
ಬಸವಸಾಗರ ಜಲಾಶಯದಲ್ಲಿ ಪ್ರವಾಸಿಗರಿಗಾಗಿ ವೀಕ್ಷಣಾ ಗ್ಯಾಲರಿ ನಿರ್ಮಾಣ
ಲಿಂಗಸುಗೂರು: ಕಲ್ಯಾಣ ಕರ್ನಾಟಕದಲ್ಲಿ ಎರಡನೇ ದೊಡ್ಡ ಜಲಾಶಯವಾದ ಬಸವಸಾಗರ ಜಲಾಶಯ ವೀಕ್ಷಣೆಗೆ ಬರುವ ಪ್ರವಾಸಿಗರ ಸುರಕ್ಷತೆಗಾಗಿ ‘ವೀಕ್ಷಣಾ ಗ್ಯಾಲರಿ’ ನಿರ್ಮಾಣಕ್ಕೆ ಕೃಷ್ಣಾ ಭಾಗ್ಯ ಜಲ ನಿಗಮ ಮುಂದಾಗಿದೆ.
ರಾಯಚೂರು, ಯಾದಗಿರಿ, ವಿಜಯಪುರ ಜಿಲ್ಲೆಗಳ ರೈತರ ಜೀವನಾಡಿಯಾದ ಬಸವಸಾಗರ ಲೋಕಾರ್ಪಣೆಗೊಂಡು 44 ವಸಂತಗಳು ಪೂರ್ಣಗೊಂಡಿವೆ. ಜಲಾಶಯದ ಮುಖ್ಯ ಗೇಟ್‌ಗಳಿಂದ ಕೃಷ್ಣೆ ನರ್ತನ ಮಾಡುತ್ತಾ ಹಾಲಿನ ನೊರೆಯಂತೆ ಹೊರ ಬರುವುದನ್ನು ನೋಡುವುದೇ ಒಂದು ಸುಂದರ ಅನುಭವ. ಆದರೆ, ವೀಕ್ಷಣೆಗೆ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಪ್ರವಾಸಿಗರು ತೊಂದರೆ ಅನುಭವಿಸುತ್ತಿದ್ದರು.
ಇದನ್ನು ಅರಿತ ನಿಗಮದ ಅಧಿಕಾರಿಗಳು ಈಗಿರುವ ಸ್ಥಳದ ಪಕ್ಕದಲ್ಲಿ, ಜಲಾಶಯದ ಕೆಳಭಾಗದಲ್ಲಿ ತಡೆಗೋಡೆ ನಿರ್ಮಿಸಿ, ₹2 ಕೋಟಿ ವೆಚ್ಚದಲ್ಲಿ ವೀಕ್ಷಣಾ ಗ್ಯಾಲರಿ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಕಾಮಗಾರಿಗೆ ಚಾಲನೆ ನೀಡಲಾಗಿದೆ. ನೆಲ ಸಮತಟ್ಟು ಮಾಡುವ ಕಾರ್ಯ ನಡೆಯುತ್ತಿದೆ. ಆದರೆ, ಇಲ್ಲಿ ಸುಂದರ ಉದ್ಯಾನ ಇಲ್ಲದ ಕಾರಣ ಕೇವಲ ನೀರು ಹರಿಸುವ ಸಂದರ್ಭದಲ್ಲಿ ಮಾತ್ರ ಪ್ರವಾಸಿಗರು ಬರುತ್ತಾರೆ.
ಆಲಮಟ್ಟಿ ಮಾದರಿಯಲ್ಲಿ ಬಸವಸಾಗರ ಜಲಾಶಯದ ಮುಂಭಾಗದಲ್ಲೂ ಸುಂದರ ಉದ್ಯಾನ ನಿರ್ಮಿಸಿದರೆ, ಪ್ರವಾಸೋದ್ಯಮಕ್ಕೆ ಹೊಸ ಆಯಾಮ ದೊರೆಯಲಿದೆ. ಉದ್ಯಾನದಲ್ಲಿ ಮಕ್ಕಳ ಆಟೋಪಕರಣಗಳು, ಸಂಗೀತ ಕಾರಂಜಿ, ನಡಿಗೆ ಪಥ, ಹಸಿರು ಹುಲ್ಲಿನ ಮೈದಾನ, ಆಸನಗಳು, ಕುಡಿಯುವ ನೀರು, ಶೌಚಾಲಯ, ಬೆಳಕಿನ ವ್ಯವಸ್ಥೆ ಮಾಡಿದರೆ, ನಾರಾಯಣಪುರ ಜಲಾಶಯ ಪ್ರಮುಖ ಪ್ರವಾಸಿ ತಾಣವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ ಎಂಬುದು ಪ್ರವಾಸಿಗರ ಅಭಿಪ್ರಾಯವಾಗಿದೆ.
ಜಲಾಶಯದಿಂದ ನದಿಗೆ ನೀರು ಹರಿಸುವ ಸಂದರ್ಭದಲ್ಲಿ ಮುಖ್ಯಗೇಟ್‌ಗಳ ಮುಂಭಾಗದ ಗ್ರಿಲ್ ಬಳಿ ನಿಂತುಕೊಂಡು ಜಲಾಶಯ ವೀಕ್ಷಣೆಗೆ ಪ್ರವಾಸಿಗರಿಗೆ ಅನುಮತಿ ನೀಡಲಾಗಿದೆ. ಆದರೆ, ಕೆಲವೊಮ್ಮೆ ಕೆಲ ಪ್ರವಾಸಿಗರು ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ನಿಷೇಧಿತ ಮತ್ತು ಅಪಾಯಕಾರಿ ಸ್ಥಳವಾಗಿರುವ ಜಲಾಶಯದ ಮುಖ್ಯ ಕ್ರೆಸ್ಟ್‌ಗೇಟ್ ವಾಕ್ ವೇ ಒಳಗೆ ಹೋಗಿ ಬರುತ್ತಿದ್ದರು. ಅಲ್ಲದೇ ವೀಕ್ಷಣೆಗೆ ಅನುಮತಿ ನೀಡಿರುವ ಸ್ಥಳ ತೀರಾ ಕಿರಿದಾಗಿದ್ದರಿಂದ ಪ್ರವಾಸಿಗರು ಕಿರಿಕಿರಿ ಅನುಭವಿಸುತ್ತಿದ್ದರು. ಗ್ಯಾಲರಿ ನಿರ್ಮಾಣದಿಂದ ಇದಕ್ಕೆ ಬ್ರೇಕ್ ಬೀಳಲಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260813-32-547804513