣೆಗಳು ಮತ್ತು ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ತಂಡ ರಚಿಸಲಾಗಿದೆ ಎಂದು ಬಿಜೆಪಿ ತಿಳಿಸಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ