
ಬಂಗಾರಪೇಟೆ | ಸಂಚಾರಕ್ಕೆ ಮುಕ್ತವಾಗದ ಮೇಲ್ಸೇತುವೆ: ಜನರು, ವಾಹನ ಸವಾರರ ಪರದಾಟ
ಬಂಗಾರಪೇಟೆ: ನಗರದ ಬೂದಿಕೋಟೆ ಮುಖ್ಯರಸ್ತೆಯಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಸಂಪೂರ್ಣವಾಗಿ ಮುಗಿದಿದೆ. ಆದರೆ, ಸಾರ್ವಜನಿಕರ ಸಂಚಾರಕ್ಕೆ ಮಾತ್ರ ಇನ್ನೂ ಮುಕ್ತವಾಗಿಲ್ಲ. ಇದರಿಂದಾಗಿ ಜನಸಾಮಾನ್ಯರು ಈ ರಸ್ತೆಯಲ್ಲಿ ಪ್ರತಿನಿತ್ಯವೂ ನರಕಯಾತನೆ ಅನುಭವಿಸುವಂತಾಗಿದೆ.
ಬಂಗಾರಪೇಟೆಯಿಂದ ಬೂದಿಕೋಟೆ, ಮಾಲೂರು ಹಾಗೂ ನೆರೆ ರಾಜ್ಯಗಳ ಗಡಿ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ವರ್ಷಗಳಿಂದ ಹಳೆಯ ರೈಲ್ವೆ ಗೇಟ್‌ನಿಂದ ಅನುಭವಿಸುತ್ತಿದ್ದ ಸಂಚಾರ ದಟ್ಟಣೆಗೆ ಈ ಮೇಲ್ಸೇತುವೆಯಿಂದ ಸಂಪೂರ್ಣ ಮುಕ್ತಿ ಸಿಗಲಿದೆ ಎಂದು ಕಾಯುತ್ತಿದ್ದ ಸಾರ್ವಜನಿಕರಿಗೆ ಈಗ ತೀವ್ರ ನಿರಾಶೆಯಷ್ಟೇ ಉಳಿದಿದೆ.
ಸಾಮಾನ್ಯವಾಗಿ ಮೇಲ್ಸೇತುವೆ ದಾಟಿ ಹೋಗಲು ಕೇವಲ 1 ನಿಮಿಷ ಸಾಕು. ಆದರೆ, ಆ ಮಾರ್ಗವನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದ್ದು, ಸಾರ್ವಜನಿಕರು ಹಳೆಯ ರೈಲ್ವೆ ಗೇಟ್ ಬಳಿ ಬಂದು ಒಂದು ತಾಸಿಗೂ ಹೆಚ್ಚು ಕಾಲ ಕಾಯುವ ದುಃಸ್ಥಿತಿ ನಿರ್ಮಾಣವಾಗಿದೆ. ರೈಲ್ವೆ ಜಂಕ್ಷನ್ ಆಗಿರುವುದರಿಂದ ಸತತವಾಗಿ ಗೂಡ್ಸ್ ಮತ್ತು ಪ್ರಯಾಣಿಕರ ರೈಲುಗಳ ಸಂಚಾರ ದಟ್ಟಣೆ ಹೆಚ್ಚಿರುತ್ತದೆ. ರೈಲು ಹೋಗುವವರೆಗೆ ರೈಲ್ವೆ ಗೇಟ್ ಮುಚ್ಚಿದಾಗ ಕಿಲೋಮೀಟರ್‌ಗಟ್ಟಲೇ ವಾಹನ ದಟ್ಟಣೆ ಏರ್ಪಡುತ್ತದೆ. ಕೇವಲ ಒಂದು ನಿಮಿಷದಲ್ಲಿ ಕ್ರಮಿಸಬಹುದಾದ ಸಣ್ಣ ಅಂತರಕ್ಕೆ ಒಂದು ಗಂಟೆ ವ್ಯರ್ಥ ಮಾಡಬೇಕಾಗಿದೆ ಎಂದು ವಾಹನ ಸವಾರರು ಅಲವತ್ತುಕೊಳ್ಳುತ್ತಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಕೈಗೊಂಡಿದ್ದ ಮೇಲ್ಸೇತುವೆಯ ಸಿವಿಲ್ ಕಾಮಗಾರಿ, ಕಾಂಕ್ರೀಟ್ ರಸ್ತೆ, ಕಾಂಕ್ರೀಟ್ ತಡೆಗೋಡೆ ಹಾಗೂ ರಸ್ತೆಯಲ್ಲಿ ಸೂಚನಾ ಫಲಕಗಳ ಅಳವಡಿಕೆ ಸೇರಿದಂತೆ ಇನ್ನಿತರ ಕಾಮಗಾರಿಗಳು ಸಂಪೂರ್ಣವಾಗಿ ಮುಗಿದಿದೆ. ಆದರೆ, ಉದ್ಘಾಟನೆ ವಿಚಾರದಲ್ಲಿ ರಾಜಕೀಯ ಹಗ್ಗಾಜಗ್ಗಾಟ ಮತ್ತು ಜನಪ್ರತಿನಿಧಿಗಳ ವೇಳಾಪಟ್ಟಿ ನಿಗದಿಯಾಗದ ಕಾರಣ ಮೇಲ್ಸೇತುವೆಯನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ ಎಂಬುದು ಸ್ಥಳೀಯರ ಆರೋಪ.
ಅಧಿಕಾರಿಗಳು ತಾಂತ್ರಿಕ ಕಾರಣ ಹೇಳಿ ಜಾರಿಕೊಳ್ಳುತ್ತಿದ್ದಾರೆ. ಸುರಕ್ಷತಾ ಪ್ರಮಾಣಪತ್ರದ ನೆಪ ಹೇಳಿ ದಿನ ದೂಡುತ್ತಿದ್ದಾರೆ. ಇನ್ನೊಂದು ವಾರದೊಳಗೆ ಈ ಮೇಲ್ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸದಿದ್ದರೆ, ಸ್ಥಳೀಯ ನಾಗರಿಕರು ಹಾಗೂ ವಿವಿಧ ಸಂಘಟನೆಗಳು ಒಗ್ಗೂಡಿ ಬ್ಯಾರಿಕೇಡ್‌ಗಳನ್ನು ನಾವೇ ತೆರವುಗೊಳಿಸಿ ‘ಜನತಾ ಉದ್ಘಾಟನೆ’ ನೆರವೇರಿಸಲಿದ್ದೇವೆ ಎಂದು ಕರ್ನಾಟಕ ದಲಿತ ಸಮಾಜ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಸೂಲಿಕುಂಟೆ ಆನಂದ್ ಎಚ್ಚರಿಕೆ ನೀಡಿದರು.
ತಡೆ ಗೇಟ್ ಕೆಳಗೆ ನುಗ್ಗಿ ಹೋಗುವ ಜನ
ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಶಾಲಾ-ಕಾಲೇಜು ಮತ್ತು ಕಚೇರಿ ವೇಳೆ ರೈಲುಗಳ ಸಂಚಾರ ಹೆಚ್ಚಿರುತ್ತದೆ. ಗೇಟ್‌ನಿಂದಾಗಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಪ್ರತಿದಿನ ಸಮಯಕ್ಕೆ ಸರಿಯಾಗಿ ಶಾಲೆ ಮತ್ತು ಕಚೇರಿಗೆ ತಲುಪಲಾಗದೆ ತೊಂದರೆ ಅನುಭವಿಸುವಂತಾಗಿದೆ.
ಗಂಟೆಗಟ್ಟಲೇ ಕಾಯಲು ಸಿದ್ಧರಿಲ್ಲದ ಕೆಲವು ದ್ವಿಚಕ್ರ ವಾಹನ ಸವಾರರು, ರೈತರು ಮತ್ತು ಶಾಲಾ ವಿದ್ಯಾರ್ಥಿಗಳು ರೈಲ್ವೆ ಗೇಟ್ ಕೆಳಗಿನಿಂದ ದಾಟಿ ಹೋಗುತ್ತಿದ್ದಾರೆ. ಒಂದು ಸಣ್ಣ ನಿರ್ಲಕ್ಷ್ಯವೂ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು ಎಂಬುದು ಸ್ಥಳೀಯರ ವಾದ.
ತಾಲ್ಲೂಕು ಆಸ್ಪತ್ರೆ ಹಾಗೂ ತುರ್ತು ಚಿಕಿತ್ಸೆಗೆ ತೆರಳುವ ಆಂಬುಲೆನ್ಸ್‌ಗಳು ಗೇಟ್ ಬಳಿ ದೀರ್ಘಕಾಲ ಸಿಲುಕಿಕೊಳ್ಳುತ್ತಿದ್ದು, ರೋಗಿಗಳ ಪ್ರಾಣದ ಜೊತೆ ಚೆಲ್ಲಾಟವಾಡುವಂತಾಗಿದೆ ಎಂದು ಸಾರ್ವಜನಿಕರ ಆರೋಪಿಸಿದರು.
ಬ್ಯಾರಿಕೇಡ್ ತೆರವಿಗೆ ಕ್ರಮ
ರೈಲ್ವೆ ಇಲಾಖೆಯ ಉನ್ನತಾಧಿಕಾರಿಗಳ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದೇನೆ. ತಾಂತ್ರಿಕ ಪರಿಶೀಲನೆ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ಣಗೊಳಿಸಲು ಸೂಚಿಸಲಾಗಿದೆ. ಸುರಕ್ಷತಾ ಪ್ರಮಾಣಪತ್ರ ಕೈಸೇರಿದ ತಕ್ಷಣವೇ, ಬ್ಯಾರಿಕೇಡ್ ತೆರವುಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು
ಎಂ ಮಲ್ಲೇಶ್ ಬಾಬು, ಸಂಸದ, ಕೋಲಾರ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-18-242061113