ಬೆಳೆ ವಿಮೆಗೆ ಹೆಚ್ಚಿದ ಬೇಡಿಕೆ: 2 ವರ್ಷಗಳಿಗಿಂತ ಮೂರು ಪಟ್ಟು ಅಧಿಕ ರೈತರು ನೋಂದಣಿ

ಬೆಳೆ ವಿಮೆಗೆ ಹೆಚ್ಚಿದ ಬೇಡಿಕೆ: 2 ವರ್ಷಗಳಿಗಿಂತ ಮೂರು ಪಟ್ಟು ಅಧಿಕ ರೈತರು ನೋಂದಣಿ

ಬೆಳೆ ವಿಮೆಗೆ ಹೆಚ್ಚಿದ ಬೇಡಿಕೆ: 2 ವರ್ಷಗಳಿಗಿಂತ ಮೂರು ಪಟ್ಟು ಅಧಿಕ ರೈತರು ನೋಂದಣಿ

ಕೋಲಾರ: ಜಿಲ್ಲೆಯಲ್ಲಿ ಮಳೆಯ ತೀವ್ರ ಕೊರತೆಯಿಂದ ಬೆಳೆ ಒಣಗುತ್ತಿದೆ, ಇನ್ನು ಕೆಲವೆಡೆ ಬಿತ್ತನೆ ಮಾಡಿದ ಬೀಜ ಮೊಳಕೆಯೂ ಒಡೆದಿಲ್ಲ. ಹೀಗಾಗಿ, ರೈತರು ಆತಂಕಕ್ಕೆ ಒಳಗಾಗಿದ್ದು, ಬೆಳೆ ವಿಮೆ ಮಾಡಿಸಿಕೊಳ್ಳಲು ಮುಗಿಬಿದ್ದಿದ್ದಾರೆ.

ಈ ಸಾಲಿನಲ್ಲಿ ಬೆಳೆ ವಿಮೆ ಮಾಡಿಸಿಕೊಳ್ಳಲು ಇನ್ನೂ ಏಳು ದಿನ (ಆ.14) ಕಾಲಾವಕಾಶ ಇದ್ದು, ಈಗಾಗಲೇ ಜಿಲ್ಲೆಯ 32,282 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಕಳೆದ ವರ್ಷ ಕೇವಲ 9,288 ಮಂದಿ ನೋಂದಣಿ ಮಾಡಿಕೊಂಡಿದ್ದರು. ಈ ಬಾರಿ ರಾಗಿ ಬೆಳೆಗಾರರು (28,632) ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆ ಮೊರೆ ಹೋಗಿದ್ದಾರೆ.

ಮುಂಗಾರು ಹಂಗಾಮು ಅವಧಿಯಲ್ಲಿ ಅಂದರೆ ಜೂನ್‌, ಜುಲೈ ಹಾಗೂ ಈ ತಿಂಗಳು ಇಲ್ಲಿಯವರೆಗೆ ಮಳೆ ಕೊರತೆ ಉಂಟಾಗಿದ್ದು, ಬಿತ್ತನೆಗೆ ತೀವ್ರ ಹಿನ್ನಡೆಯಾಗಿ ಪರಿಣಮಿಸಿದೆ. ಒಟ್ಟು 85,801 ಹೆಕ್ಟೇರ್‌ ವಿಸ್ತೀರ್ಣದ ಕೃಷಿ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈ ವರೆಗೆ ಕೇವಲ 4,147 ಹೆಕ್ಟೇರ್‌ (ಶೇ 4.83) ಬಿತ್ತನೆಯಾಗಿದ್ದು, ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಅನ್ನದಾತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

ಒಂದೆರಡು ದಿನ ಚದುರಿದಂತೆ ಮಳೆ ಬಂದಾಗ ಕೆಲವರು ಆಸೆಯಿಂದ ರಾಗಿ ಬಿತ್ತನೆ ಮಾಡಿದ್ದರು. ಆದರೆ, ಅದೀಗ ಮೊಳಕೆಯೂ ಬಾರದೆ ಆರ್ಥಿಕ ನಷ್ಟಕ್ಕೆ ಒಳಗಾಗಿದ್ದಾರೆ.

‘ಬಿತ್ತನೆಯಾದ ಪ್ರದೇಶದಲ್ಲಿ ಮಳೆ ಕೊರತೆ ಕಾರಣ ಬಹುಪಾಲು ಬೀಜ ಮೊಳಕೆಯಾಗಿಲ್ಲ. ಮೊಳಕೆ ಒಡೆದಿರುವುದು ದೀರ್ಘಕಾಲದ ತೇವಾಂಶ ಕೊರತೆಯಿಂದ ಒಣಗಲಾರಂಭಿಸಿದೆ. ಹಿಂದೆ ಇಂಥ ಪರಿಸ್ಥಿತಿ ಎದುರಾದಾಗ ರೈತರು ಆರ್ಥಿಕ ನಷ್ಟಕ್ಕೆ ಒಳಗಾಗಿದ್ದರು. ಹೀಗಾಗಿ, ಈ ಬಾರಿ ಬೆಳೆ ವಿಮೆ ಮೊರೆ ಹೋಗುತ್ತಿದ್ದು, ದಾಖಲೆ ಸಂಖ್ಯೆಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ನಾವು ಕೂಡ ಹೆಚ್ಚಿನ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದೇವೆ’ ಎಂದು ಜಂಟಿ ಕೃಷಿ ನಿರ್ದೇಶಕಿ ಎಂ.ಎನ್‌.ಮಂಜುಳಾ ‘ಪ್ರಜಾವಾಣಿ’ಗೆ ತಿಳಿಸಿದರು.

ಮುಂಗಾರು ಅವಧಿಯಲ್ಲಿ ಅಂದರೆ ಜೂನ್‌ 1ರಿಂದ ಆ.7ರವರೆಗೆ ಜಿಲ್ಲೆಯಲ್ಲಿ 86 ಮಿ.ಮೀ. ಮಳೆ ಆಗಿದೆ. ಈ ಸಂದರ್ಭದಲ್ಲಿ ವಾಡಿಕೆ ಮಳೆ 164 ಮಿ.ಮೀ ಆಗಬೇಕಿತ್ತು. ಶೇ 47 ರಷ್ಟು ಕೊರತೆ ಆಗಿದೆ. ಅದರಲ್ಲೂ ಜುಲೈನಲ್ಲಿ ಶೇ 81ರಷ್ಟು ಮಳೆ ಕೊರತೆ ಉಂಟಾಗಿತ್ತು.

ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ರಾಗಿಯನ್ನು ಈ ಬಾರಿ ಒಟ್ಟು 61 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲು ಗುರಿ ಇಟ್ಟುಕೊಳ್ಳಲಾಗಿದೆ. ಈವರೆಗೆ ಕೇವಲ 831 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.

‘ಎರಡೂವರೆ ಎಕರೆಯಲ್ಲಿ ರಾಗಿ ಬಿತ್ತನೆ ಮಾಡಿದ್ದು, ಎಕರೆಗೆ ₹ 404ರಂತೆ ₹ 1,010 ನೀಡಿ ಬೆಳೆ ವಿಮೆ ಮಾಡಿಸಿಕೊಂಡಿದ್ದೇನೆ. ಇಷ್ಟು ಹೊತ್ತಿಗೆ ರಾಗಿ ಬೆಳೆ ಎರಡು ಅಡಿ ಎತ್ತರ ಬೆಳೆದಿರಬೇಕಿತ್ತು. ಆದರೆ, ಮಳೆ ಇಲ್ಲದೆ ಮೊಳಕೆಯಲ್ಲಿಯೇ ಒಣಗುತ್ತಿದೆ. ಇದೇ ರೀತಿ ಮಳೆ ಕೈಕೊಟ್ಟರೆ ಮುಂದೆ ತುಂಬಾ ಕಷ್ಟವಾಗಲಿದೆ. ನಮಗೆ ಮುದ್ದೆ ಸಿಗಲ್ಲ; ಜಾನುವಾರುಗಳಿಗೆ ಮೇವು ಸಿಗಲ್ಲ’ ಎಂದು ತೊಟ್ಲಿ ಗ್ರಾಮದ ರೈತ ರಮೇಶ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರೈತ ಸುರಕ್ಷಾ ಪ್ರಧಾಮಂತ್ರಿ ಫಸಲ್ ಬಿಮಾ ಯೋಜನೆಯಡಿ ರಾಗಿ (ನೀರಾವರಿ), ರಾಗಿ (ಮಳೆ ಆಶ್ರಿತ) ಹಾಗೂ ಭತ್ತದ ಬೆಳೆ ವಿಮೆಗೆ ಆ.14ರ ವರೆಗೆ ನೋಂದಣಿಗೆ ಅವಕಾಶವಿದೆ. ರೈತರು ಮಳೆ ಆಶ್ರಿತ ರಾಗಿ ಬೆಳೆಗೆ ವಿಮೆ ಮಾಡಿಸಲು ಹೆಚ್ಚು ಒಲವು ತೋರುತ್ತಿದ್ದಾರೆ. ನೆಲಗಡಲೆ, ಟೊಮೆಟೊ, ತೊಗರಿಗೆ ಬೆಳೆ ವಿಮೆ ಅವಧಿ ಮುಗಿದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-18-663480926

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ