ಶಿರಸಿಯ ಮೊರಾರ್ಜಿ ದೇಸಾಯಿ ಕಾಲೇಜು ಕಟ್ಟಡ ಸೋರಿಕೆ: ವಿದ್ಯಾರ್ಥಿಗಳ ಪರದಾಟ

ಶಿರಸಿಯ ಮೊರಾರ್ಜಿ ದೇಸಾಯಿ ಕಾಲೇಜು ಕಟ್ಟಡ ಸೋರಿಕೆ: ವಿದ್ಯಾರ್ಥಿಗಳ ಪರದಾಟ

ಶಿರಸಿಯ ಮೊರಾರ್ಜಿ ದೇಸಾಯಿ ಕಾಲೇಜು ಕಟ್ಟಡ ಸೋರಿಕೆ: ವಿದ್ಯಾರ್ಥಿಗಳ ಪರದಾಟ

ಶಿರಸಿ: ಮಳೆಗಾಲದಲ್ಲಿ ಸೋರುವ ಕಾಲೇಜು ಕಟ್ಟಡದ ಚಾವಣಿ ನಿರ್ಮಾಣಕ್ಕೆ ₹5 ಕೋಟಿ ವೆಚ್ಚದ ಪ್ರಸ್ತಾವ ಸಲ್ಲಿಸಿ ವರ್ಷಗಳೇ ಕಳೆದರೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ (ಕ್ರೈಸ್) ಅನುಮೋದನೆ ಸಿಕ್ಕಿಲ್ಲ. ಇದರಿಂದ ಸೋರುವ ಕಟ್ಟಡದಲ್ಲೇ ಪಾಠ ಕೇಳುವ ಸ್ಥಿತಿ ತಾಲ್ಲೂಕಿನ ಕಲ್ಲಿಯ ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜಿನಲ್ಲಿದೆ.

ಕಾಲೇಜು 2016ರಲ್ಲಿ ಪ್ರಾರಂಭವಾಗಿದ್ದು, ಸುಮಾರು ಮೂರೂವರೆ ಎಕರೆ ವಿಶಾಲ ಕ್ಯಾಂಪಸ್ ಹಾಗೂ ಕಟ್ಟಡ ಹೊಂದಿದೆ. ಕ್ರೈಸ್ ವ್ಯಾಪ್ತಿಗೆ ಒಳಪಡುವ ಕಾಲೇಜಿನಲ್ಲಿ ಹಿಂದುಳಿದ ವರ್ಗಗಳ ಹಾಗೂ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳು ಓದುತ್ತಾರೆ. ಹೊರನೋಟಕ್ಕೆ ಆಕರ್ಷಕವಾಗಿ ಕಾಣುವ ಕಟ್ಟಡದ ಮೊದಲ ಮಹಡಿಯು ನಾಲ್ಕೈದು ವರ್ಷಗಳಿಂದ ಸೋರುತ್ತಿದ್ದು, ಇಡಿ ಆವರಣ ಮಳೆಗಾಲದಲ್ಲಿ ಜಲಾವೃತಗೊಳ್ಳುತ್ತಿದೆ ಎಂಬುದು ವಿದ್ಯಾರ್ಥಿಗಳ ದೂರು.

‘ಕಾಲೇಜಿನಲ್ಲಿ ಪ್ರಯೋಗಾಲಯ, ತರಗತಿ ಕೊಠಡಿ ಸೇರಿದಂತೆ ಒಟ್ಟು 10 ಕೊಠಡಿಗಳಿವೆ. ಅದರಲ್ಲಿ ನೆಲಮಹಡಿಯಲ್ಲಿರುವ ಕೊಠಡಿಗೆ ಸೋರಿಕೆ ಸಮಸ್ಯೆಯಿಲ್ಲ. ಮೊದಲ ಮಹಡಿಯಲ್ಲಿರುವ ಜೀವಶಾಸ್ತ್ರ ಹಾಗೂ ಗಣಕಯಂತ್ರ ಕೊಠಡಿಗಳಲ್ಲಿ ಪಾದ ಮುಳುಗುವಷ್ಟು ಮಳೆನೀರು ತುಂಬಿಕೊಳ್ಳುತ್ತಿದ್ದು, ಕಂಪ್ಯೂಟರ್, ಪ್ರಯೋಗಾಲಯದ ಉಪಕರಣಗಳು, ಪುಸ್ತಕಗಳು ಹಾಗೂ ಕ್ರೀಡಾ ಸಾಮಗ್ರಿಗಳು ಹಾಳಾಗುವ ಆತಂಕವಿದೆ. ಇದರ ದುರಸ್ತಿ ಸಂಬಂಧ ನಾಲ್ಕು ವರ್ಷಗಳ ಹಿಂದೆ ಕಾಲೇಜ್ ಮುಖ್ಯಸ್ಥರಿಂದ ಸಂಘಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎನ್ನುತ್ತಾರೆ ಪ್ರಾಚಾರ್ಯ ಈಶ್ವರ ಎಲ್.

‘ವಸತಿ ನಿಲಯದ ಪರಿಸ್ಥಿತಿ ಮತ್ತಷ್ಟು ಅಪಾಯಕಾರಿಯಾಗಿದ್ದು, ವಿದ್ಯಾರ್ಥಿನಿಯರ ವಸತಿ ನಿಲಯದ ಗೋಡೆಗಳಿಂದ ಇಳಿಯುವ ನೀರು ನೇರವಾಗಿ ವಿದ್ಯುತ್ ಸ್ವಿಚ್‌ಬೋರ್ಡ್‌ಗಳ ಮೇಲೆ ಬೀಳುತ್ತಿದೆ. ಇದು ಯಾವುದೇ ಕ್ಷಣದಲ್ಲಾದರೂ ಶಾರ್ಟ್ ಸರ್ಕಿಟ್ ಅನಾಹುತಕ್ಕೆ ದಾರಿ ಮಾಡಿಕೊಡುವಂತಿದೆ’ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

‘ಅಸಮರ್ಪಕ ಸೆಪ್ಟಿಕ್ ಟ್ಯಾಂಕ್ ಪೈಪ್‌ಗಳಿಂದಾಗಿ ಕಲುಷಿತ ನೀರು ಕಾಲೇಜು ಆವರಣದಲ್ಲೇ ತುಂಬಿ ದುರ್ನಾತ ಬೀರುತ್ತಿದೆ. ಕಟ್ಟಡಕ್ಕೆ ಪ್ಲಾಸ್ಟಿಕ್ ಶೀಟ್‌ಗಳ ಚಾವಣಿ ನಿರ್ಮಿಸಿದರೆ ಮಾತ್ರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲು ಸಾಧ್ಯ. ಬಡ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಶೈಕ್ಷಣಿಕ ಹಿತದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಕ್ಷಣ ಸ್ಪಂದಿಸಿ ಅನುದಾನ ಬಿಡುಗಡೆಗೊಳಿಸಬೇಕು’ ಎನ್ನುತ್ತಾರೆ ಉಂಚಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವೇಂದ್ರ ನಾಯ್ಕ.

ವಿಜ್ಞಾನ ವಿಭಾಗ ಇಲ್ಲಿದ್ದು ಜಿಲ್ಲೆಯ ಶೇ 75ರಷ್ಟು ವಿದ್ಯಾರ್ಥಿಗಳು ಹಾಗೂ ಶೇ 25ರಷ್ಟು ಹೊರಜಿಲ್ಲೆಯ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಅವಕಾಶವಿದೆ. ಉತ್ತರ ಕನ್ನಡ, ಹಾವೇರಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ 160 ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಲ್ಲಿ ವಸತಿ ಶಿಕ್ಷಣ ಪಡೆಯುತ್ತಿದ್ದಾರೆ. ಬೋಧಕ ಸಿಬ್ಬಂದಿ 8 ಹಾಗೂ ಬೋಧಕೇತರರು 20 ಮಂದಿ ಕೆಲಸ ಮಾಡುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260828-20-1304797348

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ